ತುಮಕೂರು

ಕಾರೇಹಳ್ಳಿ ರಂಗನಾಥಸ್ವಾಮಿ ವೈಭವದ ಬ್ರಹ್ಮರಥೋತ್ಸವ

Published On :

ಕ.ಪ್ರ. ವಾರ್ತೆ ಹುಳಿಯಾರು ಮಾ.25
ಹೋಬಳಿಯ ಕಾರೇಹಳ್ಳಿಯ ಪುರಾಣ ಪ್ರಸಿದ್ಧ ಶ್ರೀ ರಂಗನಾಥಸ್ವಾಮಿಯ ಮೂಲಸ್ಥಾನದಲ್ಲಿ ದನಗಳ ಜಾತ್ರೆ ಹಾಗೂ ವೈಭವದ ಬ್ರಹ್ಮರಥೋತ್ಸವ ಅಸಂಖ್ಯಾತ ಭಕ್ತರ ಸಮ್ಮುಖದಲ್ಲಿ ಮಾ.25ರ ಸೋಮವಾರ ಮಧ್ಯಾಹ್ನ  ಶ್ರದ್ಧಾಭಕ್ತಿ ಹಾಗೂ ಭಕ್ತರ ಹರ್ಷೋದ್ಘಾರದೊಂದಿಗೆ  ವೈಭವಯುತವಾಗಿ ಜರುಗಿತು.
ಜಾತ್ರಾ ಮಹೋತ್ಸವದ ಅಂಗವಾಗಿ ಕಳೆದ ಮೂರು ದಿನದಿಂದ ಸ್ವಾಮಿಗೆ ಕಂಕಣ, ಅಂಕುರಾರ್ಪಣೆ, ಧ್ವಜಾರೋಹಣ, ಉಯ್ಯಾಲೋತ್ಸವ, ಗಜಾರೋಹಣ, ಗರುಡ ವಾಹನೋತ್ಸವ, ಸಂತರ್ಪಣೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ವಿಧಿವತ್ತಾಗಿ ನಡೆದಿದ್ದು, ಇಂದು ಮುಂಜಾನೆಯಿಂದ ಬ್ರಹ್ಮರಥೋತ್ಸವದ ವಿವಿಧ ಪೂಜಾ ಕೈಂಕರ್ಯ ನಡೆಯಿತು.ವಿ
ಮೂಲ ದೇವಸ್ಥಾನದಿಂದ ಮಂಗಳವಾದ್ಯ ಹಾಗೂ ಪೂರ್ಣಕುಂಭದೊಂದಿಗೆ, ಹೊಯ್ಸಳಕಟ್ಟೆ ಕರಿಯಮ್ಮ, ಎರೆಹಳ್ಳಿಯಮ್ಮ, ಬೆನಕಹಾರ ರಂಗನಾಥಸ್ವಾಮಿ ದೇವರುಗಳೊಂದಿಗೆ ಶ್ರೀ ಸ್ವಾಮಿಯನ್ನು ಸಹಸ್ರಾರು ಭಕ್ತರು ಉದ್ಘೋಷದೊಂದಿಗೆ ಕರೆತಂದು ರಂಗು ರಂಗಿನ ಬಾವುಟ, ತಳಿರು ತೋರಣ, ಬಣ್ಣ ಬಣ್ಣದ ಹೂವಿನ ಹಾರದಲ್ಲಿ ಸಿಂಗಾರಗೊಂಡ ಸರ್ವಾಲಂಕೃತ ರಥದಲ್ಲಿ  ಸ್ವಾಮಿಯನ್ನು ಪ್ರತಿಷ್ಠಾಪಿಸಿ ಮಂಗಳವಾದ್ಯದೊಂದಿಗೆ ರಥೋತ್ಸವ ನೆರವೇರಿಸಿದರು.
ಜಯಘೋಷ: ಸುಡುವ ಬಿಸಿಲನ್ನೂ ಲೆಕ್ಕಿಸದೆ ಬೆಳಿಗ್ಗೆಯಿಂದಲೇ ಕಿಕ್ಕಿರಿದು ನೆರೆದಿದ್ದ ಭಕ್ತರು ಜಯಘೋಷದೊಂದಿಗೆ ತೇರನ್ನೆಳೆದು ಸಂಭ್ರಮಿಸಿದರು. ಎಲ್ಲೆಲ್ಲೂ ಜಾತ್ರೆಯ ಸಡಗರ ತುಂಬಿ ತುಳುಕುತಿತ್ತು. ಸುಮಾರು ಐವತ್ತು ಅಡಿಗೂ ಎತ್ತರದಲ್ಲಿದ್ದ ಬ್ರಹ್ಮ ರಥವನ್ನು ಭಕ್ತಿಭಾವದಿಂದ ಅಪಾರ ಭಕ್ತಾಧಿಗಳು ಎಳೆದರೆ ಮತ್ತೊಂದು ಕಡೆ   ರಥದ ಅನತಿ ದೂರದಲ್ಲಿ ನಿಂತಿದ್ದ ಭಕ್ತರು ಮಂಡಕ್ಕಿ, ಬಾಳೆಹಣ್ಣುಗಳನ್ನು ರಥಕ್ಕೆ ಎಸೆಯುವ ಮೂಲಕ ತಮ್ಮ ಭಕ್ತಿಭಾವ ಸಮರ್ಪಿಸಿದರು. ರಥೋತ್ಸವ ಜರುಗಿದ ತಕ್ಷಣವೇ ಮಹಿಳೆಯರು ಸೇರಿದಂತೆ ಅನೇಕ ಭಕ್ತಾಧಿಗಳು ಸ್ವಾಮಿಗೆ ಹಣ್ಣುಕಾಯಿ ಮಾಡಿಸಿದರು. ದಸೂಡಿಯ ದಿ.ಕೊಟ್ಟಿಗೆ ರಂಗೇಗೌಡರ ಸಹೋದರರು ಮತ್ತು ಮಕ್ಕಳಿಂದ ಬ್ರಾಹ್ಮಣರಿಗೆ ಅನ್ನಸಂತರ್ಪಣೆ ನಡೆಯಿತು.
ಮಾಜಿ ಶಾಸಕ ಕೆ.ಎಸ್. ಕಿರಣ್‌ಕುಮಾರ್, ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಹಳೆಮನೆ ಶಿವನಂಜಪ್ಪ, ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿಂಗದಹಳ್ಳಿ ರಾಜ್‌ಕುಮಾರ್ , ತಾ.ಪಂ.ಅಧ್ಯಕ್ಷ ಜಗದೀಶ್, ಗ್ರಾ.ಪಂ.ಅಧ್ಯಕ್ಷ ಶ್ರೀನಿವಾಸ್, ದೇವಸ್ಥಾನ ಸಮಿತಿಯ ಅಧ್ಯಕ್ಷ ಆರ್. ರಂಗಸ್ವಾಮಿ, ಜಿ.ಎಂ. ನೀಲಕಂಠಯ್ಯ, ಜಿ.ಸಿ.ದೊಡ್ಡಯ್ಯ, ಗ.ಕರಿಯಪ್ಪ, ಬಿ.ಆರ್.ರಂಗನಾಥ್, ಎಂ.ಕೆ. ರಮೇಶ್, ಆರ್. ರಾಮಕೃಷ್ಣಪ್ಪ, ಅರ್ಚಕ ರಾಮಸ್ವಾಮಿ ಸೇರಿದಂತೆ ಭಕ್ತರ ಮಹಾಪೂರವೇ ಪಾಲ್ಗೊಂಡಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.