ತುಮಕೂರು ನಗರಕ್ಕೆ ನಾನೇ ಅಭ್ಯರ್ಥಿ
ಕ.ಪ್ರ. ವಾರ್ತೆ ತುಮಕೂರು ಮಾ.25
ತುಮಕೂರು ನಗರ ವಿಧಾನಸಭಾ ಕ್ಷೇತ್ರಕ್ಕೆ ನಾನೇ ಬಿಜೆಪಿ ಅಭ್ಯರ್ಥಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ತುಮಕೂರು ನಗರ ಶಾಸಕ ಸೊಗಡು ಶಿವಣ್ಣ ಸ್ಪಷ್ಟಪಡಿಸುವುದರ ಮೂಲಕ ಊಹಾಪೋಹಗಳಿಗೆ ತೆರೆ ಎಳೆದರು.
ಅವರು ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಕುರಿತು ಯಾವುದೇ ಗೊಂದಲ, ಅನುಮಾನ ಬೇಡ. ತಾವು, ತುಮಕೂರು ಗ್ರಾಮಾಂತರ ಶಾಸಕ ಸುರೇಶ್ಗೌಡ ಹಾಗೂ ತಿಪಟೂರು ಶಾಸಕ ಬಿ.ಸಿ. ನಾಗೇಶ್ ಅವರಿಗೆ ಪಕ್ಷ ಈಗಾಗಲೇ ನೀವೇ ಬಿಜೆಪಿ ಅಭ್ಯರ್ಥಿಗಳೆಂದು ಹೇಳಿದೆ. ಈಗ ಏನಿದ್ದರೂ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದಷ್ಟೇ ಉಳಿದಿರುವ ಕೆಲಸ. ಈ ಕುರಿತು ಯಾವುದೇ ಅನುಮಾನಗಳು ಬೇಡ ಎಂದರು.
ಪಕ್ಷದ ಹಿರಿಯ ಮುಖಂಡ ಬಿ.ಬಿ. ಶಿವಪ್ಪ ಕಳೆದ 3 ದಿನಗಳ ಹಿಂದೆ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ್ದ ವೇಳೆ ತಮಗೆ ಎಂಪಿ ಟಿಕೆಟ್ ನೀಡುವ ಮೂಲಕ ಪ್ರಮೋಷನ್ ನೀಡುವ ಮಾತನಾಡಿದ್ದರು. ಹಿರಿಯರಾದ ಶಿವಪ್ಪನವರ ಅಭಿಪ್ರಾಯವನ್ನು ಗೌರವಿಸೋಣ. ಆದರೆ ಪಕ್ಷದ ನಿಲುವನ್ನು ಪರಿಗಣಿಸೋಣ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಶಾಂತಿ, ಅಭಿವೃದ್ಧಿ ಮಂತ್ರ: ಶಾಂತಿ, ಅಭಿವೃದ್ಧಿ ಮಂತ್ರ ಪಠಿಸಿದ್ದು ತಮ್ಮ 20 ವರ್ಷಗಳ ಶಾಸಕಗಿರಿಯ ಸಾಧನೆ. ಕಳೆದ 20 ವರ್ಷಗಳಲ್ಲಿ ತುಮಕೂರು ನಗರದಲ್ಲಿ ಯಾವುದೇ ಅಹಿತಕರ ಘಟನೆ, ಅಶಾಂತಿಗೆ ಅವಕಾಶ ನೀಡದಿರುವುದು ತಮ್ಮ ಹೆಗ್ಗಳಿಕೆ. ಸಾಧನೆ. ಶಾಂತಿ ಕಾಪಾಡಲು ಇರುವ ಪೊಲೀಸರು ನಮಗಾಗಿಯೇ ಇದ್ದಾರೆ. ರಸ್ತೆ ಅಭಿವೃದ್ಧಿ, ನಗರಸಾರಿಗೆ, ಬಸ್ಟ್ಯಾಂಡ್, ಅಮಾನಿಕೆರೆ ಅಭಿವೃದ್ಧಿ, ಕುಡಿಯುವ ನೀರಿನ ಎರಡನೇ ಹಂತದ ಕಾಮಗಾರಿ ಸೇರಿದಂತೆ ಇತರೆ ಅಭಿವೃದ್ಧಿ ಕಾಮಗಾರಿಗಳು ತಮ್ಮ ಸಾಧನೆಯನ್ನು ಬಿಂಬಿಸುತ್ತವೆ ಎಂದು ಸೊಗಡು ಅಭಿಮಾನದಿಂದ ಹೇಳಿಕೊಂಡರು.
ನಗರಸಭೆ ಫಲಿತಾಂಶ ಲೆಕ್ಕಕ್ಕಿಲ್ಲ: ತುಮಕೂರು ನಗರಸಭೆ ಫಲಿತಾಂಶ ಲೆಕ್ಕಕ್ಕಿಲ್ಲ.
ಸ್ಥಳೀಯ ಸಂಸ್ಥೆ ಚುನಾವಣೆ ಚುನಾವಣೆಯೇ ಅಲ್ಲ. ಈ ಚುನಾವಣೆ ಫಲಿತಾಂಶದ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. 35 ವಾರ್ಡ್ಗಳಲ್ಲಿ ಬಿಜೆಪಿ ಕೇವಲ 3 ಸ್ಥಾನ ಗೆದ್ದಿರುವ ಕುರಿತು ಭಯಪಡುವ ಅಗತ್ಯವಿಲ್ಲ. ನಗರಸಭೆ ಫಲಿತಾಂಶ ವಿಧಾನಸಭೆ ಚುನಾವಣೆಯಲ್ಲಿ ಮರುಕಳಿಸಲ್ಲ. ತುಮಕೂರು ನಗರಸಭೆ ಫಲಿತಾಂಶ ತಮ್ಮ ಸಾಧನೆಗೆ ನೀಡಿದ ಉತ್ತರವೂ ಅಲ್ಲ. ತಮ್ಮ ವಿರುದ್ದ ನೀಡಿದ ತೀರ್ಪೂ ಅಲ್ಲ. ನಗರಸಭೆ ಚುನಾವಣೆ ವಾತಾವರಣವೇ ಬೇರೆ. ವಿಧಾನಸಭೆ ಚುನಾವಣೆ ವಾತಾರವರಣವೇ ಬೇರೆ ಎಂದು 2007 ರ ನಗರಸಭೆ ಚುನಾವಣೆ ಫಲಿತಾಂಶ ಉದಾಹರಿಸುವ ಮೂಲಕ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸುದ್ದಿಗೋಷ್ಠಿಯಲ್ಲಿ ಎಂಎಸ್ಐಎಲ್ ಅಧ್ಯಕ್ಷ ಎಂ.ಬಿ. ನಂದೀಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಶಿವಪ್ರಸಾದ್, ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್. ಶ್ರೀಧರಮೂರ್ತಿ ಇತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

