ತುಮಕೂರು

ಕರ್ತವ್ಯ ನಿರತ ಪೊಲೀಸರ ಮೇಲೆ ದಾಳಿ

Published On :

ತಿಪಟೂರು: ತಾಲೂಕಿನ ಕರಡಿ ಬಳಿಯ ಮಲ್ಲೇನಹಳ್ಳಿ ಕಲ್ಲಾಳಮ್ಮನವರ ದೇವಾಲಯದ ಬಳಿ ಇತ್ತೀಚಿಗೆ ಇಸ್ಪೀಟ್ ದಂಧೆಯಲ್ಲಿ ತೊಡಗಿದ್ದ ಗುಂಪಿನ ಮೇಲೆ ದಾಳಿ ನಡೆಸಲು ಹೋದ ಕಿಬ್ಬನಹಳ್ಳಿ ಠಾಣೆಯ ಪಿಎಸ್‌ಐ ಮತ್ತು ಸಿಬ್ಬಂದಿ ಮೇಲೆಯೇ ಏಕಾಏಕಿ ದಂಧೆಕೋರರು ಪ್ರತಿ ದಾಳಿ ನಡೆಸಿದ್ದಾರೆ. ಈ ವೇಳೆ ಪಿಎಸ್‌ಐ ರಾಜು ಅವರ ಕಣ್ಣಿಗೆ ಪೆಟ್ಟು ಬಿದ್ದಿದೆ. ಪೇದೆ ಪುಟ್ಟರಾಜುವಿನ ಕೈ ಮುರಿದರೆ, ಪೇದೆಗಳಾದ ಬಸವರಾಜು, ಕೃಷ್ಣಮೂರ್ತಿ, ಶಾಂತಪ್ಪ, ಅರುಣಕುಮಾರ್, ಮಹೇಶ, ಶ್ರೀರಂಗಯ್ಯ, ಶಂಕರಪ್ಪ, ಕಾಂತರಾಜು ಮತ್ತು ಚೇತನ್‌ಕಮಾರ್ ಅವರಿಗೆ ಚಿಕ್ಕಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಘಟನೆ ವಿವರ: ಇತ್ತೀಚಿಗೆ ನಡೆದ ನಗರಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದಿದ್ದ ನಗರಸಭಾ ಸದಸ್ಯರೊಬ್ಬರು ಶ್ರೀ ಕಲ್ಲಾಳಮ್ಮನವರ ದೇವರಿಗೆ ಪೂಜೆ ಇಟ್ಟುಕೊಂಡಿದ್ದರು. ಚುನಾವಣೆಯಲ್ಲಿ ದುಡಿದಿದ್ದ ಪಕ್ಷದ ಕಾರ್ಯಕರ್ತರು ಮತ್ತು ಸ್ನೇಹಿತರನ್ನು ಆಹ್ವಾನಿಸಿ ಮಾಂಸದೂಟ ಏರ್ಪಡಿಸಿದ್ದರು. ಈ ಸಂದರ್ಭದಲ್ಲಿ ಊಟಕ್ಕೆ ಬಂದಿದ್ದವರು ಇಸ್ಪೀಟ್ ಆಡುತ್ತಿದ್ದರು. ಅಂದು ಮಧ್ಯಾಹ್ನ 4 ಗಂಟೆಗೆ ಕಿಬ್ಬನಹಳ್ಳಿ ಠಾಣಾ ಪೋಲೀಸರು ದಾಳಿ ನಡೆಸಿದಾಗ, ಏಕಾಏಕಿ ಇಸ್ಪೀಟ್ ಆಡುತ್ತಿದ್ದವರೇ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ.
ಆರೋಪಿಗಳ ದಸ್ತಗಿರಿ: ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹರೀಶ್, ಶ್ರೀನಿವಾಸ್ ಮತ್ತು ಅಂಜನಪ್ಪನವರನ್ನು ದಸ್ತಗಿರಿ ಮಾಡಿ ಇತರರ ಮೇಲೆ ಕಿಬ್ಬನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.
ಶಾಸಕರ ರಾಜಿ ಕಬೂಲಿ ವಿಫಲ: ಘಟನೆ ತಿಳಿದ ಬಿಜೆಪಿ ಶಾಸಕ ನಾಗೇಶ್ ಸ್ಥಳಕ್ಕೆ ಭೇಟಿ ನೀಡಿ, ಹಲ್ಲೆಗೊಳಗಾಗಿರುವ ಪೊಲೀಸರ ಮನವೊಲಿಸಿ ಬಿಜೆಪಿ ಕಾರ್ಯಕರ್ತರು ಮೇಲೆ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸದಂತೆ ಒತ್ತಡ ಹೇರುತ್ತಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಆದರೆ, ಕರ್ತವ್ಯನಿರತ ಪೊಲೀಸರ ಮೇಲೆ ಹಲ್ಲೆ ನಡೆಸಿರುವ ಆರೋಪಿಗಳ ಪರ ಶಾಸಕರು ನಡೆಸಿದ ರಾಜಿ ಕಬೂಲಿ ಸಮಂಜಸವೇ ಎಂಬುದು ಸಾರ್ವಜನಿಕ ಚರ್ಚೆ ಗ್ರಾಸವಾಗಿದೆ.
ಜೆಡಿಎಸ್, ಕಾಂಗ್ರೆಸ್ ಕಾರ್ಯಕರ್ತರು ಕೆಜೆಪಿಗೆ
ತುಮಕೂರು: ತುಮಕೂರಿನಲ್ಲಿ ನಡೆದ ಕೆಜೆಪಿ ಸಮಾವೇಶದಲ್ಲಿ ನೂರಾರು ಜೆಡಿಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸಮ್ಮುಖದಲ್ಲಿ ಕೆಜೆಪಿಗೆ ಸೇರ್ಪಡೆಯಾದರು. ನಿರೀಕ್ಷೆಯಂತೆ ಜೆಡಿಎಸ್‌ನಿಂದ ವಲಸೆ ಬಂದ ನಿಂಗಪ್ಪ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಕೆಜೆಪಿಗೆ ಸೇರ್ಪಡೆಯಾದರು. ಅದೇ ರೀತಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಲ್ಪಸಂಖ್ಯಾತರು ಇದೇ ಸಂದರ್ಭದಲ್ಲಿ ಕೆಜೆಪಿಗೆ ಸೇರ್ಪಡೆಯಾದರು. ಕಾಂಗ್ರೆಸ್‌ನ ಮಾಜಿ ನಗರಸಭಾ ಸದಸ್ಯ ಹಾಗೂ ಉಪಾಧ್ಯಕ್ಷ ಹನುಮಂತರಾಯಪ್ಪ ಇತರರು ಕೆಜೆಪಿಗೆ ಸೇರ್ಪಡೆಯಾದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.