ಬುದ್ಧ ಮಾನವ ಸಂಕುಲದ ಆಸ್ತಿ: ಡಾ. ಸಂಘಸೇನ ಮಹಾತೇರ
ಕ.ಪ್ರ.ವಾರ್ತೆ ತುಮಕೂರು ಮಾ.27
ಭಗವಾನ್ ಬುದ್ಧ ಕೇವಲ ಬೌದ್ಧ ಧರ್ಮದ ಅನುಯಾಯಿಗಳಿಗಷ್ಟೇ ಸೀಮಿತವಲ್ಲ. ಆತ ಇಡೀ ಮಾನವ ಸಂಕುಲದ ಆಸ್ತಿ ಎಂದು ಲೇಹ್-ಲಡಾಖ್ನ ಮಹಾಬೋಧಿ ಅಂತಾರಾಷ್ಟ್ರೀಯ ಧ್ಯಾನಕೇಂದ್ರದ ಅಧ್ಯಕ್ಷ ಡಾ. ಸಂಘಸೇನ ಮಹಾತೇರ ಅಭಿಪ್ರಾಯಪಟ್ಟರು.
ತುಮಕೂರು ವಿಶ್ವವಿದ್ಯಾನಿಲಯ ಹಾಗೂ ಬೆಂಗಳೂರಿನ ಮಹಾಬೋಧಿ ಸೊಸೈಟಿಯ ಸಂಯುಕ್ತ ಆಶ್ರಯದಲ್ಲಿ ವಿಶ್ವವಿದ್ಯಾನಿಲಯದ ಅವರಣದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಸಮಕಾಲೀನ ಜಗತ್ತಿಗೆ ಬುದ್ಧನ ಬೋಧನೆಗಳು ಕುರಿತ ಅಂತಾರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಭಗವಾನ್ ಬುದ್ಧನನ್ನು ಹಿಂದೆ ಏಷ್ಯಾದ ಬೆಳಕು ಎಂದು ಕರೆಯಲಾಗುತ್ತಿತ್ತು. ಈಗ ಬೌದ್ಧಧರ್ಮದ ಪ್ರಭೆ ಪ್ರಪಂಚದ ಎಲ್ಲೆಡೆ ಹರಡಿದೆ. ಜಗತ್ತಿನ ಬೇರೆಬೇರೆ ದೇಶಗಳು ಬುದ್ಧನ ಸಂದೇಶಗಳತ್ತ ಒಲವು ತೋರುತ್ತಿವೆ. ಬುದ್ಧ ಈಗ ಜಗದ ಬೆಳಕು ಎಂದರು.
ಆಧ್ಯಾತ್ಮಿಕತೆ ಹಾಗೂ ಧರ್ಮ ಇಲ್ಲದೆ ಜೀವನ ಸತ್ವಹೀನ ಮತ್ತು ಅರ್ಥಹೀನ. ಅವೆರಡರ ಸಮಾಗಮವಾಗಿರುವ ಬುದ್ಧನ ಚಿಂತನೆಗಳು ಸಂಘರ್ಷಗಳಿಂದ ತುಂಬಿರುವ ಸಮಕಾಲೀನ ಜಗತ್ತಿಗೆ
ತಂಪೆರೆಯಬಲ್ಲವು ಎಂದರು.
ಸಮಾರಂಭಕ್ಕೆ ಆಗಮಿಸಬೇಕಾಗಿದ್ದ ಮಹಾಬೋಧಿ ಸೊಸೈಟಿಯ ಸ್ಥಾಪಕ ಅಧ್ಯಕ್ಷ ಆಚಾರ್ಯ ಬುದ್ಧರಖ್ಖಿತ ಅವರು ಅನಿವಾರ್ಯ ಕಾರಣಗಳಿಂದ ಹಾಜರಿರದೇ ಇದ್ದುದರಿಂದ ಅವರ ವೀಡಿಯೋ ಸಂದೇಶವನ್ನು ಪ್ರಸಾರ ಮಾಡಲಾಯಿತು. ತಮ್ಮ ಸಂದೇಶದಲ್ಲಿ ಆಚಾರ್ಯ ಬುದ್ಧರಖ್ಖಿತ ಅವರು, ವಿಜ್ಞಾನ ಹಾಗೂ ತಂತ್ರಜ್ಞಾನದ ಕ್ರಾಂತಿಯ ಈ ಯುಗದಲ್ಲಿ ಬುದ್ಧನ ಚಿಂತನೆಗಳ ಅಧ್ಯಯನ ಅತ್ಯಂತ ಪ್ರಸ್ತುತ ಎನಿಸುತ್ತವೆ ಎಂದರು. ಭೌತಿಕ ವೈಭೋಗದ ಕಡೆಗಿನ ಮನುಷ್ಯನ ತುಡಿತದಿಂದಾಗಿ ಎಲ್ಲ ಬಗೆಯ ಸಂಕಷ್ಟಗಳು ಇಂದು ಎದುರಾಗುತ್ತಿವೆ. ದುರಾಸೆ, ದ್ವೇಷ ಹಾಗೂ ಭ್ರಮೆ ಮಾನವ ದುಃಖದ ಮೂಲ ಕಾರಣಗಳಾಗಿವೆ ಎಂದ ಅವರು, ಇವುಗಳನ್ನು ಹೋಗಲಾಡಿಸಲು ನಾವು ಶತಪ್ರಯತ್ನ ಮಾಡಬೇಕಾಗಿದೆ ಬುದ್ಧನ ಬೋಧನೆಗಳು ಎಲ್ಲ ತೆರನಾದ ಸಂಕಷ್ಟಗಳಿಗೂ ಸಮಾಧಾನ ತರುವ ಶಕ್ತಿ ಹೊಂದಿವೆ ಎಂದರು. ಸಮಕಾಲೀನ ಜಗತ್ತಿಗೆ ಬುದ್ಧನ ಬೋಧನೆಗಳು ಕುರಿತ ಕೃತಿಯನ್ನು ಈ ಸಂದರ್ಭ ಬಿಡುಗಡೆ ಮಾಡಲಾಯಿತು. ಮಹಾಚುಲಲಾಂಗ್ ಕಾರ್ನ್ ವಿಶ್ವವಿದ್ಯಾನಿಲಯ, ಬ್ಯಾಂಕಾಕ್, ಥೈಲ್ಯಾಂಡ್ ಇಲ್ಲಿನ ಡಾ. ಫ್ರಕ್ರು ಘೋಸಿತ್ ಬೋಧಿಸತ್ ವಜಿರನ್ಯಾನೊ, ಫ್ರಮಹ ನೊಪದೋಲ್ ಪುನ್ನಸುವದ್ಧಕೊ, ಮಹಾಬೋಧಿ ಸೊಸೈಟಿಯ ಪ್ರಧಾನ ಕಾರ್ಯದರ್ಶಿ ಆನಂದ ಭಂತೇಜಿ, ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎಸ್. ಸಿ. ಶರ್ಮಾ, ಕುಲಸಚಿವ ಪ್ರೊ. ಡಿ. ಶಿವಲಿಂಗಯ್ಯ ಹಾಗೂ ಕುಲಸಚಿವ (ಮೌಲ್ಯಮಾಪನ) ಎನ್. ಲಕ್ಷ್ಮೀಕಾಂತ ಉಪಸ್ಥಿತರಿದ್ದರು. ಶ್ರೀಲಂಕಾ, ಮ್ಯಾನ್ಮಾರ್, ಥಾಲಾಂಡ್ ಮತ್ತಿತರ ದೇಶಗಳಿಂದ ಆಗಮಿಸಿದ ಬೌದ್ಧಧರ್ಮ ಅನುಯಾಯಿಗಳು ಸಮ್ಮೇಳನದಲ್ಲಿ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

