ತುಮಕೂರು

ಜಿಲ್ಲೆಯಲ್ಲಿ 22 ಸಾವಿರ ಟನ್ ರಸಗೊಬ್ಬರ ದಾಸ್ತಾನು

Published On :

ಕ.ಪ್ರ.ವಾರ್ತೆ  ತುಮಕೂರು ಮೇ 16
ತುಮಕೂರು ಜಿಲ್ಲೆಯಲ್ಲಿ ಕಳೆದ ಎರಡು ವಾರಗಳಿಂದ ಉತ್ತಮ ಮಳೆಯಾಗಿದ್ದು, ರೈತರು ಕೃಷಿಯತ್ತ ಗಮನ ಹರಿಸಿದ್ದಾರೆ. ಮುಂಗಾರು ಪೂರ್ವ ಮಳೆ ರೈತರಲ್ಲಿ ಹರ್ಷ ಮೂಡಿಸಿದ್ದು,  ಮೇ ತಿಂಗಳ ಮಧ್ಯ ಭಾಗದವರೆಗೆ ಸರಾಸರಿ 16.8 ಮಿಲಿ ಮೀಟರ್ ಮಳೆಯಾಗಿದೆ. ಈ ವೇಳೆಗೆ 80 ಮಿಲಿ ಮೀಟರ್ ಮಳೆ ಬೀಳಬೇಕಿತ್ತು. ನಿರೀಕ್ಷೆಯಷ್ಟು ಮಳೆ ಬೀಳದಿದ್ದರೂ ಬೇಸಾಯ ಕೆಲಸ ಆರಂಭಿಸುವಷ್ಟು ಮಳೆ ಬಿದ್ದಿರುವುದು ರೈತರಿಗೆ ಸಂತಸವುಂಟು ಮಾಡಿದೆ.
ಕಳೆದ 15 ದಿನಗಳಲ್ಲಿ ತುಮಕೂರು ನಗರದಲ್ಲಿ 39.6 ಮಿಲಿ ಮೀಟರ್‌ನಷ್ಟು ಅತಿಹೆಚ್ಚು ಮಳೆ ಬಿದ್ದಿದ್ದರೆ, ಪಾವಗಡದಲ್ಲಿ ಅತಿ ಕಡಿಮೆ ಅಂದರೆ ಕೇವಲ 6.9 ಮಿಲಿ ಮೀಟರ್‌ನಷ್ಟು ಮಳೆ ಬಿದ್ದಿದೆ. ಚಿಕ್ಕನಾಯಕನಹಳ್ಳಿಯಲ್ಲಿ 19.4 ಮಿಮೀ, ಗುಬ್ಬಿಯಲ್ಲಿ 21.9 ಮಿಮೀ, ಕುಣಿಗಲ್ 25 ಮಿಮೀ ಹಾಗೂ ತಿಪಟೂರಿನಲ್ಲಿ 17.8 ಮಿಮೀ ನಷ್ಟು ಮಳೆಯಾಗಿದೆ. ತುರುವೇಕೆರೆಯಲ್ಲಿ ಮಳೆ ಕೈಕೊಟ್ಟಿದೆ. ಉತ್ತಮ ಮಳೆ ಹಿನ್ನೆಲೆಯಲ್ಲಿ ಕೆಲವು ತಾಲೂಕುಗಳಲ್ಲಿ ಕೃಷಿ ಚಟುವಟಿಕೆ ಆರಂಭಗೊಂಡಿದೆ. 1400 ಎಕರೆ ಪ್ರದೇಶದಲ್ಲಿ ಹೆಸರು ಬಿತ್ತನೆ ಮಾಡಲಾಗಿದೆ. ಇದರಲ್ಲಿ ಗುಬ್ಬಿಯಲ್ಲಿ 90 ಹೆಕ್ಟೇರ್, ಕುಣಿಗಲ್ 900 ಹೆಕ್ಟೇರ್ ಪ್ರದೇಶದಲ್ಲಿ, ತಿಪಟೂರಿನ 150 ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬಿತ್ತನೆ ನಡೆದಿದೆ. 3460 ಕ್ವಿಂಟಾಲ್ ಬಿತ್ತನೆ ಬೀಜವನ್ನು ರೈತರಿಗೆ ವಿತರಣೆ ಮಾಡಲು ಕೃಷಿ ಇಲಾಖೆ ಕ್ರಮ ಕೈಗೊಂಡಿದೆ. ಉದ್ದು, ಅಲಸಂದೆ, ತೊಗರಿ, ಹೆಸರನ್ನು ಕೃಷಿ ಸಹಕಾರ ಸಂಘಗಳ ಮೂಲಕ ವಿತರಿಸಲು ಸಿದ್ಧತೆ ನಡೆದಿದೆ.
ತಾಲೂಕುವಾರು  ವಿವರ:  ಚಿಕ್ಕನಾಯಕನಹಳ್ಳಿ ತಾಲೂಕಿಗೆ 150 ಕ್ವಿಂಟಾಲ್ ಹೆಸರು, ಗುಬ್ಬಿ ತಾಲೂಕಿಗೆ 144 ಕ್ವಿಂಟಾಲ್ ಭತ್ತ, 75 ಕ್ವಿಂಟಾಲ್ ಹೆಸರು, ಮಧುಗಿರಿ ತಾಲೂಕಿಗೆ 1200 ಕ್ವಿಂಟಾಲ್ ಶೇಂಗಾ, ಪಾವಗಡಕ್ಕೆ 2400 ಕ್ವಿಂಟಾಲ್ ಶೇಂಗಾ, ಶಿರಾ ತಾಲೂಕಿಗೆ 1218 ಕ್ವಿಂಟಾಲ್ ಶೇಂಗಾ, ತಿಪಟೂರಿಗೆ 100 ಕ್ವಿಂಟಾಲ್ ಹೆಸರು, ತುಮಕೂರಿಗೆ 475 ಕ್ವಿಂಟಾಲ್ ಬತ್ತ, ತುರುವೇಕೆರೆಗೆ 509 ಕ್ವಿಂಟಾಲ್ ಹೆಸರು ಬಿತ್ತನೆ ಬೀಜ ಪೂರೈಸಲು ಕೋರಿ ಪ್ರಸ್ತಾವನೆ ಬಂದಿದೆ. ಈ ಹಿನ್ನೆಲೆಯಲ್ಲಿ ಕೃಷಿ ಇಲಾಖೆ ಕ್ರಮ ಕೈಗೊಂಡಿದೆ.
22 ಸಾವಿರ ಟನ್ ರಸಗೊಬ್ಬರ: ಜಿಲ್ಲೆಯಲ್ಲಿ ರಸಗೊಬ್ಬರ ಸಮಸ್ಯೆ ಉದ್ಬವಿಸದಂತೆ ಕ್ರಮ ಕೈಗೊಳ್ಳಲಾಗಿದೆ. 22 ಸಾವಿರ ಟನ್ ರಸಗೊಬ್ಬರವನ್ನು ದಾಸ್ತಾನು ಮಾಡಲಾಗಿದೆ. ಪ್ರಸಕ್ತ ಸಾಲಿನಲ್ಲಿ 79,780 ಟನ್ ರಸಗೊಬ್ಬರ ವಿತರಣೆ ಮಾಡುವ ಗುರಿಯನ್ನು ಕೃಷಿ ಇಲಾಖೆ ಹೊಂದಿದೆ.
ಮೇ ನಲ್ಲಿ 6790 ಟನ್ ವಿತರಿಸುವ ಗುರಿ: ಪ್ರಸಕ್ತ ಮೇ ತಿಂಗಳಲ್ಲಿ 6790 ಟನ್ ರಸಗೊಬ್ಬರ ವಿತರಿಸುವ ಗುರಿಯನ್ನು ಕೃಷಿ ಇಲಾಖೆ ಹೊಂದಿದೆ. ಕೃಷಿ ಸಹಕಾರ ಸಂಘಗಳ ಮೂಲಕ ರಸಗೊಬ್ಬರ ವಿತರಿಸಲಾಗುವುದು. ಕಾಳ ಸಂತೆಯಲ್ಲಿ ರಸಗೊಬ್ಬರ ಮಾರಾಟ ತಟೆಗಟ್ಟಲು ವಿಚಕ್ಷಣಾ ದಳ ರಚಿಸಲಾಗಿದೆ. ಅಲ್ಲದೆ ಎರಡು, ಮೂರು ಪಟ್ಟು ದರದಲ್ಲಿ ಖಾಸಗಿಯಾಗಿ ರಸಗೊಬ್ಬರ ಮಾರಾಟಕ್ಕೂ ನಿಯಂತ್ರಣ ಹಾಕಲು ಕೃಷಿ ಇಲಾಖೆ ಮುಂದಾಗಿದೆ. ಒಂದು ವೇಳೆ ದೂರುಗಳು ಕೇಳಿ ಬಂದಲ್ಲಿ,  ಖಾಸಗಿ ರಸಗೊಬ್ಬರ ಅಂಗಡಿಗಳ ಮಾರಾಟ ಪರವಾನಗಿ ರದ್ದುಪಡಿಸುವ ಎಚ್ಚರಿಕೆಯನ್ನು ಕೃಷಿ ಇಲಾಖೆ ನೀಡಿದೆ.
ಬೇಡಿಕೆಗೆ ತಕ್ಕಂತೆ ಗೊಬ್ಬರ: ರೈತರು ಬೇಡಿಕೆಗೆ ತಕ್ಕಂತೆ ರಸಗೊಬ್ಬರ ಪೂರೈಕೆಗೆ ಕ್ರಮ ತೆಗೆದುಕೊಳ್ಳಲಾಗಿದೆ. ರೈತ ಕೇಂದ್ರಗಳಲ್ಲಿ ಬಿತ್ತನೆ ಬೀಜ, ರಸಗೊಬ್ಬರ, ಬಿತ್ತನೆ ಕುರಿತು ಕೃಷಿ ಅಧಿಕಾರಿಗಳು ಮಾಹಿತಿ ನೀಡಲಿದ್ದಾರೆ. ರೈತರು ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಕೃಷಿ ಇಲಾಖೆ ಕರೆ ನೀಡಿದೆ.

ಪೂರ್ವ ಮುಂಗಾರಿನಲ್ಲಿ ಶೇ. 80 ರಷ್ಟು ಬಿತ್ತನೆ
ತುಮಕೂರು: ಏಪ್ರಿಲ್‌ನಿಂದ ಜೂನ್‌ವರೆಗೆ ಪೂರ್ವ ಮುಂಗಾರು. ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಪೂರ್ವ ಮುಂಗಾರು ಬಿತ್ತನೆ ಮಾಡಲಾಗಿದ್ದು, ಶೇ. 80 ರಷ್ಟು ಬಿತ್ತನೆ ನಡೆದಿದೆ. ಹೆಸರು, ಉದ್ದು, ಹಲಸಂದೆ,ತೊಗರಿ ಪೂರ್ವ ಮುಂಗಾರಿನ ಕೃಷಿ ಬೆಳೆಗಳಾಗಿವೆ. ಈ ವರೆವಿಗೆ 40 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಪೂರ್ವ ಮುಂಗಾರಿನ ಕೃಷಿ ಕೈಗೊಳ್ಳಲಾಗಿದೆ. ಚಿ.ನಾ. ಹಳ್ಳಿಯಲ್ಲಿ ಪ್ರಮುಖವಾಗಿ 59 ಕ್ವಿಂಟಾಲ್ ಹೆಸರನ್ನು 1800 ಎಕರೆ ಪ್ರದೇಶದಲ್ಲಿ ಬಿತ್ತಲಾಗಿದೆ. ಕುಣಿಗಲ್‌ನಲ್ಲಿ 10 ಕ್ವಿಂಟಾಲ್ ಹೆಸರು, 15 ಕ್ವಿಂಟಾಲ್ ಉದ್ದು, 25 ಕ್ವಿಂಟಾಲ್ ಹಲಸಂದೆ, 50 ಕ್ವಿಂಟಾಲ್ ತೊಗರಿ ಬಿತ್ತನೆ ಮಾಡಲಾಗಿದೆ. ತಿಪಟೂರಿನಲ್ಲಿ 53 ಕ್ವಿಂಟಾಲ್ ಹೆಸರು, 12 ಕ್ವಿಂಟಾಲ್ ಉದ್ದು, 11 ಕ್ವಿಂಟಾಲ್ ಹಲಸಂದೆ, 15 ಕ್ವಿಂಟಾಲ್ ತೊಗರಿ ಬಿತ್ತಲಾಗಿದೆ. ತುರುವೇಕೆರೆಯಲ್ಲಿ 27 ಕ್ವಿಂಟಾಲ್ ಹೆಸರು, 7 ಕ್ವಿಂಟಾಲ್ ತೊಗರಿ, ಗುಬ್ಬಿಯಲ್ಲಿ 45 ಕ್ವಿಂಟಾಲ್ ಹೆಸರು, ತಲಾ 4 ಕ್ವಿಂಟಾಲ್ ಉದ್ದು-ಹಲಸಂದೆ, 19 ಕ್ವಿಂಟಾಲ್ ತೊಗರಿ ಬಿತ್ತನೆ ನಡೆಸಲಾಗಿದೆ. ತುಮಕೂರಿನಲ್ಲಿ 10 ಕ್ವಿಂಟಾಲ್ ಹೆಸರು ಮಾತ್ರ ಬಿತ್ತನೆಗೆ ಕೊಂಡೊಯ್ಯಲಾಗಿದೆ. ಪೂರ್ವ ಮುಂಗಾರಿನಲ್ಲಿ ಈವರೆಗೆ ಶೇ. 80 ರಷ್ಟು ಬಿತ್ತನೆ ಪೂರ್ಣಗೊಂಡಿದ್ದು, 15 ದಿನಗಳ ಬೆಳೆ ಬಂದಿದೆ ಎಂದು ಕೃಷಿ ಇಲಾಖೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.