'ಶ್ರೀಸಾಮಾನ್ಯರ ಆಶೋತ್ತರಗಳಿಗೆ ಸ್ಪಂದಿಸಿ'
ಕ.ಪ್ರ. ವಾರ್ತೆ ಮಧುಗಿರಿ ಮೇ 18
ಶ್ರೀಸಾಮಾನ್ಯರ ಅಶೋತ್ತರಗಳಿಗೆ ಸ್ಪಂದಿಸಿ ಕೆಲಸ ಮಾಡಲು ಮುಂದಾಗಬೇಕು ಎಂದು ಶಾಸಕ ಕೆ.ಎನ್.ರಾಜಣ್ಣ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಶಾಸಕರಾಗಿ ಆಯ್ಕೆಯಾದ ನಂತರ ಶುಕ್ರವಾರ ಇಲ್ಲಿನ ತಾಲೂಕು ಕಚೇರಿಗೆ ಪ್ರಥಮ ಬಾರಿ ಅಧಿಕಾರಿಗಳ ಸಭೆ ಕರೆದು ಮಾತನಾಡಿದ ಅವರು, ತಾಲೂಕಿನಲ್ಲಿ ಬಡವರು, ಕೂಲಿಕಾರ್ಮಿಕರು ಅಧಿಕವಾಗಿರುವ ಹಿನ್ನೆಲೆಯಲ್ಲಿ ತಮ್ಮ ಕಚೇರಿಗೆ ಬಂದಾಗ ಅವರನ್ನು ಪ್ರೀತಿ, ವಿಶ್ವಾಸದಿಂದ ಕಂಡು ಜನರ ಅಹವಾಲು ಸ್ವೀಕರಿಸಿದರು. ಜನರ ದುಃಖ ದುಮ್ಮಾನಗಳಿಗೆ ಸ್ಪಂದಿಸಿ ಕೆಲಸ ಮಾಡಬೇಕು. ವಿನಾಕಾರಣ ಜನರನ್ನು ಕಚೇರಿಗೆ ಅಲೆಸಬಾರದು ಎಂದರು.
ತೊಂದರೆ ಆಗದಂತೆ ನೋಡಿಕೊಳ್ಳಿ: ಶಾಲಾ ಮಕ್ಕಳ ಶೈಕ್ಷಣಿಕ ಬದುಕಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರಸ್ತುತ ಶೈಕ್ಷಣಿಕ ವರ್ಷದಿಂದಲೇ ಜಾರಿಯಾಗುವಂತೆ ತಹಸೀಲ್ದಾರ್ ಮತ್ತು ಬಿಇಓ ವಿದ್ಯಾರ್ಥಿಗಳ ಮನೆ ಬಾಗಿಲಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಯಾವುದೇ ರೀತಿಯ ಶುಲ್ಕ ಪಡೆಯದೇ ನೀಡುವ ವ್ಯವಸ್ಥೆ ಆಗಬೇಕು ಎಂದ ರಾಜಣ್ಣ ಅರ್ಹ ಫಲಾನುಭವಿಗಳಿಗೆ ವೃದ್ಧಾಪ್ಯ, ಅಂಗವಿಕಲ ವೇತನ ದೊರಕಿಸಿ ಕೊಡಬೇಕು. ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಕಳೆದ ಶೈಕ್ಷಣಿಕ ಸಾಲಿನಲ್ಲಿ ವಿದ್ಯಾರ್ಥಿ ವೇತನ ತಲುಪದ ಬಗ್ಗೆ ದೂರು ಬಂದಿದ್ದು ಈ ಸಲ ಅದಕ್ಕೆ ಅವಕಾಶ ನೀಡ ಬಾರದು. ಹೆಚ್ಚುವರಿ ಹಾಸ್ಟೆಲ್ ಕೊಠಡಿ ಬೇಕಾದರೆ ನಿರ್ಮಿಸಿ ಕೊಡುವುದಾಗಿ ರಾಜಣ್ಣ ಭರವಸೆ ನೀಡಿದರು.
ಮುಂದಾಗಲಿ: ತಾಲೂಕಿನ ಗ್ರಾ.ಪಂ.ಕಾರ್ಯದರ್ಶಿ ಮತ್ತು ಬಿಲ್ ಕಲೆಕ್ಟರ್ಗಳು ಕೇಂದ್ರ ಸ್ಥಾನದಲ್ಲಿ ವಾಸವಿದ್ದು ಜನರ ಕುಂದು ಕೊರತೆ ನೀಗಿಸಲು ಮುಂದಾಗಬೇಕು. ಕೆಲವು ಶಿಕ್ಷಕರು ರಾಜಕಾರಣ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿದ್ದು ರಾಜಕಾರಣ ಬಿಟ್ಟು ಮಕ್ಕಳಿಗೆ ಪಾಠ ಪ್ರವಚನ ಮಾಡುವ ಮೂಲಕ ಶೈಕ್ಷಣಿಕ ಪ್ರಗತಿಗೆ ಮುತುವರ್ಜಿ ವಹಿಸಬೇಕು ಎಂದರು.
ನಂತರ ಪುರಸಭೆಗೆ ಭೇಟಿ ನೀಡಿ ಅಧಿಕಾರಿಗಳ ಜತೆ ಮಾತನಾಡಿದ ರಾಜಣ್ಣ, ಮಧುಗಿರಿ ಪಟ್ಟಣದಲ್ಲಿ ಜನತೆಗೆ ಸ್ವಚ್ಛತೆ, ಕುಡಿವ ನೀರಿಗೆ ಮೊದಲ ಆದ್ಯತೆ ನೀಡಬೇಕು. ಖಾತೆ ಬದಲಾವಣೆ, ಕಂದಾಯ ವಸೂಲಿ ಬಗ್ಗೆ ಸಾರ್ವಜನಿಕರಿಂದ ಅನೇಖ ಬಾರಿ ದೂರುಗಳು ಬಂದಿದ್ದು ಅಧಿಕಾರಿಗಳು ಅದನ್ನು ಸರಿಪಡಿಸಿಕೊಂಡು ಜನತೆಗೆ ತೊಂದರೆ ಆಗದಂತೆ ನಿಗಾ ವಹಿಸಬೇಕು ಎಂದು ಮುಖ್ಯಾಧಿಕಾರಿ ಮಾರುತಿ ಶಂಕರ್ ಅವರಿಗೆ ತಾಕೀತು ಮಾಡಿದರು.
ಜಿ.ಪಂ.ಸದಸ್ಯ ಎಚ್. ಕೆಂಚಮಾರಯ್ಯ, ಜಿಲ್ಲಾ ಉಪಾಧ್ಯಕ್ಷ ತುಂಗೋಟಿ ರಾಮಣ್ಣ, ತಾ.ಪಂ.ಅಧ್ಯಕ್ಷೆ ಯಶೋಧರಾಜಣ್ಣ, ತಾ.ಪಂ.ಇಓ ಮಹಾಲಿಂಗಯ್ಯ, ಮುಖಂಡ ಆರ್.ಸಿ. ವಿಜಯ್ ಕುಮಾರ್ ಜೈನ್, ಬಿ.ಎನ್. ಶಿವಣ್ಣ, ಪುರಸಭೆ ಮಾಜಿ ಅಧ್ಯಕ್ಷ ಎಂ,ಕೆ. ನಂಜುಂಡಯ್ಯ, ಎಂ.ಜಿ.ಶ್ರೀನಿವಾಸಮೂರ್ತಿ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಕೊಂಡವಾಡಿ ಚಂದ್ರಶೇಖರ್, ಎಸ್.ಆರ್.ರಾಜ್ಗೋಪಾಲ್, ಡಿ.ಜಿ.ಶಂಕರನಾರಾಯಣ ಶೆಟ್ಟಿ, ಗುಟ್ಟೆ ಚಿಕ್ಕರಂಗಪ್ಪ, ಹೊಸಕೆರೆ ಜಯಣ್ಣ ಮೊದಲಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

