ಸೈದ್ಧಾಂತಿಕ ಹೋರಾಟದಿಂದ ದೇಶದ ಪ್ರಗತಿ
ಕ.ಪ್ರ. ವಾರ್ತೆ ತುಮಕೂರು ಮೇ 18
ಸೈದ್ಧಾಂತಿಕ ಹೋರಾಟದಿಂದ ಮಾತ್ರ ದೇಶ ಪ್ರಗತಿ ಹೊಂದಲು ಸಾಧ್ಯ ಎಂದು ರಂಗಕರ್ಮಿ ಹಾಗೂ ಕಿರುತೆರೆ ಕಲಾವಿದ ಎಚ್.ಎಂ.ಟಿ. ಈಶ್ವರದಲ್ ಅಭಿಪ್ರಾಯಪಟ್ಟರು.
ಅವರು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೇ ನಿರ್ಮಾಣ ಫೆಡರೇಷನ್ ಸಿಐಟಿಯು ವತಿಯಿಂದ ತುರುವೇಕೆರೆ ತಾಲೂಕು ದಂಡಿನಶಿವರದಲ್ಲಿ ಆಯೋಜಿಸಲಾಗಿದ್ದ ಮೇ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಾರ್ಮಿಕ ವರ್ಗದ ಐಕ್ಯ ಹೋರಾಟವನ್ನು ಇನ್ನಷ್ಟು ಎತ್ತರಿಸಲು ಮತ್ತು ಅದನ್ನು ಜನ ವಿರೋಧಿ ಸಾಮ್ರಾಜ್ಯಶಾಹಿಪರ ಧೋರಣೆಯ ವ್ಯವಸ್ಥೆಯನ್ನು ಬದಲಿಸುವ ಹೋರಾಟದ ಮಟ್ಟಕ್ಕೆ ಏರಿಸಲು ಅಸಂಘಟಿತ ಮತ್ತು ಸಂಘಟಿತ ಎಲ್ಲಾ ಕಾರ್ಮಿಕರು ಶ್ರಮಿಸಬೇಕಾಗಿದೆ ಎಂದು ಕರೆ ನೀಡಿದರು.
ದುಡಿಯುವ ವರ್ಗ ಒಂದಾಗಿ 1880 ರಲ್ಲಿ ಚಿಕಾಗೋ ನಗರದಲ್ಲಿ 8 ಗಂಟೆಗಳ ಕೆಲಸದ ಅವಧಿಗೆ, ಕಾರ್ಮಿಕ ಕಾನೂನುನಗಳ ಜಾರಿಗೆ ಆಗ್ರಹಿಸಿ ಆಂದೋಲನ ರೂಪಿಸಿದ ಫಲವಾಗಿ ಅದರ ನೆನಪಿನಲ್ಲಿ ಜಗತ್ತಿನಾದ್ಯಂತ ಮೇ ತಿಂಗಳಲ್ಲಿ ಕಾರ್ಮಿಕ ದಿನ ಆಚರಿಸುತ್ತಿದ್ದೇವೆ ಎಂದರು.
ಸಮಾಜಮುಖಿಯಾಗಿ: ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ದಂಡಿನಶಿವರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಜಗದೀಶ್ ಮಾತನಾಡಿ ಕಾರ್ಮಿಕರ ಶ್ರಮವನ್ನು ಬಳಸಿ ಕಾಯಕ ಮಾಡಿ ಹೊಟ್ಟೆತುಂಬಿಸಿಕೊಳ್ಳುತ್ತಾರೆ. ಉಳ್ಳವರು ಮತ್ತಷ್ಟು ಬಂಡವಾಳವನ್ನು ಹೆಚ್ಚು ಮಾಡಿಕೊಳ್ಳಲು ಮುಂದಾಗಿದ್ದಾರೆ. ಕಟ್ಟಡ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಸಂಘಕ್ಕೆ ಸೇರ್ಪಡೆಗೊಂಡು ಕಟ್ಟಡ ಕಾರ್ಮಿಕರು ಬದುಕನ್ನು ಹಸನು ಮಾಡಿಕೊಳ್ಳುವ ಜೊತೆಗೆ ಸಮಾಜಮುಖಿಯಾಗಿ ಬೆಳೆಯಬೇಕು ಎಂದರು.
ಅಲ್ಲದೇ ಸೌಲಭ್ಯಗಳನ್ನು ಪಡೆದುಕೊಂಡು ಮತ್ತಷ್ಟು ಕಾರ್ಮಿಕರನ್ನ ಸಂಘಕ್ಕೆ ಸೇರ್ಪಡೆ ಮಾಡಿಕೊಂಡು ಕಾರ್ಮಿಕರು ಆರೋಗ್ಯ, ಶುಚಿತ್ವ ಕಾಪಾಡಿಕೊಂಡು ಶಕ್ತಿವಂತರಾಗಬೇಕೆಂದು ಕರೆ ನೀಡಿದರು.
ಸಿಐಟಿಯುನ ಕಾರ್ಯದರ್ಶಿ ಎನ್.ಕೆ. ಸುಬ್ರಹ್ಮಣ್ಯ ಮಾತನಾಡಿ ಸಮಾಜದಲ್ಲಿ ಜನಗಳ ಸಂಕಟಗಳು ಮತ್ತು ಅವು ಹುಟ್ಟಿಸಿರುವ ಆಕ್ರೋಶವನ್ನು ಬಳಸಿಕೊಂಡು ಜಾತಿ, ಮತ ಮತ್ತು ಧಾರ್ಮಿಕ ಆಧಾರದಲ್ಲಿ ಅವರನ್ನು ಒಡೆಯಲು ಸಕ್ರಿಯವಾಗಿರುವ ವಿವಿಧ ಬಣ್ಣಗಳ ವಿಭಜನಕಾರಿ ವಿಚ್ಛಿದ್ರಕಾರಿ ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಡುವ ಅಗತ್ಯತೆ ಇದೆ ಎಂದರು.
ಕೆಲಸದ ಜೊತೆಗೆ ಹಾಗೂ ಸಮಾಜದ ಅತ್ಯಂತ ದಲಿತ, ಶೋಷಿತ, ವಿಭಾಗದ ಬೇಡಿಕೆಗಳನ್ನು ವರ್ಗ-ವೇದಿಕೆಯಿಂದ ಕೈಗೆತ್ತಿಕೊಳ್ಳುವುದು ಕೂಡ ಜನತೆಯ ಐಕ್ಯತೆಯನ್ನು ವ್ಯಾಪಕಗೊಳಿಸುವ ಮತ್ತು ಕ್ರೋಢಿಕರಿಸುವ ಕೆಲಸಗಳು ಕಾರ್ಮಿಕರ ಮೇಲೆ ಹೆಚ್ಚು ಜವಾಬ್ದಾರಿ ಇದೆ ಎಂದರು. ಕಟ್ಟಡ ಕಾರ್ಮಿಕರ ಸಂಘಟನೆಯ ಮುಖಂಡ ಶ್ರೀಧರ್, ದಂಡಿನ ಶಿವರದ ಗುತ್ತಿಗೆದಾರ ಶಂಕರೇಗೌಡ, ತಾ.ಪಂ. ಸದಸ್ಯ ರಾಜ್ಕುಮಾರ್, ವಕೀಲ ರಾಜಣ್ಣ, ಸಿಐಟಿಯು ತಾಲೂಕು ಕಾರ್ಯದರ್ಶಿ ಡಿ.ಎಚ್. ಸತೀಶ್ ಮುಂತಾದವರು ಮಾತನಾಡಿದರು.
ಮುಂದಾಗಿ: ಅಧ್ಯಕ್ಷತೆ ವಹಿಸಿ ಮಾತನಾಡಿದ ಕಟ್ಟಡ ಮತ್ತು ಇತರೇ ನಿರ್ಮಾಣ ಫೆಡರೆಷನ್ನ ಜಿಲ್ಲಾಧ್ಯಕ್ಷ ಬಿ.ಉಮೇಶ್ ಕಾರ್ಮಿಕ ಆಂದೋಲನವನ್ನು ಮತ್ತಷ್ಟು ಬಲಗೊಳಿಸಲು ಮುಂದಾಗಬೇಕೆಂದರು. ದುಡಿಮೆಯ ಸ್ಥಳಗಳಲ್ಲಿ ಕಾರ್ಮಿಕ ಹಕ್ಕುಗಳ ಮೇಲೆ ದಾಳಿಯ ವಿರುದ್ಧ ಹೋರಾಟಕ್ಕೆ ಪೂರಕವಾಗಿ ಬೇರೆಲ್ಲಾ ಹೋರಾಟಗಳಲ್ಲಿ ಸೌಹಾರ್ದ ಕಾರ್ಯಾಚರಣೆಗಳನ್ನು ನಡೆಸಬೇಕು. ಸೌಹಾರ್ದ ಕಾರ್ಯಾಚರಣೆಗಳು ದುಡಿಯುವ ಜನಗಳ ದೈನಂದಿನ ಸಾಮೂಹಿಕ ಜೀವನ ಅವಿಭಾಜ್ಯ ಅಂಗವಾಗಬೇಕು ಎಂದು ಕರೆ ನೀಡಿದರು.
ಕಟ್ಟಡ ಕಾರ್ಮಿಕರಿಗೆ ಸ್ವಾಸ್ತ್ಯ ಬಿಮಾ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೆ ತರಬೇಕು ಹಾಗೂ ಅವರಿಗೆ ಸಾಮಾಜಿಕ ಭದ್ರತೆ ಸಿಗುವಂತೆ ಕ್ರಮವಹಿಸಬೇಕೆಂದರು.
ವೇದಿಕೆಯಲ್ಲಿ ಸಂಘದ ಗೌರವಾಧ್ಯಕ್ಷ ಹುಚ್ಚೆಗೌಡ, ಅಧ್ಯಕ್ಷ ಡಿ.ಟಿ. ಮಲ್ಲೇಶಯ್ಯ, ಎನ್. ಗಂಗಣ್ಣ ಮುಂತಾದವರು ಉಪಸ್ಥಿತರಿದ್ದರು. ಗಂಗಣ್ಣ ಸ್ವಾಗತಿಸಿ ಡಿ.ಎಂ.ಜಗದಾಂಬ ವಂದಿಸಿದರು. ಮಲ್ಲೇಶಪ್ಪ ಕ್ರಾಂತಿಗೀತೆ ಹಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

