ತುಮಕೂರು

ಕಾವೇರಿ ಗ್ರಾಮೀಣ ಬ್ಯಾಂಕ್ ವ್ಯವಹಾರ ರು. 6859 ಕೋಟಿ

Published On :

ಕ.ಪ್ರ. ವಾರ್ತೆ ತುಮಕೂರು ಮೇ 19
ಕಳೆದ ಮಾರ್ಚ್ 2013 ರ ಮಾರ್ಚ್ 31 ಕ್ಕೆ ಅಂತ್ಯಗೊಂಡ ಆರ್ಥಿಕ ವರ್ಷದಲ್ಲಿ ಕಾವೇರಿ ಗ್ರಾಮೀಣ ಬ್ಯಾಂಕ್‌ನ ಒಟ್ಟು ವ್ಯವಹಾರ 6859 ಕೋಟಿ ರು. ಗಳನ್ನು ದಾಟಿದ್ದು, ಇದು ಕಳೆದ ವರ್ಷಕ್ಕಿಂತ ಶೇ. 32.08 ರಷ್ಚು ಬೆಳವಣಿಗೆಯಾಗಿದೆ ಎಂದು ಬ್ಯಾಂಕಿನ ಅಧ್ಯಕ್ಷ ಡಿ. ಸೋಮಶೇಖರ ಶಾಸ್ತ್ರಿ ತಿಳಿಸಿದ್ದಾರೆ.
ಕಾವೇರಿ ಕಲ್ಪತರು ಗ್ರಾಮೀಣ ಬ್ಯಾಂಕ್, ಚಿಕ್ಕಮಗಳೂರು-ಕೊಡಗು ಗ್ರಾಮೀಣ ಬ್ಯಾಂಕ್ ಮತ್ತು ವಿಶ್ವೇಶ್ವರಯ್ಯ ಗ್ರಾಮೀಣ ಬ್ಯಾಂಕ್‌ಗಳ ಪರಸ್ಪರ ವಿಲೀನದಿಂದ ಕಾವೇರಿ ಗ್ರಾಮೀಣ ಬ್ಯಾಂಕ್ ಎಂಬ ಹೊಸ ಹೆಸರಿನೊಂದಿಗೆ ಮೈಸೂರು, ಹಾಸನ, ಚಾಮರಾಜನಗರ, ತುಮಕೂರು, ಬೆಂಗಳೂರು ನಗರ, ಮತ್ತು ಗ್ರಾಮೀಣ, ರಾಮನಗರ, ಚಿಕ್ಕಮಗಳೂರು, ಕೊಡಗು ಮತ್ತು ಮಂಡ್ಯ ಹೀಗೆ ದಕ್ಷಿಣ ಕರ್ನಾಟಕದ 10 ಪ್ರಮುಖ ಜಿಲ್ಲೆಗಳಲ್ಲಿ 334 ಶಾಖೆಗಳೊಂದಿಗೆ ಕಾರ್ಯ ನಿರ್ವಹಿಸುತ್ತಿದೆ.
ಬ್ಯಾಂಕಿನ ಎಲ್ಲ ಶಾಖೆಗಳು ಕೋರ್ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಎನ್‌ಇಎಫ್‌ಟಿ ಸೌಲಭ್ಯ ಹೊಂದಿವೆ. ಪ್ರಸಕ್ತ ವರ್ಷದಲ್ಲಿ 80 ನೂತನ ಶಾಖೆಗಳನ್ನು ಪ್ರಾರಂಭಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಎಟಿಎಂ ಹಾಗೂ ಆರ್‌ಟಿಜಿಎಸ್ ಸೌಲಭ್ಯ ಒದಗಿಸುವ ಯೋಜನೆಯಿದೆ ಎಂದು ಬ್ಯಾಂಕಿನ ಅಧ್ಯಕ್ಷರು ತಿಳಿಸಿದ್ದಾರೆ.
1701.01 ಕೋಟಿ ಜಿಲ್ಲಾ ಸಾಲ ಯೋಜನೆ: ಕಳೆದ ಹಣಕಾಸು ವರ್ಷದಲ್ಲಿ 536.46 ಕೋಟಿ ರು.ಗಳ ಸಂಗ್ರಹಣೆಯೊಂದಿಗೆ ಬ್ಯಾಂಕಿನ ಒಟ್ಟು ಠೇವಣಿ 3844.92 ಕೋಟಿ ರು.ಗಳಿಗೇರಿದ್ದು, ಶೇ. 16.21 ರ ಬೆಳವಣಿಗೆಯನ್ನು ಸಾಧಿಸಿದೆ. ಅದೇ ರೀತಿ 496.37 ಕೋಟಿ ರು.ಗಳ ಏರಿಕೆಯೊಂದಿಗೆ ಬ್ಯಾಂಕಿನ ಒಟ್ಟು ಮುಂಗಡ 3014.08 ಕೋಟಿ ರು.ಗಳ ಮಟ್ಟ ತಲುಪಿದ್ದು, ಶೇ. 19.72 ರ ಬೆಳವಣಿಗೆ ಸಾಧಿಸಿದೆ.
ಜಿಲ್ಲಾ ಸಾಲ ಯೋಜನೆಯಡಿಯಲ್ಲಿ 1701.07 ಕೋಟಿ ರು. ಸಾಲ ವಿತರಿಸಲಾಗಿದೆ. ಇದು ಹಿಂದಿನ ಹಣಕಾಸು ವರ್ಷಕ್ಕಿಂತ 258.73 ಕೋಟಿ ರು. ಗಳಷ್ಟು ಹೆಚ್ಚಾಗಿದೆ. 2012-13 ರ ಹಣಕಾಸು ವರ್ಷದಲ್ಲಿ ಬ್ಯಾಂಕ್ 32.77 ಕೋಟಿ ರು. ನಿವ್ವಳ ಲಾಭ ಗಳಿಸಿದೆ.
ಬ್ಯಾಂಕ್ ಸ್ವ ಸಹಾಯ ಸಂಘಗಳ ಜೋಡಣೆಯಲ್ಲಿ ಮಂಚೂಣಿಯಲ್ಲಿದೆ. 2012-13 ರ ಆರ್ಥಿಕ ವರ್ಷದಲ್ಲಿ 7784 ಸ್ವ ಸಹಾಯ ಸಂಘಗಳನ್ನು ಬ್ಯಾಂಕಿನೊಂದಿಗೆ ಜೋಡಿಸಿ, 168.48 ಕೋಟಿ ರು. ಗಳಿಗೂ ಹೆಚ್ಚು ಸಾಲ ನೀಡಿದೆ.
ನಬಾರ್ಡ್ ಪ್ರಶಸ್ತಿ: ಸ್ವ ಸಹಾಯ ಸಂಘಗಳಿಗೆ ಅತಿ ಹೆಚ್ಚಿನ ಸಾಲ ನೀಡಿರುವ ಗ್ರಾಮೀಣ ಬ್ಯಾಂಕ್ ಎಂದು ಸತತವಾಗಿ 6 ಬಾರಿ ನಬಾರ್ಡ್‌ನಿಂದ ಪ್ರಶಸ್ತಿ ಪಡೆದಿದೆ. ಬ್ಯಾಂಕಿನ ತುಮಕೂರು ಜಿಲ್ಲಾ ಶಿರಾ ಶಾಖೆಯನ್ನು ಸ್ವ ಸಹಾಯ ಸಂಘ ಬ್ಯಾಂಕ್ ಜೋಡಣೆ ಯೋಜನೆಯಡಿಯಲ್ಲಿ ರಾಜ್ಯದ ಇತರೆ ಗ್ರಾಮೀಣ ಬ್ಯಾಂಕ್‌ಗಳಿಗಿಂತ ಗರಿಷ್ಠ ಮಟ್ಟದಲ್ಲಿ ಸಾಲ ವಿತರಣೆ  ಮಾಡಿದ ಶಾಖೆಯೆಂದು ಪರಿಗಣಿಸಿ, ನಬಾರ್ಡ್ ರಾಜ್ಯ ಮಟ್ಟದ ಪ್ರಥಮ ಪ್ರಶಸ್ತಿಯನ್ನು ನೀಡಿದೆ.
ಕೃಷಿ ಕಾರ್ಮಿಕರಿಗೆ ಸಾಲ: ಸಾಲದ ಭದ್ರತೆಗಾಗಿ ಭೂಮಿಯ ದಾಖಲೆಗಳಿಲ್ಲದ ಹಿಡುವಳಿದಾರರಿಗೆ, ಕೃಷಿ ಕಾರ್ಮಿಕರಿಗೆ ಸಾಲ ಸೌಲಭ್ಯ ನೀಡಲು ಬ್ಯಾಂಕ್ 4860 ಜಂಟಿ ಹೊಣೆಗಾರಿಕೆ ಗುಂಪುಗಳಿಗೆ 47.74 ಕೋಟಿ ರು. ಗಳನ್ನು ನೀಡಿದೆ. ಸಂಪೂರ್ಣ ಗ್ರಾಮ ಯೋಜನೆಯಡಿ ಗ್ರಾಮೀಣ ಜನತೆಗೆ ಸೌರಶಕ್ತಿ ಸೌಲಭ್ಯ, ವಿಮಾ ಸೌಲಭ್ಯ, ಕಿಸಾನ್ ಕ್ರೆಡಿಟ್ ಕಾರ್ಡ್ ಸೌಲಭ್ಯಗಳನ್ನು ಬ್ಯಾಂಕ್ ಒದಗಿಸಿದ್ದು, ಗ್ರಾಮೀಣ ಜನತೆಯನ್ನು ಲೇವಾದೇವಿದಾರರಿಂದ ಮುಕ್ತಗೊಳಿಸುವ ಬ್ಯಾಂಕಿನ ಸಾಧನೆಯನ್ನು ಸರ್ಕಾರ ಹಾಗೂ ಇತರೆ ಎಲ್ಲ ವಲಯಗಳಿಂದ ಪ್ರಶಂಸೆಗೆ ಪಾತ್ರವಾಗಿದೆ.
ಆರ್ಥಿಕ ಸೇರ್ಪಡೆ ಯೋಜನೆ: 2000 ಕ್ಕೂ ಹೆಚ್ಚಿನ ಜನಸಂಖ್ಯೆಯುಳ್ಳ 241 ಗ್ರಾಮಗಳಲ್ಲಿ ಆರ್ಥಿಕ ಸೇರ್ಪಡೆ ಯೋಜನೆಯನ್ನು ಅನುಷ್ಟಾನಗೊಳಿಸಲಾಗಿದ್ದು, ಇದೀಗ 2000 ಕ್ಕಿಂತ ಕಡಿಮೆ ಜನಸಂಖ್ಯೆಯುಳ್ಳ ಗ್ರಾಮಗಳಲ್ಲಿ  ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಸೋಮಶೇಖರ ಶಾಸ್ತ್ರಿ ತಿಳಿಸಿದ್ದಾರೆ.
ಸರಳ ಖಾತೆ ಹೊಂದಿರುವವರಿಗೆ 1,30,000 ಸ್ಮಾರ್ಟ್ ಕಾರ್ಡ್‌ಗಳನ್ನು ಬ್ಯಾಂಕ್ ವಿತರಿಸಿದೆ. ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಫಲಾನುಭವಿಗಳಿಗೆ, ಸಾಮಾಜಿಕ ಭದ್ರತಾ ವಿಮಾ ಸೌಲಭ್ಯ ಪಡೆಯುತ್ತಿರುವವರಿಗೆ ಮತ್ತು ವಿದ್ಯಾರ್ಥಿಗಳಿಗೆ ಸರ್ಕಾರದಿಂದ ನೇರವಾಗಿ ಹಣ ಪಡೆಯುವ ಸಲುವಾಗಿ 65 ಸಾವಿರಕ್ಕೂ ಹೆಚ್ಚಿನ ಖಾತೆಗಳನ್ನು ಬ್ಯಾಂಕ್ ತೆರೆದಿದೆ ಎಂದು ಬ್ಯಾಂಕಿನ ಅಧ್ಯಕ್ಷ ಡಿ. ಸೋಮಶೇಖರ ಶಾಸ್ತ್ರಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.