ತುಮಕೂರು

ವಿವೇಚನಾರಹಿತ ಆದೇಶ: ತಾಪಂ ಸದಸ್ಯರ ಆಕ್ರೋಶ

Published On :

ಚಿಕ್ಕನಾಯಕನಹಳ್ಳಿ: ಸರ್ಕಾರ ನೀಡುವ ಅನುದಾನವನ್ನು ಆಯಾ ಪ್ರದೇಶಗಳಿಗೆ ಅಗತ್ಯಕ್ಕನುಸಾರವಾಗಿ ವಿನಿಯೋಗಿಸುವ ಅಧಿಕಾರವಿಲ್ಲದಿದ್ದ ಮೇಲೆ ಇಂತಹ ಆಡಳಿತ ವ್ಯವಸ್ಥೆಯಿಂದೇನು ಪ್ರಯೋಜನ ಎಂದು ತಾಪಂ ಅಧ್ಯಕ್ಷ ಎಂ.ಎಂ.ಜಗದೀಶ್ ಟೀಕಿಸಿದರು.
 ಅವರು ತಮ್ಮ ಅಧಿಕಾರವಧಿಯ ಕೊನೆಯ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಒಂದು ರೀತಿಯಲ್ಲಿ ವಿದಾಯ ಪತ್ರಿಕಾಗೋಷ್ಠಿ ರೀತಿಯಲ್ಲಿ ತಮ್ಮ ದುಮ್ಮಾನವನ್ನು ಪತ್ರಕರ್ತರೆದುರು ತೆರೆದಿಟ್ಟರು. ತಾಲೂಕಿನಲ್ಲಿ ಎರಡು ವರ್ಷಗಳಿಂದ ಮಳೆ ಬಾರದೆ ಕೊಳವೆ ಬಾವಿಗಳು ಬತ್ತಿ ಹೋಗಿವೆ. ಕುಡಿಯುವ ನೀರಿಗೆ ತತ್ವಾರ ಉಂಟಾಗಿದ್ದು, ಅನೇಕ ಹಳ್ಳಿಗಳಲ್ಲಿ ಟ್ಯಾಂಕರ್ ಮೂಲಕ ನೀರೊದಗಿಸುವ ಪರಿಸ್ಥಿತಿ ತಲೆದೋರಿದೆ.
ಆದರೆ ಸರ್ಕಾರ ಆನೆಯ ಹೊಟ್ಟೆಗೆ ಅರೆಪಾವು ಮಜ್ಜಿಗೆಯೆಂಬಂತೆ ನೀಡಿರುವ ಅನುದಾನವನ್ನು ಸಹ, ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಬಳಸದೆ, ಬರೀ ಕಟ್ಟಡ ಕಾಮಗಾರಿಗಳಿಗೆ ಮಾತ್ರ ವಿನಿಯೋಗಿಸಬೇಕೆಂದರೆ ಹೇಗೆ ಎಂದು ಅವರು ಪ್ರಶ್ನಿಸಿದರು.ಸರ್ಕಾರದ ಇಂತಹ ನೀತಿ ನಿರೂಪಣೆಗಳು ವಿಧಾನ ಸೌಧದ ಮೂರನೆ ಮಹಡಿಯ ಹವಾನಿಯಂತ್ರಿತ ಕೊಠಡಿಗಳಲ್ಲಿ ಕುಳಿತ ಬಿಳಿಯಾನೆಗಳಂತ ಐಎಎಸ್ ಅಧಿಕಾರಿಗಳು, ತಿಕ್ಕಲು ಹೊರಡಿಸುವ ಆದೇಶಗಳು,ಅವರಿಗೆ ಗ್ರಾಮೀಣ ಪ್ರದೇಶದ ಜನಸಾಮಾನ್ಯರ ಕಷ್ಟದ ಅರಿವು ಇರುವುದಿಲ್ಲ. ಆದ್ದರಿಂದ ಇಂತಹ ಹುಚ್ಚು
ಆದೇಶಗಳು ಜಾರಿಯಾಗುತ್ತವೆ. ಶಾಸಕರು ಮತ್ತು ಸಂಸದರಂತೆ ನಾವು ಸಹ ಜನಪ್ರತಿನಿಧಿಗಳೇ. ಅವರಿಗೆ ಕ್ಷೇತ್ರ ವ್ಯಾಪ್ತಿ ಜಾಸ್ತಿಯಿರಬಹುದು, ನಮಗೂ ಸಹ ಅವರಂತೆ ನಮ್ಮ ವಿವೇಚನೆಯಿಂದ ಅನುದಾನವನ್ನು ವಿನಿಯೋಗಿಸುವ ಅಧಿಕಾರ ನೀಡಬೇಕು ಎಂದು ಅವರು ಆಗ್ರಹಿಸಿದರು.ಪೂರ್ವ ಷರತ್ತು: ಅನಿರ್ಬಂಧಿತ ಅನುದಾನ, ವಿಶೇಷ ಅಭಿವೃದ್ಧಿ ಯೋಜನೆ ಅನುದಾನ ಮತ್ತು 13 ನೇ ಹಣಕಾಸು ಯೋಜನೆಯ ಅನುದಾನಗಳನ್ನು ನೀವು ಇಂತಹದೇ ಕಾಮಗಾರಿಯನ್ನು ಕೈಗೆತ್ತಿಕೊಳ್ಳ ಬೇಕೆಂಬ ಪೂರ್ವ ಷರತ್ತು ವಿಧಿಸಿ ಬಿಡುಗಡೆ ಮಾಡಿದ್ದಾರೆ. ನಾವು ಕ್ಷೇತ್ರಗಳಿಗೆ ಕಾಲಿಡುವಂತಿಲ್ಲ. ಕುಡಿಯುವ ನೀರಿನ ಸಮಸ್ಯೆ ಪರಿಹರಿಸದಿದ್ದ ಮೇಲೆ ನೀವು ಜನಪ್ರತಿನಿಧಿಗಳಾಗೇನು ಪ್ರಯೋಜನ ಎಂದು ಜನ ನಮ್ಮನ್ನು ಪ್ರಶ್ನಿಸುತ್ತಾರೆ.ಇದಕ್ಕೆ ಉತ್ತರಿಸುವವರು ನಾವು ಎಂದು ಅವರು ಅವಲತ್ತುಕೊಂಡರು.
ರೈತರ ಸಂಕಷ್ಟ: ಸರ್ಕಾರಿ ನೌಕರರಿಗೆ ಪ್ರತಿ ವರ್ಷ, ತುಟ್ಟಿ ಭತ್ಯೆ, ಬಡ್ತಿ ಎಂದು ಸಾವಿರಾರು ಕೋಟಿ ರು.ಗಳನ್ನು ಖರ್ಚು ಮಾಡುವಸರ್ಕಾರ ರೈತರ ನೆರವಿಗೆ ಬರುವುದಿಲ್ಲ. ಸರ್ಕಾರ ನಿಗದಿ ಪಡಿಸಿರುವ ಬೆಂಬಲ ಬೆಲೆಗಿಂತಲು ಕಡಿಮೆ ದರ ಕೊಬ್ಬರಿಯನ್ನು ಮಾರುಕಟ್ಟೆಯಲ್ಲಿ ಮಾರುವಂತಾಗಿದೆ ರೈತನ ಸ್ಥಿತಿ, ಆದರೆ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ. ಕೂಡಲೇ ಸರ್ಕಾರ ಈ ಬಗ್ಗೆ ಗಮನ ಹರಿಸಬೇಕೆಂದು ಒತ್ತಾಯಿಸಿದರು.  ಉಪಾಧ್ಯಕ್ಷೆ ಲತಾಕೇಶವಮೂರ್ತಿ, ನಿರಂಜನಮೂರ್ತಿ, ಶಶಿಧರ್, ಎ.ಬಿ.ರಮೇಶ್‌ಕುಮಾರ್,ಕೆಂಕೆರೆ ನವೀನ್, ಚೇತನ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.