ಸಚಿವರಿಂದ ಜಯ ಕಾಣಬೇಕಿದೆ ಹಲವು ಸಮಸ್ಯೆ
ಕನ್ನಡಪ್ರಭ ವಾರ್ತೆ ತುಮಕೂರು ಮೇ 19
ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿರುವ ಶಿರಾ ಶಾಸಕ ಟಿ. ಬಿ. ಜಯಚಂದ್ರ ಮೇಲಿದೆ ಬೃಹತ್ ಸವಾಲುಗಳು.
ಹಲವಾರು ಯೋಜನೆಗಳು ನೆನೆಗುದಿಗೆ ಬಿದ್ದಿವೆ, ಕೆಲವು ಕಾಮಗಾರಿಗಳು ಆರಂಭವಾಗಿವೆ. ಮತ್ತೆ ಕೆಲವು ಪ್ರಗತಿಯಲ್ಲಿವೆ, ಇನ್ನು ಕೆಲವು ಕುಂಟುತ್ತಾ ಸಾಗಿವೆ. ಈ ಎಲ್ಲಾ ಕಾಮಗಾರಿಗಳ ಬಗ್ಗೆ ನಿಗಾ ವಹಿಸಬೇಕಾಗಿದೆ.
ಮುಖ್ಯವಾಗಿ ತುಮಕೂರಿಗೆ ಭದ್ರಾ ಮೇಲ್ದಂಡೆ ಯೋಜನೆ, ನೇತ್ರಾವತಿ ತಿರುವು ಯೋಜನೆ ಸೇರಿದಂತೆ ಹಲವಾರು ನೀರಾವರಿ ಸೌಲಭ್ಯಗಳನ್ನು ಕಲ್ಪಿಸಬೇಕಾಗಿದೆ. ಮುಖ್ಯವಾಗಿ ನಂಜುಂಡಪ್ಪ ವರದಿ ಪ್ರಕಾರ ಅತ್ಯಂತ ಹಿಂದುಳಿದ ತಾಲೂಕಿಗೆ ನೀರಾವರಿ ಸೌಲಭ್ಯವನ್ನು ಕಲ್ಪಿಸಬೇಕಾದ ಜವಾಬ್ದಾರಿ ಜಯಚಂದ್ರ ಮೇಲಿದೆ.
ತುಮಕೂರು ನಗರಸಭೆಯನ್ನು ಮಹಾನಗರಪಾಲಿಕೆಯಾಗಿ ಮಾರ್ಪಡಿಸಬೇಕಾಗಿದೆ. ಈಗಾಗಲೇ 3 ಲಕ್ಷ ಜನಸಂಖ್ಯೆಯನ್ನು ಮೀರಿರುವ ತುಮಕೂರು ಈ ಹಿಂದೆ ಮಹಾನಗರಪಾಲಿಕೆಯಾಗಿ ಘೋಷಣೆಯಾಗಿತ್ತು. ಆದರೆ ಜನಸಂಖ್ಯೆ ಕೊರತೆ ಹಿನ್ನೆಲೆ ಹಾಗೂ ಅಂದಿನ ಕೆಲ ನಗರಸಭಾ ಸದಸ್ಯರು ನ್ಯಾಯಾಲಯದ ಮೊರೆ ಹೋಗಿದ್ದರಿಂದ ಪಾಲಿಕೆ ರದ್ದಾಗಿ ಮತ್ತೆ ನಗರಸಭೆಯಾಯ್ತು. ಈಗ ತುಮಕೂರಿನ ಜನಸಂಖ್ಯೆ 3 ಲಕ್ಷ ಮೀರಿದೆ. ಈ ಹಿನ್ನೆಲೆಯಲ್ಲಿ ಪಾಲಿಕೆಯನ್ನಾಗಿ ಮಾಡಬೇಕಾದ ಜವಾಬ್ದಾರಿ ಜಯಚಂದ್ರ ಮೇಲಿದೆ.ಅನುಮೋದನೆ: ಪರಮಶಿವಯ್ಯ ವರದಿ ಆಧಾರದಲ್ಲಿ ಬಯಲುಸೀಮೆಯ 9 ಜಿಲ್ಲೆಗಳಿಗೆ ನೀರು ಒದಗಿಸುವ ವಾಟರ್ ಗ್ರಿಡ್ ಕೆನಾಲ್ ಯೋಜನೆಗೆ ಈಗಾಗಲೇ ಹಿಂದಿನ ಬಿಜೆಪಿ ಸರ್ಕಾರ ಅನುಮೋದನೆ ನೀಡಿದ್ದು ಇದರ ಕಾರ್ಯವನ್ನು ತ್ವರಿತವಾಗಿ ಜಾರಿಗೊಳಿಸಬೇಕಾದ ಅನಿವಾರ್ಯತೆ ಕಾಂಗ್ರೆಸ್ ಸರ್ಕಾರ ಹಾಗೂ ಜಯಚಂದ್ರ ಅವರ ಮೇಲಿದೆ. ಆದರೆ ಟಿ.ಬಿ. ಜಯಚಂದ್ರ ವಾಟರ್ ಗ್ರಿಡ್ ಕೆನಾಲ್ ಯೋಜನೆ ಅಥವಾ ಪರಮಶಿವಯ್ಯ ವರದಿಯ ಒಂದು ಭಾಗವಾಗಿರುವ ಎತ್ತಿನ ಹೊಳೆ ಯೋಜನೆಗಷ್ಟೆ ಆದ್ಯತೆ ನೀಡಿದ್ದು ವ್ಯಾಪಕ ಟೀಕೆ ಎದುರಿಸುತ್ತಿದ್ದಾರೆ. ಈಗ ಪರಮಶಿವಯ್ಯ ವರದಿಯನ್ನು ಸಂಪೂರ್ಣವಾಗಿ ಜಾರಿಗೊಳಿಸಲು ಕಾರ್ಯನಿರ್ವಹಿಸಲೇಬೇಕಾದ ಅನಿವಾರ್ಯ ಸ್ಥಿತಿ ಬಂದೊದಗಿದೆ.ವಿವಿಗೆ ಜಾಗ: ತುಮಕೂರು ವಿವಿ ಆರಂಭವಾದಾಗಿನಿಂದ ಜಾಗದ ಸಮಸ್ಯೆ ಎದುರಿಸುತ್ತಲೇ ಇದೆ. ದೇವರಾಯನದುರ್ಗ ಬಳಿ ನೀಡಿದ್ದ 300 ಎಕರೆ ಜಾಗ ವಿವಾದಕ್ಕೊಳಗಾಗಿ ಕೋರ್ಟ್ ಮೆಟ್ಟಿಲೇರಿ ಕಡೆಗೆ ಅರಣ್ಯ ಇಲಾಖೆಯ ಸುಪರ್ದಿಗೆ ಹೋಯಿತು. ಅದಾದ ನಂತರ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಿವಿಗೆ ಜಾಗ ನೀಡಲಾಗಿತ್ತು. ಆದರೆ ಅದು ಕೂಡ ಕಾರಣಾಂತರಗಳಿಂದ ನೆನಗುದಿಗೆ ಬಿತ್ತು. ಇವಷ್ಟೆ ಅಲ್ಲದೇ ಮಲ್ಲಸಂದ್ರ, ಕೊರಟಗೆರೆ ಮುಂತಾದ ಕಡೆ ವಿವಿಗೆ ಜಾಗ ನೋಡಲಾಗಿತ್ತು. ಆದರೆ ಯಾವೊಂದು ಜಾಗವೂ ಆಂತಿಮವಾಗಲಿಲ್ಲ. ಕಡೆಗೆ ತುಮಕೂರು ಸರ್ಕಾರಿ ವಿಜ್ಞಾನ ಕಾಲೇಜು ಆವರಣವನ್ನೇ ವಿವಿ ತನ್ನ ತೆಕ್ಕೆಗೆ ತೆಗೆದುಕೊಂಡಿತು. ಈಗ ಮತ್ತೆ ವಿವಿಗೆ ಜಾಗ ಒದಗಿಸಬೇಕಾಗಿದೆ. ಹಲವಾರು ಹೊಸ ಕೋರ್ಸ್ಗಳು ಮಂಜೂರಾಗಿವೆ. ವಿವಿ ಕೂಡ ಬೆಳೆಯುತ್ತಿದೆ. ಅಲ್ಲದೇ ತುಮಕೂರು ವಿವಿಯನ್ನು ಆರಂಭಿಸಿದ್ದೇ ಕಾಂಗ್ರೆಸ್ ಸರ್ಕಾರ. ಈಗ ಮತ್ತೆ ಕಾಂಗ್ರೆಸ್ ಸರ್ಕಾರ ಬಂದಿದ್ದು ಜಯಚಂದ್ರ ಅವರು ವಿವಿಗೆ ಜಾಗ ಮಂಜೂರು ಮಾಡಬೇಕಾಗಿದೆ.
ಇವಿಷ್ಟೆ ಅಲ್ಲದೆ ಹಲವಾರು ಕಾಮಗಾರಿಗಳಿಗೆ ಶೀಘ್ರ ಚಾಲನೆ ನೀಡಬೇಕಾಗಿದೆ. ಪಾವಗಡ ರಸ್ತೆ ಸುಧಾರಿಸಬೇಕಾಗಿದೆ. ರೇಲ್ವೆ ಯೋಜನೆಗೆ ಕೇಂದ್ರದ ಮೇಲೆ ಒತ್ತಡ ಹೇರಬೇಕಾಗಿದೆ. ಒಟ್ಟಾರೆಯಾಗಿ ತುಮಕೂರು ಜಿಲ್ಲೆಯ ಹಲವಾರು ಸಮಸ್ಯೆಗಳನ್ನೆಲ್ಲಾ ನಿವಾರಿಸಬೇಕಾದ ಜವಾಬ್ದಾರಿ ಜಯಚಂದ್ರ ಮೇಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

