1.60ಕೋಟಿ ಮೌಲ್ಯದ ಮರಳು ಹರಾಜಿನಿಂದ 18 ಲಕ್ಷ ವಸೂಲಿ!
ಕ.ಪ್ರ. ವಾರ್ತೆ ಕುಣಿಗಲ್ ಮೇ 19
ಒಂದು ಕೋಟಿ ಅರವತ್ತು ಲಕ್ಷ ರೂಪಾಯಿ ಮೌಲ್ಯದ ಮರಳನ್ನು ಲೋಕೋಪಯೋಗಿ ಇಲಾಖೆ ವಶಕ್ಕೆ ನೀಡಿ, ಮರಳು ನೀತಿ ಅನ್ವಯ ಮರಳನ್ನು ಹರಾಜು ಮಾಡಿ 18 ಲಕ್ಷ ರು. ವಸೂಲಿ ಮಾಡಿರುವ ಗೋಲ್ಮಾಲ್ ಪ್ರಕರಣ, ಶಾಸಕ ಡಿ.ನಾಗರಾಜಯ್ಯನವರನ್ನು ಕೆರಳಿಸಿ, ಲೋಕೋಪಯೋಗಿ ಇಲಾಖಾಧಿಕಾರಿಗಳು ಶಾಸಕರ ಕೆಂಗಣ್ಣಿಗೆ ಗುರಿಯಾದ ಘಟನೆ ಶನಿವಾರದ ಸಭೆಯಲ್ಲಿ ನಡೆಯಿತು.
ತಾಪಂ ಸಭಾಂಗಣದಲ್ಲಿ, ಶಾಸಕ ಡಿ.ನಾಗರಾಜಯ್ಯ ಪ್ರಥಮ ಬಾರಿಗೆ ವಿವಿಧ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ್ದು, ಲೋಕೋಯೋಗಿ ಇಲಾಖೆಯ ಸರದಿ ಬಂದಾಗ, ಕಳೆದ ಸಾಲಿನಲ್ಲಿ ಶಿಂಷಾ ನದಿ ಪಾತ್ರದಲ್ಲಿ ಅಕ್ರಮವಾಗಿ ಮರಳು ಸಂಗ್ರಹಣೆ ಮಾಡಿರುವ ಮಾಹಿತಿ ಮೇರೆಗೆ ಕಂದಾಯ, ಪೊಲೀಸ್ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯವರು ಮೂರು ಕಡೆ ದಾಳಿ ನಡೆಸಿ,18981 ಮೆಟ್ರಿಕ್ ಟನ್ ಮರಳನ್ನು, ಸರ್ಕಾರದ ನೂತನ ಮರಳು ನೀತಿ ಅನ್ವಯ ನಿಯಮಾನುಸಾರ ವಿಲೆವಾರಿಗೆ, ಲೋಕೋಪಯೋಗಿ ಇಲಾಖಾಧಿಕಾರಿಗಳ ವಶಕ್ಕೆ ನೀಡಿದ್ದರು.
ಮರಳು ವಿಲೆವಾರಿಯಿಂದ ಸರ್ಕಾರದ ಬೊಕ್ಕಸಕ್ಕೆ ಆಗಿರುವ ಲಾಭಾಂಶದ ಬಗ್ಗೆ ಶಾಸಕರು ಪ್ರಶ್ನಿಸಿದಾಗ, ಇಡೀ ಪ್ರಕ್ರಿಯೆಯಲ್ಲಿ ಡಿಡಿ ಪಡೆದು ಮರಳನ್ನು ವಿಲೆಮಾಡಿದ್ದು, ಇದರಿಂದ 18 ಲಕ್ಷ ರು. ಸಂಗ್ರವಾಗಿದೆ ಎಂದು ಲೋಕೋಪಯೋಗಿ ಇಲಾಖೆ ಎಇಇ ಜಗದೀಶ್ ಉತ್ತರಿಸಿದರು. ಇದು ಶಾಸಕರನ್ನು ಕೆರಳಿಸಿತು. ಪಕ್ಕದಲ್ಲಿದ್ದ ಕಂದಾಯ ಇಲಾಖೆ ತಾಲೂಕು ಮುಖ್ಯಸ್ಥರನ್ನು ಪ್ರಶ್ನಿಸಿದ ಶಾಸಕರು, ನಿಮ್ಮ ನೇತೃತ್ವದಲ್ಲಿ ದಾಳಿ ನಡೆಸಿ ಮರಳನ್ನು ವಶಪಡಿಸಿಕೊಂಡು ನೀಡಿದ್ದೀರಾ, ಎಷ್ಟು ಮೊತ್ತದ ಮರಳು ನೀಡಿದ್ದೀರಾ ಎಂದಾಗ, ತಹಸೀಲ್ದಾರ್ ಜಗದೀಶ್, 18981 ಮೆಟ್ರಿಕ್ ಟನ್ ನೀಡಿದ್ದು, ಅಂದಾಜು 1.60ಕೋಟಿ ಮೌಲ್ಯ ಎಂದರು.
ಸಿಡಿಮಿಡಿಗೊಂಡ ಶಾಸಕರು: ಇದು ಶಾಸಕರನ್ನು ಮತ್ತಷ್ಟು ಕೆರಳಿಸಿತು. ಎಇಇರವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಶಾಸಕರು, ಒಂದು ಕೋಟಿ ಅರವತ್ತು ಲಕ್ಷ ರೂ. ಮೌಲ್ಯದ ಮರಳು ಪಡೆದು, ಕೇವಲ 18 ಲಕ್ಷ ವಸೂಲು ತೋರಿಸಿದ್ದೀರಾ. ಇದರಲ್ಲಿ ಕಾವಲು ಕಾಯಲು ಆರು ಲಕ್ಷ ವೆಚ್ಚ ತೋರಿಸಿದ್ದೀರಾ, ಎಷ್ಟು ಮರಳನ್ನು ಅಕ್ರಮವಾಗಿ ನೀವು ಮತ್ತು ನಿಮ್ಮ ಸಿಬ್ಬಂದಿ, ಗುತ್ತಿಗೆದಾರರಿಗೆ ಅಕ್ರಮವಾಗಿ ಮಾರಾಟ ಮಾಡಿ ಜೇಬು ತುಂಬಿಸಿಕೊಂಡಿದ್ದೀರೆಂದು ನನಗೆ ಮಾಹಿತಿ ಇದೆ. ಇದು ನಿಜಕ್ಕೂ ನಾಚಿಕಗೇಡಿನ ವಿಷಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಹಕಾರ ನೀಡಿಲ್ಲ: ಆಗ ಎಇಇ ಜಗದೀಶ್, ನಾನು ಮರಳು ವಶಪಡಿಸಿಕೊಂಡ ನಂತರ ಅಧಿಕಾರ ಸ್ವೀಕರಿಸಿದ್ದು, ಎಲ್ಲವನ್ನು ಜೆಇ ಪ್ರಕಾಶ್ ನೋಡಿಕೊಳ್ಳುತ್ತಿದ್ದಾರೆ. ನನ್ನದೇನು ಪಾತ್ರವಿಲ್ಲ ಎಂದು ಸಬೂಬು ಹೇಳಲು ಮುಂದಾದರು. ಇದರಿಂದ ಮತ್ತಷ್ಟು ಆಕ್ರೋಶಗೊಂಡ ಶಾಸಕರು, ನಿಮ್ಮ ತಪ್ಪನ್ನು ಮುಚ್ಚಿಹಾಕಿಕೊಳ್ಳಲು ಮತ್ತೊರ್ವರ ಮೇಲೆ ಗೂಬೆ ಕೂರಿಸಬೇಡಿ ಎಂದಾಗ, ಎಇಇ ನಾವು ಸಹ ಹಗಲು ರಾತ್ರಿ ಕಾದಿದ್ದೇವೆ. ಬೇರೆ ಇಲಾಖೆಯವರು ನಮಗೆ ಸಹಕಾರ ನೀಡಿಲ್ಲ. ನಮ್ಮ ಪ್ರಾಣದ ಹಂಗು ತೊರೆದು ಮರಳು ರಕ್ಷಿಸಿದರೂ ಸಾಕಷ್ಟು ಮರಳು ಕಳ್ಳತನವಾಗಿದೆ. ಈ ರೀತಿ ಕದ್ದು ಸಾಗಿಸುವ ಸುಮಾರು 200 ಟನ್ಗೂ ಹೆಚ್ಚಿನ ಮರಳನ್ನು ಹಿಡಿದು ಪೊಲೀಸರ ವಶಕ್ಕೆ ನೀಡಿದ್ದೇವೆ ಎಂದರು. ಇದನ್ನೊಪ್ಪದ ಶಾಸಕರು, ಇಡೀ ಪ್ರಕರಣ ಅನುಮಾನಾಸ್ಪದವಾಗಿ ನಿಮ್ಮ ಹೊಣೆಗೇಡಿತನ ತೋರುತ್ತೆ ಎಂದರು.
1.60 ಕೋಟಿ ಹಣ ಸರ್ಕಾರದ ಬೊಕ್ಕಸಕ್ಕ ಬರುವ ಬದಲು ಕೇವಲ 18 ಲಕ್ಷ, ಅದೂ ಆರು ಲಕ್ಷ ಖರ್ಚುಹಾಕಿದ್ದೀರಾ. ಇಡೀ ಪ್ರಕರಣ ಬೆಲೆಕೇರಿ ಅದಿರು ನಾಪತ್ತೆ ಪ್ರಕರಣ ಜ್ಞಾಪಿಸುತ್ತದೆ, ಸರ್ಕಾರದ ಸ್ವತ್ತನ್ನು ಕಾಪಾಡುವ ಬದಲು ಮರಳನ್ನು ಖಾಸಗಿಯಾಗಿ ವಿಲೆಮಾಡಿ, ಅಕ್ರಮ ಎಸಗಿದ್ದು, ಇಡೀ ಮರಳು ವಿಲೆವಾರಿ ಮಾಡಿರುವ ಪ್ರಕ್ರಿಯೆಯನ್ನು ಸಮಗ್ರ ತನಿಖೆ ನಡೆಸುವಂತೆ ಇಲಾಖಾ ಮೇಲಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗುತ್ತದೆ. ತಪ್ಪಿತಸ್ಥರ ವಿರುದ್ಧ ಮುಲಾಜಿಲ್ಲದೆ ಕ್ರಮಕೈಗೊಳ್ಳಲಾಗುವುದೆಂದರು. ತಹಸೀಲ್ದಾರ್ ಜಗದೀಶ್, ಇಒ ಡಾ,ರಾಮಚಂದ್ರಪ್ಪ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

