ತುಮಕೂರು

ಆಧ್ಯಾತ್ಮಿಕ ಚಿಂತನೆ ಸಮಾಜದ ಪ್ರಗತಿಗೆ ಕಾರಣ

Published On :

ಕ.ಪ್ರ.ವಾರ್ತೆ ಮಧುಗಿರಿ ಮೇ 21
ಆಧ್ಯಾತ್ಮಿಕ ಚಿಂತನೆ ಸಮಾಜದ ಪ್ರಗತಿಗೆ ಕಾರಣ ಎಂದು ವಿದ್ವಾನ್ ರವಿಶಾಸ್ತ್ರಿ ನುಡಿದರು.
ಮಧುಗಿರಿಯ ವಿಪ್ರ ಸೇವಾ ಟ್ರಸ್ಟ್ ಆಶ್ರಯದಲ್ಲಿ ಏರ್ಪಡಿಸಿದ್ದ ಉಚಿತ ವೇದ ಪಾಠ ಶಾಲೆ ಉದ್ಘಾಟಿಸಿ ಮಾತನಾಡಿದ ಅವರು, ಜಗತ್ತನ್ನು ಜಯಿಸಲು ತನ್ನ ಒಳಗನ್ನು ಮೊದಲು ಅರಿಯಬೇಕು. ಆಧ್ಯಾತ್ಮಿಕ ಚಿಂತನೆ ಸಮಾಜದ ಪ್ರಗತಿಗೆ ಪೂರಕವಾಗಿದ್ದು ಗುರುಕುಲ ಪದ್ಧತಿಯ  ಆಧ್ಯಾತ್ಮಿಕ ಸಾಧನೆ ಮುಂದಿನ ಪೀಳಿಗೆಗೆ  
ಬೆಳಕಾಗಿದೆ. ಅವರ ಸಾಧನಾ ಪಥದಲ್ಲಿ ನಾವು ಸಾಗಬೇಕು. ಅವರು ಕಂಡು ಕೊಂಡದ್ದನ್ನು ನಾವು ಕಾಣುವ ಗುರಿ ಇಟ್ಟುಕೊಂಡು ಬದುಕು ಸಾಗಿಸಬೇಕು ಎಂದರು.
ಅತ್ಯಂತ ಹಿಂದುಳಿದ ಪ್ರದೇಶ ಮಧುಗಿರಿಯಲ್ಲಿ ತ್ರಿಮತಸ್ಥ ಬ್ರಾಹ್ಮಣರ ಶ್ರಯೋಭಿವೃದ್ಧಿಗೆ ವಿಪ್ರ ಸೇವಾ ಟ್ರಸ್ಟ್ ಸ್ಥಾಪಿಸಿ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಉಚಿತ ಊಟ, ವಸತಿ ಕಲ್ಪಿಸುವ ಮೂಲಕ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವ ಜೊತೆಗೆ ಈಗ ಉಚಿತ ವೇದ ಪಾಠ ಶಾಲೆ ಪ್ರಾರಂಭಿಸಿರುವುದು ಶ್ಲಾಘನೀಯ ಎಂದರು. ಸನಾತನ ಧರ್ಮ ಕಾಪಾಡಲು ಬ್ರಾಹ್ಮಣರಿಗೆ ವೇದ ಪಾಠ ಅತಿ ಮುಖ ಎಂದರು.
ವಿಪ್ರ ಸೇವಾ ಟ್ರಸ್ಟ್ ಅಧ್ಯಕ್ಷ  ವಿದ್ವಾನ್ ನಾಗರಾಜ ಶಾಸ್ತ್ರಿ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರು ಕೆಎಚ್‌ಎಂಡಿ ಸಂಸ್ಥೆ ಮ್ಯಾನೇಜರ್ ತಾಡಿ ಶಿವರಾಂ, ತಾ.ಬ್ರಾಹ್ಮಣ ಸಭಾ ಅಧ್ಯಕ್ಷ ಪಿ.ಆರ್.ನಂಜುಂಡಯ್ಯ, ವಿಪ್ರ ಯುವ ವೇದಿಕೆ ಅಧ್ಯಕ್ಷ ಬಡಕನಹಳ್ಳಿ ರಾಘವೇಂದ್ರ, ಉಪಾಧ್ಯಕ್ಷ ಸತ್ಯನಾರಾಯಣ್, ಕಾರ್ಯದರ್ಶಿ ವಿನಯಶರ್ಮ,ಅನಂತಭಟ್, ಗುರುಪ್ರಸಾದ್ ಮಾತನಾಡಿದರು.

ಕುಡಿವ ನೀರಿಗಾಗಿ ಗಲಾಟೆ ಪ್ರಕರಣ: 7 ಆರೋಪಿಗಳ ಬಂಧನ
ಪಾವಗಡ:
ಕುಡಿಯುವ ನೀರಿಗಾಗಿ ಪಟ್ಟಣದಲ್ಲಿ ಏರಡು ಕೋಮಿನ ಮಧ್ಯೆ ನಡೆದ ಗಲಾಟೆ ತಾರಕಕ್ಕೇರಿದ್ದು ಘಟನೆಗೆ ಸಂಬಂಧಪಟ್ಟಂತೆ 20ಮಂದಿ ವಿರುದ್ಧ ಪ್ರಕರಣ ದಾಖರಿಸಲಾಗಿದೆ. 7 ಆರೋಪಿಗಳನ್ನು ಬಂಧಿಸಿ ಇಲ್ಲಿನ ಜೆಎಂಎಫ್‌ಸಿ ನ್ಯಾಯಾಲಕ್ಕೆ ಹಾಜರುಪಡಿಸಿದ ಘಟನೆ ಮಂಗಳವಾರ ನಡೆದಿದೆ. ಪಟ್ಟಣದ ಗುಟ್ಟಹಳ್ಳಿಯ ಶಂಕರ, ದೇವರಾಜ್, ನಾಗೇಂದ್ರ, ಮಂಜುನಾಥ್, ಅಂಜಿನಪ್ಪ, ಅಶೋಕ್ ಸೇರಿದಂತೆ 7 ಆರೋಪಿಗಳನ್ನು ಬಂಧಿಸಲಾಗಿದೆ. ಎರಡು ಗುಂಪುಗಳ ಮಧ್ಯೆ ಗಲಾಟೆಗೆ ಕಾರಣಳಾದ ಗುಟ್ಟಹಳ್ಳಿ ನಾಗಮಣಿ ಸೇರಿದಂತೆ ಪ್ರಕರಣದಲ್ಲಿ ದಾಖಲಾದ ಇನ್ನೂ 17ಮಂದಿ ತಲೆ ಮರೆಸಿಕೊಂಡಿದ್ದು ಆರೋಪಿಗಳಿಗಾಗಿ ಶೋಧ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ತೀವ್ರಗಾಯಗೊಂಡು ಸಾವು ಬದಕಿನ ಮಧ್ಯೆ ಹೋರಾಟ ಮಾಡುತ್ತಿರುವ ರವಿ ಎಂಬುವರನ್ನು ತುರ್ತುವಾಹನದಲ್ಲಿ ಬೆಂಗಳೂರಿಗೆ ಕರೆದೊಯ್ದು ನಿಮಾಸ್ಸ್‌ಗೆ ದಾಖಲಿಸಿದ್ದಾರೆ. ಈ ಗಲಾಟೆ  ನಿಯಂತ್ರಿಸಲು ಪಾವಗಡ ಪಿಎಸ್‌ಐ ರಾಮಕೃಷ್ಣಪ್ಪ ಕಳೆದ 2 ದಿನಗಳಿಂದ ಕಾಲೋನಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತು ನಿಯೋಜಿಸಿದ್ದರೂ ಮಂಗಳವಾರ ಮತ್ತೆ ಅದರ್ಶನಗರದ ಕಾಲೋನಿಯೊಂದಕ್ಕೆ ನುಗ್ಗಿ ಮನೆಗಳ ಮೇಲೆ ಕಲ್ಲುತೂರಾಟ ನಡೆಸಿದ್ದಾರೆ.

ಮಾಸಾಶನ ನಿರ್ಲಕ್ಷ್ಯ ತೋರಿದರೆ ಕಠಿಣ ಕ್ರಮ
ಪಾವಗಡ:
ನಿರ್ಗತಿಕರ ಮಾಸಾಶನ ಮಂಜೂರಾತಿಯಲ್ಲಿ ನಿರ್ಲಕ್ಷ್ಯ ತೋರಿದರೆ ಕಾನೂನು ರೀತ್ಯ ಕ್ರಮ ಜರುಗಿಸುವುದಾಗಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಕಂದಾಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.ಅವರು ಮಂಗಳವಾರ ಪಟ್ಟಣದ ತಾಲೂಕು ಕಚೇರಿಯ ಸಭಾಂಗಣದಲ್ಲಿ ಏರ್ಪಡಿಸಿದ್ದ ಕಂದಾಯ ಅಧಿಕಾರಿಗಳ ಸಭೆಯಲ್ಲಿ ಅಧಿಕಾರಿಗಳ ಜೊತೆ ಚರ್ಚಿಸಿದರು. ವೃದ್ಧರು, ವಿಧವೆಯರು, ಅಂಗವಿಕಲರು ಸೇರಿದಂತೆ ನಿರ್ಗತಿಕರಿಗೆ ಮಾಸಾಶನ ಕಲ್ಪಿಸುವಲ್ಲಿ ಕಂದಾಯ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದು ಮಾಸಾಶನ ಮಂಜೂರಾತಿಯಲ್ಲಿ ಇದುವರೆವಿಗೂ ತಾ.ಶೇ.50ರಷ್ಟು ಕೆಲಸ ಮಾಡಿಲ್ಲವೆಂದು ಕಂದಾಯ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ತಾಲೂಕಿನ ಒಪ್ಪತ್ತಿನ ಊಟಕ್ಕೂ ಪರಾದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು ನಿರ್ಗತಿಕರಿಗೆ ಕನಿಷ್ಠ ಮಾಸಾಶನದ ಸೌಲಭ್ಯವಾದರೂ ಕಲ್ಪಿಸಿಕೊಟ್ಟರೆ ನಿರ್ಗತಿಕರ ಜೀವನ ಮಟ್ಟ ಸುಧಾರಿಸಬಹುದು ಎಂದು ಅಧಿಕಾರಿಗಳಿಗೆ ತಿಳಿಸಿದರು.

ಶಾಲೆ ಆವರಣದ ನೂರು ಮೀಟರ್ 'ಹೊರಗೆ' ಧೂಮಪಾನ ನಿಷೇಧ
ಹೊಳೆನರಸೀಪುರ:
ಶಾಲಾ ಆವರಣದ ನೂರು ಮೀಟರ್ ಹೊರಗೆ ಧೂಮಪಾನ ನಿಷೇಧಿಸಿದೆ ಎಂಬ ವಿಚಿತ್ರ ಸಂದೇಶವುಳ್ಳ ಸೂಚನಾ ಬರಹವನ್ನು ತಾಲೂಕಿನ ಆಲಗೌಡನಹಳ್ಳಿ ಸರ್ಕಾರಿ ಶಾಲಾ ಆವರಣದ ಗೋಡೆಯ ಮೇಲೆ ಪ್ರಜ್ಞಾವಂತ ಶಿಕ್ಷಕರು ಬರೆಸಿದ್ದಾರೆ. ಹಾಗಿದ್ದರೆ ನೂರು ಮೀಟರ್ ಒಳಗೆ ಅಂದರೆ ಶಾಲಾ ಆವರಣದಲ್ಲಿಯೇ ಧೂಮಪಾನ ಮಾಡಬಹುದು ಎಂಬ ಅರ್ಥವನ್ನು ಈ ಸೂಚನಾ ಬರಹ ನೀಡಿದಂತಿದೆ. ಶಾಲಾ ಆವರಣದಿಂದ ನೂರು ಮೀಟರ್ ಒಳಗೆ ಸಿಗರೇಟು, ಬೀಡಿ, ಗುಟ್ಕಾ ಮೊದಲಾದ ತಂಬಾಕು ಪದಾರ್ಥಗಳನ್ನು ಮಾರಾಟ ಮಾಡದಂತೆ ಸರ್ಕಾರ ಕಟ್ಟುನಿಟ್ಟಿನ ನಿಯಮ ಜಾರಿಗೆ ತಂದಿರುವುದು ಎಲ್ಲರಿಗೂ ಗೊತ್ತಿರುವ ವಿಷಯವೇ ಆಗಿದೆ. ಆದರೆ ತಾಲೂಕಿನ ಹಾಸನ-ಮೈಸೂರು ಮುಖ್ಯ ರಸ್ತೆಯಲ್ಲಿನ ಆಲಗೌಡನಹಳ್ಳಿ ಸರ್ಕಾರಿ ಶಾಲಾ ಆವರಣ ಗೋಡೆಯ ಮೇಲೆ ಈ ಮೇಲಿನಂತೆ ಸೂಚನಾ ಬರಹವಿದ್ದು, ಶಾಲಾ ಆವರಣದ ನೂರು ಮೀಟರ್ ಒಳಗೆ ಧೂಮಪಾನ ನಿಷೇಧಿಸಲಾಗಿದೆ ಎಂದು ಇರಬೇಕಿದ್ದ ಸೂಚನೆಗೆ ಬದಲಾಗಿ ನೂರು ಮೀಟರ್ ಹೊರಗೆ ಧೂಮಪಾನ ನಿಷೇಧಿಸಲಾಗಿದೆ ಎಂದು ಬರೆಸಲಾಗಿದೆ.  ಇನ್ನೂ ವಿಚಿತ್ರವೆಂದರೆ ಈ ಸೂಚನಾ ಬರಹ ಬರೆದಿರುವ ಗೋಡೆಯ ಪಕ್ಕದಲ್ಲಿಯೇ ಒಂದು ಗೂಡಂಗಡಿ ತಲೆ ಎತ್ತಿದ್ದು, ಇಲ್ಲಿ ತಂಬಾಕು ಪದಾರ್ಥಗಳನ್ನು ರಾಜಾರೋಷವಾಗಿಯೇ ಮಾರಾಟ ಮಾಡುತ್ತಿದ್ದರೂ, ಸಂಬಂಧಿಸಿದ ಶಾಲೆಯ ಶಿಕ್ಷಕರಾಗಲಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಲಿ ಯಾವುದೇ ಕ್ರಮ ಕೈಗೊಳ್ಳದಿರುವುದು ಅಚ್ಚರಿಯ ಸಂಗತಿ.

1.5ಲಕ್ಷ ನಗದು, ಆಭರಣ ಕಳವು
ತಿಪಟೂರು:
ನಗರದ ಗಾಯಿತ್ರಿ ನಗರವಾಸಿ ರಂಗಧಾಮು ಎಂಬುವವರ ಮನೆಯಲ್ಲಿ 1.5ಲಕ್ಷ ನಗದು ಹಾಗೂ 70 ಗ್ರಾಂ ಚಿನ್ನಾಭರಣ ಕಳುವಾಗಿರುವ ಘಟನೆ ವರದಿಯಾಗಿದೆ. ಗಾಯಿತ್ರಿ ನಗರದ ವಾಸಿ ರಂಗಧಾಮ ಹಾಗೂ ಮಮತಾ ದಂಪತಿ ನಿನ್ನೆ ರಾತ್ರಿ ದೇವಸ್ಥಾನಕ್ಕೆ ಹೋಗಿದ್ದ ಸಂದರ್ಭದಲ್ಲಿ  ಮನೆಯ ಹಿತ್ತಲಿನ ಬಾಗಿಲ ಬೀಗ ಮುರಿದು ದುಷ್ಕರ್ಮಿಗಳು ಈ ಕಳ್ಳತನ ನಡೆಸಿದ್ದಾರೆ. ಈ ಸಂಬಂದ ತಿಪಟೂರು ನಗರ ಪಿಎಸ್ಸೈ ನಾಗರಾಜಯ್ಯ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಕಂಪ್ಯೂಟರ್ ಕೋರ್ಸ್
ಶಿರಾ:
ಪಟ್ಟಣದ ಸಾಫ್ಟೆಕ್ ಕಂಪ್ಯೂಟರ್ ಎಜುಕೇಷನ್ ಸೆಂಟರ್ ವತಿಯಿಂದ ರಿಯಾಯಿತಿ ದರದಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಮತ್ತು ಆರ್ಥಿಕವಾಗಿ ಹಿಂದುಳಿದ ಎಲ್ಲಾ ವರ್ಗದವರಿಗೆ, ಉದ್ಯೋಗಿಗಳಿಗೆ, ವ್ಯಾಪಾರಸ್ಥರಿಗೆ ಹಾಗೂ ಗೃಹಿಣೆಯರಿಗೆ ಅಡ್ವಾನ್ಸ್ ಕಂಪ್ಯೂಟರ್ ಕೋರ್ಸ್‌ಗಳಾದ C.T.T., MS-Office, DTP, Tally with VAT, Office Management,Internet,  ಇನ್ನು ಮುಂತಾದ ಕೋರ್ಸ್‌ಗಳ ತರಬೇತಿಗೆ ಅರ್ಜಿಗಳನ್ನು ವಿತರಿಸಲಾಗುತ್ತಿದ್ದು ತರಗತಿಗಳನ್ನು ಜೂನ್ 1 ರಿಂದ ಪ್ರಾರಂಭಿಸಲಾಗುವುದು. ಅಭ್ಯರ್ಥಿಗಳು ಕೋರ್ಸ್‌ಗಳ ಮಾಹಿತಿಗಾಗಿ ಹಾಗೂ ಪ್ರವೇಶಕ್ಕಾಗಿ ಶ್ರೀ ರಂಗನಾಥ ಪ.ಪೂ. ಕಾಲೇಜು ಹತ್ತಿರವಿರುವ, ಡಾ.ಮಹದೇವಪ್ಪ ಮೆಡಿಕಲ್ ಶಾಪ್ ಮೇಲೆ ಇರುವ ಸಾಫ್ಟೆಕ್ ಕಂಪ್ಯೂಟರ್ ಎಜುಕೇಷನ್ ಸೆಂಟರ್ ಇಲ್ಲಿ ಸಂಪರ್ಕಿಸಿ.ಮೊ. 9964079663.

ಗುರು ಗುದ್ಲೀಶ್ವರ ಸ್ವಾಮಿಗಳ ಸ್ಮರಣಾರಾಧನೆ
ತಿಪಟೂರು:
ನಗರದ ಪಿ.ಜಿ.ಎಂ.ಕಲ್ಯಾಣ ಮಂಟಪದಲ್ಲಿ  ಶ್ರೀ ಗುರು ಗುದ್ಲೀಶ್ವರ ಸ್ವಾಮಿಗಳವರ 81 ನೇ ಸ್ಮರಣಾರಾಧನೆ ಹಾಗೂ ಶಿವದೀಕ್ಷಾ ಸಂಸ್ಕಾರ ಕಾರ್ಯಕ್ರಮವು ಬುಧವಾರ ಮತ್ತು ಗುರುವಾರ ನಡೆಯಲಿದೆ. ಹೊಸರಿತ್ತಿ ಶ್ರೀ ಗುದ್ದಲಿ ಸ್ವಾಮೀಜಿಯವರ ಅಧ್ಯಕ್ಷತೆಯಲ್ಲಿ ಸ್ಮರಣಾರಾಧನೆಯು ನಡೆಯಲಿದೆ. ಮಾಡಾಳಿನ  ತೊಂಟದಾರ್ಯಸ್ವಾಮೀಜಿ, ನೊಣವಿನಕೆರೆಯ  ಕರಿಬಸವದೇಶಿಕೇಂದ್ರ ಸ್ವಾಮೀಜಿ, ಷಡಕ್ಷರ ಮಠದ ಶ್ರೀ ರುದ್ರಮುನಿ ಸ್ವಾಮೀಜಿ ಮತ್ತಿತರು ಭಾಗವಹಿಸಲಿದ್ದಾರೆ. ಮೇ 23ರಂದು ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಹಾಗೂ ಬೆಳಿಗ್ಗೆ 11ಗಂಟೆಗೆ ಶಿವಾನುಭವ ಕಾರ್ಯಕ್ರಮವು ನಡೆಯಲಿದ್ದು, ಶಾಸಕ ಕೆ.ಷಡಕ್ಷರಿ, ಮಾಜಿ ಶಾಸಕ ಗಂಗಾಧರಪ್ಪ ಮತ್ತಿತರರು ಭಾಗವಹಿಸಲಿದ್ದಾರೆ.  

ಪ್ರತಿಭಾ ಪುರಸ್ಕಾರ ಅರ್ಜಿ ಆಹ್ವಾನ
ತಿಪಟೂರು:
ತಾಲೂಕಿನ ವ್ಯಾಪ್ತಿಯಲ್ಲಿ 2012-13ನೇ ವರ್ಷದ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ನಗರಸಭೆ ವ್ಯಾಪ್ತಿಯಲ್ಲಿ ವ್ಯಾಸಂಗ ಮಾಡಿದ ಶೇ. 90ರಷ್ಟು ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ವ್ಯಾಸಂಗ ಮಾಡಿದ ಶೇ. 85ರಷ್ಟು ಮತ್ತು ಅದಕ್ಕಿಂತ ಹೆಚ್ಚು ಅಂಕ ಪಡೆದು ಉತ್ತೀರ್ಣರಾಗಿರುವ ತಾಲೂಕಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಕೆ.ಎಂ. ರಾಜಣ್ಣ ತಿಳಿಸಿದ್ದಾರೆ.  ಅರ್ಹ ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿಯ ಜೆರಾಕ್ಸ್ ಪ್ರತಿಯೊಂದಿಗೆ  ವಿಳಾಸವನ್ನು ಸಂಘದ ಅಧ್ಯಕ್ಷರು ಅಥವಾ ಕಾರ್ಯದರ್ಶಿಯವರಿಗೆ ಮೇ 25ರೊಳಗೆ ಅಂಚೆ ಮೂಲಕ ನೀಡುವಂತೆ ಅಧ್ಯಕ್ಷರು ತಿಳಿಸಿದ್ದಾರೆ.

ಎಸ್.ಕೆ.ವಿ.ಎಸ್ ಕಾಲೇಜಿನ ಪ್ರವೇಶಾರಂಭ
ತಿಪಟೂರು:
ನಗರದ ಎಸ್.ಕೆ.ವಿ.ಎಸ್. ಮಹಿಳಾ ಪದವಿ ಪೂರ್ವ ಕಾಲೇಜಿಗೆ ಶೇ. 71ರಷ್ಟು ಫಲಿತಾಂಶ ಬಂದಿದೆ. ಕಲಾವಿಭಾಗದಲ್ಲಿ ಶೇ. 75ರಷ್ಟು, ವಾಣಿಜ್ಯ ವಿಭಾಗದಲ್ಲಿಶೇ. 50ರಷ್ಟು  ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆಂದು ಪ್ರಾಂಶುಪಾಲ ಶ್ರೀಧರ್ ತಿಳಿಸಿದ್ದಾರೆ. ಈ ಪದವಿ ಪೂರ್ವ ಕಾಲೇಜಿಗೆ 2013-14ನೇ ಸಾಲಿನಿಂದ ಸಹ ಶಿಕ್ಷಣ ಬೋಧಿಸಲು ಸರ್ಕಾರ ಅನುಮತಿ ನೀಡಿದ್ದು, ಅನುಭವಿ ಉಪನ್ಯಾಸಕರು, ಗ್ರಂಥಾಲಯ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ ಒಳಗೊಂಡಿರುವ  ಈ ಶಿಕ್ಷಣ ಸಂಸ್ಥೆಗೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರು ಕಲಾ ಮತ್ತು ವಾಣಿಜ್ಯ ವಿಷಯಗಳಿಗೆ ಪ್ರವೇಶ ಪಡೆಯಬಹುದೆಂದು ಪ್ರಾಂಶುಪಾಲರು ತಿಳಿಸಿದ್ದಾರೆ.  

ಜನಸಂಪರ್ಕ ಸಭೆ
ತುಮಕೂರು: 
ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಸ್.ಆರ್. ಶಿದ್ಲಿಂಗಣ್ಣವರ, ಎಂ.ಆರ್. ಗೌತಮ್ ಪೊಲೀಸ್ ನಿರೀಕ್ಷಕರು-1 ಹಾಗೂ ಎಚ್.ಬಿ. ರಮೇಶ್ ಕುಮಾರ್ ಪೊಲೀಸ್  ನಿರೀಕ್ಷಕರು-2 ಅವರು ತುಮಕೂರು ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಜನಸಂಪರ್ಕ ಸಭೆಯನ್ನು ಏರ್ಪಡಿಸಿದ್ದಾರೆ. ಎಸ್.ಆರ್. ಶಿದ್ಲಿಂಗಣ್ಣವರ, ಡಿ.ಎಸ್.ಪಿ. ತುಮಕೂರು ಇವರು ಮೇ 23 ರಂದು ಕೊರಟಗೆರೆ ತಾಲೂಕಿನ ತಾ.ಪಂ. ಸಮುದಾಯ ಭವನದಲ್ಲಿ ಬೆ.11ರಿಂದ ಮ.1 ಗಂಟೆಯವರೆಗೆ  ಮತ್ತು ಮಧುಗಿರಿ ತಾಲೂಕಿನ ತಾಲೂಕು ಪಂಚಾಯತ್ ಸಮುದಾಯ ಭವನದಲ್ಲಿ ಮ.3ರಿಂದ ಸಂಜೆ 5 ಗಂಟೆಯವರೆಗೆ, ಮೇ 24 ರಂದು ಪಾವಗಡ ತಾ.ಪಂ. ಸಮುದಾಯ ಭವನದಲ್ಲಿ ಬೆ.11ರಿಂದ ಮ.1 ಗಂಟೆಯವರೆಗೆ ಜನಸಂಪರ್ಕ ಸಭೆ ಏರ್ಪಡಿಸಿರುತ್ತಾರೆ. ಎಂ.ಆರ್. ಗೌತಮ್, ಪಿ.ಐ.-1, ಕ.ಲೋ. ತುಮಕೂರು ಇವರು ಮೇ 21 ರಂದು ತುರುವೇಕೆರೆ ತಾಲೂಕಿನ ತಾ.ಪಂ. ಸಮುದಾಯ ಭವನದಲ್ಲಿ ಬೆ.11ರಿಂದ ಮ.1 ಗಂಟೆಯವರೆಗೆ ಮತ್ತು ಚಿ.ನಾ.ಹಳ್ಳಿ ತಾಲೂಕಿನ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಮ.3ರಿಂದ ಸಂಜೆ 5 ಗಂಟೆಯವರೆಗೆ, ಮೇ 27 ರಂದು ಕುಣಿಗಲ್ ಕಂದಾಯಭವನದಲ್ಲಿ ಬೆ.11 ರಿಂದ ಮ.1 ಗಂಟೆಯವರೆಗೆ ಜನಸಂಪರ್ಕ ಸಭೆಯನ್ನು ಏರ್ಪಡಿಸಿರುತ್ತಾರೆ. ಎಚ್.ಬಿ. ರಮೇಶ್ ಕುಮಾರ್  ಪಿ.ಐ.-2, ಕ.ಲೋ. ತುಮಕೂರು ಇವರು ಮೇ 22 ರಂದು ತಿಪಟೂರು ತಾಲೂಕಿನ ಪ್ರವಾಸಿ ಮಂದಿರದಲ್ಲಿ  ಬೆ.11 ರಿಂದ ಮ.1 ಗಂಟೆಯವರೆಗೆ ಮತ್ತು ಗುಬ್ಬಿ ತಾಲೂಕಿನ ತಾಲೂಕು ಪಂಚಾಯತ್ ಸಭಾಂಗಣದಲ್ಲಿ,  ಶಿರಾ ತಾಲೂಕು ಪಂಚಾಯತ್ ಸಭಾಂಗಣದಲ್ಲಿ  ಜನಸಂಪರ್ಕ ಸಭೆಯನ್ನು ಏರ್ಪಡಿಸಿದ್ದಾರೆ. ಸಾರ್ವಜನಿಕರು ಸರ್ಕಾರಿ ಕಚೇರಿಗಳಲ್ಲಿ ಇತ್ಯರ್ಥವಾಗದೇ ಇರುವ ಅರ್ಜಿ ಮತ್ತು ಮನವಿಗಳನ್ನು ಸ್ವೀಕರಿಸಿ, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸ್ಥಳದಲ್ಲಿಯೇ ಚರ್ಚಿಸಲಾಗುತ್ತಿದ್ದು, ಸಾರ್ವಜನಿಕರು ಲಿಖಿತವಾಗಿ ತಮ್ಮ ದೂರು ಸಲ್ಲಿಸಬಹುದಾಗಿದೆ ಎಂದು ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎನ್. ರಮೇಶ್ ಚಂದ್ರ ತಿಳಿಸಿದ್ದಾರೆ.

ಪ್ರತಿಭಾ ಪುರಸ್ಕಾರ ಸಮಾರಂಭ
ಮಧುಗಿರಿ:
ತಾಲೂಕಿನ ಆದಿಜಾಂಬವ ಜನಾಂಗದ ವತಿಯಿಂದ ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅಧಿಕ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಹಮ್ಮಿಕೊಳ್ಳಲಾಗಿದ್ದು ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಪರೀಕ್ಷೆಯಲ್ಲಿ ಶೇ. 80 ರಷ್ಟು  ಅಂಕಗಳಿಸಿದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿದ್ದು ಅರ್ಜಿ ಜತಗೆ ಇತ್ತಿಚಿನ 1 ಭಾವಚಿತ್ರ, ಆಯಾ ಶಾಲಾ, ಕಾಲೇಜು ನೀಡಿದ ದೃಢೀಕೃತ ಅಂಕಪಟ್ಟಿ ಹಾಗೂ ತಮ್ಮ ಪೂರ್ಣ ವಿಳಾಸ ದೂರವಾಣಿ ಸಂಖ್ಯೆಯೊಂದಿಗೆ ಮೇ 30ರ ಒಳಗಾಗಿ ಸಲ್ಲಿಸುವಂತೆ ಆದಿಜಾಂಬವ ಜನಾಂಗದ ಅಧ್ಯಕ್ಷ ಎನ್. ನರಸಿಂಹಯ್ಯ  ತಿಳಿಸಿದ್ದಾರೆ. ಮಾಹಿತಿಗಾಗಿ 9886163470 ,9008922492 ಇವರನ್ನು ಸಂಪರ್ಕಿಸಲು ಕೋರಿದ್ದಾರೆ.     

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.