ತುಮಕೂರು

'ನಮ್ಮ ಹಿರಿಯ ನಾಯಕರು ಮೊದಲು ಬುದ್ಧಿ ಕಲಿಯಲಿ'

Published On :

ಕ.ಪ್ರ.ವಾರ್ತೆ ತುಮಕೂರು ಮೇ 21
ಬಿಜೆಪಿಯ ನಮ್ಮ ಹಿರಿಯರು ಮೊದಲು ಬುದ್ಧಿ ಕಲಿಯಬೇಕು. ಆಗಿರುವ ತಪ್ಪುಗಳ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಮಾರ್ಮಿಕವಾಗಿ ನುಡಿದರು.
ಅವರು ತುಮಕೂರಿನ ಸಿದ್ಧಿವಿನಾಯಕ ಸಭಾಂಗಣದಲ್ಲಿ ಏರ್ಪಾಟಾಗಿದ್ದ ಜಿಲ್ಲಾ ಮಟ್ಟದ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ವೇದಿಕೆಯಲ್ಲಿದ್ದ ಪಕ್ಷದ ಮಾಜಿ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ, ಅಶ್ವತ್ಥ್‌ನಾರಾಯಣ್ ಅವರತ್ತ ಕೈ ತೋರುತ್ತಲೇ ಮೇಲಿನಂತೆ ಮಾತನಾಡಿದರು.
ಕಳೆದ ಮೇ 15 ರಂದು ಬೆಂಗಳೂರಿನಲ್ಲಿ ಏರ್ಪಾಟಾಗಿದ್ದ ಪಕ್ಷದ ಸೋಲಿನ ಕುರಿತ ಸಭೆಗೆ ವೈಯಕ್ತಿಕ ಸಮಸ್ಯೆ ಹಿನ್ನೆಲೆಯಲ್ಲಿ ಹೋಗಲಾಗಲಿಲ್ಲ. ಅಲ್ಲಿಗೆ ಹೋಗಿದ್ದರೆ ತಾವು ಮುಲಾಜಿಲ್ಲದೆ ಪಕ್ಷದ ಹಿರಿಯರಿಗೆ ಮೇಲಿನಂತೆ ಹೇಳುತ್ತಿದ್ದೆ ಎಂದರು.
ನಾವು, ನೀವೆಲ್ಲಾ ಯಡಿಯೂರಪ್ಪ ಮುಖ್ಯಮಂತ್ರಿಯಾಗಬೇಕೆಂಬ ಕನಸು ಕಂಡೆವು. ಅದರಂತೆ ಕಾರ್ಯೋನ್ಮುಖರಾದೆವು. ಆದರೆ ಮುಖ್ಯಮಂತ್ರಿಯಾದ ಯಡಿಯೂರಪ್ಪನವರು ಮಾಡಿದ್ದಾದರೂ ಏನು ಎಂದು ಸೊಗಡು ಕಟುವಾಗಿ ಪ್ರಶ್ನಿಸಿದರು.
ಹೊಸಬರಿಗೆ ಶಕ್ತಿ ತುಂಬಿ: ಕಳೆದ ವಿಧಾನಸಭಾ ಚುನಾವಣೆ ಸೋಲಿನ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕು. ಬಿಜೆಪಿ ಹಿರಿಯರು ಚಿಂತನೆಗೆ ತೊಡಗಬೇಕು. ಆಂತರಿಕ ಭಿನ್ನಮತ ಶಮನಗೊಳಿಸಬೇಕು. ಬಿಜೆಪಿಯಲ್ಲಿ  ಹೊಸಬರಿಗೆ ಶಕ್ತಿ ತುಂಬುವ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಕಾರ್ಯೋನ್ಮುಖರಾಗಬೇಕು ಎಂದು ಸೊಗಡು ಮನವಿ ಮಾಡಿದರು.
ಪಕ್ಷಕ್ಕೆ ದ್ರೋಹ ಮಾಡುವುದು ಒಂದೇ. ದೇಶಕ್ಕೆ ದ್ರೋಹ ಮಾಡುವುದೂ ಒಂದೇ ಎಂದು ವಿಶ್ಲೇಷಿಸಿದ ಸೊಗಡು. ಪಕ್ಷ ಕಟ್ಟುವ ನಿಟ್ಟಿನಲ್ಲಿ ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕು. ಸೋಲಿನಿಂದ ಕಂಗೆಡಬಾರದು. ನಾವೀಗ ಸೋತಿದ್ದೇವೆ.
ಗೆಲುವಿಗಾಗಿ ಶ್ರಮಿಸೋಣ. ಪಕ್ಷಕ್ಕೆ ಪುಷ್ಟಿ ನೀಡಬೇಕು. ಪಕ್ಷಕ್ಕಾಗಿ ಸರ್ವವನ್ನೂ ತ್ಯಾಗ ಮಾಡೋಣ ಎಂದು ಸೊಗಡು ಕರೆ ನೀಡಿದರು.
10 ವರ್ಷಗಳ ಪಾಪ ತುಂಬಿದೆ: ಕೇಂದ್ರದ ಯುಪಿಎ ಸರ್ಕಾರದ 10 ವರ್ಷಗಳ ಪಾಪವನ್ನು ಮರೆತಿದ್ದೆವು. ಈಗ  ನೆನಪಿಸಿಕೊಳ್ಳುವ ಕಾಲ ಬಂದಿದೆ. ಕೇಂದ್ರ ಸರ್ಕಾರದ ಮಂತ್ರಿಗಳ ಸಾಲು-ಸಾಲು ಭ್ರಷ್ಟಾಚಾರ, ಹಗರಣ, ಜೈಲು ಪಾಲಾಗಿರುವುದು, ಬೆಲೆ ಏರಿಕೆ, ಜನ ವಿರೋಧಿ ನೀತಿ ಖಂಡಿಸಿ ಇದೇ ತಿಂಗಳ 27 ರಂದು ದೇಶಾದ್ಯಂತ ಬಿಜೆಪಿ ವತಿಯಿಂದ ಜೈಲ್ ಭರೋ ಚಳವಳಿ ನಡೆಸಲಾಗುತ್ತಿದೆ. ಈ ಚಳುವಳಿಯಲ್ಲಿ ಪಕ್ಷದ ಎಲ್ಲ ಕಾರ್ಯಕರ್ತರು ಪಾಲ್ಗೊಳ್ಳುವಂತೆ ಸೊಗಡು ಕರೆ ನೀಡಿದರು. ಸೊಗಡು ಮಾತನಾಡುವ ವೇಳೆ ಪಕ್ಷದ ಮಾಜಿ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ, ರಾಜ್ಯ ಉಪಾಧ್ಯಕ್ಷ  ಅಶ್ವತ್ಥ್‌ನಾರಾಯಣ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಶಿವಪ್ರಸಾದ್, ತಿಪಟೂರು ಮಾಜಿ ಶಾಸಕ ಬಿ.ಸಿ. ನಾಗೇಶ್ ಇತರರು ಉಪಸ್ಥಿತರಿದ್ದರು.

27 ರಂದು ಕೇಂದ್ರದ ವಿರುದ್ಧಜೈಲ್ ಭರೋ: ಕೆ.ಎಸ್. ಈಶ್ವರಪ್ಪ
ತುಮಕೂರು:
ಕೇಂದ್ರ ಸರ್ಕಾರದ ದುರಾಡಳಿತದ ವಿರುದ್ಧ ಮೇ. 27 ರಂದು ಜೈಲ್ ಭರೋ ಚಳುವಳಿಯನ್ನು ದೇಶಾದ್ಯಂತ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಬಿಜೆಪಿ ಮಾಜಿ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ತಿಳಿಸಿದರು. ಅವರು ತುಮಕೂರಿನಲ್ಲಿ ಏರ್ಪಾಟಾಗಿದ್ದ ಬಿಜೆಪಿ ಕಾರ್ಯಕಾರಣಿ ಸಭೆಯಲ್ಲಿ ಮಾತನಾಡಿದರು. ಮುಂದಿನ ಲೋಕಸಭಾ ಚುನಾವಣೆಯನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳ ಕಾರ್ಯಕಾರಿಣಿ ಸಭೆಗಳನ್ನು ಆಯೋಜಿಸಲಾಗುತ್ತಿದೆ ಎಂದ ಅವರು, ಜೈಲ್ ಭರೋ ಚಳುವಳಿಗೆ ಕೆಳಕಂಡ ಕಾರಣಗಳನ್ನು ನೀಡಿದರು. ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ, ಕೇಂದ್ರ ಸಚಿವರ ಭ್ರಷ್ಟಾಚಾರ ಖಂಡಿಸಿ, ದೇಶದ ಆಂತರಿಕ ಭದ್ರತೆ ವಿಷಯ ನಿರ್ಲಕ್ಷ್ಯ, ಚೀನಾ, ಪಾಕ್ ಜತೆಗಿನ ಭಾರತದ ವರ್ತನೆ ಸೇರಿದಂತೆ ಒಟ್ಟಾರೆ ಯುಪಿಎ ಸರ್ಕಾರದ ಜನ ವಿರೋಧಿ ನೀತಿಗಳನ್ನು ಖಂಡಿಸಿ ಈ ಜೈಲ್ ಭರೋ ಚಳವಳಿ ನಡೆಯಲಿದೆ ಎಂದು ಈಶ್ವರಪ್ಪ ತಿಳಿಸಿದರು. ಮಂತ್ರಿಗಳ ರಾಜಿನಾಮೆಯಿಂದ ಸಮಸ್ಯೆಗೆ ಪರಿಹಾರವಿಲ್ಲ. ಕೇಂದ್ರ ಸರ್ಕಾರದ ನೇತೃತ್ವದ ವಹಿಸಿರುವ ಪ್ರಧಾನಿ ಮನಮೋಹನ್ ಸಿಂಗ್ ಅವರೇ ರಾಜಿನಾಮೆ ನೀಡಬೇಕು ಎಂದು ಈಶ್ವರಪ್ಪ ಆಗ್ರಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.