ತುಮಕೂರು

ರುದ್ರಪಟ್ಟಣದಲ್ಲಿ 12ನೇ ವಾರ್ಷಿಕ ಸಂಗೀತೋತ್ಸವ: ಪದ್ಮನಾಭ್

Published On :

ಕನ್ನಡಪ್ರಭ ವಾರ್ತೆಹಾಸನ ಮೇ 21
ಅರಕಲಗೂಡು ತಾಲೂಕಿನ ರುದ್ರಪಟ್ಟಣದಲ್ಲಿ ಮೇ 24ರಿಂದ 26ರ ವರೆಗೆ 12ನೇ ವಾರ್ಷಿಕ ಸಂಗೀತೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದು ರುದ್ರಪಟ್ಟಣ ಸಂಗೀತೋತ್ಸವ ಸಮಿತಿ ಟ್ರಸ್ಟ್‌ನ ಕಲಾಭೂಷಣ ಆರ್.ಕೆ.ಪದ್ಮನಾಭ್ ತಿಳಿಸಿದ್ದಾರೆ.
  ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 24ರಂದು ಸಂಜೆ 4.15ಕ್ಕೆ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ಯಗಳಗಾಯನ, ಗಾಯನ, ವೀಣಾವಾದನ ಏರ್ಪಡಿಸಲಾಗಿದೆ. 25ರಂದು ಬೆಳಿಗ್ಗೆ 6.30ಕ್ಕೆ ಕಾವೇರಿಗೆ ಪೂಜೆ ನೆರವೇರಿಸಲಾಗುತ್ತದೆ. ನಂತರ ನಾನಾ ವೀಣೆ, ಮೃದಂಗ ಘಟ, ಗಾಯನ, ಪಿಟೀಲ್, ಕೊಳಲು ಖಂಜರಿ, ವೈಯಲಿನ್‌ತ್ರಯ ಇತರೆ ಕಾರ್ಯಕ್ರಮಗಳನ್ನು ಪ್ರಸಿದ್ಧ ವಿದ್ವಾಂಸರು ನಡೆಸಿಕೊಡಲಿದ್ದಾರೆ ಎಂದರು.
  ರಾತ್ರಿ 9.45ಕ್ಕೆ ಗಾನಕಲಾ ಡಾ.ಎಸ್.ಸಿ.ಶರ್ಮಾ ಅವರಿಗೆ  ಗಾನಕಲಾ ಸ್ಪರ್ಷಮಣಿ  ಬಿರುದು ಪ್ರಧಾನ ಮಾಡಲಾಗುವುದು. 26 ರಂದು ಬೆಳಿಗ್ಗೆ 9 ಕ್ಕೆ ರಥೋತ್ಸವ ಹಾಗೂ ಗ್ರಾಮ ಸಂಕೀರ್ತನೆ ನಡೆಯಲಿದೆ. ನಂತರ ನಾನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಮುಖ್ಯವಾಗಿ ಕನ್ನಡದ ಕಲಾವಿದರಿಗೆ ಹೆಚ್ಚಿನ ಅವಕಾಶವನ್ನು ನೀಡಿ ಪ್ರೋತ್ಸಾಹ ನೀಡಲಾಗುತ್ತದೆ. ಹಳೆಯ 1200 ರಂಗಗೀತೆ ಹಾಡುವಂತಹವರನ್ನು ಪರಿಚಯಿಸಲಾಗುವುದು. ಕಳೆದ 12 ವರ್ಷದಿಂದ ಟ್ರಸ್ಟ್ ಈ ಸಂಗಿತೋತ್ಸವ ಕಾರ್ಯಕ್ರಮ ನಿರ್ವಹಿಸುತ್ತಿದ್ದು, ಇದಕ್ಕೆ 10 ಲಕ್ಷ ರು.ವೆಚ್ಚ ತಗಲಲಿದೆ. ಸುಮಾರು 70 ರಿಂದ 80 ವಿದ್ವಾಂಸರು ಪಾಲ್ಗೊಳ್ಳಲಿದ್ದಾರೆಂದು ಪದ್ಮನಾಭ್ ತಿಳಿಸಿದರು.

ಕಲಬೆರಕೆ ಗೊಬ್ಬರ ವಿತರಣೆ: ಕ್ರಮಕ್ಕೆ ಆಗ್ರಹ
ಕ.ಪ್ರ. ವಾರ್ತೆಹಾಸನ ಮೇ 21

ಉಪ್ಪು ಮಿಶ್ರಿತ ಕಲಬೆರಕೆ ಪ್ಯೊಟ್ಯಾಶ್ ಗೊಬ್ಬರ ವಿತರಿಸಿದ ಸಹಕಾರಿ ಸಂಘದ ಇಬ್ಬರು ಆರೋಪಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಹಾಗೂ ಗೊಬ್ಬರ ಖರೀದಿಸಿದ ರೈತರಿಗೆ ಪರಿಹಾರ ನೀಡುವಂತೆ ಹಾನುಬಾಳು ಹೋಬಳಿ ಬೆಳೆಗಾರರ ಸಂಘದ ಅಧ್ಯಕ್ಷ ಎಚ್.ಬಿ. ಭಾಸ್ಕರ್ ಒತ್ತಾಯಿಸಿದ್ದಾರೆ.
  ಸಕಲೇಶಪುರ ತಾ. ಹಾನುಬಾಳು ಹೋಬಳಿ ಪಶ್ಚಿಮ ಘಟ್ಟದ ಅಂಚಿನಲ್ಲಿದ್ದು, ಸತತ ಮಳೆಯಿಂದ ಕೂಡಿದ ಪ್ರದೇಶವಾಗಿದೆ.
 ಪ್ರಾಕೃತಿಕ ಸಂಪನ್ಮೂಲ ಎಷ್ಟೆ ಇದ್ದರೂ ಕಾಡಾನೆ ಹಾವಳಿ, ಕಾರ್ಮಿಕರ ಸಮಸ್ಯೆಯಿಂದ ತತ್ತರಿಸಿ ಹೋಗಿರುವ ಸಂದರ್ಭದಲ್ಲಿ ರಾಸಾಯನಿಕ ಗೊಬ್ಬರಕ್ಕೆ ಮೂರು ಪಟ್ಟು ಬೆಲೆ ಹೆಚ್ಚು ಆಗಿದೆ. ಅದರಲ್ಲೂ ಕಲಬೆರಕೆ ಗೊಬ್ಬರದಿಂದ ರೈತರು ತೀವ್ರ ಆಘಾತ ಅನುಭವಿಸುತ್ತಿದ್ದಾರೆ ಎಂದು ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
 ಮೂರು ದಿನಗಳ ಹಿಂದೆ ಹಾನುಬಾಳಿನ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಮಾರಾಟ ಮಾಡಿರುವ ಪ್ಯೊಟ್ಯಾಶ್ ಗೊಬ್ಬರ ಶೇ.100ರಷ್ಟು ಉಪ್ಪಿನಂಶದಿಂದ ಕೂಡಿರುವುದು ಪ್ರಯೋಗಾಲಯದ ಪರೀಕ್ಷೆಯಿಂದ ತಿಳಿದು ಬಂದಿದೆ. ಹೆಚ್ಚಿನ ರೈತರು ಕಲಬೆರಕೆ ಪ್ಯೊಟ್ಯಾಶ್ ಗೊಬ್ಬರ ಬಳಸಿದ್ದು, ಭೂಮಿಯ ಫಲವತ್ತತೆ ಹಾಗೂ ಗಿಡಗಳು ನಶಿಸಿ ಹೋಗುತ್ತಿವೆ ಎಂದರು.
  ಇಂತಹ ಗೊಬ್ಬರ ವಿತರಿಸಿರುವ ಸಹಕಾರಿ ಸಂಸ್ಥೆ, ಖಾಸಗಿ ಮಾಲೀಕರ ಗೋಡನ್ ಪರಿಶೀಲಿಸಿ ಕಲಬೆರಕೆ ಗೊಬ್ಬರ ಮುಟ್ಟುಗೋಲು ಹಾಕಿಕೊಳ್ಳಬೇಕು.
  ತನಿಖೆಯಾಗುವವರೆಗೂ ಆರೋಪಿಗಳಿಗೆ ಜಾಮೀನು ನೀಡಬಾರದು. ಹಗರಣದಲ್ಲಿ ಭಾಗಿಯಾದವರನ್ನು ಪತ್ತೆ ಹಚ್ಚಿ ಶಿಕ್ಷೆಗೆ ಒಳಪಡಿಸಬೇಕು ಹಾಗೂ ಈ ಗೊಬ್ಬರ ಬಳಸಿರುವ ರೈತರಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.  ಹೋಬಳಿ ಬೆಳೆಗಾರರ ಸಂಘದ ಕಾರ್ಯದರ್ಶಿ ವಿಜಯ ವಿವೇಕಾನಂದ, ಡಿ.ಬಿ.ಮಹೇಶ್, ಅಶ್ವಥ್, ಪ್ರಕಾಶ್ ಇತರರಿದ್ದರು.

ಉದ್ಯೋಗ ಮೇಳಕ್ಕೆಉತ್ತಮ ಪ್ರತಿಕ್ರಿಯೆ
ಮೈಸೂರು:
ಯುವಜನತೆಯ ನಿರುದ್ಯೋಗ ನಿವಾರಣೆಗಾಗಿ ಇಲ್ಲಿನ ನಂಜರಾಜ ಬಹುದ್ದೂರ್ ಛತ್ರದಲ್ಲಿ ಮಂಗಳವಾರ ಏರ್ಪಡಿಸಿದ್ದ ಬೃಹತ್ ಉದ್ಯೋಗ ಮೇಳಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಜ್ಯುಬಿಲೆಂಟ್ ಭಾರತೀಯ ಪ್ರತಿಷ್ಠಾನ ಹಾಗೂ ಲೇಬರ್ ನೆಟ್ ಸಂಸ್ಥೆ ಸಂಯುಕ್ತಾಶ್ರದಲ್ಲಿ ಏರ್ಪಡಿಸಿದ್ದ ಈ ಉದ್ಯೋಗ ಮೇಳವನ್ನು ನಂಜನಗೂಡಿನ ಲೇಬರ್‌ನೆಟ್ ಸಂಸ್ಥೆಯ ಮುಖ್ಯ ವ್ಯವಸ್ಥಾಪಕ ಜಾನ್ಸನ್ ಉದ್ಘಾಟಿಸಿದರು. ಈ ಮೇಳದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ, ಐಟಿಐ, ಡಿಪ್ಲೊಮಾ ಅಭ್ಯರ್ಥಿಗಳು ಹಾಗೂ ಬಿ.ಕಾಂ, ಬಿ.ಎಸ್ಸಿ, ಬಿ.ಎ, ಬಿಬಿಎಂ, ಬಿ.ಇ ಅಲ್ಲದೆ ಎಂಬಿಎ, ಎಂ.ಕಾಂ, ಎಂಎಸ್‌ಡಬ್ಲ್ಯೂ ಹಾಗೂ ಎಂಸಿಎ ಪದವೀಧರರು ಭಾಗವಹಿಸಿ ತಮ್ಮ ನೆಚ್ಚಿನ ಕಂಪನಿಗಳಿಗೆ ಅರ್ಜಿ ಸಲ್ಲಿಸುವುದು ಹಾಗೂ ಸ್ವವಿವರ ಮತ್ತು ಅನುಭವ ಮುಂತಾದ ಮಾಹಿತಿ ನೀಡುವುದು ಕಂಡುಬಂತು.   ಹಿಂದೂಜಾ ಗ್ಲೋಬಲ್ ಸಲ್ಯೂಷನ್, ನವಭಾರತ ಫರ್ಟಿಲೇಷರ್ಸ್, ಮೈಸೂರು ಐಟಿ ಸಲ್ಯೂಷನ್, ನಂದಿ ಟಿವಿಎಸ್, ಭೂಮಿಕಾ ಹೌಸಿಂಗ್ ಫೈನಾನ್ಸ್, ಕೆಫೆಕಾಫಿ ಡೇ, ಎಚ್‌ಡಿಎಫ್‌ಸಿ ಹಾಗೂ ಎಲ್‌ಐಸಿ ಸೇರಿದಂತೆ 10ಕ್ಕೂ ಹೆಚ್ಚಿನ ಕಂಪನಿಗಳು ಭಾಗವಹಿಸಿದ್ದವು.ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವ ಸಲುವಾಗಿ ವಿವಿಧ ಕಂಪನಿಗಳನ್ನು ಆಹ್ವಾನಿಸಿ, ತಮಗೆ ಬೇಕಾದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಲುವಾಗಿ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಜಾನ್ಸನ್ ತಿಳಿಸಿದರು. ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳ 500 ಕ್ಕೂ ಹೆಚ್ಚಿನ ಅಭ್ಯರ್ಥಿಗಳು ಉದ್ಯೋಗಕ್ಕಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.