ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
ಶಿರಾ: ಶಿರಾ ಶಿಶು ಅಭಿವೃದ್ಧಿ ಯೋಜನೆಯಲ್ಲಿ ಖಾಲಿ ಇರುವ ಅಂಗನವಾಡಿ ಕೇಂದ್ರಗಳಿಗೆ ಸಹಾಯಕಿಯರನ್ನು ಗುರುತಿಸಲು ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಸ್ಥಳೀಯರಾಗಿದ್ದು ವಾಸಸ್ಥಳದ ಬಗ್ಗೆ ತಹಸೀಲ್ದಾರ್ ಅವರಿಂದ ಪಡೆದ ದೃಢೀಕರಣ ಪತ್ರದೊಂದಿಗೆ ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಜೂನ್ 11 ಸಂಜೆ 5 ಗಂಟೆಯೊಳಗೆ ಅರ್ಜಿ ಸಲ್ಲಿಸಲು ತಿಳಿಸಲಾಗಿದೆ. ಖಾಲಿ ಇರುವ ಅಂಗನವಾಡಿ ಕೇಂದ್ರಗಳೆಂದರೆ ಕಳ್ಳಂಬೆಳ್ಳ ಗ್ರಾ.ಪಂ. ವ್ಯಾಪ್ತಿಯ ಬಾಲೇನಹಳ್ಳಿ, ಹೊಸಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಗೋಪಿಕುಂಟೆ ಇವೆರಡು ಹುದ್ದೆಗಳು ಸಾಮಾನ್ಯ ಅಭ್ಯರ್ಥಿಗಳಿಗೆ ಮೀಸಲಾಗಿವೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿದ್ದಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶ್ರೀ ಮಲ್ಲಿಕಾರ್ಜುನಸ್ವಾಮಿ ರಥೋತ್ಸವ
ತಿಪಟೂರು: ತಾಲೂಕಿನ ಕಿಬ್ಬನಹಳ್ಳಿ ಹೋಬಳಿ ಶೆಟ್ಟಿಹಳ್ಳಿ ಬೆಟ್ಟದಲ್ಲಿರುವ ಶ್ರೀ ಮಲ್ಲಿಕಾರ್ಜುನಸ್ವಾಮಿ ರಥೋತ್ಸವ, ಜಾತ್ರಾ ಮಹೋತ್ಸವ ಹಾಗೂ ಸಾಮೂಹಿಕ ವಿವಾಹ ಮಹೋತ್ಸವವು ಮೇ 24ರಿಂದ 28ರವರೆಗೆ ನಡೆಯಲಿದೆ. ಮೇ 24ರಂದು ರುದ್ರಾಭಿಷೇಕ, ಮೇ 25 ಗಣಪತಿ ಪೂಜೆ, ಅಂಕುರಾರ್ಪಣೆ, ನಂದಿಧ್ವಜಾರೋಹಣ ಹಾಗೂ ಕುದುರೆ ವಾಹನೋತ್ಸವ. ಮೇ 26 ಅಡ್ಡ ಪಲ್ಲಕ್ಕಿ ಉತ್ಸವ, ಮೇ 27 ಬೆಳಿಗ್ಗೆ 11ಗಂಟೆಗೆ ಶ್ರೀ ಸ್ವಾಮಿ ಗಿರಿಜಾ ಕಲ್ಯಾಣ ಮತ್ತು ಸಾಮೂಹಿಕ ವಿವಾಹ ಮಹೋತ್ಸವವು ನಡೆಯಲಿದ್ದು ಮಧ್ಯಾಹ್ನ 3ಗಂಟೆಗೆ ಧಾರ್ಮಿಕ ಸಭೆ ನಡೆಯಲಿದೆ. ಮೇ 28ರಂದು ಶ್ರೀ ಮಲ್ಲುಕಾರ್ಜುನ ಸ್ವಾಮಿ ರಥೋತ್ಸವವು ನಡೆಯಲಿದೆ. ಈ ಎಲ್ಲಾ ಪೂಜಾ ಕಾರ್ಯಕ್ರಮಗಳಿಗೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಮಿತಿಯ ಕಾರ್ಯಾಧ್ಯಕ್ಷ ಬಿ.ಬಿ. ಸಿದ್ದಲಿಂಗಮೂರ್ತಿ ತಿಳಿಸಿದ್ದಾರೆ.
ಸಹಾಯಕಿ ಹುದ್ದೆಗೆ ಅರ್ಜಿ ಆಹ್ವಾನ
ಚಿಕ್ಕನಾಯಕನಹಳ್ಳಿ: ತಾಲೂಕಿನ ಹುಳಿಯಾರು ಹೋಬಳಿ ದೊಡ್ಡಬಿದರೆ ಗ್ರಾಮಪಂಚಾಯ್ತಿ ವ್ಯಾಪ್ತಿಯ ಕಲ್ಲಹಳ್ಳಿ ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಶಿಶು ಅಭಿವೃದ್ಧಿ ಇಲಾಖೆವತಿಯಿಂದ ನಡೆಸುತ್ತಿರುವ ಕಲ್ಲಹಳ್ಳಿ ಅಂಗನವಾಡಿ ಕೇಂದ್ರದಲ್ಲಿ ಸಹಾಯಕಿ ಹುದ್ದೆ ಖಾಲಿಯಿದ್ದು, ಸದರಿ ಹುದ್ದೆ ಸಾಮಾನ್ಯ ಮೀಸಲಾತಿಗೆ ಒಳಪಟ್ಟಿರುತ್ತದೆ. ಈ ಹುದ್ದೆಗೆ ಅಂಗನವಾಡಿ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅಗತ್ಯ ದಾಖಲಾತಿಗಳೊಂದಿಗೆ ಜೂನ್ 15ರಂದುಸಂಜೆ 5.30ಗಂಟೆಯೊಳಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ಚಿಕ್ಕನಾಯಕನಹಳ್ಳಿ ಇವರಿಗೆ ತಲುಪವಂತೆ ಸಲ್ಲಿಸುವುದು. ಹೆಚ್ಚಿನ ವಿವರಗಳಿಗೆ ಕಚೇರಿಯನ್ನು ಸಂಪರ್ಕಿಸಲು ಕೋರಿದೆ.
ನವೀಕರಣ ಪಡೆಯಲು ಸೂಚನೆ
ತುಮಕೂರು: 2013-14ನೇ ಸಾಲಿನವರೆಗೆ ಮಾನ್ಯತೆ ನವೀಕರಣ ಪಡೆಯದೇ ಇರುವ ಅನುದಾನಿತ, ಅನುದಾನ ರಹಿತ ಪ್ರೌಢಶಾಲೆಗಳ ಆಡಳಿತ ಮಂಡಳಿಗಳು ಕೂಡಲೇ ತಮ್ಮ ಸಂಸ್ಥೆ ವತಿಯಿಂದ ನಡೆಸುತ್ತಿರುವ ಪ್ರೌಢಶಾಲೆಗಳ ಮಾನ್ಯತೆ ನವೀಕರಣ ಪಡೆದು ಶಾಲೆ ಆರಂಭಿಸಲು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್. ಕುಮುದಮ್ಮ ತಿಳಿಸಿದ್ದಾರೆ. ಮಾನ್ಯತೆ ಪಡೆದಿದ್ದಲ್ಲಿ ಪ್ರತಿಯೊಂದಿಗೆ ಕಚೇರಿಗೆ ಮಾಹಿತಿ ನೀಡುವುದು. ಮಾನ್ಯತೆ ಪಡೆಯದೇ ಯಾವುದೇ ಕಾರಣಕ್ಕೂ ಶಾಲೆ ನಡೆಸತಕ್ಕದ್ದಲ್ಲ. ಹಾಗೊಂದು ವೇಳೆ ಶಾಲೆ ಪ್ರಾರಂಭಿಸಿದ್ದಲ್ಲಿ ಅನಧಿಕೃತ ಶಾಲೆಯೆಂದು ಪರಿಗಣಿಸಲಾಗುವುದು ಎಂದು ತಿಳಿಸಿದ್ದಾರೆ.
ಮಾದಿಗರಿಗೆ ಪ್ರತಿಭಾ ಪುರಸ್ಕಾರ
ತುಮಕೂರು: ಇಲ್ಲಿನ ನಾಗಾರ್ಜುನ ನೌಕರರ ಅಭಿವೃದ್ಧಿ ಬಳಗದ ವತಿಯಿಂದ ಮಾದಿಗ ಸಮುದಾಯದ ಪ್ರತಿಭಾನ್ವಿತ ಮಕ್ಕಳಿಗೆ 9ನೇ ವರ್ಷದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 2013ನೇ ಸಾಲಿನ ಎಸ್ಎಸ್ಎಲ್ಸಿ ಶೇ. 85, ಪಿಯುಸಿ ಶೇ. 80, ಪದವಿಯಲ್ಲಿ ಶೇ. 75 ಹಾಗೂ ಸ್ನಾತಕೋತ್ತರ ಪದವಿ, ತಾಂತ್ರಿಕ ಪದವಿ ಮತ್ತು ವೈದ್ಯಕೀಯ ಪದವಿಗಳು, ಪಿ.ಎಚ್ಡಿ, ಕೆಎಎಸ್ ಹಾಗೂ ಐಎಎಸ್ ಪದವೀಧರರಿಗೆ ಅರ್ಜಿ ಆಹ್ವಾನಿಸಲಾಗಿದೆ. ಅಂಕಪಟ್ಟಿ, ಭಾವಚಿತ್ರ ಹಾಗೂ ಸ್ವವಿಳಾಸ, ಮೊಬೈಲ್ ಸಂಖ್ಯೆ ನಮೂದಿಸಿ ಅರ್ಜಿಯನ್ನು ನಾಗಾರ್ಜುನ ಪತ್ತಿನ ಸಹಕಾರ ಸಂಘ, ಸದಾಶಿವನಗರ, ಕುಣಿಗಲ್ ರಸ್ತೆ, ತುಮಕೂರು ಇವರಿಗೆ ಖುದ್ದಾಗಿ ಇದೇ ತಿಂಗಳ 31 ರೊಳಗೆ ಸಂಜೆ 5 ಗಂಟೆಯೊಳಗೆ ಸಲ್ಲಿಸಲು ಕೋರಲಾಗಿದೆ.
'ಕಡಿಮೆ ದರ ಮದ್ಯ ಬೇಡ'
ತುಮಕೂರು: ಡಿಎಸ್ಎಸ್ ಜಿಲ್ಲಾಧ್ಯಕ್ಷ ಪಿ.ಎನ್. ರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಮಾದಿಗ ಜನಾಂಗದ ಮುಖಂಡ ಸಭೆ ನಡೆಸಲಾಯಿತು. ಮಾದಿಗ ಜನಾಂಗದ ಸಮಸ್ಯೆಗಳ ಪರಿಹಾರ, ಕಾಲೋನಿಗಳ ಅಭಿವೃದ್ಧಿ ಮುಂತಾದವುದರ ಬಗ್ಗೆ ಚರ್ಚೆ ನಡೆಸಲಾಯಿತು. ಸದಾಶಿವ ಆಯೋಗದ ಒಳ ಮೀಸಲಾತಿ ಜಾರಿಗಾಗಿ ಮಾದಿಗ ಸಂಘಟನೆ ಮತ್ತು ದಲಿತ ಸಂಘಟನೆಗಳು ಜಂಟಿಯಾಗಿ ಪ್ರತಿಭಟನೆ ಹಮ್ಮಿಕೊಳ್ಳಲು ನಿರ್ಧರಿಸಲಾಯಿತು. ಕಡಿಮೆ ಬೆಲೆಯ ಮದ್ಯ ತಯಾರಿಸಿ ಬಡವರಿಗೆ ಅನುಕೂಲ ಮಾಡಿ ಕೊಡುವುದನ್ನು ಸರ್ಕಾರ ಕೈ ಬಿಡಬೇಕು ಎಂದರು. ಮಾದಿಗ ಜನಾಂಗದ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವ ಉದ್ದೇಶದಿಂದ ನೂತನ ಮುಖ್ಯಮಂತ್ರಿ ಮತ್ತು ಶಾಸಕರಿಗೆ ಅಭಿನಂದನೆ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಯಿತು. ಸಭೆಯಲ್ಲಿ ಕೆ.ಎಂ. ನರಸಿಂಹಮೂರ್ತಿ, ತಿಪ್ಪೇಶಪ್ಪ, ಭೀಮಣ್ಣ, ಚಂದ್ರಶೇಖರ್, ರಾಮಚಂದ್ರಪ್ಪ, ಕೆ. ಭೀಮಯ್ಯ, ಎ. ನಾಗೇಶ್, ಅಬ್ಬತ್ತನಹಳ್ಳಿ ಶ್ರೀನಿವಾಸ್, ಕೃಷ್ಣಮೂರ್ತಿ, ಎ. ರಂಜನ್, ಸಿದ್ದರಾಜು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

