ಆತಂಕ ಹುಟ್ಟಿಸಿದ ಆರೋಗ್ಯ ಸುರಕ್ಷತಾ ಕ್ರಮ
ಕ.ಪ್ರ. ವಾರ್ತೆ ಕುಣಿಗಲ್ ಮೇ 26
ಕಳೆದ ಶುಕ್ರವಾರ ರಾತ್ರಿ ಕಲುಷಿತ ಆಹಾರ ಸೇವನೆಯಿಂದಾಗಿ ಹಲವು ಮಂದಿ ಅಸ್ವಸ್ಥರಾಗಿ, ಚಿಕಿತ್ಸೆ ಪಡೆದ ಪ್ರಕರಣದಿಂದ ತಾಲೂಕಿನಾದ್ಯಂತ ಸಾರ್ವಜನಿಕ ಆರೋಗ್ಯ ಸಂರಕ್ಷಣೆಯ ಸುರಕ್ಷತಾ ಕ್ರಮಗಳ ವಿಧಾನದ ವ್ಯವಸ್ಥೆಯನ್ನು ಪ್ರಶ್ನಿಸುವಂತಾಗಿದೆ.
ತಾಲೂಕಿನ ಕಪಿನಿಪಾಳ್ಯದ ಗೃಹಪ್ರವೇಶ ಸಮಾರಂಭದಲ್ಲಿ ಕಲುಷಿತ ಆಹಾರ ಸೇವನೆಯಿಂದ ಸುಮಾರು 42 ಮಂದಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮೇಲ್ನೋಟಕ್ಕೆ ಪ್ರಾಥಮಿಕ ವರದಿಗಳ ಪ್ರಕಾರ ಅಡುಗೆ ಸಿದ್ಧಪಡಿಸಿದ ಪಾತ್ರೆಗಳು ಸೇರಿದಂತೆ ಅಹಾರ ಬಳಕೆಯಲ್ಲಿ ಬಳಸಲಾದ ಪದಾರ್ಥಗಳ ಮೇಲೆ ಆರೋಗ್ಯ ಇಲಾಖಾಧಿಕಾರಿಗಳು ಶಂಕೆ ವ್ಯಕ್ತಪಡಿಸಿ, ಎಲ್ಲವನ್ನು ಕೂಲಂಕಶ ತನಿಖೆಗಾಗಿ ಬೆಂಗಳೂರಿನ ಕೇಂದ್ರ ಪ್ರಯೋಗಾಲಯಕ್ಕೆ ಕಳಿಸಿಕೊಟ್ಟಿದ್ದಾರೆ.
ಆತಂಕಕಾರಿ ವಿಷಯ: ತಾಲೂಕಿನಲ್ಲಿ ಕಳೆದ ವರ್ಷವೂ ಸಹ, ಯಡೆಯೂರು ಹಾಗೂ ಅಮೃತೂರು ಹೋಬಳಿ ಸಮೀಪದ ಕೀಲಾರ ಗ್ರಾಮದ ವಿವಾಹದ ನಂತರ ನಡೆಸುವ ಕರೆನೆರೆ ಊಟದಲ್ಲೂ ಅಡುಗೆ ತಯಾರಿಸುವ ಪಾತ್ರೆಗಳ ದೋಷದಿಂದ ಆಹಾರ ಕಲುಷಿತಗೊಂಡು, ನೂರಾರು ಮಂದಿ ಅಸ್ವಸ್ಥರಾದರೆ, ಕೆಲವರು ಗಂಭೀರವಾಗಿ ಅಸ್ವಸ್ಥರಾಗಿ ಬೆಂಗಳೂರಿನ ಆಸ್ಪತ್ರೆಗಳಲ್ಲಿ ತಿಂಗಳು ಗಟ್ಟಲೆ ಹೆಣಗುವಂತಾಯಿತು. ದುರಂತ ಎಂದರೆ ಸಾರ್ವಜನಿಕ ಆರೋಗ್ಯ ಸಂರಕ್ಷಣೆ ನಿಟ್ಟಿನಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಸಾಕಷ್ಟು ಮುಂಜಾಗೃತ ಕ್ರಮ ಕೈಗೊಳ್ಳದಿರುವುದು ಆತಂಕಕಾರಿ ವಿಷಯವಾಗಿದೆ.
ವ್ಯಾಪಕ: ತಾಲೂಕಿನ ವಿವಿಧೆಡೆಯಲ್ಲಿ ನಾಯಿಕೊಡೆಗಳಂತೆ ಶಾಮಿಯಾನ ಹಾಗೂ ಬೃಹತ್ ಗಾತ್ರದ ಅಡುಗೆ ಪಾತ್ರೆಗಳನ್ನು ಬಾಡಿಗೆಗೆ ಕೊಡುವ ಸಾಮಾನ್ಯವಾಗಿ ಆಡುಭಾಷೆಯಲ್ಲಿ ಟೆಂಟ್ ಹೌಸ್ ಎಂದು ಕರೆಯಲ್ಪಡುವ ಹಲವು ಮಳಿಗೆಗಳು ಎಲ್ಲೆಂದರಲ್ಲಿ ವ್ಯಾಪಕವಾಗಿ ಹಬ್ಬಿವೆ. ಇವುಗಳ ಪ್ರಾರಂಭಕ್ಕಾಗಲಿ ಅಥವಾ ನಿರ್ವಹಣೆಗಾಗಲಿ ಸರ್ಕಾರದ ಯಾವುದೇ ಇಲಾಖೆಯ ಅನುಮತಿಯಾಗಲಿ, ಪರವಾನಗಿಯಾಗಲಿ ಬೇಕಿಲ್ಲ. ಇಂತಹ ಸ್ಥಿತಿಯಲ್ಲಿ ಈ ಟೆಂಟ್ ಹೌಸ್ಗಳ ಮೇಲೆ ನಿಯಂತ್ರಣ ಸಾಧಿಸುವುದಾಗಲಿ, ನಿಗಾ ಇಡುವುದಾಗಿ ಯಾವುದೇ ಇಲಾಖೆ ವ್ಯಾಪ್ತಿಗೂ ಸೇರದ ಕಾರಣ, ಇವೆಲ್ಲಾ ನಿರಂಕುಶ ಕೇಂದ್ರಗಳಾಗಿವೆ.
ನಾಂದಿ: ಇಂತಹ ಟೆಂಟ್ ಹೌಸ್ಗಳಲ್ಲಿ ಬಾಡಿಗೆಗೆ ನೀಡಲು ಇಟ್ಟಿರುವ ಬೃಹತ್ ಗಾತ್ರದ ಅಡುಗೆ ಪಾತ್ರೆಗಳನ್ನು ವಾರ್ಷಿಕವಾಗಿ ದುರಸ್ತಿ (ಕಲಾಯಿ) ಮಾಡಬೇಕಾಗುತ್ತದೆ. ಇದಕ್ಕೆ ಸಾವಿರಾರುರು. ವೆಚ್ಚವಾಗುವುದರಿಂದ ಕೆಲವರು ಹಲವು ವರ್ಷ ಕಳೆದರೂ ದುರಸ್ತಿಕಾರ್ಯ ಕೈಗೊಳ್ಳದೆ ನಿರ್ಲಕ್ಷಿಸುತ್ತಾರೆ. ಇನ್ನು ಪಟ್ಟಣ ಪ್ರದೇಶದ ಟೆಂಟ್ ಹೌಸ್ಗಳಲ್ಲಿ ಸಾಮಾನ್ಯವಾಗಿ ದುರಸ್ತಿ ಕಾರ್ಯ ಕೈಗೊಂಡರು, ಶುಚಿಗೊಳಿಸುವಲ್ಲಿ ನಿರ್ಲಕ್ಷ್ಯ ತೋರುವುದು ಸಹ ಕಲುಷಿತ ಆಹಾರ ತಯಾರಿಕೆಗೆ ನಾಂದಿ ಹಾಡುತ್ತದೆ.
ಯಾರು ನಿಗಾವಹಿಸಬೇಕು: ಪ್ರಸ್ತುತ ಸಾಮಾಜಿಕ ವ್ಯವಸ್ಥೆಯಲ್ಲಿ ನಿರಂಕುಶ ಕೇಂದ್ರಗಳಾಗಿರುವ ಟೆಂಟ್ಹೌಸಗಳಲ್ಲಿ ಸೂಕ್ತ ಸ್ವಚ್ಛತೆ, ಸಮರ್ಪಕ ನಿರ್ವಹಣೆಯ ಬಗ್ಗೆ ಯಾರು ನಿಗಾವಹಿಸಬೇಕೆಂಬ ಪ್ರಶ್ನೆ ಕಾಡುತ್ತಿದ್ದು, ಇದಕ್ಕೆ ತಾಲೂಕು ಆರೋಗ್ಯ ವೈದ್ಯಾಧಿಕಾರಿಗ ಶಾಂತಲಾರವರನ್ನು ಪ್ರಶ್ನಿಸಿದರೆ, ಟೆಂಟ್ಹೌಸ್ಗಳ ಪಾತ್ರೆಗಳ ನಿರ್ವಹಣೆ ಮಾಡುವಂತೆ ನಾವು ಸಲಹೆ ನೀಡಬಹುದೆ ಹೊರತು, ಅವರ ಮೇಲೆ ಯಾವುದೇ ಕ್ರಮ ಕೈಗೊಳ್ಳುವುದಕ್ಕೆ ನಮಗೆ ಅಧಿಕಾರ ಇಲ್ಲ ಎನ್ನುತ್ತಾರೆ. ಅಲ್ಲದೆ, ನೂತನ ಆಹಾರ ಸುರಕ್ಷತಾ ಕಾಯಿದೆ ಅಡಿ, ತಾಲೂಕು ಆಹಾರ ಸುರಕ್ಷತಾಧಿಕಾರಿ ಕ್ರಮ ಕೈಗೊಳ್ಳಬಹುದಾಗಿದ್ದರೂ, ಆ ಹುದ್ದೆ ನಿಯೋಜನೆಗೊಳ್ಳದ ಕಾರಣ ಏನೊಂದು ಮಾಡದ ಅಸಾಹಯಕ ಸ್ಥಿತಿಯಂತಾಗಿದೆ ಎನ್ನುತ್ತಾರೆ.
ಈ ನಿಟ್ಟಿನಲ್ಲಿ ಸಂಬಂಧಪಟ್ಟ ಸೂಕ್ತ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳುವ ಹಲವು ಪ್ರಶ್ನೆಗಳನ್ನು ಹುಟ್ಟಿಹಾಕಿದ್ದು, ಸಂಬಂಧಪಟ್ಟ ಇಲಾಖೆಗಳು ಒಬ್ಬರ ಮೇಲೊಬ್ಬರು ಆರೋಪಿಸಿಕೊಳ್ಳದೆ ಸಾರ್ವಜನಿಕರ ಆರೋಗ್ಯ ಸಂರಕ್ಷಣೆ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವರೆ ಎಂದು ಕಾದುನೋಡಬೇಕಿದೆ.
ಅಪಘಾತ ಮುಚ್ಚಿಡಲು ಹೋಗಿ ಸಿಕ್ಕಿಬಿದ್ದರು...
ಚಿಕ್ಕನಾಯಕನಹಳ್ಳಿ: ಮಾಡಿದ ತಪ್ಪನ್ನು ಮುಚ್ಚಿಡಲು ಹೋಗಿ ತಪ್ಪಿನಮೇಲೆ ತಪ್ಪೆಸಗಿ ಸಿಕ್ಕಹಾಕಿಕೊಂಡಿರುವ ಘಟನೆ ತಾಲೂಕಿನಲ್ಲಿ ನಡೆದಿದ್ದು ಸಾವಜನಿಕರ ಕುತೂಹಲಕ್ಕೆ ಕಾರಣವಾಗಿದೆ.
ತಾಲೂಕಿನ ಸಾಲ್ಕಟ್ಟೆ ಪಾಳ್ಯದ ಕರಿಯಪ್ಪ ಎಂಬುವರು ಮೇ 22 ರಂದು ಸಂಜೆ 5.30 ರ ಸಮಯದಲ್ಲಿ ದನ ಮೇಯಿಸಲು ಹೋಗಿದ್ದಾಗ ವೇಗವಾಗಿ ಬಂದ ಕಾರೊಂದು ಅವರಿಗೆ ಗುದ್ದಿದೆ. ಅಪಘಾತದ ನಂತರ ಕಾರಿನ ಡ್ರೈವರ್ ಸದರಿ ಗಾಯಾಳುವನ್ನು ಅದೇ ವಾಹನದಲ್ಲಿ ಎತ್ತಿ ಹಾಕಿಕೊಂಡು ಹೋಗಿದ್ದಾನೆ. ಆದರೆ ಮುಂದೆ ಆತ ಎಲ್ಲಿಗೆ ಹೋದ ಮತ್ತು ಗಾಯಾಳು ಏನಾದ ಎಂಬುದು ಯಾರಿಗೂ ತಿಳಿದಿಲ್ಲ.
ಈ ನಡುವೆ ಕರಿಯಪ್ಪ ಮನೆಗೆ ಬಾರದೇ ಇದ್ದಾಗ ಆತನ ಕುಟುಂಬದವರು ಪೊಲೀಸ್ ಠಾಣೆಗೆ ಕಾಣೆಯಾಗಿರುವ ಬಗ್ಗೆ ಮೇ 22 ರಂದು ದೂರು ನೀಡಿದ್ದಾರೆ. ದೂರನ್ನು ಪೊಲೀಸರು 23ರಂದು ದೂರು ದಾಖಲಿಸಲಿದ್ದಾರೆಂದು ತಿಳಿದು ಬಂದಿದೆ. ಆದರೆ ಇಲ್ಲಿ ಮೇ 22ರಂದು ಅಪಘಾತವೆಸಗಿ ಗುರುತು ಸಿಗದೆ ಪರಾರಿಯಾದ ವಾಹನ ಇದ್ದಕ್ಕಿಂದ್ದಂತೆ 26ರಂದು ಬೆಳಿಗ್ಗೆ ಕಸಬಾ ಹೋಬಳಿ ಅಣೇಕಟ್ಟೆ ಗ್ರಾಮದ ಬಳಿ ಕರಿಯಪ್ಪನ ಕೊಳೆತ ಸ್ಥಿತಿಯಲ್ಲಿರುವ ಶವದೊಂದಿಗೆ ಪತ್ತೆಯಾಗಿದೆ. ಅಂದು ಅಪಘಾತವೆಸಗಿ ಗಾಯಾಳುವಿನ ಸಮೇತ ಹೋದ ಚಾಲಕ ಫೈರೋಜ್ ಖಾನ್ ಭಾನುವಾರ ಬೆಳಿಗ್ಗೆ ಕಾರು ಹಾಗೂ ಶವದೊಂದಿಗೆ ಪತ್ತೆಯಾದ ಸುದ್ದಿ ಮಾಧ್ಯಮಗಳಲ್ಲಿ ಬಿತ್ತರವಾಯಿತು. ಈಗ ಆತ ಪೊಲೀಸರಿಗೆ ಶರಣಾಗಿದ್ದಾನೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

