ಅಮಾನಿಕೆರೆ: 20 ವರ್ಷದಲ್ಲಿ 324 ಎಕರೆ ಒತ್ತುವರಿ...!
ಕ.ಪ್ರ. ವಾರ್ತೆ ತುಮಕೂರು ಮೇ 27
ತುಮಕೂರು ನಗರದ ಮಧ್ಯಭಾಗದಲ್ಲಿರುವ ಅಮಾನಿಕೆರೆ ಪದೇ-ಪದೇ ಚರ್ಚೆಗೀಡಾಗಿ, ಭಾರೀ ವಿವಾದಕ್ಕೀಡಾಗಿದೆ. ಕೆರೆ ವಿಸ್ತೀರ್ಣದ ಬಗ್ಗೆ ಇಂದಿಗೂ ಗೊಂದಲ ಮುಂದುವರೆದಿದೆ. ಈಗಾಗಲೇ ಅಮಾನಿಕೆರೆ ಒತ್ತುವರಿಯಾಗಿದೆ ಎಂದು ಆರೋಪಿಸಿ ತುಮಕೂರು ಬಿಜೆಪಿ ಸಂಸದ ಜಿ.ಎಸ್. ಬಸವರಾಜು ಲೋಕಾಯುಕ್ತಕ್ಕೆ ಪತ್ರ ಬರೆದಿದ್ದಾರೆ.
ಈಗ ಮತ್ತೆ ತುಮಕೂರು ಅಮಾನಿಕೆರೆ ವಿಸ್ತೀರ್ಣದ ಕುರಿತು ಮಾಜಿ ಶಾಸಕ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್. ಷಫಿ ಅಹಮದ್ ಆಘಾತಕಾರಿ ಹೇಳಿಕೆ ನೀಡಿದ್ದಾರೆ. ತಾವು 20 ವರ್ಷಗಳ ಹಿಂದೆ ಶಾಸಕರಾಗಿದ್ದ ವೇಳೆ ಅಂದರೆ 1989 ರಲ್ಲಿ ಕೆರೆ ವಿಸ್ತೀರ್ಣ 836 ಎಕರೆಯಿತ್ತು ಎಂಬ ಸತ್ಯವನ್ನು ಹೊರಗೆಡವಿದ್ದಾರೆ.
ಅವರು ತುಮಕೂರು ನಗರ ಶಾಸಕ ಹಾಗೂ ತಮ್ಮ ಅಳಿಯ ಡಾ. ರಫೀಕ್ ಅಹಮದ್ ಅವರು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮೇಲಿನ ಆಘಾತಕಾರಿ ವಿಷಯವನ್ನು ಹೊರಗೆಡವಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ. ಕಳೆದ 20 ವರ್ಷಗಳ ಅವಧಿಯಲ್ಲಿ ತುಮಕೂರು ಅಮಾನಿಕೆರೆ 324 ಎಕರೆ ಕುಗ್ಗಿದ್ದು ಹೇಗೆ ಎಂಬ ಪ್ರಶ್ನೆ ಉದ್ಭವಿಸಿದೆ. ಸ್ವತಃ ರಫೀಕ್ ಅಹಮದ್ ಹಾಲಿ ಅಮಾನಿಕೆರೆ ವಿಸ್ತೀರ್ಣ 512 ಎಕರೆ ಎಂದು ಸುದ್ದಿಗೋಷ್ಠಿಯಲ್ಲಿ ಬಹಿರಂಗಪಡಿಸಿದರು. ಆದರೆ ಕೆರೆ ವಿಸ್ತೀರ್ಣಕ್ಕೆ ಸಂಬಂಧಿಸಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಮಾವ ಷಫಿ ಅಹಮದ್ ತಾವು ಶಾಸಕರಾಗಿದ್ದ ಅವಧಿಯಲ್ಲಿ ಕೆರೆ ವಿಸ್ತೀರ್ಣ 836 ಎಕರೆಯಿತ್ತು ಎಂದು ಹೇಳುವ ಮೂಲಕ ಹೊಸ ಚರ್ಚೆಗೆ ನಾಂದಿ ಹಾಡಿದ್ದಾರೆ. ಕಳೆದ 20 ವರ್ಷಗಳ ಅವಧಿಯಲ್ಲಿ 324 ಎಕರೆ ಜಾಗ ನಾಪತ್ತೆಯಾಗಿರುವ ಕುರಿತು ಸುಳಿವು ನೀಡಿದ್ದಾರೆ.
ಮುಗಿದ ಕಾಮಗಾರಿ: ಈಗಾಗಲೇ ಕೇಂದ್ರ ಸರ್ಕಾರದ ಅನುದಾನದಿಂದ, ಲೇಕ್ ಡೆವಲಪ್ಮೆಂಟ್ ಅಥಾರಿಟಿ ವತಿಯಿಂದ, ತುಮಕೂರು ಅಭಿವೃದ್ಧಿ ಪ್ರಾಧಿಕಾರದ ಉಸ್ತುವಾರಿಯಲ್ಲಿ ಅಮಾನಿಕೆರೆ ಸೌಂದರ್ಯೀಕರಣ ಸೇರಿದಂತೆ ಒಟ್ಟು ಅಭಿವೃದ್ಧಿಗೆಂದು ಸುಮಾರು 13 ಕೋಟಿ ರು. ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದ್ದು, ಬಹುತೇಕ ಕಾಮಗಾರಿಗಳು ಮುಗಿದಿವೆ. ಈ ಕುರಿತು ಮಾಹಿತಿ ನೀಡಿದ ಶಾಸಕ ರಫೀಕ್ ಅಹಮದ್, ಅಮಾನಿಕೆರೆ ಅಭಿವೃದ್ದಿಗೆ ಸುಮಾರು ಒಂಬತ್ತುವರೆ ಕೋಟಿ ರು. ವೆಚ್ಚದಲ್ಲಿ ಖರ್ಚು ಮಾಡಲಾಗಿದೆ. ಕೆರೆ ನೀರಿನ ಸಂಗ್ರಹ ಶಕ್ತಿ 4 ಸಾವಿರ ಮಿಲಿಯನ್ ಲೀಟರ್. ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಸುಮಾರು 6 ಕೋಟಿ ರು. ಕಾಮಗಾರಿ ನಡೆದಿದೆ ಎಂದು ಮಾಹಿತಿ ನೀಡಿದರು. ಈ ಅಭಿವೃದ್ಧಿ ಕಾಮಗಾರಿ ಕೂಡ ವಿವಾದಕ್ಕೀಡಾಗಿದ್ದು, ಸಂಸದ ಜಿ.ಎಸ್. ಬಸವರಾಜು ಕಾಮಗಾರಿ ಕಳಪೆ ಎಂದು ಆರೋಪಿಸಿರುವದನ್ನು ಸ್ಮರಿಸಬಹುದಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

