ಡೆಂಘೀ ನಿವಾರಣೆಗೆ ತುರ್ತುಕ್ರಮ ಕೈಗೊಳ್ಳಿ
ಚಿಕ್ಕನಾಯಕನಹಳ್ಳಿ: ಮನುಷ್ಯನ ಬದುಕುನ್ನು ನಾಶಪಡಿಸುವ ಮಹಾಮಾರಿ ಡೆಂಘೀ ಜ್ವರವನ್ನು ನಿರ್ಮೂಲನೆಗೊಳಿಸಲು ಅಗತ್ಯವಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳುವಂತೆ ಶಾಸಕ ಸಿ.ಬಿ.ಸುರೇಶ್ಬಾಬು ಸಭೆಯಲ್ಲಿ ನುಡಿದರು.
ಇತ್ತೀಚೆಗೆ ತಾಲೂಕಿನಲ್ಲಿ ಅಲ್ಲಲ್ಲಿ ಅನೇಕ ಡೆಂಘೀ ಪ್ರಕರಣಗಳು ಬೆಳಕಿಗೆ ಬಂದಿದ್ದು, ಯಾವುದೇ ಕಾರಣಕ್ಕೂ ಇದು ಉಲ್ಬಣಗೊಳ್ಳಲು ಬಿಡಬಾರದು. ರೋಗ ಹರಡಲು ಕಾರಣಗಳನ್ನು ಪತ್ತೆ ಹಚ್ಚಿ, ಕೂಡಲೇ ನಿಯಂತ್ರಣಕ್ಕೆ ಅಗತ್ಯ ಕ್ರಮಕೈಗೊಳ್ಳಿ ಎಂದು ಅವರು ತಿಳಿಸಿದರು.
ಈ ನಿಟ್ಟಿನಲ್ಲಿ ತಾಲೂಕಿನಾದ್ಯಂತ ಏಕಕಾಲಕ್ಕೆ ಔಷಧಿ ಸಿಂಪರಣೆ ಕೈಗೊಳ್ಳಲು ಅವರು ಆರೋಗ್ಯ ಇಲಾಖೆಗೆ ಸೂಚಿಸಿದರು. ಈ ರೋಗವು ನಿಂತ ನೀರಿನಿಂದ ಬರುವ ಸಾಧ್ಯತೆಯಿದ್ದು, ಅಂತಹ ನೀರಿನ ಮೂಲಗಳನ್ನು ಸ್ವಚ್ಛಗೊಳಿಸಿಬೇಕು, ಗ್ರಾಮಪಂಚಾಯ್ತಿಗಳು ಗ್ರಾಮನೈರ್ಮಲ್ಯ ಮತ್ತು ಸ್ವಚ್ಛತೆ ಬಗ್ಗೆ ಹೆಚ್ಚಿನ ಗಮನಹರಿಸಬೇಕು ಎಂದು ಸಭೆಯಲ್ಲಿದ್ದ ಗ್ರಾಮಪಂಚಾಯ್ತಿ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಹೊಯ್ಸಲಕಟ್ಟೆ ತಾಪಂ ಸದಸ್ಯೆ ಕವಿತಾ ಗ್ರಾಮಪಂಚಾಯ್ತಿಗಳು ಸ್ವಚ್ಛತೆ ಬಗ್ಗೆ ಗಮನಹರಿಸುತ್ತಿಲ್ಲ. ನೀರಿನ ಟ್ಯಾಂಕುಗಳನ್ನು ಮತ್ತು ಚರಂಡಿಗಳನ್ನು ವರ್ಷಗಟ್ಟಲೆ ಸ್ವಚ್ಛಳಿಸುವುದಿಲ್ಲ. ಕಸವಿಲೇವಾರಿ ಅವ್ಯವಸ್ಥೆಯಂತು ಹೇಳತೀರದು ಎಂದು ಗ್ರಾಮಪಂಚಾಯ್ತಿಗಳ ಮೇಲೆ ಹರಿಹಾಯ್ದರು.
ಗೂಬೆ ಕೂರಿಸಬೇಡಿ: ಈ ಸಂದರ್ಭದಲ್ಲಿದ್ದ ತಿಮ್ಮನಹಳಳ್ಳಿ ಗ್ರಾಮಪಂಚಾಯ್ತಿ ಅಧ್ಯಕ್ಷರು ತಾಪಂ ಸದಸ್ಯರು ಗ್ರಾ.ಪಂ.ಗಳ ಮೇಲೆ ಗೂಬೆ ಕೂರಿಸುವುದನ್ನು ಬಿಡಿ. ಹಳ್ಳಿಗಳಲ್ಲಿ ನಿಮ್ಮ ಅನುದಾನದಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕದಾಗ ನಮ್ಮನ್ನು ಸಂಪರ್ಕಿಸುವುದಿಲ್ಲ. ನಿಮಗೆ ಬೇಕಾದಕಡೆ ನೀರಿನ ಸಿಸ್ಟನ್ಗಳನ್ನು ಹಾಕುತ್ತೀರಿ.ಅವುಗಳನ್ನು ಸ್ವಚ್ಛಗೊಳಿಸಲು ನಮಗೆ ಹೇಳುತ್ತೀರಿ, ನಿಮಗೆ ಬಂದಷ್ಟು ಅನುದಾನ ನಮಗೆ ಬರುವುದಿಲ್ಲ ಎಂದು ತಿರುಗೇಟು ನೀಡಿದರು.
ರೋಗದ ಲಕ್ಷಣ ಗೋಚರ: ತಾಲೂಕು ಆರೋಗ್ಯ ವೈದ್ಯಾಧಿಕಾರಿ ಶಿವಕುಮಾರ್ ಮಾತನಾಡಿ ತಾಲೂಕಿನಲ್ಲಿ ಪಟ್ಟಣದಲ್ಲಿ 2 ಕಡೆ, ಕಾತ್ರಿಕೆಹಾಳ್, ಕಂಪನಹಳ್ಳಿ, ಸೋರಲಮಾವು, ಹುಳಿಯಾರು ಮುಂತಾದಕಡೆಗಳಲ್ಲಿ ರೋಗದ ಲಕ್ಷಣಗಳು ಗೋಚರಿಸಿವೆ. ಎಲ್ಲಾ ಪ್ರಕರಣಗಳಿಗೂ ಚಿಕಿತ್ಸೆ ನೀಡಲಾಗಿದೆ. ಕೆಲವು ಪ್ರಕರಣಗಳು ಬೆಂಗಳೂರು ಮತ್ತು ಮಣಿಪಾಲದಲ್ಲಿ ಚಿಕಿತ್ಸೆ ಪಡೆದಿವೆ. ಡೆಂಘೀ ಪ್ರಕರಣಗಳು ಗೋಚರಿಸಿದ ಭಾಗದಲ್ಲಿ ಕುಡಿಯುವ ನೀರಿನ ಮೂಲಗಳನ್ನು ಸ್ವಚ್ಛವಾಗಿರಿಸಿಕೊಳ್ಳುವುದು ಮೊದಲ ಕ್ರಮವಾಗಬೇಕು.
ಇದು ರೋಗ ಹರಡಲು ಪ್ರಶಸ್ಥವಾದ ಕಾಲ. ಆದ್ದರಿಂದ ಔಷಧಿ ಸಿಂಪರಣೆ ಅತ್ಯಗತ್ಯ. ಡೆಂಘೀ ರೋಗಕಾರಕ ಸೊಳ್ಳೆಗಳು ಮನುಷ್ಯನಿಂದ ಮನುಷ್ಯನಿಗೆ ರೋಗವನ್ನು ಹರಡುವ ಮುನ್ನ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಸಹ ಮಾಡಬೇಕಾಗಿದೆ.
ರೋಗ ಹರಡದಂತೆ ಮುಂಜಾಗ್ರತೆ ವಹಿಸಲು ಮನೆಗಳಲ್ಲಿ ಶೇಖರಿಟ್ಟಿರುವ ನೀರನ್ನು ಮುಚ್ಚಿಡಬೇಕು. ಮನೆಯ ಸುತ್ತಮುತ್ತಲ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳ ಬೇಕು. ಚರಂಡಿಗಳನ್ನು ಕಾಲಕಾಲಕ್ಕೆ ಸ್ವಚ್ಛಗೊಳಿಸುವುದ ಸೇರಿದಂತೆ ನೈರ್ಮಲ್ಯ ಕಾರ್ಯಕ್ರಮಗಳಿಗೆ ಹೆಚ್ಚು ಒತ್ತು ನೀಡಬೇಕಿದೆ ಎಂದರು.
ವಿಫಲ: ಕೊನೆಯಲ್ಲಿ ಮಾತನಾಡಿದ ತಾಪಂ ಅಧ್ಯಕ್ಷರು ಒಟ್ಟಾರೆ ನೈರ್ಮಲ್ಯ ಕಾಪಾಡುವಲ್ಲಿ ನಾವು ವಿಫಲರಾಗಿದ್ದೇವೆ. ಸ್ವಚ್ಛತೆ ಬಗ್ಗೆ ವೇದಿಕೆಗಳಲ್ಲಿ ಮಾತನಾಡುವ ನಾವು ನಮ್ಮ ಸುತ್ತಮುತ್ತಲ ಪರಿಸರವನ್ನು ಕಾಪಾಡುವುದಿಲ್ಲ. ಎಲ್ಲವನ್ನು ಸರ್ಕಾರವೇ ಮಾಡುವುದಾದರೆ ಪ್ರಜೆಗಳಾದ ನಮ್ಮ ಕರ್ತವ್ಯವನ್ನು ನಾವು ಮಾಡಿದ್ದೇನು ಎಂದರು.
ಕಾರ್ಯನಿರ್ವಹಣಾಧಿಕಾರಿ ತಿಮ್ಮಯ್ಯ ಮಾತನಾಡಿ ಕಂದಾಯ ಇಲಾಖೆ ಮತ್ತು ತಾಪಂ ಆಡಳಿತ ಸೇರಿ ಸಭೆ ಕರೆದು ಸ್ವಚ್ಛತೆ ಬಗ್ಗೆ ಕ್ರಮಕೈಗೊಳ್ಳುವ ಕಾರ್ಯಕ್ಕೆ ಮುಂದಾಗುತ್ತೇವೆ ಎಂದರು. ಸಭೆಯಲ್ಲಿ ತಹಸೀಲ್ದಾರ್ ಕಾಮಾಕ್ಷಮ್ಮ, ಪುರಸಭಾ ಮುಖ್ಯಾಧಿಕಾರಿ ವೆಂಕಟೇಶ ಶೆಟ್ಟಿ, ಜಿಪಂ ಸದಸ್ಯರಾದ ಜಾನಮ್ಮ, ಮಂಜುಳ,ಪುರಸಭಾ ಸದಸ್ಯರಾದ ಸಿ.ಎಂ.ರಂಗಸ್ವಾಮಿ, ಎಚ್.ಬಿ. ಪ್ರಕಾಶ್ ಮುಂತಾದವರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

