ಚರಂಡಿ ಕಾಮಗಾರಿಗೆ ಅಡ್ಡಿ; ಉದ್ವಿಗ್ನ ಸ್ಥಿತಿ
ಕುಣಿಗಲ್: ಖಾಸಗಿ ನಿವೇಶನದ ತಕರಾರು ನ್ಯಾಯಾಲಯದಲ್ಲಿರುವಾಗ, ಚರಂಡಿ ನಿರ್ಮಿಸಲು ಪುರಸಭೆ ಸಿಬ್ಬಂದಿ ಪೊಲೀಸ್ ರಕ್ಷಣೆಯೊಂದಿಗೆ ಚರಂಡಿಗಾಗಿ ಜಾಗ ಬಿಡಿಸಲು ತೆರಳಿದ್ದು, ಕೆಲಕಾಲ ವಾಗ್ವಾದ ನಡೆದು ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾದ ಘಟನೆ ಶುಕ್ರವಾರ ಪುರಸಭೆಯ ಏಳನೇ ವಾರ್ಡ್ನಲ್ಲಿ ನಡೆದಿದೆ.
ಪುರಸಭೆಯ ಏಳನೇ ವಾರ್ಡ್ನ ಗುಜ್ಜಾರಿ ಮೊಹಲ್ಲಾ ಪ್ರದೇಶದಲ್ಲಿ ಸುಮಾರು 60ಕ್ಕೂ ಹೆಚ್ಚು ಮನೆಯಿಂದ ಹೊರಬರುವ ಕೊಳಚೆ ನೀರು ಸಾಗಿಸಲು ಚರಂಡಿ ಕಾಮಾಗಾರಿಯನ್ನು 2009-10ನೇ ಸಾಲಿನಲ್ಲಿ ಕೈಗೊಳ್ಳಲಾಗಿತ್ತು. ಆದರೆ, ಸದರಿ ಕಾಮಗಾರಿ ಕೈಗೊಳ್ಳುವ ಜಾಗದ ಮದ್ಯದಲ್ಲಿ ಉಮ್ಮರ್ ಖಾನ್ ಎಂಬುವವರಿಗೆ ಸೇರಿದ ನಿವೇಶನ ಪ್ರದೇಶದ ಮಾಲೀಕತ್ವದ ತಕರಾರು ನ್ಯಾಯಾಲಯದ ಮೆಟ್ಟಿಲೇರಿದ ಕಾರಣ, ಸದರಿ ಜಾಗದಲ್ಲಿ ಕಾಮಗಾರಿ ಕೈಗೊಳ್ಳಲು ಉಮ್ಮರ್ ಖಾನ್ ಕಡೆಯವರು ಆಕ್ಷೇಪಿಸಿ ತಡೆಯೊಡ್ಡಿದ ಕಾರಣ ಕಾಮಗಾರಿ ವಿಳಂಬವಾಗಿತ್ತು.
ವಿವಾದಿತ ನಿವೇಶನ: ಆದರೆ, ಪ್ರಕರಣದ ಪರ- ವಿರೋಧ ಚರ್ಚೆ ನಡೆಯುತ್ತಿದ್ದು, ಈ ಹಂತದಲ್ಲಿ ಚರಂಡಿ ಕಾಮಗಾರಿಯ ವಿಳಂಬದಿಂದ ಸುಮಾರು ಮನೆಯವರಿಗೆ ತೊಂದರೆಯಾದ ಹಿನ್ನೆಲೆಯಲ್ಲಿ ಸದಸ್ಯ ಸಮೀವುಲ್ಲಾ ಹಾಗೂ ಮುಖ್ಯಾಧಿಕಾರಿಗಳ ಗಮನಕ್ಕೆ ತಂದ ಹಿನ್ನೆಲೆಯಲ್ಲಿ, ಶುಕ್ರವಾರ ಮುಖ್ಯಾಧಿಕಾರಿ ಅನ್ನದಾನಿ, ವ್ಯವಸ್ಥಾಪಕ ಹನುಮಂತಯ್ಯ, ಅಭಿಯಂತರರಾದ ಶಿಲ್ಪಾ, ಶ್ರೀಕಾಂತ, ಆರೋಗ್ಯ ನಿರೀಕ್ಷಕಿ ವರಲಕ್ಷ್ಮಿ, ಕಂದಾಯ ಸಿಬ್ಬಂದಿ ರಮೇಶ, ನರಸಿಂಹಯ್ಯ ಸೇರಿದಂತೆ ನಲವತ್ತಕ್ಕೂ ಹೆಚ್ಚು ಸಿಬ್ಬಂದಿ ಪೊಲೀಸ್ ರಕ್ಷಣೆಯಲ್ಲಿ ವಿವಾದಿತ ನಿವೇಶನದಲ್ಲಿ ಚರಂಡಿ ಕಾಮಗಾರಿಗೆ ಜಾಗ ಬಿಡಿಸಲು ತೆರಳಿ, ಕಾಮಗಾರಿ ಪ್ರಾರಂಭಿಸಲು ಮುಂದಾದರು.
ವಾದ- ವಾಗ್ವಾದ: ಈ ಹಂತದಲ್ಲಿ ನಿವೇಶನ ಮಾಲೀಕರು ತೀವ್ರ ಪ್ರತಿರೋಧ ಒಡ್ಡಿದ್ದು ಘಟನೆಗೆ ಸಂಬಂಧಿಸಿದಂತೆ ಪೊಲೀಸರು, ಪುರಸಭೆ ಮುಖ್ಯಾಧಿಕಾರಿ ಹಾಗೂ ಸಿಬ್ಬಂದಿಯೊಂದಿಗೆ ವಾಗ್ವಾದಕ್ಕೆ ಇಳಿದರು. ಪುರಸಭೆ ಸಿಬ್ಬಂದಿ ದೌರ್ಜನ್ಯ ನಡೆಸಿ ಖಾಸಗಿ ಆಸ್ತಿ ಅತಿಕ್ರಮಣ ಮಾಡುತ್ತಿದ್ದಾರೆಂದು ನಿವೇಶನ ಮಾಲೀಕರು ವಾದಿಸಿದರೆ, ಮುಖ್ಯಾಧಿಕಾರಿ ಅನ್ನದಾನಿ, ಚರಂಡಿ ಕಾಮಗಾರಿಗೆ ತಡೆಯುಂಟು ಮಾಡಿದ್ದರಿಂದ ನೂರಾರು ನಾಗರಿಕರ ಅರೋಗ್ಯದ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತಿದೆ. ಆದ್ದರಿಂದ ಚರಂಡಿ ಕಾಮಗಾರಿ ನಡೆಸಿಯೇ ಸಿದ್ಧವೆಂದು ವಾದಕ್ಕೆ ಇಳಿದರು.
ಈ ಹಂತದಲ್ಲಿ ನಿವೇಶನ ಮಾಲೀಕರ ಕಡೆಯವರು ಪುರಸಭೆಯವರ ಸಾಮಾಗ್ರಿಗಳನ್ನು ಎಸೆದಾಡಲು ಮುಂದಾದರು. ಈ ಹಂತದಲ್ಲಿ ಪರ- ವಿರೋಧ ವಾಗ್ವಾದಗಳು ನಡೆದು ಕೆಲಕಾಲ ಪರಿಸ್ಥಿತಿ ಉದ್ವಿಗ್ನವಾಗಿತ್ತು. ಮಧ್ಯೆ ಪ್ರವೇಶಿಸಿದ ಪೊಲೀಸರು ನಿವೇಶನ ಮಾಲೀಕರನ್ನು ಬಂಧಿಸಿಸುವ ಎಚ್ಚರಿಕೆ ನೀಡಿ, ಪರಿಸ್ಥಿತಿ ತಿಳಿಗೊಳಿಸಿದರು. ಜೆಸಿಬಿ ಸಹಾಯದಿಂದ ಪುರಸಭೆ ಸಿಬ್ಬಂದಿ ಚರಂಡಿ ಕಾಮಗಾರಿ ತಾತ್ಕಾಲಿಕವಾಗಿ ಪೂರ್ಣಗೊಳಿಸಿದರು.
ವಾರ್ಡ್ ಸದಸ್ಯ ಸಮೀವುಲ್ಲಾ ಇತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

