ಓದು ನಿಜವಾದ ಮನುಷ್ಯನನ್ನು ರೂಪಿಸುತ್ತದೆ
ತುಮಕೂರು: ಓದು ನಿಜವಾದ ಮನುಷ್ಯನನ್ನು ರೂಪಿಸುತ್ತದೆ. ಮನುಷ್ಯನ ಬೆಳವಣಿಗೆ, ವಿಕಾಸದಲ್ಲಿ ಪುಸ್ತಕಗಳು ಮಹತ್ವದ ಪಾತ್ರವನ್ನು ವಹಿಸುತ್ತಲೇ ಬಂದಿವೆ ಎಂದು ದಲಿತ ಕವಿ ಡಾ. ಸಿದ್ದಲಿಂಗಯ್ಯ ಪ್ರತಿಪಾದಿಸಿದರು.
ತುಮಕೂರಿನ ಬಿಎಚ್ ರಸ್ತೆಯಲ್ಲಿರುವ ರೇಣುಕಾ ಕಾಂಪ್ಲೆಕ್ಸ್ನಲ್ಲಿ ನೂತನ ಪುಸ್ತಕ ಮಳಿಗೆ ಚಿರಂತನ ಬುಕ್ ಹೌಸ್ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪುಸ್ತಕ ಒಡನಾಟ ಅಗತ್ಯ: ನಿರ್ದಿಷ್ಟ ಲೇಖಕರ ನಿರ್ದಿಷ್ಟ ಕೃತಿಗಳಿಗಾಗಿ ವಿಚಾರಿಸಿ, ಅವುಗಳನ್ನು ಕೊಂಡು ಓದುವುದು, ಸಮಾನ ಅಭಿರುಚಿಯುಳ್ಳವರೊಂದಿಗೆ ಪುಸ್ತಕ ಕುರಿತು ಮಾತನಾಡುವುದು ಇದಷ್ಟೇ ಪುಸ್ತಕ ಸಂಸ್ಕೃತಿಯಲ್ಲ. ಅದಕ್ಕಿಂತ ಮಿಗಿಲಾದದ್ದು ಮತ್ತೇನೋ ಇದೆ ಎನ್ನುವ ಸೂಚನೆಯನ್ನು ಕೊಡುತ್ತಲೇ ಪುಸ್ತಕವೊಂದನ್ನು ನಮ್ಮ ಅನುಭವದ ಭಾಗವಾಗಿಸಿಕೊಳ್ಳುವ ಬಗೆಗೆ ಚಿಂತನೆಗಳನ್ನು ಹರಿಯಬಿಡುವಂತಹ ಲೇಖನ ಅದರ ಆಪ್ತ ಧಾಟಿಯಿಂದಾಗಿಯೇ ಪುಸ್ತಕ ಇಷ್ಟವಾಗುತ್ತದೆ. ಪುಸ್ತಕದೊಂದಿಗಿನ ನಮ್ಮ ಒಡನಾಟ ಮತ್ತು ಸಂಬಂಧ ಎಂಥದ್ದೆಂದು ಪರಿಶೀಲಿಸಿಕೊಳ್ಳಲು ಪ್ರೇರೇಪಿಸುತ್ತದೆ ಎಂದರು.
ಓದುವುದು ಮನುಷ್ಯನ ಅಂತರಂಗದ ಅವಶ್ಯಕತೆಯಾಗಿದೆ. ಓದುವ ಸುಖಕ್ಕೆ ಸರಿಸಾಟಿಯಾದದ್ದು ಯಾವುದೂ ಇಲ್ಲ. ಅದು ನಮ್ಮ ಏಕಾಂತತೆಯನ್ನೂ, ಧ್ಯಾನವನ್ನೂ ಏಕಕಾಲಕ್ಕೆ ಉಳಿಸಿಕೊಳ್ಳುವ ಸಾಧನ. ಪುಸ್ತಕದ ಓದಿಗೆ ಯಾವ ಕಟ್ಟುಪಾಡುಗಳೂ ಇಲ್ಲ. ಪುಸ್ತಕ ಪ್ರೀತಿಯಿಂದ ಮನುಷ್ಯ ರೂಪದ ಜೀವಿ ವಿಕಾಸಗೊಳ್ಳುತ್ತಾನೆ. ನಿಜವಾದ ಮನುಷ್ಯನಾಗಿ ರೂಪುಗೊಳ್ಳುವುದು ಪುಸ್ತಕದಿಂದ ಸಾಧ್ಯವಾಗುತ್ತದೆಂಬ ಸತ್ಯವನ್ನು ಸಾಕ್ಷಾತ್ಕರಿಸಿ ಕೊಡುವಂತಿದೆ ಎಂದು ತಿಳಿಸಿದರು.
ಜ್ಞಾನ ಅರಿಯುವ ನಿಟ್ಟಿನಲ್ಲಿ ಪುಸ್ತಕ: ಯತೇಚ್ಛವಾಗಿ ಪುಸ್ತಕಗಳನ್ನು ಬರಹಗಾರರು ಹೊರತರುವ ಪ್ರಯತ್ನ ಮಾಡಬೇಕಿದೆ. ನಮ್ಮ ಜ್ಞಾನಾರ್ಜನೆ ವೃದ್ಧಿಯಲ್ಲಿ ಪುಸ್ತಕಗಳ ಪಾತ್ರ ಮಹತ್ವವಾಗಿದೆ. ಯಾವುದೇ ವಿಷಯಗಳಿರಲಿ, ವ್ಯಕ್ತಿಗಳ ಸಾಧನೆಗಳಿರಲಿ, ವಿಚಾರಗಳ ಜ್ಞಾನಕ್ಕೆ ಪುಸ್ತಕಗಳ ಅಗತ್ಯವಿದೆ. ಜಾಗತಿಕ ಮಟ್ಟದ ವ್ಯಕ್ತಿಗಳ ವಿಚಾರವನ್ನು ಅರಿಯುವುದರೊಂದಿಗೆ ಪ್ರಾದೇಶಿಕವಾಗಿ ಸಹ ಸಾಧನೆಗೈದ ವ್ಯಕ್ತಿಗಳ ಕುರಿತು ನಾವು ಜ್ಞಾನ ಅರಿಯುವ ನಿಟ್ಟಿನಲ್ಲಿ ಪುಸ್ತಕಗಳು ಪ್ರಕಟವಾಗಬೇಕಿದೆ ಎಂದು ಡಾ. ಸಿದ್ದಲಿಂಗಯ್ಯ ನುಡಿದರು.
ಸಾವಿರಾರು ವರ್ಷಗಳಿಂದ ಪುಸ್ತಕಗಳು ಹಸ್ತಪ್ರತಿಯಲ್ಲಾಗಲೀ, ಮುದ್ರಣದ ಮೂಲಕವಾಗಲೀ ಪ್ರಕಟವಾಗುತ್ತ ಬಂದಿವೆ. ಈ ಪುಸ್ತಕಗಳು ಇರುವುದರಿಂದಲೇ ಮನುಷ್ಯನ ಜೀವನ ಹಿತವಾಗಿದೆ. ಒಟ್ಟಿನಲ್ಲಿ ನಮ್ಮ ಸಮಾಜಕ್ಕೆ ಗ್ರಂಥಾಲಯಗಳು ಎಷ್ಟಿದ್ದರೂ ಬೇಕು. ಪುಸ್ತಕ ಭಂಡಾರಗಳಿಂದಲೇ ಹೆಚ್ಚಿನ ಪ್ರಸರಣವಾಗುತ್ತದೆ, ಜಿಲ್ಲೆಯಲ್ಲಿ ಪುಸ್ತಕದ ಮಳಿಗೆಗಳು ಹೆಚ್ಚು-ಹೆಚ್ಚು ತೆರೆಯಬೇಕು, ನಾವೆಲ್ಲರೂ ಪುಸ್ತಕ ಭಂಡಾರದ ಸಂಸ್ಕೃತಿಯನ್ನು ಬೆಳೆಸಲು ಶ್ರಮಿಸೋಣ. ಪುಸ್ತಕಗಳನ್ನು ಖರೀದಿಸೋಣ, ಓದೋಣ ಎಂದು ತಿಳಿಸಿದರು.
ಪಠ್ಯೇತರ ಪುಸ್ತಕಗಳು ಲಭ್ಯವಾಗಬೇಕು: ಚಿರಂತನ ಬುಕ್ ಹೌಸ್ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ, ಸ್ಪರ್ಧಾ ಜಗತ್ತಿಗೆ ವಿಧ್ಯಾರ್ಥಿಗಳಿಗೆ ಅನುಗುಣವಾಗುವಂತೆ ನಗರದಲ್ಲಿ ಹೆಚ್ಚಿನ ಪುಸ್ತಕಗಳು ಪ್ರಕಟವಾಗಬೇಕಿದೆ ಜೊತೆಗೆ ಮಾರಾಟದ ಮಳಿಗೆಯಲ್ಲಿ ಎಲ್ಲಾ ಪಠ್ಯೇತರ ಅಂಶಗಳನ್ನು ಒಳಗೊಂಡ ಪುಸ್ತಕಗಳು ಲಭ್ಯವಿರಬೇಕು ಎಂಬ ಆಶಯವನ್ನು ವ್ಯಕ್ತಪಡಿಸಿದರು.
ಸ್ಪರ್ಧಾ ಚೈತ್ರದ ಸಂಪಾದಕ ವಸಂತಕುಮಾರ್, ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಸೋ.ಮು. ಭಾಸ್ಕರಾಚಾರ್, ತಿಲಕ್ ಪಾರ್ಕ್ ಸಿಪಿಐ ರಾಘವೇಂದ್ರ, ಚಿರಂತನ ಪ್ರಕಾಶನದ ಅಧ್ಯಕ್ಷ ಎ.ವಿ. ನಾಗರಾಜ್ ಯಾದವ್, ಪಾರ್ವತಮ್ಮ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

