ತುಮಕೂರು

ಅಸಮರ್ಪಕ ವಿದ್ಯುತ್ ಪೂರೈಕೆ ಖಂಡಿಸಿ ಪ್ರತಿಭಟನೆ

Published On :

ಕ.ಪ್ರ.ವಾರ್ತೆ ಕುಣಿಗಲ್ ನ. 23
ಪಟ್ಟಣ ಪ್ರದೇಶಕ್ಕೆ ಹೊಂದುಕೊಂಡಿರುವ ಕೆಆರ್‌ಎಸ್ ಅಗ್ರಹಾರ ಹಾಗೂ ಹೇರೂರು ಅಮಾನಿಕೆರೆಯ ಅಚ್ಚುಕಟ್ಟು ಪ್ರದೇಶದ ನೂರಾರು ರೈತರ ಜಮೀನು ವ್ಯಾಪ್ತಿಗೆ ಅಸಮರ್ಪಕ ವಿದ್ಯುತ್ ಪೂರೈಕೆ ಖಂಡಿಸಿ, ರೈತರು ಬೆಸ್ಕಾಂ ಸಿಬ್ಬಂದಿಗಳೊಂದಿಗೆ ವಾಗ್ವಾದ ನಡೆಸಿದ ಘಟನೆ ಶನಿವಾರ ನಡೆಯಿತು.
ಪಟ್ಟಣಕ್ಕ ಹೊಂದುಕೊಂಡಂತೆ ಕೆಆರ್‌ಎಸ್ ಅಗ್ರಹಾರ ಹಾಗೂ ಹೇರೂರು ಅಮಾನಿಕೆರೆಯ ಅಚ್ಚುಕಟ್ಟು ಪ್ರದೇಶದಲ್ಲಿನ ಬೆಸ್ಕಾಂ ನಿರ್ವಹಣೆಯ ಎರಡನೇ ಘಟಕದಲ್ಲಿ ನಾಲ್ಕು ವಿದ್ಯುತ್ ಪರಿವರ್ತಕಗಳಿಂದ ಸುಮಾರು ಮೂವತ್ತಕ್ಕೂ ಹೆಚ್ಚು ಬೋರ್‌ವೆಲ್‌ಗಳಿದ್ದು, ಸುಮಾರು ನಾಲ್ಕು ನೂರು ಎಕರೆ ಪ್ರದೇಶದಲ್ಲಿ ಗೆಣಸು, ತರಕಾರಿ ಸೇರಿದಂತೆ ಹಲವು ಬೆಳೆಗಳನ್ನು ಬೋರ್‌ವೆಲ್ ಅಶ್ರಯದಲ್ಲಿ ಕೈಗೊಂಡಿದ್ದಾರೆ. ಈ ಹಿಂದೆ ಈ ಪ್ರದೇಶದಲ್ಲಿ ದಿನದ 24 ಗಂಟೆಯೂ ಮೂರು ಫೇಸ್ ವಿದ್ಯುತ್ ಪೂರೈಕೆಯಾಗುತ್ತಿತ್ತು.
ಕಳೆದ ಶುಕ್ರವಾರದಿಂದ ಈ ಪ್ರದೇಶದಲ್ಲಿ ದಿನವೊಂದಕ್ಕೆ ಕೇವಲ ಎರಡರಿಂದ ಮೂರು ಗಂಟೆ ಮಾತ್ರ ತ್ರಿಫೇಸ್ ವಿದ್ಯುತ್ ಪೂರೈಕೆಯಾಗುತ್ತಿದ್ದು, ರೈತರ ಬೆಳೆ ಕೈಗೆ ಬರುವ ವೇಳೆ ಸಮರ್ಪಕ ವಿದ್ಯುತ್ ಇಲ್ಲದೆ ನೂರು ಪೂರೈಸಲಾಗದೆ ರೈತರು ಪರದಾಡುವಂತಾಗಿದೆ. ಇದರಿಂದ ಬೇಸತ್ತ ರೈತರು ತಾಲೂಕು ಜೆಡಿಎಸ್ ಅಧ್ಯಕ್ಷ ಕೆ.ಎಲ್. ಹರೀಶ್ ನೇತೃತ್ವದಲ್ಲಿ ಶನಿವಾರ ಬೆಸ್ಕಾಂ ಕುಣಿಗಲ್ ಉಪವಿಭಾಗಾದ ಕಚೇರಿಗೆ ಆಗಮಿಸಿ, ರೈತರಿಗೆ ಯಾವುದೇ ಮುನ್ಸೂಚನೆ ನೀಡದೆ ವಿದ್ಯುತ್ ಪೂರೈಕೆ ನಿಲ್ಲಿಸಿರುವ ಬಗ್ಗೆ ಬೆಸ್ಕಾಂ ಸಿಬ್ಬಂದಿಗಳೊಂದಿಗೆ ವಾಗ್ವಾದ ನಡೆಸಿದರು. ಆದರೆ ಕೆಳಹಂತದ ಸಿಬ್ಬಂದಿಗಳು ಮಾತ್ರ ಕಚೇರಿಯಲ್ಲಿದ್ದು ಸಹಾಯಕ ಕಾರ್ಯಪಾಲಕ ಅಭಿಯಂತರರು  ಸೇರಿದಂತೆ ಇತರೆ ಅಧಿಕಾರಿಗಳು ಜಿಲ್ಲಾ ಕೇಂದ್ರದಲ್ಲಿ ಸಭೆಗೆ ತೆರಳಿದ್ದಾರೆಂದು ತಿಳಿಸಿದ ಮೇರೆಗೆ ಪ್ರತಿಭಟನೆಯನ್ನು ಸೋಮವಾರಕ್ಕೆ ಮುಂದೂಡಿ ತೆರಳಿದರಲ್ಲದೆ, ಬೆಸ್ಕಾಂನ ತುಘಲಕ್ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಸದ್ಯ ಹಾಕಲಾಗಿರುವ ಬೆಳೆ ಕೈಗೆ ಬರುವವರೆಗೂ ಸಮರ್ಪಕ ವಿದ್ಯುತ್ ಪೂರೈಕೆ ಮಾಡುವಂತೆ ಆಗ್ರಹಿಸಿದರು. ರೈತ ಮುಖಂಡರಾದ ಮೋಹನ್, ಸುರೇಶ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.