ಕಾರ್ಮಿಕರೇ ಸೌಲಭ್ಯ ಸದುಪಯೋಗಿಸಿಕೊಳ್ಳಿ
ಕನ್ನಡಪ್ರಭ ವಾರ್ತೆ, ತುಮಕೂರು, ನ.24
ಕಟ್ಟಡ ಕಾರ್ಮಿಕರು ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ರಾಜ್ಯ ಕಾರ್ಯದರ್ಶಿ ಎನ್. ಶಿವಣ್ಣ ಕರೆ ನೀಡಿದರು.
ಅವರು ತುಮಕೂರು ಸಮೀಪದ ಕುಪ್ಪೂರು ಗ್ರಾಮದಲ್ಲಿ ಎಐಟಿಯೂಸಿ ವತಿಯಿಂದ ಏರ್ಪಾಟಾಗಿದ್ದ ಕಟ್ಟಡ ಕಾರ್ಮಿಕರಿಗೆ ಗುರುತಿನ ಚೀಟಿಯ ವಿತರಣೆ ಹಾಗೂ ಸಂಘಕ್ಕೆ ಚಾಲನೆ ನೀಡಿ ಮಾತನಾಡಿದರು.
ಕಟ್ಟಡ ಕಾರ್ಮಿಕರು ಸರ್ಕಾರದಿಂದ ಸಿಗುವ ಮೂಲಭೂತ ಸೌಲಭ್ಯಗಳನ್ನು ಪಡೆದುಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ. ದಿನವಿಡೀ ದುಡಿಯುತ್ತಿರುವ ಅಸಂಘಟಿತ ಕಾರ್ಮಿಕರಾಗಿರುವ ಕಾಂಕ್ರಿಟ್ ಸಹಾಯಕರು, ಸೆಂಟ್ರೀನ್ ಕೆಲಸ, ವೈರಿಂಗ್ ಕೆಲಸ, ಪ್ಲಂಬಿಂಗ್, ಕಂಬಿ ಕಟ್ಟುವವರು, ಬಡಗಿ ಕೆಲಸ, ಪೇಂಟಿಂಗ್ ಕೆಲಸ, ಟೈಲ್ಸ್ ಹಾಕುವವರು, ಇಟ್ಟಿಗೆ ಹಾಕುವವರು, ಕ್ವಾರಿ, ಜಲ್ಲಿ, ಮರಳು ಸಾಗಾಣೆದಾರರು ದಿನ ನಿತ್ಯದ ಕೆಲಸಗಳನ್ನೆ ನಂಬಿ ಬದುಕು ನಡೆಸುತ್ತಿದ್ದಾರೆ. ಇವರೆಲ್ಲಾ ದಿನ ನಿತ್ಯದ ಕೂಲಿಕಾರ್ಮಿಕರಾಗಿದ್ದು, ಮಕ್ಕಳಿಗೆ ಸೂಕ್ತ ವಿದ್ಯಾಭ್ಯಾಸವನ್ನು ನೀಡುವಲ್ಲಿ ವಿಫಲರಾಗುತ್ತಿದ್ದಾರೆ.
ದುಬಾರಿ ಬೆಲೆ ಏರಿಕೆಯ ಮಧ್ಯೆ ಕೂಲಿ ಕಾರ್ಮಿಕರು ಜೀವನ ನಡೆಸಲಾಗದೆ ಕಂಗಾಲಾಗಿದ್ದಾರೆ. ಇಂದಿನ ದುಬಾರಿ ದಿನಗಳಲ್ಲಿ ಕಾರ್ಮಿಕರು ಅನಾರೋಗ್ಯಕ್ಕೀಡಾದರೆ ಆಸ್ಪತ್ರೆಯ ಖರ್ಚನ್ನು ಭರಿಸುವಲ್ಲಿ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಹಿನ್ನೆಲೆಯಲ್ಲಿ ಸರ್ಕಾರದಿಂದ ಕೂಲಿ ಕಾರ್ಮಿಕರಿಗೆ ಸಿಗುವಂತಹ ವಿಶೇಷ ಸೌಲಭ್ಯಗಳನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು.
ವಿವಿಧ ಸವಲತ್ತು: ಅನಾರೋಗ್ಯಕ್ಕೀಡಾದ ಮತ್ತು ಮಹಿಳಾ ಕಾರ್ಮಿಕರಿಗೆ ಹೆರಿಗೆ ಸೌಲಭ್ಯ, ಅಪಘಾತ ವಿಮೆ, ಪ್ರಮುಖ ಕಾಯಿಲೆಗಳಿಗೆ, ಎಕ್ಸ್ಗ್ರೇಸಿಯಾ ಪರಿಹಾರ ಧನ, ಫಲಾನುಭವಿಗಳ ಮಕ್ಕಳ ವಿದ್ಯಾಭ್ಯಾಸಕ್ಕೆ ಶೈಕ್ಷಣಿಕ ಧನ ಸಹಾಯ, ಕಾರ್ಮಿಕರ ಮಕ್ಕಳಿಗೆ ಮದುವೆ ಧನ ಸಹಾಯ, ವಸತಿ ನಿರ್ಮಾಣಕ್ಕೆ ಧನ ಸಹಾಯ, ಪಿಂಚಣಿ ಸೌಲಭ್ಯಗಳನ್ನು ತಪ್ಪದೆ ಕಾರ್ಮಿಕರು ಪಡೆದುಕೊಳ್ಳುವಂತೆ ತಿಳಿಸಿದರು.
ಮಧ್ಯವರ್ತಿಗಳ ಪಾಲಾಗುತ್ತಿದೆ: ಕಟ್ಟಡ ಕಾರ್ಮಿಕರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಿರೀಶ್ ಮಾತನಾಡಿ, ಕಟ್ಟಡ ನಿರ್ಮಾಣ ಮಾಡುವಂತಹ ಕಾರ್ಮಿಕರು ರಾಜ್ಯದಲ್ಲಿ ಕೋಟ್ಯಂತರ ಮಂದಿಯಿದ್ದಾರೆ.
ಆದರೆ ಲಕ್ಷದಷ್ಟು ಕಾರ್ಮಿಕರು ಮಾತ್ರ ನೋಂದಣಿಯಾಗಿದ್ದಾರೆ. ಕಾರ್ಮಿಕರಿಗೆ ಮೀಸಲಿಟ್ಟ ಹಣ ಸರ್ಕಾರದ ಮಧ್ಯವರ್ತಿಗಳ ಪಾಲಾಗುತ್ತಿದೆ. ಆದ್ದರಿಂದ ಪ್ರತಿಯೊಂದು ಜಿಲ್ಲೆಯ ಹಳ್ಳಿಯ ಕಟ್ಟಡ ಕಾರ್ಮಿಕರು, ಜಾಗೃತರಾಗಿ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘಕ್ಕೆ ತಮ್ಮ ಹೆಸರನ್ನು ನೋಂದಾಯಿಸಿ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ಕರೆ ನೀಡಿದರು.
ಯಾವುದೇ ಪಕ್ಷದ ಪರ ಅಲ್ಲ: ಅಧ್ಯಕ್ಷತೆ ವಹಿಸಿದ್ದ ಗ್ರಾಪಂ ಸದಸ್ಯ ಅಪ್ಪಾಜಪ್ಪನವರು ಮಾತನಾಡಿ, ಈ ಕಾರ್ಯಕ್ರಮ ಕೂಲಿ ಕಾರ್ಮಿಕರಿಗೆ ಶ್ರಮಿಸುವಂತಹ ಕಾರ್ಯಕ್ರಮವಾಗಿದೆ. ಇದು ಯಾವುದೇ ರಾಜಕೀಯ ಪಕ್ಷದ ಪರ ಅಲ್ಲ. ಈ ಕಾರ್ಯಕ್ರಮ ಕಟ್ಟಡ ಕಟ್ಟುವ ಕೂಲಿ ಕಾರ್ಮಿಕರ ಕಾರ್ಯಕ್ರಮವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಈ ಕಟ್ಟಡ ಕಾರ್ಮಿಕರಿಗೆ ಇರುವಂತಹ ಸೌಲಭ್ಯಗಳ ಬಗ್ಗೆ ಮಾಹಿತಿ ಇನ್ನೂ ಎಷ್ಟೋ ಜನರಿಗೆ ಗೊತ್ತಿಲ್ಲ. ಎಐಟಿಯೂಸಿ ಸಂಘದ ಮುಖಂಡರು ನಮ್ಮ ಗ್ರಾಮಕ್ಕೆ ಭೇಟಿ ನೀಡಿ ಕಟ್ಟಡ ಕಾರ್ಮಿಕರ ಸೌಲಭ್ಯಗಳ ಬಗ್ಗೆ ಪೂರ್ಣ ಪ್ರಮಾಣದ ಮಾಹಿತಿಯನ್ನು ನೀಡಿ ಉಪಯೋಗ ಪಡೆದುಕೊಳ್ಳುವಂತೆ ಸಲಹೆ ನೀಡಿದ್ದಾರೆ.
ಈ ಸಂದೇಶ ಒಂದು ಸಮಾಜದ ಅಭಿವೃದ್ಧಿಯ ಕೆಲಸವಾಗಿದೆ. ಈ ಕಾರ್ಯಕ್ರಮ ನಮ್ಮ ಗ್ರಾಮದಲ್ಲಿ ಯಶಸ್ವಿಯಾಗಿ ನಡೆದಿರುವುದರಿಂದ ನಮಗೆ ಖುಷಿ ತಂದಿದೆ. ನಮ್ಮ ಗ್ರಾಮದ ಮತ್ತು ಸುತ್ತ ಮುತ್ತಲಿನ ಕಟ್ಟಡ ಕಾರ್ಮಿಕರನ್ನು ಪರಿಚಯಿಸಿ ಈ ಕಟ್ಟಡ ಕಾರ್ಮಿಕ ಸಂಘಕ್ಕೆ ನೋಂದಾವಣೆ ಮಾಡಿಸಿಕೊಡುವುದಾಗಿ ತಿಳಿಸಿದರು.
1 ನೇ ಕಾರ್ಮಿಕರ ವೃತ್ತ ನಿರೀಕ್ಷರಾದ ಸಿದ್ದಪ್ಪ ಗುರುತಿನ ಚೀಟಿ ವಿತರಿಸಿ ಮಾತನಾಡಿ, ಎಐಟಿಯೂಸಿ ಸಂಘಟನೆಯವರು ಕುಪ್ಪೂರಿನ ಗ್ರಾಮದ ಸುತ್ತ-ಮುತ್ತಲಿನ ಸುಮಾರು ಕಾರ್ಮಿಕರು ನಮ್ಮ ಇಲಾಖೆಯಲ್ಲಿ ಕಾರ್ಡ್ಗಳನ್ನು ನೋಂದಾಯಿಸಿಕೊಂಡಿದ್ದಾರೆ. ಸಂಘ ಸಂಸ್ಥೆಗಳು ಈ ರೀತಿ ಸಮಾಜ ಸೇವೆ ಮಾಡುವಲ್ಲಿ ನಿರತರಾಗಿರುವುದು ನಿಜಕ್ಕೂ ಸಂತೋಷದ ವಿಷಯ ಸರ್ಕಾರ ಮಾಡುವ ಕೆಲಸವನ್ನು ಎಐಟಿಯೂಸಿ ಸಂಘಟನೆಯವರು ಮಾಡುತ್ತಿದ್ದಾರೆ. ಇವರ ಸಮಾಜ ಸೇವೆ ಇಲ್ಲಿಗೆ ಕೊನೆಗೊಳ್ಳಬಾರದು. ಮುಂದೆಯೂ ಮುಂದುವರೆಯಲಿ ಎಂದು ಆಶಿಸಿದರು.
ಕಟ್ಟಡ ಕಾರ್ಮಿಕರು ನಮ್ಮ ಇಲಾಖೆಯಲ್ಲಿ ಸಿಗುವಂತಹ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಕಾರ್ಮಿಕರಲ್ಲಿ ವಿನಂತಿಸಿದರು.
ಸಮಾರಂಭದಲ್ಲಿ ಹಾಲಿ ಗ್ರಾ.ಪಂ. ಸದಸ್ಯ ಹೊನ್ನಪ್ಪ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯರುಗಳಾದ ರಾಮಣ್ಣ, ಚಂದ್ರಯ್ಯ, ಕೃಷ್ಣಪ್ಪ, ಗೋಪಣ್ಣ, ಶಂಕರಪ್ಪ, ರಂಗಸ್ವಾಮಯ್ಯ, ರಾಮಚಂದ್ರಯ್ಯ, ಶಂಕರ್, ಕಟ್ಟಡ ಕಾರ್ಮಿಕರು, ಕಟ್ಟಡ ಕಾರ್ಮಿಕರ ಸಂಘಟನಾ ಕಾರ್ಯದರ್ಶಿ ಗೌಡರಂಗಪ್ಪ ಊರಿನ ಮುಖಂಡರು ಉಪಸ್ಥಿತರಿದ್ದರು.
ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಿ. ಚಿನ್ನಪ್ಪ ನಿರೂಪಿಸಿದರು, ನಗರ ಸಂಚಾಲಕ ಉಮೇಶ್ ಸ್ವಾಗತಿಸಿ, ಖಜಾಂಚಿ ಚಂದ್ರಶೇಖರ್ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

