'ಅಲೆಮಾರಿಗಳನ್ನು ಮುಖ್ಯವಾಹಿನಿಗೆ ತನ್ನಿ'
ತುಮಕೂರು: ನಿಲ್ಲಲ್ಲು ನೆಲಯಿಲ್ಲದೆ ದಲಿತರಿಗಿಂತಲೂ ಅತಂತ್ರದ ಜೀವನ ನಡೆಸುತ್ತಿರುವ ಅಲೆಮಾರಿ ಸಮುದಾಯವನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಅಕ್ಷರ ಪಡೆದುಕೊಂಡ ಎಲ್ಲ ಸಮುದಾಯಗಳು ಶ್ರಮಿಸಬೇಕಾಗಿದೆ ಎಂದು ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಡಾ.ಎ.ಎಚ್. ರಾಜಾಸಾಬ್ ತಿಳಿಸಿದ್ದಾರೆ.
ನಗರದ ತುಮಕೂರು ವಿವಿ ವಿಜ್ಞಾನ ಕಾಲೇಜಿನ ಸಹಯೋಗದಲ್ಲಿ ಗಿರಿಜನ ಉಪಯೋಜನೆ ಹಾಗೂ ವಿಶೇಷ ಘಟಕ ಯೋಜನೆ ಅಡಿಯಲ್ಲಿ ಅಯೋಜಿಸಿದ್ದ ಅಲೆಮಾರಿ ಬುಡಕಟ್ಟು ಜನಾಂಗದ ಪ್ರಸ್ತುತ ಬಿಕ್ಕಟ್ಟುಗಳು ಮತ್ತು ಸವಾಲುಗಳ ಕುರಿತ ರಾಜ್ಯ ಮಟ್ಟದ ಒಂದು ದಿನ ನಿಲ್ಲದ ಹೆಜ್ಜೆಗಳೊಂದಿಗೆ ನಾವು-ನೀವು ಎಂಬ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ದಲಿತರಿಗೆ ಅಕ್ಷರ ಸಿಕ್ಕ ನಂತರ ಆ ವರ್ಗದ ನೋವು, ನಿಲವುಗಳ ಬಗ್ಗೆ ಸಾಹಿತ್ಯ ಸೃಷ್ಟಿಯಾಗಿ ಹೊಸಶೆಕೆ ಆರಂಭವಾಯಿತು. ಆದರೆ ದಲಿತರಿಗಿಂತಲೂ ಕೆಳಮಟ್ಟದ ಜೀವನ ನಡಸುತ್ತಿರುವ ಅಲೆಮಾರಿಗಳ ಬಗ್ಗೆ ಇದುವರೆಗೂ ಯಾವುದೇ ಸಾಹಿತ್ಯ ಸೃಷ್ಟಿಯಾಗಲಿಲ್ಲ. ಈ ನಿಟ್ಟಿನಲ್ಲಿ ವಿಶ್ವವಿದ್ಯಾಲಯಗಳು, ವಿದ್ಯಾವಂತ ಸಮುದಾಯ ಚಿಂತಿಸಬೇಕಾಗಿದೆ ಎಂದರು.
ಬಹಳ ಹಿಂದಿದೆ: ಅರ್ಥಿಕವಾಗಿ, ಸಾಮಾಜಿಕವಾಗಿ ಅಲೆಮಾರಿ ಬುಡಕಟ್ಟು ಜನಾಂಗದ ಬಹಳ ಹಿಂದುಳಿದಿದೆ. ಜಾಗತೀಕರಣದ ಫಲವಾಗಿ ಅವರ ಕುಲಕಸುಬುಗಳ ಪಾತಾಳಕ್ಕೆ ಕುಸಿದಿವೆ. ಇದು ಅವರ ಸಾಮಾಜಿಕ ಸಂಬಂಧಗಳ ಮೇಲೆ ಅಗಾಧವಾದ ಪರಿಣಾಮವನ್ನು ಬೀರಿದೆ. ಅವರ ಕಸುಬುಗಳ ಬಗ್ಗೆಯೂ ನಾಗರಿಕ ಸಮಾಜ ತಾತ್ಸಾರ ಮನೋಭಾವನೆಯನ್ನು ಹೊಂದಿದೆ. ಚಿಂದಿ ಆಯುವವರು, ಜಾಡುಮಾಲಿಗಳು ಇವರು ಸಮಾಜಕ್ಕೆ ದೊಡ್ಡ ಕೊಡುಗೆ ನೀಡುತ್ತಿದ್ದರೂ ಅವರನ್ನು ನಿರ್ಲಕ್ಷಿಸುತ್ತಲೇ ಬಂದಿದ್ದೇವೆ. ಅವರ ಸಮಸ್ಯೆಗಳೇನು, ಸರಕಾರದ ಸವಲತ್ತುಗಳಾದ ಅಕ್ಷರ ದೊರೆಯುವಂತೆ ಮಾಡಿ ಅವರ ಜೀವನ ಮಟ್ಟವನ್ನು ಸುಧಾರಿಸಬೇಕಾಗಿದೆ. ಬಡುಕಟ್ಟು, ಅಲೆಮಾರಿ ಸಮುದಾಯದಲ್ಲಿರುವ ಕೌಶಲ್ಯಗಳನ್ನು ಗುರುತಿಸಿ ಅವರನ್ನು ಬೆಳಕಿಗೆ ತರುವ ಕೆಲಸ ಆಗಬೇಕಾಗಿದೆ ಎಂದರು.
ಬೀದಿಪಾಲು ಮಾಡಿದೆ: ಅಭಿವೃದ್ಧಿ ಎಂಬುದು ಇಂದು ಹಲವು ಬುಡಕಟ್ಟು ಜನರನ್ನು ಬೀದಿ ಪಾಲು ಮಾಡಿವೆ. ಕಾಡಿನ ಸಣ್ಣ ಪುಟ್ಟ ಉತ್ಪನ್ನಗಳನ್ನು ಬಳಸಿಕೊಂಡು ಬದುಕುತ್ತಿದ್ದ ಜೇನುಕುರುಬರು, ಕಾಡು ಕುರುಬರ ಬದುಕು ಕಾಡುನಾಶದಿಂದ ಪರ್ಯಾಯ ವ್ಯವಸ್ಥೆಯಿಲ್ಲದೆ ಬೀದಿಗೆ ಬಿದ್ದಿದೆ. ಮೀಸಲಾತಿಯ ಅರಿವಿದ್ದವರೂ ಅದನ್ನು ಪಡೆದು ಮುಂದೆ ಬಂದರೆ ಅರಿವಿಲ್ಲದ ಜನತೆ ಬಡವರಾಗಿಯೇ ಉಳಿದಿದ್ದಾರೆ. ಮೀಸಲಾತಿಯ ಸಮಾನಾಂತರ ಹಂಚಿಕೆಯಾದಾಗ ಮಾತ್ರ ಅದರ ಫಲ ಎಲ್ಲರಿಗೂ ದೊರೆಯಲು ಸಾಧ್ಯವೆಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಹೋರಾಟಗಾರ ಚೇಳೂರು ವೆಂಕಟೇಶ್, ಅಕ್ಷರ ಪಡೆದಂತಹ ಪ್ರಗತಿಪರ ಸಾಹಿತಿಗಳು ಚುನಾವಣೆಯ ಸಂದರ್ಭದಲ್ಲಿ ಕೋಟ್ಯಧೀಪತಿಗಳಾದ ಅಭ್ಯರ್ಥಿಗಳಿಗೆ ಪ್ರಚಾರ ನಡೆಸುವ ಮೂಲಕ ತಮ್ಮ ಸ್ವಾಭಿಮಾನವನ್ನು ಅಡವಿಟ್ಟಿದ್ದಾರೆ. ಹೋರಾಟಗಾರರು, ಸಾಹಿತ್ಯಗಳು, ಮಂಗಳಮುಖಿಯರು ಸ್ವರ್ಧಿಸಿರುವಂತಹ ಕ್ಷೇತ್ರಗಳಿಗೆ ಕನಿಷ್ಠ ಸೌಜ್ಯನ್ಯಕ್ಕೂ ಭೇಟಿ ನೀಡಿ ನೈತಿಕ ಬೆಂಬಲ ನೀಡುವಂತಹ ಕೆಲಸ ಮಾಡಿಲ್ಲ. ಇವರು ಯಾರ ಪರವಾಗಿದ್ದಾರೆ ಎಂಬುದು ಇದರಿಂದಲೇ ಅರ್ಥವಾಗುತ್ತದೆ ಎಂದು ಟೀಕಿಸಿದರು.
ಅಕ್ಷರ ಲೋಕವನ್ನೇ ಕಾಣದ ಅಲೆಮಾರಿ ಸಮುದಾಯದ ಜನಗಣತಿ ಆಗುವುದರ ಜೊತೆಗೆ, ಪತ್ಯೇಕ ನಿಗಮ ಸ್ಥಾಪಿಸುವ ಮೂಲಕ ಅವರಿಗೆ ಸರಕಾರದ ಸವಲತ್ತುಗಳು ಸುಲಭವಾಗಿ ದೊರೆಯುವಂತೆ ಮಾಡಬೇಕಾಗಿದೆ ಎಂದರು.
ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್. ದ್ವಾರಕನಾಥ್, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಬಂಜಗೆರೆ ಜಯಪ್ರಕಾಶ್, ಅಲೆಮಾರಿ ಬುಡಕಟ್ಟು ಒಕ್ಕೂಟದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ.ಬಾಲಗುರುಮೂರ್ತಿ, ಅಲೆಮಾರಿ ಸಮುದಾಯದ ಹೋರಾಟಗಾರ್ತಿ ರಾಮಕ್ಕ,
ತುಮಕೂರು ವಿವಿ ವಿಜ್ಞಾನ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ನಾಗಭೂಷಣ್ ಬಗ್ಗನಡು ಮತ್ತಿತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

