ತುಮಕೂರು

ಮತದಾನ ಪ್ರಮಾಣ ಹೆಚ್ಚಳಕ್ಕೆ ಶ್ರಮಿಸಿ

Published On :

ತರಬೇತಿ ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಜಿಪಂ ಸಿಇಒ ತಾಕೀತು
ಕ.ಪ್ರ.ವಾರ್ತೆ ತುಮಕೂರು ಏ.11
ಇದೇ ತಿಂಗಳ 17 ರಂದು ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಮತದಾರರಿಗೆ ಮತದಾನ ಮಾಡುವ ಬಗ್ಗೆ ಅರಿವು ಮೂಡಿಸುವಂತೆ ಜಿಪಂ ಸಿಇಒ ಗೋವಿಂದರಾಜು ಸೂಚಿಸಿದರು.
ಅವರು ತುಮಕೂರು ಗ್ರಾಮಾಂತರ, ಶಿಶು ಅಭಿವೃದ್ಧಿ ಯೋಜನೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 499 ಅಂಗನವಾಡಿ ಕಾರ್ಯಕರ್ತೆಯರಿಗೆ ನಡೆದ ಕ್ಷೇತ್ರಮಟ್ಟದ ಸಭೆಯಲ್ಲಿ ವ್ಯವಸ್ಥಿತ ಮತದಾರರ ಶಿಕ್ಷಣದ ಮೂಲಕ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಯೋಜನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ರಾಜಕೀಯ ಪಕ್ಷಗಳ ಕಾರ್ಯಕರ್ತರು ನೀಡುವ ಯಾವುದೇ ಆಮಿಷಗಳಿಗೆ ಬಲಿಯಾಗದೇ ಮತದಾನವನ್ನು ಮಾಡಬೇಕೆಂಬ ಬಗ್ಗೆ ಸೂಕ್ತ ಅರಿವು ಮೂಡಿಸಲು ತಿಳಿಸಿದರು. ಈ ಬಗ್ಗೆ ತಾಯಂದಿರ ಸಭೆ ಮಾಡಿ ಹಾಗೂ ಸ್ತ್ರೀ ಶಕ್ತಿ ಸಭೆಗಳಲ್ಲಿ ಮಹಿಳೆಯರಿಗೆ ಮತದಾನದ ಬಗ್ಗೆ ಪ್ರತಿಜ್ಞಾವಿಧಿ ಬೋಧಿಸಿ ಲೋಕಸಭಾ ಚುನಾವಣೆಯಲ್ಲಿ ತಪ್ಪದೇ ತಮ್ಮ ಮತವನ್ನು ಚಲಾಯಿಸಬೇಕೆಂದು ತಿಳಿಸಲು ಸೂಚಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಸುಜಾತ ಮಾತನಾಡಿ, ಅಂಗನವಾಡಿ ಕಾರ್ಯಕರ್ತೆಯರಿಗೆ ಸೂಕ್ತವಾಗಿ ಕಾರ್ಯನಿರ್ವಹಿಸಲು ಮತ್ತು ತಾಯಂದಿರರ ಸಭೆ ಕರೆದು ಎಲ್ಲಾ ತಾಯಂದಿರರು, ಸ್ತ್ರೀಶಕ್ತಿ ಮಹಿಳೆಯರಿಗೆ ಪ್ರತಿಜ್ಞಾವಿಧಿ ಬೋಧಿಸಿ ಸಹಿ ಪಡೆಯಬೇಕು ಮತ್ತು ಮನೆ ಭೇಟಿಗಳಲ್ಲಿ ಸಹ ಮತದಾನದ ಬಗ್ಗೆ ಅರಿವು ಮೂಡಿಸಬೇಕು ಎಂದು ತಿಳಿಸಿದರು. ಅಲ್ಲದೇ ಮತದಾನದ ಅವಧಿ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಇದ್ದು ಸಾಕಷ್ಟು ಸಮಯಾವಕಾಶವಿರುವುದರಿಂದ ತಪ್ಪದೇ ಮತದಾನ ಮಾಡಬೇಕೆಂದು ತಿಳಿಸಲು ಸೂಚಿಸಿದರು.
ಸಭೆಯಲ್ಲಿ ಹಾಜರಿದ್ದ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರಿಗೆ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಪ್ರತಿಜ್ಞಾವಿಧಿ ಬೋಧಿಸಿದರು. ಶಿಶು ಅಭಿವೃದ್ಧಿ ಯೋಜನಾಧಿಕರಿಗಳು ಕಾರ್ಯಕ್ರಮಕ್ಕೆ ಅತಿಥಿಗಳನ್ನು ಸ್ವಾಗತಿಸಿದರು. ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ವಂದಿಸಿದರು.
ಮತಗಟ್ಟೆ ಸ್ಥಳಾಂತರ: ಲೋಕಸಭಾ ಸಂಬಂಧ ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಸಂಖ್ಯೆ-141, ಶಾರದ ವಿದ್ಯಾಮಂದಿರ, ರೂಮ್ ನಂ.4, ಗೋಕುಲ ರಸ್ತೆ, ತುಮಕೂರು ಮತಗಟ್ಟೆಯನ್ನು ಕಟ್ಟಡದ ಪುನರ್ ನಿರ್ಮಾಣದ ಮೇರೆಗೆ ಹತ್ತಿರದಲ್ಲಿಯೇ ಇರುವ ಸೇಕ್ರೆಡ್ ಹಾರ್ಟ್ ಪ್ರಿ-ಪ್ರೈಮರಿ ಶಾಲೆ, ಎಸ್.ಎಸ್.ಪುರಂ, ತುಮಕೂರು ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅದರಂತೆ 132-ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ-141 ಮತದಾರರ ಪಟ್ಟಿಯಲ್ಲಿನ ಮತದಾರರು ಸೆಕ್ರೇಡ್ ಹಾರ್ಟ್ ಪ್ರಿ-ಪ್ರೈಮರಿ ಶಾಲೆ, ಎಸ್‌ಎಸ್ ಪುರಂ, ತುಮಕೂರು ಕಟ್ಟಡದಲ್ಲಿನ ಮತಗಟ್ಟೆಯಲ್ಲಿ ಏ.17 ರಂದು ಮತದಾನ ಮಾಡಬೇಕಾಗಿ ಅವರು ಕೋರಿದ್ದಾರೆ.
ಅಂಗಡಿಗಳ ವ್ಯಾಪಾರ-ನಿಬಂರ್ಧ: ತುಮಕೂರು ಲೋಕಸಭಾ ಚುನಾವಣೆ ಸಂಬಂಧ 132-ತುಮಕೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ಏ.17 ರಂದು  ನಡೆಯುವ ಚುನಾವಣೆ ಹಿನ್ನಲೆಯಲ್ಲಿ ಅಂದು ಬೆಳಗ್ಗೆ 7 ರಿಂದ ರಾತ್ರಿ  8 ಗಂಟೆಯವರೆಗೆ ನಗರದ ಎಲ್ಲಾ 35 ವಾರ್ಡ್‌ಗಳ ವ್ಯಾಪ್ತಿಯಲ್ಲಿನ 222 ಮತಗಟ್ಟೆಗಳ ವ್ಯಾಪ್ತಿಯ 100 ಮೀಟರ್ ಸರಹದ್ದಿನ ಒಳಗೆ ಅಂಗಡಿ, ಕಾಫಿ, ಟೀ, ಪಾನೀಯ ಅಂಗಡಿ, ನಂದಿನಿ ಬೂತ್ ಹಾಗೂ ಇತರೆ ಯಾವುದೇ ರೀತಿಯ ಅಂಗಡಿಗಳು ಇದ್ದಲ್ಲಿ, ಚುನಾವಣೆ ದಿನದಂದು ಅಂಗಡಿಗಳನ್ನು ಮುಚ್ಚಲು ನಿರ್ದೇಶಿಸಿದ್ದು, ಅಂದು ವ್ಯಾಪಾರ ಮಾಡದಂತೆ ನಿರ್ಬಂಧಿಸಲಾಗಿದ್ದು, ಸಾರ್ವಜನಿಕರು ಸಹಕರಿಸಬೇಕಾಗಿ ತುಮಕೂರು ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.