ಅಂಬಿ ಮಾತು ನಾಯಕರ ಪಾಲಿಗೆ ಎಚ್ಚರಿಕೆ ಗಂಟೆ
-ಕೆ.ಎನ್. ರವಿ
ಮಂಡ್ಯ: ಸಚಿವ ಅಂಬರೀಷ್ ಈಗ ಪರಿಪಕ್ವ ರಾಜಕಾರಣಿ. ಅಂಬರೀಷ್ ಅವರ ಅನುಭವದ ಮೂಸೆಯಿಂದ ಹೊರ ಬಂದಿರುವ ಮಾತುಗಳನ್ನು ಅರಗಿಸಿಕೊಳ್ಳಲು ರಾಜ್ಯ ಮತ್ತು ಜಿಲ್ಲಾ ಕಾಂಗ್ರೆಸ್‌ನ ಕೆಲವು ನಾಯಕರಿಗೆ ತಿಣುಕಾಟ ನಡೆಸುವ ಸ್ಥಿತಿ ಬಂದರೂ ಬರಬಹುದು. ಪಕ್ಷದ ಕೆಲವು ನಾಯಕರ ಇತ್ತೀಚಿನ ನಡವಳಿಕೆಗಳ ಬಗ್ಗೆ ತಮ್ಮ ಅಸಮಾಧಾನವನ್ನು ಅಂಬರೀಷ್ ಬಹು ಸೂಕ್ಷ್ಮವಾಗಿ ಹೊರ ಹಾಕಿದ್ದಾರೆ ಎನ್ನುವುದಂತೂ ಬಲು ಸ್ಪಷ್ಟವಾಗಿ ಗೊತ್ತಾಗುತ್ತದೆ.
ಎತ್ತು ಏರಿಗೆ, ಎಮ್ಮೆ ನೀರಿಗೆ ಎನ್ನುವ ಸ್ಥಿತಿಯನ್ನು ಎದುರಿಸುತ್ತಿರುವ ಜಿಲ್ಲಾ ಕಾಂಗ್ರೆಸ್‌ನ ಎಲ್ಲಾ ಬಣಗಳ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಿ ಕಾಂಗ್ರೆಸ್ ಎಂಬ ಹಡಗನ್ನು ದಡ ಸೇರಿಸಲು ಹೊರಟಿರುವ ನಾವಿಕ ಕಂ ಜಿಲ್ಲಾ ಉಸ್ತುವಾರಿ ಸಚಿವ ಅಂಬರೀಷ್ ತುಂಬಾ ಗಂಭೀರವಾಗಿಯೂ ಮಾತನಾಡಿದ್ದಾರೆ. ಪರೋಕ್ಷ ಎಚ್ಚರಿಕೆಯನ್ನೂ ನೀಡಿದ್ದಾರೆ. ಅಷ್ಟೇ ಪರಿಣಾಮಕಾರಿಯಾಗಿ ಕಾಂಗ್ರೆಸ್ ಅಭ್ಯರ್ಥಿ ರಮ್ಯಾಳಿಗೆ ಬುದ್ಧಿವಾದವನ್ನೂ ಹೇಳಿದ್ದಾರೆ. ಇದು ಹಿರಿಯರಾಗಿ ಮಾಡುವ ಕೆಲಸವನ್ನು ಅಂಬರೀಷ್ ಮಾಡಿದ್ದಾರೆಂಬ ಮೆಚ್ಚುಗೆ ಮಾತುಗಳು ಕೇಳಿಬಂದಿವೆ.ನಿರ್ಲಕ್ಷ್ಯ ಸಹಿಸುವುದು ಅಸಾಧ್ಯ: ಮಲೇಷ್ಯಾದಿಂದ ನಿನ್ನೆ ಬೆಂಗಳೂರಿಗೆ ಆಗಮಿಸಿದ ನಂತರ, ಮಂಡ್ಯ ಜಿಲ್ಲಾ ಕಾಂಗ್ರೆಸ್‌ನಲ್ಲಿ ಆಗಿರುವ ಬದಲಾವಣೆಗಳು, ನಿರ್ಲಕ್ಷ್ಯಗಳ ಬಗ್ಗೆ ಸಾಕಷ್ಟು ಅವಲೋಕನ ಮಾಡಿಕೊಂಡು ಮತ್ತು ಮಾಹಿತಿ ಇಟ್ಟುಕೊಂಡು ಮಾತನಾಡಿದ್ದಾರೆ. ತಮ್ಮ ಬೆಂಬಲಿಗರಿಗೆ ನೀಡಿರುವ ಸಣ್ಣ, ಪುಟ್ಟ ಕಿರುಕುಳ ಎಂತಹ ಘೋರವಾಗಿತ್ತು ಮತ್ತು ಆ ಪ್ರಮಾಣದ ನಿರ್ಲಕ್ಷ್ಯವನ್ನು ಸಹಿಸಿಕೊಳ್ಳುವುದು ಅಸಾಧ್ಯ ಎನ್ನುವುದು ಅಂಬರೀಷ್ ಮಾತುಗಳ ಒಟ್ಟಾರೆ ಸಂದೇಶದ ಸಾರಾಂಶ. ಅಂಬರೀಷ್ ಹೇಳಿರುವ ಎಲ್ಲಾ ಮಾತುಗಳಲ್ಲಿ ಸಾಕಷ್ಟು ಗೂಡಾರ್ಥಗಳು ಅಡಗಿವೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಗೆಲ್ಲಲೇ ಬೇಕು ಎನ್ನುವ ದಿವ್ಯ ಮಂತ್ರದ ಹೊರತಾಗಿ, ಕಳೆದ ಬಾರಿಯ ರಮ್ಯಾ ಗೆಲವಿಗೆ, ನನ್ನ ಕೊಡುಗೆ ಎಷ್ಟಿತ್ತು ಎಂಬುದನ್ನು ಸ್ಪಷ್ಟವಾಗಿ ಹೇಳಿದ್ದಾರೆ. ಕಳೆದ ಬಾರಿ ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿದ್ದರೂ ಕೂಡ ಆತ ಗೆಲ್ಲುತ್ತಿದ್ದ ಎಂದಿದ್ದಾರೆ ಎಂದರೆ ಈ ಬಾರಿ ಚುನಾವಣೆಯಲ್ಲಿ ಗೆಲವು ಅಷ್ಟು ಸುಲಭದ ಮಾತಲ್ಲ ಎಂಬ ಅರ್ಥ ಬರುವ ಹಾಗೆ ಹೇಳಿದ್ದಾರೆ. ಏಕಾಂಗಿ ಹೋರಾಟ ನಡೆಯುವುದಿಲ್ಲ. ಪಕ್ಷ, ನಾಯಕರು. ಮುಖಂಡರು ಹಾಗೂ ಕಾರ್ಯಕರ್ತರು ಗೆಲವಿಗೆ ಬಹಳ ಮುಖ್ಯ ಎನ್ನುವ ಅಂಬರೀಷ್ ಅವರ ಪರೋಕ್ಷ ತಿಳುವಳಿಕೆ ಮಾತುಗಳನ್ನು ರಮ್ಯಾ ಗಮನಿಸಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

