ತುಮಕೂರು

ಅಂಬೇಡ್ಕರ್‌ರಿಂದ ಮಹಿಳಾ ಸಮಾನತೆ ಪ್ರತಿಪಾದನೆ

Published On :

ತುಮಕೂರು: ಮಹಿಳಾ ಸಮಾನತೆ ಹಾಗೂ ಹಕ್ಕುಗಳಿಗಾಗಿ ಆಗಿನ ಕಾಲದಲ್ಲೇ ಡಾ.ಬಿ.ಆರ್. ಅಂಬೇಡ್ಕರ್ ಹೋರಾಟ ನಡೆಸಿದ್ದರು ಎಂದು ಲೇಖಕಿ ಅನ್ನಪೂರ್ಣ ವೆಂಕಟನಂಜಪ್ಪ ತಿಳಿಸಿದರು.
ವರದಕ್ಷಿಣೆ ವಿರೋಧಿ ವೇದಿಕೆ-ತುಮಕೂರು ನಗರ ಸಾಂತ್ವನ ಕೇಂದ್ರದಿಂದ ಆಯೋಜಿಸಿದ್ದ ಅಂಬೇಡ್ಕರ್ - ಮಹಿಳಾ ಚಿಂತನೆ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮೂಢನಂಬಿಕೆಯ ವಿರುದ್ಧ ಧ್ವನಿಯೆತ್ತದ್ದ ಅಂಬೇಡ್ಕರ್ ಅವರು ಈ ದೇಶದ ಬಡತನದ ಬಗ್ಗೆ ಹಾಗೂ ಅದರ ನಿರ್ಮೂಲನೆ ಬಗ್ಗೆ ಚಿಂತನೆ ಹೊಂದಿದ್ದರು. ಮಹಿಳಾ ಸಮಾನತೆ ಹಾಗೂ ಸ್ವಾತಂತ್ರ್ಯದ ಬಗ್ಗೆ ಒಳ್ಳೆಯ ಪರಿಕಲ್ಪನೆ ಹೊಂದಿದ್ದರು. ಈ ವಿಷಯಗಳಲ್ಲಿ ಸಂವಿಧಾನದಲ್ಲಿ ಅಡಕಗೊಳಿಸುವ ಪ್ರಯತ್ನಗಳು ಸಾಗಿದ್ದು ಹೆಮ್ಮೆಯ ವಿಷಯ ಎಂದರು.
ಶೋಷಿತರು ಮುಖ್ಯ ವಾಹಿನಿಗೆ ಬರಲಿ ಎಂದು ಮೀಸಲಾತಿಗಾಗಿ ಹೋರಾಟಗಳು ನಡೆದಿವೆ. ಆದರೆ ಈ ಮೀಸಲಾತಿಯ ಅರ್ಥ ಇಂದು ಕಳೆದು ಹೋಗುತ್ತಿದೆ. ಮುಂದುವರಿದವರಷ್ಟೇ ಮೀಸಲಾತಿಯ ಸೌಲಭ್ಯ ಪಡೆಯುತ್ತಿದ್ದು, ಅದೇ ವರ್ಗಗಳಲ್ಲಿ ಇರುವ ಶೋಷಿತರಿಗೆ ಇನ್ನೂ ಈ ಸೌಲಭ್ಯ ತಲುಪದೇ ಇರುವುದು ವಿಷಾದನೀಯ ಎಂದರು. ಲೇಖಕಿ ಬಾ.ಹ. ರಮಾಕುಮಾರಿ ಮಾತನಾಡಿ ಹಿಂಸೆಯ ವಿರುದ್ಧ ಪ್ರತಿಪಾದಿಸಿದ ಬುದ್ಧ ಹಾಗೂ ಶೋಷಣೆಯ ವಿರುದ್ಧ ಸಮಾನತೆಗಾಗಿ ಪ್ರತಿಪಾದಿಸಿದ ಅಂಬೇಡ್ಕರ್ ಚಿಂತನೆಗಳು ಹೆಚ್ಚು ಪ್ರಸ್ತುತವಾಗಿವೆ. ಈ ತತ್ವಗಳನ್ನು ಅಳವಡಿಸಿಕೊಂಡರೆ ಸಮಾಜದಲ್ಲಿ ಅಸಮಾನತೆ ನಿರ್ಮೂಲನೆಯಾಗಿ ಉತ್ತಮ ಬಾಂಧವ್ಯ ಮೂಡಲು ಕಾರಣವಾಗುತ್ತವೆ. ಮಾನವೀಯ ಸಂಬಂಧಗಳು ನೆಲೆಸುತ್ತವೆ. ಹಿಂಸೆಯನ್ನು ಮಟ್ಟಹಾಕಿ ಅಹಿಂಸಾ ಪರಮಾಧರ್ಮವನ್ನು ಕಾಣಲು ಸಾಧ್ಯವಾಗುತ್ತದೆ ಎಂದರು. ಸಮಾಜದಲ್ಲಿ ಕೋಮು-ದ್ವೇಷ, ಜಾತಿ ರಾಜಕೀಯ ಹೆಚ್ಚಾಗುತ್ತಿದೆ. ಇದರಿಂದಾಗಿ ಮಾನವ ಧರ್ಮ ಕುಸಿದು ಹೋಗುವ ಅಪಾಯದಲ್ಲಿದೆ ಎಂದರು.
ಜಾಗೃತಿ ಕಾರ್ಯಕ್ರಮಕ್ಕೆ ತುಮಕೂರು ವಿ.ವಿ. ಮಾಜಿ ಅಕಾಡಮಿಕ್ ಕೌನ್ಸಿಲ್ ಸದಸ್ಯೆ ಸಿ.ಎಲ್. ಸುನಂದಮ್ಮ, ವಕೀಲರಾದ ನರಸಿಂಹಯ್ಯ, ವಿವಿಧ ಮುಖಂಡರಾದ ಲಲಿತ ಮಲ್ಲಪ್ಪ, ಟಿ.ಆರ್. ಅನಸೂಯ, ಸಾಂತ್ವನ ಕೇಂದ್ರದ ಅಂಬುಜಾಕ್ಷಿ, ನಂಜುಂಡಪ್ಪ, ಪಾರ್ವತಮ್ಮ ಉಪಸ್ಥಿತರಿದ್ದರು. ಸಾ.ಚಿ.ರಾಜಕುಮಾರ್ ನಿರೂಪಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.