ದೇವದುರ್ಗ ಅರಣ್ಯಕ್ಕೆ ಕಾಡ್ಗಿಚ್ಚಿನ ಭೀತಿ
ಸಸ್ಯ ಸಂಕುಲ, ಪ್ರಾಣಿ ಸಂಕುಲ, ಗಿಡ ಮೂಲಿಕೆಯಿಂದ ತುಂಬಿರುವ ಕಾಡು
-ಉಗಮ ಶ್ರೀನಿವಾಸ್
ಕ.ಪ್ರ.ವಾರ್ತೆ ತುಮಕೂರು ಏ.20
ಮತ್ತೊಂದು ಬೇಸಿಗೆ ಎದುರಿಗೆ ಬಂದಿದ್ದು ಕಾಡ್ಗಿಚ್ಚಿನ ಭೀತಿಯಲ್ಲಿ ದೇವರಾಯನದುರ್ಗ ರಕ್ಷಿತ ಅರಣ್ಯ ಇದೆ.
42.24 ಚದರ ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಹರಡಿಕೊಂಡಿರುವ ವಿಶಿಷ್ಟ ಅರಣ್ಯ ಪ್ರದೇಶವೆಂದೇ ಖ್ಯಾತಿ ಗಳಿಸಿರುವ ದೇವರಾಯನದುರ್ಗದಲ್ಲಿ ರಾಮದೇವರಬಟ್ಟೆ, ಚಿನ್ನಿಗ ಬೆಟ್ಟ, ಓಲಗದವರ ಬೆಟ್ಟದಲ್ಲಿ ಬೇಸಿಗೆಯಲ್ಲಿ ಕಾಡ್ಗಿಚ್ಚ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ನೈಸರ್ಗಿಕವಾಗಿ ಕಾಡ್ಗಿಚ್ಚು ಸಂಭವಿಸಿದರೆ ಬಹಳಷ್ಟು ಸಲ ಬೆಂಕಿ ಹಾಕಿಯೇ ಕಾಡನ್ನು ನಾಶಮಾಡಲಾಗುತ್ತಿದೆ.
ಈ ವಿಶಿಷ್ಟ ಅರಣ್ಯ ಪ್ರದೇಶದಲ್ಲಿ ಅಪರೂಪದ ಪ್ರಾಣಿ ಸಂಕುಲ ಹಾಗೂ ಸಸ್ಯ ಸಂಕುಲ ವ್ಯಾಪಕವಾಗಿದೆ. ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಸಿಗುವ ಅಪರೂಪದ ಸಸ್ಯ ಸಂಕುಲ ಕೂಡ ಈ ಭಾಗದಲ್ಲಿದೆ.
ಇನ್ನು ಅಪರೂಪದ ಪಕ್ಷಿ ಸಂಕುಲ, ಪ್ರಾಣಿ ಪ್ರಬೇಧ, ಥರೇವಾರಿ ಉರಗಗಳು ಈ ಭಾಗದಲ್ಲಿದೆ. ಚಿರತೆ, ನರಿ, ಕರಡಿ, ಕಾಡು ಹಂದಿ, ಚಿಪ್ಪು ಹಂದಿ, ಜಿಂಕೆ ಹಾಗೂ ಥರೇವಾರಿ ಪಕ್ಷಿಗಳು ಈ ಭಾಗದಲ್ಲಿ ಇದೆ. ಹಾಗೆಯೇ ಅಪರೂಪದ ಔಷಧೀಯ ಸಸ್ಯಗಳು ಕೂಡ ಇಲ್ಲಿದೆ. ಈ ಹಿನ್ನೆಲೆಯಲ್ಲಿ ಈ ಅರಣ್ಯ ರಕ್ಷಿಸಿಕೊಳ್ಳಬೇಕಾಗಿದೆ.
ಕಾಡ್ಗಿಚ್ಚು ಮಾಮೂಲು: ನೈಸರ್ಗಿಕವಾಗಿ ಕಾಡ್ಗಿಚ್ಚು ಮಾಮೂಲಾಗಿಯೇ ಇರಬಹುದು. ಆದರೆ ಬಹಳಷ್ಟು ಸಲ
ಬೇಜವಾಬ್ದಾರಿಯಿಂದ ಕಾಡಿಗೆ ಬೆಂಕಿ ಬಿದ್ದ ಉದಾಹರಣೆಗಳು ಸಾಕಷ್ಟಿವೆ. 42.24 ಚೆದುರ ಕಿ.ಲೋ ವ್ಯಾಪ್ತಿಯಲ್ಲಿ ಹರಡಿಕೊಂಡಿರುವ ಈ ಅರಣ್ಯವನ್ನು ಕಾಯಲು ಇಲಾಖೆಯಲ್ಲಿ ಸಿಬ್ಬಂದಿಯೇ ಇಲ್ಲ. ಹೀಗಾಗಿ ಈ ಕಾಡನ್ನು ರಕ್ಷಿಸುವುದು ಹೇಗೆ ಎಂಬುದು ಇಲಾಖೆಯರ ದೂರಾಗಿದೆ.
ಪ್ರವಾಸಿ ತಾಣ ಮಾಡಲು ಇದು ಯೋಗ್ಯ: ತುಮಕೂರು ಜಿಲ್ಲೆಯನ್ನು ಪ್ರಮುಖ ಪ್ರವಾಸಿ ತಾಣವನ್ನಾಗಿ ರೂಪಿಸಲು ಜಿಲ್ಲಾಡಳಿತ ಯೋಜಿಸಿತ್ತು. ಆಗ ಅವರ ಗಮನಕ್ಕೆ ಮೊದಲು ಬಂದಿದ್ದೇ ದೇವರಾಯನದುರ್ಗ ಹಾಗೂ ಏಕಶಿಲಾ ಬೆಟ್ಟ. ಏಕಶಿಲಾ ಬೆಟ್ಟಕ್ಕೆ ರೋಪ್ ವೇ ಹಾಕುವುದು, ಮತ್ತು ದೇವರಾಯನದುರ್ಗವನ್ನು ಅಭಿವೃದ್ಧಿಪಡಿಸುವುದಾಗಿತ್ತು. ಆದರೆ ಅದ್ಯಾಕೋ ಈ ಯೋಜನೆ ಆಮೆ ನಡಿಗೆಯಲ್ಲಿ ಸಾಗುತ್ತಿದೆ.
13 ಕಿ.ಮೀ ದೂರ: ತುಮಕೂರಿನಿಂದ ದೇವರಾಯನದುರ್ಗ ಕೇವಲ 13 ಕಿ.ಮೀ. ದೂರವಿದೆ. ಆಧ್ಯಾತ್ಮ ಕೇಂದ್ರವೂ ಆಗಿರುವ ದೇವರಾಯನದುರ್ಗದಲ್ಲಿ ಕಣ್ಮನ ಸೆಳೆಯುವ ಕಾಡಿದೆ. ಈ ಕಾಡನ್ನು ಉಳಿಸಿ ಸಂರಕ್ಷಿಸಿಕೊಳ್ಳಬೇಕಾದ ಜವಾಬ್ದಾರಿ ಇದೆ.
ಕಳವು: ಒಂದೆಡೆ ಕಾಡ್ಗಿಚ್ಚಿನಿಂದ ಕಾಡು ನಾಶವಾಗುತ್ತಿದ್ದರೆ ಮತ್ತೊಂದೆಡೆ ನಾಟ ಕಳವು ಕೂಡ ಅವ್ಯಾಹತವಾಗಿ ನಡೆಯುತ್ತಿದೆ. ಇದನ್ನು ತಪ್ಪಿಸಬೇಕಾದ ಅನಿವಾರ್ಯತೆ ಇದೆ. ಕಾಡನ್ನು ಕಾಯಲು ಸಿಬ್ಬಂದಿ ಇಲ್ಲದೇ ಇರುವುದು ಕೂಡ ದೊಡ್ಡ ತಲೆ ನೋವಾಗಿದೆ. ಈಗಾಗಲೇ ಕಾಡು ನಾಶವಾಗುತ್ತಿರುವುದರಿಂದ ಕಾಡು ಪ್ರಾಣಿಗಳು ಈಗಾಗಲೇ ಕಾಡಂಚಿನ ಊರುಗಳಿಗೆ ಬರುತ್ತಿರುವುದು ಮಾಮೂಲಾಗಿದೆ. ಕರಡಿ, ಹಂದಿ, ಚಿರತೆ ಕೂಡ ನಗರಕ್ಕೆ ಬರುವುದು ಸಾಮಾನ್ಯವಾಗಿದೆ.
ಕಾಡು ಕಾಪಾಡಬೇಕಾಗಿದೆ: ತುಮಕೂರಿನ ಕೂಗಳತೆ ದೂರದಲ್ಲಿರುವ ಈ ಅರಣ್ಯವನ್ನು ಉಳಿಸಕೊಳ್ಳಬೇಕು ಎಂಬ ಕೂಗು ಈಗ ಎದ್ದಿದೆ. ಅಪರೂಪದ ಸಸ್ಯ ಸಂಕುಲ, ಮತ್ತು ಪ್ರಾಣಿ ಪ್ರಭೇದ ಮತ್ತು ಉರಗಗಳು ಇರುವ ಈ ಕಾಡಿಗೆ ಸದ್ಯಕ್ಕೆ ಇರುವ ಏಕೈಕ ಭಯವೆಂದರೆ ಕಾಡ್ಗಿಚ್ಚಿನದ್ದು. ನೈಸರ್ಗಿಕವಾದ ಕಾಡ್ಗಿಚ್ಚು ಮತ್ತು ಅರಣ್ಯಕ್ಕೆ ಬರುವ ಕೆಲವರಿಂದ ಕಾಡಿಗೆ ಬೆಂಕಿ ಬೀಳುತ್ತಿದೆ. ಹೀಗಾಗಿ ಸರ್ಕಾರ ದೇವರಾಯನದುರ್ಗ ಅರಣ್ಯ ಪ್ರದೇಶಕ್ಕೆ ಸಿಬ್ಬಂದಿ ನೇಮಿಸಿ ಈ ಅರಣ್ಯವನ್ನು ಉಳಿಸಿ ಬೆಳೆಸಬೇಕು ಎಂಬುದು ಪರಿಸರ ಪ್ರೇಮಿಗಳ ಆಗ್ರಹವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

