ನಾಯಿಗಳ ದಾಳಿಗೆ ಮತ್ತೆ ಕುರಿಗಳ ಬಲಿ
ತುರುವೇಕೆರೆ: ತಾಲೂಕಿನ ಮುನಿಯೂರಿನಲ್ಲಿ ನಾಯಿಗಳ ದಾಳಿಗೆ ಸಿಲುಕಿ 4 ಕುರಿಗಳು ಪ್ರಾಣ ಕಳೆದುಕೊಂಡ ಘಟನೆ ಮರೆಯುವ ಮುನ್ನವೇ ದಬ್ಬೇಘಟ್ಟ ಹೋಬಳಿಯ ಬಡಗರಹಳ್ಳಿಯಲ್ಲಿ ನಾಯಿಗಳ ದಾಳಿಗೆ ಸಿಲುಕಿ 11 ಕುರಿಗಳು ಮೃತಪಟ್ಟಿರುವ ದಾರುಣ ಘಟನೆ ವರದಿಯಾಗಿದೆ.
ಗ್ರಾಮದ ಮುರುಳಿಕೃಷ್ಣ ಎಂಬುವವರು ತಮ್ಮ ಜಮೀನಿನಲ್ಲಿ 20 ಕುರಿಗಳನ್ನು ಸಾಕಿದ್ದರು. ಭಾನುವಾರ ಬೆಳಗಿನ ಜಾವ ಸುಮಾರು 6 ಗಂಟೆಯ ವೇಳೆಗೆ ಜಮೀನಿಗೆ ದಾಳಿ ಮಾಡಿದ ಬೀದಿ ನಾಯಿಗಳ ದಂಡು ರೊಪ್ಪದಲ್ಲಿ ಕೂಡಿ ಹಾಕಿದ್ದ ಕುರಿಗಳ ಮೇಲೆ ದಾಳಿ ಮಾಡಿವೆ. ನಾಯಿಗಳ ಆರ್ಭಟಕ್ಕೆ ನಲುಗಿದ ಹಲವಾರು ಕುರಿಗಳು ಜೀವ ಉಳಿಸಿಕೊಳ್ಳಲು ಅಲ್ಲಿಂದ ಪರಾರಿಯಾಗಲು ಪ್ರಯತ್ನಿಸಿದರೂ ಸಹ ಬಿಡದೆ ಕಚ್ಚಿ ಸಾಯಿಸಿವೆ. ಕೆಲವು ಕುರಿಗಳು ಓಡಿ ಹೋದರೂ ಬಿಡದೆ ಬೇಟೆಯಾಡಿರುವ ನಾಯಿಗಳು ಕುರಿಗಳನ್ನು ಕೊಂದು ಹಾಕಿವೆ. ಜಮೀನಿನಿಂದ ಸುಮಾರು ನೂರರಿಂದ ಇನ್ನೂರು ಮೀಟರ್ ದೂರದವರೆಗೂ ಕುರಿಗಳನ್ನು ನಾಯಿಗಳು
ಬೇಟೆಯಾಡಿವೆ. ಸಿಕ್ಕ ಸಿಕ್ಕ ಕಡೆ ಕುರಿಗಳ ಕಳೇಬರಗಳು ಪತ್ತೆಯಾಗಿದೆ. ಇಪ್ಪತ್ತು ಕುರಿಗಳಲ್ಲಿ 11 ಕುರಿಗಳು ಸತ್ತು ಬಿದ್ದಿದ್ದರೆ ಉಳಿದ 9 ಕುರಿಗಳ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಅವುಗಳನ್ನು ನಾಯಿಗಳು ಎಳೆದೊಯ್ದು ತಿಂದು ಹಾಕಿದೆಯೋ, ಅಥವಾ ಸಾಯಿಸಿ ಪೊದೆಗಳಲ್ಲಿ ಎಸೆದಿದೆವೆಯೋ ಅಥವಾ ಕುರಿಗಳು ಬೇರೆಲ್ಲಾದರೂ ಓಡಿ ಹೋಗಿವೆಯೇ ಎಂದು ಗೊತ್ತಾಗಿಲ್ಲ.
ದೊಣ್ಣೆ ಹಿಡಿದುಬಂದ ಜನ: ಭಾನುವಾರ ಬೆಳಗ್ಗೆ ಮುರುಳಿ ಕೃಷ್ಣ ಅವರ ತಾಯಿ ಜಯಮ್ಮ ಎಂದಿನಂತೆ ಜಮೀನಿನ ಕಡೆ ಬರುವಾಗ ನಾಯಿಗಳು ಕುರಿಗಳ ಮೇಲೆ ದಾಳಿ ಮಾಡುವುದನ್ನು ಕಣ್ಣಾರೆ ಕಂಡಿದ್ದಾರೆ. ಅಲ್ಲದೇ ನಾಯಿಗಳನ್ನು ಓಡಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ. ಜೀವಭಯದಿಂದ ಜಯಮ್ಮ ಗ್ರಾಮದೊಳಗೆ ಬಂದು ನಡೆದ ಸಂಗತಿಯನ್ನು ಜನರಿಗೆ ತಿಳಿಸಿದರು. ಗ್ರಾಮದ ಹಲವಾರು ಯುವಕರು ದೊಣ್ಣೆಗಳನ್ನು ಹಿಡಿದು ಬಂದಾಗಲೇ ನಾಯಿಗಳು ಓಡಿಹೋದವು ಎಂದು ಹೇಳಲಾಗಿದೆ. ಜಮೀನಿನ ಸನಿಹವೇ ಇರುವ ಹೇಮಾವತಿ ನಾಲಾ ಕಾಲುವೆಯ ಒಳಗೆ ಐದಾರು ಕುರಿಗಳನ್ನು ನಾಯಿ ಸಾಯಿಸಿ ಹಾಕಿದ್ದು ಕಂಡುಬಂತು. ಗ್ರಾಮಸ್ಥರು ನಾಯಿಗಳ ಹಾವಳಿಯಿಂದ ಭಯಭೀತರಾಗಿದ್ದಾರೆ.
ಸೂಕ್ತ ಪರಿಹಾರಕ್ಕೆ ಒತ್ತಾಯ: ಕುರಿ ಕಳೆದುಕೊಂಡಿರುವ ಮುರುಳಿ ಕೃಷ್ಣ ಅವರ ಕುಟುಂಬ ಇದರ ಆದಾಯದಲ್ಲೇ ಜೀವನ ನಿರ್ವಹಣೆ ಮಾಡುತ್ತಿದೆ.11 ಕುರಿಗಳಿಂದ ಸುಮಾರು 1 ಲಕ್ಷ ರು.ಗಳ ನಷ್ಟ ಸಂಭವಿಸಿದೆ. ಆದ್ದರಿಂದ ಸರ್ಕಾರ ಕೂಡಲೇ ಮುರುಳಿ ಕೃಷ್ಣ ಅವರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ತ್ಯಾಗರಾಜು ಒತ್ತಾಯಿಸಿದ್ದಾರೆ. ಗ್ರಾಮದ ಮುಖಂಡರಾದ ಶತೃಘ್ನೇಗೌಡ, ಚಂದ್ರು, ತಿಮ್ಮೇಗೌಡ, ನಾಗೇಂದ್ರ, ಶಂಭಣ್ಣ ಹಾಗೂ ಬೋರೇಗೌಡ ಮತ್ತಿತರು ಇದ್ದರು.
ಓಡಾಡುವುದೇ ಕಷ್ಟ
ಇದುವರೆಗೂ ಚಿರತೆಯ ಹಾವಳಿ ಇತ್ತು. ಈಗ ಗ್ರಾಮದೊಳಗಿನ ನಾಯಿಗಳೇ ಕುರಿ ಬೇಟೆಯಾಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ ಎಂದು ಹೇಳುವ ಗ್ರಾಮ ಪಂಚಾಯ್ತಿ ಸದಸ್ಯರೂ ಹಾಗೂ ಗ್ರಾಮದ ಮುಖಂಡರೂ ಆದ ತ್ಯಾಗರಾಜು, ನಾಯಿಗಳ ಹಾವಳಿ ಮಿತಿ ಮೀರಿದೆ. ಜನರು ಓಡಾಡುವುದೇ ಕಷ್ಟದಾಯಕವಾಗಿದೆ. ಕೂಡಲೇ ಗ್ರಾಮ ಪಂಚಾಯ್ತಿಯವರು ನಾಯಿಗಳನ್ನು ಹಿಡಿಸುವ ಪ್ರಯತ್ನ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

