ವೀರಶೈವ ಧರ್ಮ ಸುಂದರ: ಜಗದ್ಗುರು ರಂಭಾಪುರಿ ಶ್ರೀ
ಚಿಕ್ಕನಾಯಕನಹಳ್ಳಿ: ಬಾಳ ಬಿಸಿಲಲ್ಲಿ ಬಳಲಿ ಬಂದಿಹ ಪಥಿಕನಿಗೆ ಧರ್ಮದ ನೆರಳಿನ ಆಸರೆ, ಗುರು ನೆನೆಯುವುದೊಂದೇ ಮುಕ್ತಿ ಮಾರ್ಗ ಎಂದು ರಂಭಾಪುರಿ ಶ್ರೀಗಳು ನುಡಿದರು.
ಅವರು ಬುಧವಾರ ಕುಪ್ಪೂರು ಗದ್ದಿಗೆ ಮಠದಲ್ಲಿ ಹಮ್ಮಿಕೊಂಡಿದ್ದ ಗುರುಕಾರುಣ್ಯ ಧಾರ್ಮಿಕ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡುತ್ತದ್ದ ಅವರು ಶ್ರೀಗಳ ಕತೃತ್ವ ಶಕ್ತಿ ಅಪಾರ. ಲಿಂಗೈಕ್ಯ ಶ್ರೀಗಳ ಪೂಜಾಫಲದಿಂದ ಮಠ ಸಮಾಜದಲ್ಲಿ ವಟವೃಕ್ಷದಂತೆ ಬೆಳೆಯುತ್ತಿದೆ. ಇಲ್ಲಿ ಧರ್ಮ, ಪರಂಪರೆ, ಆಚಾರವಿಚಾರಗಳಿಗೆ ಆದ್ಯತೆ ನೀಡಿದ್ದಾರೆ. ನಮ್ಮ ಪರಂಪರೆ ಉಳಿಯಲು ಮಠಗಳು ಮನೆಗೆ ಗೋಡೆ, ತೋಟಕ್ಕೆ ಬೇಲಿಯಿದ್ದ ಹಾಗೆ ರಕ್ಷಾಕವಚವಾಗಿದೆ. ವೀರಶೈವ ಧರ್ಮ ಎಲ್ಲರನ್ನು ಸ್ವೀಕರಿಸುತ್ತದೆ. ಎಲ್ಲರನ್ನು ಪ್ರೀತಿಸುತ್ತದೆ. ಧರ್ಮಸ್ಥಾಪನೆಗಾಗಿ ರೇಣುಕರು ಆಸೇತು ಹಿಮಾಲಯದಿಂದ ಕನ್ಯಾಕುಮಾರಿಯವರಗೆ ಸಂಚಾರ ಮಾಡಿದರು. ಈ ಕಾರಣಕ್ಕಾಗಿ ರಾಷ್ಟ್ರದಲ್ಲಿರುವ ಪಂಚಪೀಠಗಳು ರಾಷ್ಟ್ರೀಯ ಪೀಠಗಳೆಂಬ ಮನ್ನಣೆಗೆ ಪಾತ್ರವಾಗಿವೆ. ಧರ್ಮ ಜಾತಿ ಮಧ್ಯೆ ಸಂಘರ್ಷಗಳಾಗುತ್ತಿರುವ ಸಂದರ್ಭದಲ್ಲಿ ಮಠಗಳು ಜಾಗೃತಿ ಮೂಡಿಸುವ ಕೆಲಸದಲ್ಲಿ
ನಿರತವಾಗಿವೆ. ಧರ್ಮವೆಂಬುದು ಬದುಕಿನ ಆಚರಣೆಯೇ ಹೊರತು, ಜಾತಿ ಸೂಚಕವಲ್ಲ. ಮಠಗಳು ಧರ್ಮದ ಕಾವಲು ಭಟರ ಕೆಲಸ ಮಾಡುತ್ತಿದ್ದು, ಸಮಾಜ ದಿಕ್ಕು ತಪ್ಪಿದ ಕಾಲಘಟ್ಟದಲ್ಲಿ ಸರಿದಾರಿಗೆ ತರುವ ಕೆಲಸವನ್ನು ಕಾಲಕಾಲಕ್ಕೆ ಮಾಡುತ್ತಾ ಬಂದಿವೆ. ಸತ್ಯವೇ ಧರ್ಮದರಕ್ಷಾ ಕವಚ, ಅದನ್ನು ಕಳಚಿದರೆ ಧರ್ಮವೆಂಬ ಕಾಯಕ್ಕೆ ಆಪತ್ತು. ಧರ್ಮ ಮತ್ತು ಧಾರ್ಮಿಕ ಕಾರ್ಯಕ್ರಮಗಳು ಉತ್ತರೋತ್ತರವಾಗಿ ಬೆಳೆಯುತ್ತಿರುವ ವೀರಶೈವ ಧರ್ಮದ ಉಸಿರಾಗಲಿ. ಇಂದು ಇಲ್ಲಿನ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದ ನಮ್ಮ ಯೋಗಾಯೋಗವೆಂದು ನುಡಿದರು.
ಧರ್ಮ ವಿರೋಧಿಗಳು: ಕುಪ್ಪೂರು ಗದ್ದಿಗೆ ಮಠದ ಡಾ. ಯತೀಶ್ವರ ಶಿವಾಚಾರ್ಯ ಮಹಾಸ್ವಾಮೀಜಿಯವರು ಮಾತನಾಡಿ ರಂಬಾಪುರಿ ಶ್ರೀಗಳ ಅಡ್ಡಪಲ್ಲಕ್ಕಿಗೆ ಅಡ್ಡಿಪಡಿಸಿದ ಕುತ್ಸಿತ ಮನಸುಗಳು ಧರ್ಮವಿರೋಧಿಗಳು. ಆಚಾರವಿಲ್ಲದ ನಾಲಿಗೆಗಳಿಂದ ವಿಕೃತ ಹೇಳಿಕೆಗಳನ್ನು ನೀಡಿ ಸಮಾಜದ ಸ್ವಾಸ್ಥ್ಯ ಕದಡುವವರ ವಿರುದ್ಧ ವೀರಶೈವ ಸಮಾಜದ ಎದ್ದು ನಿಲ್ಲಬೇಕಿದೆ. ಮುಂಬರುವ ದಸರಾ ಸಂದರ್ಭದಲ್ಲಿ ಅರಸೀಕೆರೆಯಲ್ಲಿ ಜಗದ್ಗುರು ರಂಭಾಪುರಿಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ ಮಾಡಿಯೇ ತೀರುತ್ತೇವೆ. ಯಾವ ಶಕ್ತಿ ಅಡ್ಡಬಂದರೂ ಅಂಜುವುದಿಲ್ಲ. ವೀರಶೈವ ಧರ್ಮ ಹಿಮಾಲಯದಷ್ಟು ಎತ್ತರ, ಸಾಗರದಷ್ಟು ವಿಶಾಲ. ಅಂತಹ ಧರ್ಮದ ಆಚರಣೆಯಲ್ಲಿ ಮೂರನೆಯವರು ಮೂಗು ತೂರಿಸುವ ಕಾರ್ಯ ವಿವೇಕದ್ದಲ್ಲ. ಯಾವುದು ತಪ್ಪು ಯಾವುದು ಸರಿ ಎಂಬುದನ್ನು ನಿರ್ಧರಿಸುವಷ್ಟು ವಿವೇಚನೆ ನಮ್ಮ ಧರ್ಮ ಪೀಠಗಳಿಗಿದೆ ಎಂದು ಜೇವರ್ಗಿ ಘಟನೆಯ ಹಿನ್ನೆಲೆಯಲ್ಲಿ ನುಡಿದರು..
ಸಿದ್ದರಬೆಟ್ಟದ ವೀರಭದ್ರ ಸ್ವಾಮೀಜಿ, ಟಿ.ಎಸ್.ಉಮಾಶಂಕರ್, ಶಿವರಾಜ್, ಸಾಹಿತಿ ವಾಣಿಚಂದ್ರಯ್ಯನಾಯ್ಡು, ಮಾಜಿ ಶಾಸಕ ವೀರಭದ್ರಪ್ಪ, ಈಶ್ವರಮೂರ್ತಿ ಮುಂತಾದವರಿದ್ದರು. ಈ ಸಂದರ್ಭದಲ್ಲಿ ಬೆಳ್ಳಿಪಲ್ಲಕ್ಕಿಗೆ ಬೆಳ್ಳಿದಾನ ಮಾಡಿದ ದಾನಿಗಳನ್ನು ಸನ್ಮಾನಿಸಲಾಯಿತು. ಶಾಂತವೀರಪ್ಪ ಸ್ವಾಗತಿಸಿ, ದಯಾಶಂಕರ್ ನಿರೂಪಿಸಿದರು.
21ನೇ ಶತಮಾನ ಭಾರತದದ್ದಾಗಲಿ
ಚಿಕ್ಕನಾಯಕನಹಳ್ಳಿ: 21ನೇ ಶತಮಾನ ಭಾರತದ್ದಾಗಿರಬೇಕೆಂಬ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಬಯಕೆ ಈಡೇರಬೇಕಾದರೆ ರಾಷ್ಟ್ರದಲ್ಲಿ ಧರ್ಮಜಾಗೃತಿಯಾಗಬೇಕೆಂದು ತಮ್ಮಡೀಹಳ್ಳಿ ಪೀಠಾಧ್ಯಕ್ಷ ಡಾ.ಅಭಿನವ ಮಲ್ಲಿಕಾರ್ಜುನ ಸ್ವಾಮೀಜಿಯವರು ನುಡಿದರು.
ಅವರು ಕುಪ್ಪೂರುಗದ್ದಿಗೆ ಮಠದಲ್ಲಿ ಏರ್ಪಡಿಸಿದ್ದ ಗುರುಕಾರಣ್ಯ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಸಮಾಜದಲ್ಲಿ ಮಾನವ ಧರ್ಮಕ್ಕೆ ಜಯವಾಗಲಿ ಎಂದು ಸಾರಿ ಹೇಳಿದ್ದು ವೀರಶೈವ ಧರ್ಮ ಮಾತ್ರ. ತ್ಯಾಗ, ಸೇವೆ ಮತ್ತು ಸಂಸ್ಕಾರಗಳಿಂದ ಖ್ಯಾತವಾಗಿದೆ. 12ನೇ ಶತಮಾನದ ಬಸವಾದಿ ಪ್ರಮಥರು ನಮ್ಮ ಹಿಂದು ಸಂಸ್ಕೃತಿಯನ್ನು ಅಡಿಯಿಂದ ಗಡಿಯವರೆಗು, ಹಗಲು ರಾತ್ರಿಯೆನ್ನದೆ ಧಾರೆಯೆರೆದಿ ಎಂದರು. ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರ ಬೆಟ್ಟದ ಶ್ರೀಗಳು ಪಂಚಭೂತಗಳಿಂದ ಸೃಷ್ಟಿಯಾದ ಸೃಷ್ಟಿಯನ್ನು ಪೂಜಿಸಲು ಸಾಧ್ಯವಾಗದ ಕಾರಣ ಪಂಚಪೀಠಗಳನ್ನು ಪೂಜಿಸುವ ಅವಕಾಶವನ್ನು ಭಕ್ತರಿಗೆ ಒದಗಿ ಬಂದಿದೆ ಎಂದರು. ರಂಭಾಪುರಿ ಜಗದ್ಗುರುಗಳು ಸಾನಿಧ್ಯ ವಹಿಸಿದ್ದರು. ಟಿ.ಎಸ್.ಉಮಾಶಂಕರ್, ಎಪಿಎಂಸಿ ಅಧ್ಯಕ್ಷಶಿವರಾಜ್, ಈಶ್ವರ ಮೂರ್ತಿಮುಂತಾದವರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

