ತುಮಕೂರು

ಮಾನವೀಯತೆ ಜೊತೆ ಶಿಕ್ಷಕರಿಗೆ ಹೃದಯವಂತಿಕೆ ಅಗತ್ಯ

Published On :

ತಿಪಟೂರು: ಶಿಕ್ಷಕರು ಕುಸಿಯುತ್ತಿರುವ ಶಿಕ್ಷಣದ ಗುಣಮಟ್ಟವನ್ನು ಉತ್ತಮಪಡಿಸಲು, ವಿದ್ಯಾರ್ಥಿಗಳಲ್ಲಿ  ಮಾನವೀಯ ಮೌಲ್ಯಗಳನ್ನು ಹಾಗೂ ಬುದ್ಧಿವಂತಿಕೆಯ ಜೊತೆಯಲ್ಲಿ ಹೃದಯವಂತಿಕೆ ಬಿತ್ತಿ ಬೆಳೆಸಲು ಶಕ್ತಿಮೀರಿ ಶ್ರಮಿಸಬೇಕು. ಇದಕ್ಕೆ ಪೂರಕವಾಗಿ ವಿದ್ಯಾರ್ಥಿ, ಪಾಲಕ, ಪೋಷಕ ಹಾಗೂ ಸಮಾಜ ಪೂರ್ಣ ಪ್ರಮಾಣದಲ್ಲಿ ನೆರವಾಗಬೇಕೆಂದು ಕೆರೆಗೋಡಿ-ರಂಗಾಪುರ ಸುಕ್ಷೇತ್ರಾಧ್ಯಕ್ಷ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಕೆರೆಗೋಡಿ-ರಂಗಾಪುರ ಸುಕ್ಷೇತ್ರದಲ್ಲಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬೆಂಗಳೂರು ಹಾಗೂ ತುಮಕೂರು ಜಿಲ್ಲಾ ಶಾಖೆ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮ ಹಾಗೂ ಜಿಲ್ಲಾ ಮಟ್ಟದ ಶೈಕ್ಷಣಿಕ ಸಮ್ಮೇಳನ, ಆರ್.ಟಿ.ಇ.ಪುನಶ್ಚೇತನ ಕಾರ್ಯಾಗಾರದಲ್ಲಿ ಗುರುವಂದನೆ ಸ್ವೀಕರಿಸಿ ಆಶೀರ್ವಚನ ನೀಡಿದ ಶ್ರೀಗಳು ಶಿಕ್ಷಣ ಬರೀ ನಾಲ್ಕು ಗೋಡೆಗಳ ಮಧ್ಯೆ ಬರೆಯುವುದಲ್ಲ. ಬದಲಾಗಿ ಸಮಾಜಮುಖಿ ಸೇವೆ, ಸಾಮಾಜಿಕ ಚಿಂತನೆಗಳನ್ನು ಮಕ್ಕಳಲ್ಲಿ ಮೂಡಿಸುವ ಮೂಲಕ ಅವರನ್ನು ದೇಶದ ಅಭಿವೃದ್ಧಿ ಚೇತನಗಳನ್ನಾಗಿ ನಿರ್ಮಾಣ ಮಾಡಬೇಕು. ಇದಕ್ಕಾಗಿ ಶಿಕ್ಷಕರು ಪ್ರತಿ ದಿನ ಹೊಸತನ್ನು ಅಳವಡಿಸಿಕೊಂಡು ಮಕ್ಕಳಿಗೆ ಹೆಚ್ಚಿನ ಜ್ಞಾನಾರ್ಜನೆ ನೀಡಬೇಕು. ವಿಶ್ವದಲ್ಲೇ ಭಾರತೀಯ ವಿದ್ಯಾರ್ಥಿಗಳು ಅತಿ ಬುದ್ಧಿವಂತರು ಮತ್ತು ಶ್ರಮಜೀವಿಗಳೆಂದು ಗುರುತಿಸಿರುವ ಈ ಸ್ಪರ್ಧಾತ್ಮಕ ದಿನಗಳಲ್ಲಿ ನಮ್ಮ ಶೈಕ್ಷಣಿಕ ಮೌಲ್ಯ ಮತ್ತಷ್ಟು  ಹೆಚ್ಚಬೇಕಾಗಿದ್ದು, ಈ ದಿಕ್ಕಿನಲ್ಲಿ ಶಿಕ್ಷಕರು ಮುನ್ನುಗ್ಗಬೇಕೆಂದು ಶಿಕ್ಷಕರಿಗೆ ಕರೆ ನೀಡಿದರು.
ಭರವಸೆ
ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ ಮಠಗಳು ಅನ್ನದಾಸೋಹದ ಜೊತೆಗ ಅಕ್ಷರ ಜ್ಞಾನಾರ್ಜನೆ ನೀಡುವ ಮೂಲಕ ಉತ್ತಮ ವಿದ್ಯಾಭ್ಯಾಸ ನೀಡುತ್ತಿವೆ. ಶಿಕ್ಷಕರ ವರ್ಗಾವಣೆ ನೀತಿ ತಿದ್ದುಪಡಿಗೆ ಸರ್ಕಾರದ ಚಿಂತನೆ ನಡೆಯುತ್ತಿದೆ. ಶಿಕ್ಷಕರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಈ ಬಗ್ಗೆ ಸರ್ಕಾರ ಚರ್ಚಿಸುವುದಾಗಿ ಭರವಸೆ ನೀಡಿದೆ ಎಂದರು. ಈ ಭಾಗದ ವಾಣಿಜ್ಯ ಬೆಳೆ ತೆಂಗು ನೀರಿಲ್ಲದೆ ಒಣಗಿ ವಿನಾಶದಂಚಿನಲ್ಲಿದೆ. ಆದ್ದರಿಂದ ಸರ್ಕಾರ ಹೇಮಾವತಿ ಭದ್ರಾ ಮೇಲ್ದಂಡೆ ಯೋಜನೆ ಹಾಗೂ ಎತ್ತಿನಹೊಳೆ ಯೋಜನೆಯನ್ನು ಕೈಗೆತ್ತಿಕೊಳ್ಳಲು ಕಂಕಣ್ಣಬದ್ಧವಾಗಿದೆ. ಬಜೆಟ್‌ನಲ್ಲಿ ಇದಕ್ಕಾಗಿ ಹಣ ಮೀಸಲಿರಿಸಿ ಕಾಮಗಾರಿ ಆರಂಭಕ್ಕೆ ಟೆಂಡರ್ ಕರೆಯುವ ಹಂತದಲ್ಲಿದೆ ಎಂದರು.
ಶಿಕ್ಷಕರು ಪರಿಪೂರ್ಣರಾಗಲಿ
ಶಾಸಕ ಕೆ.ಷಡಕ್ಷರಿ ಅಧ್ಯಕ್ಷತೆ ವಹಿಸಿ ಮಾತನಾಡಿ ಮೊದಲು ಶಿಕ್ಷಕರು ಪರಿಪೂರ್ಣರಾಗಿ ನಂತರ ಮಕ್ಕಳಿಗೆ ಶಿಕ್ಷಣವನ್ನು ಬೋಧಿಸಬೇಕು. ಹಿಂದೆ ಗುರುಕುಲದ ಮೂಲಕ ಶಿಕ್ಷಣ ದೊರೆಯುತ್ತಿದ್ದು, ಇಂದು ಸರ್ಕಾರ ಶಿಕ್ಷಣಕ್ಕೆ ಸಂಬಂಧಪಟ್ಟ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಈ ಮೂಲಕ ಪ್ರತಿಯೊಬ್ಬರಿಗೂ ಶಿಕ್ಷಣ ದೊರೆಯುವಂತಾಗಬೇಕು. ಪೋಷಕರು ಖಾಸಗಿ ಶಾಲೆಯ ವ್ಯಾಮೋಹ ಬಿಟ್ಟು ಸರ್ಕಾರಿ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸಬೇಕೆಂದು ಮನವಿ ಮಾಡಿದರು.
ಮಕ್ಕಳ ಹಕ್ಕು ಕಾಯ್ದೆ ಬಗ್ಗೆ ಫಾಲಾಕ್ಷಯ್ಯ ಉಪನ್ಯಾಸ ನೀಡಿದರು. ರಾಜ್ಯ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಜಿ.ಎಂ.ಸಣ್ಣಮುದ್ದಯ್ಯ, ಸಿ.ಎನ್.ಹಳ್ಳಿ ಶಾಸಕ ಸಿ.ಬಿ.ಸುರೇಶ್ ಬಾಬು, ನೌಕರರ ಸಂಘದ ಅಧ್ಯಕ್ಷ ಕೆ.ಎಂ. ರಾಜಣ್ಣ, ಜಿಲ್ಲಾ ಸಂಘದ ಪ್ರ.ಕಾರ್ಯದರ್ಶಿ ಎನ್. ಗೋಪಾಲಕೃಷ್ಣಯ್ಯ ಉಪಸ್ಥಿತರಿದ್ದು ಮಾತನಾಡಿದರು.
ಡಿಡಿಪಿಐ ಈಶ್ವರಯ್ಯ, ಬಿಇಓಗಳಾದ ಬಿ.ಜೆ.ಪುಟ್ಟಸ್ವಾಮಿ, ಸಾ.ಚಿ.ನಾಗೇಶ್, ಬಸವರಾಜು, ಕುಮುದಮ್ಮ, ತಾ.ಪಂ.ಉಪಾಧ್ಯಕ್ಷೆ ರಾಜು, ಜಿ.ಪಂ.ಸದಸ್ಯೆ ರಾಧನಾರಾಯಣಗೌಡ, ಪ್ರಾ.ಶಾ.ಶಿ.ತಾ. ಸಂಘದ ಅಧ್ಯಕ್ಷ ರೇಣುಕಪ್ಪ ಸೇರಿದಂತೆ 6 ತಾಲೂಕುಗಳ ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.
ಲೀಲಾವತಿ ಪ್ರಾರ್ಥಿಸಿ, ರಾ.ಪ್ರಾ.ಶಾ.ಶಿ.ಸಂಘದ ರಾಜ್ಯ ಉಪಾಧ್ಯಕ್ಷರಾದ ಜಿ.ಆರ್.ಜಯರಾಂ ನಿರೂಪಿಸಿ, ಜಿಲ್ಲಾಧ್ಯಕ್ಷ ಪರಶಿವಮೂರ್ತಿ ಸ್ವಾಗತಿಸಿ, ವಂದಿಸಿದರು.

ಸರ್ಕಾರಿ ಶಾಲೆಗೆ ಸೇರಿಸಿ
ತುರುವೇಕೆರೆ ಶಾಸಕ ಎಂ.ಟಿ. ಕೃಷ್ಣಪ್ಪ ಮಾತನಾಡಿ ಸರ್ಕಾರಿ ನೌಕರರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸದೆ ಸರ್ಕಾರ ಶಾಲೆಗೆ ಸೇರಿಸುವ ಮೂಲಕ ಇತರರಿಗೆ ಮಾದರಿಯಾಗಿ ಈ ಬಗ್ಗೆ ಜನರಲ್ಲಿ ಸರ್ಕಾರ ನೀಡುವ ಶಿಕ್ಷಣಮಟ್ಟದ ಅರಿವು ಮೂಡಿಸಬೇಕೆಂದರು. ಲಕ್ಷಾಂತರ ರು. ಖರ್ಚು ಮಾಡಿ ಖಾಸಗಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸುವ ಬದಲು ಸರ್ಕಾರಿ ಶಾಲೆಗೆ ಸೇರಿಸಿ ಗುಣಮಟ್ಟದ ಶಿಕ್ಷಣ  ಕೊಡಿಸಬೇಕೆಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.