ಕಾಮಗಾರಿಗಳ ಗುಣಮಟ್ಟ ಕಾಪಾಡುವಲ್ಲಿ ಕೊಡುಗೆ ನೀಡಿ
ಕುಣಿಗಲ್: ಗ್ರಾಮಾಂತರ ಪ್ರದೇಶದ ಜನತೆ ಸರ್ಕಾರದ ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನ ನಿಟ್ಟಿನಲ್ಲಿ ಸಹಕರಿಸುವುದರ ಜೊತೆಯಲ್ಲಿ, ತಮ್ಮ ಗ್ರಾಮಗಳ ವ್ಯಾಪ್ತಿಯಲ್ಲಿ ನಡೆಯುವ ಕಾಮಗಾರಿಗಳ ಗುಣಮಟ್ಟ ಕಾಪಾಡುವ ನಿಟ್ಟಿನಲ್ಲೂ ಕೊಡುಗೆ ನೀಡಬೇಕೆಂದು ಶಾಸಕ ಡಿ. ನಾಗರಾಜಯ್ಯ ಕರೆ ನೀಡಿದರು.
ಸೋಮವಾರ, ಅಮೃತೂರು ಜಿಲ್ಲಾ ಪಂಚಾಯಿತಿ ಕ್ಷೇತ್ರದ ವ್ಯಾಪ್ತಿಯಲ್ಲಿ 278 ಲಕ್ಷ ರು.ವೆಚ್ಚದಲ್ಲಿ ಕೈಗೊಳ್ಳಲಾಗಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿದ ಅವರು, ರಾಘವನಹೊಸೂರು ಗ್ರಾಮದಲ್ಲಿ ಕುಡಿಯುವ ನೀರಿನ ಮೇಲುಸ್ಥರದ ಟ್ಯಾಂಕ್ ಉದ್ಘಾಟನೆ ಮತ್ತು ಕಾಂಕ್ರೀಟ್ ರಸ್ತೆಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ, ಗ್ರಾಮಾಂತರ ಪ್ರದೇಶದಲ್ಲಿನ ಜನತೆ, ಸಾರ್ವಜನಿಕ ಪ್ರದೇಶಗಳಾದ ರಸ್ತೆ, ಶಾಲಾ ಮೈದಾನ ಸೇರಿದಂತೆ ಇತರೆ ಪ್ರದೇಶಗಳ ಬಗ್ಗೆ ಕಾಳಜಿ ವಹಿಸಬೇಕಿದೆ. ರಸ್ತೆ ನಿರ್ಮಾಣ ಕಾಮಗಾರಿ ಕೈಗೊಳ್ಳುವಾಗ ಸಣ್ಣ, ಸಣ್ಣ ವಿಷಯಕ್ಕೂ ತಗಾದೆ ತೆಗೆಯಬಾರದು, ತಮ್ಮ ಗ್ರಾಮಗಳ ವ್ಯಾಪ್ತಿಯಲ್ಲಿ ಅಗುತ್ತಿರುವ ಸಾರ್ವಜನಿಕರ ಉಪಯೋಗಕ್ಕೆ ಆಗುವ ರಸ್ತೆಕಾಮಗಾರಿಗಳ ವೇಳೆ ಕನಿಷ್ಠ 20 ವರ್ಷಗಳ ಮುಂದಿನ ಸ್ಥಿತಿಗತಿಗಳ ಬಗ್ಗೆ ದೂರದೃಷ್ಟಿ ಇಟ್ಟುಕೊಂಡು ಅಭಿವೃದ್ಧಿ ಕಾಮಗಾರಿಗೆ ಪೂರಕವಾಗಿ ಸ್ಪಂದಿಸುವ ಜೊತೆಯಲ್ಲಿ ಸಾರ್ವಜನಿಕ ಕಾಮಗಾರಿಗಳ ಗುಣಮಟ್ಟ ನಿರ್ವಹಣೆಗೂ ಕೈಲಾದ ಸಹಕಾರ ನೀಡಬೇಕೆಂದರು.
ಜಿಲ್ಲಾಪಂಚಾಯಿತಿ ಸದಸ್ಯ ಡಾ.ಬಿ.ಎನ್.ರವಿ, ಅಣತೂರು ಜಿಪಂ ಕ್ಷೇತ್ರದ ಬಹುತೇಕ ಕಡೆಗಳಲ್ಲಿ ಸಾಕಷ್ಟು ನೀರು ಲಭ್ಯವಿದ್ದರೂ ಜನತೆಗೆ ಕುಡಿಯಲು ಪರದಾಡುವಸ್ಥಿತಿ ಇದ್ದು, ಇದನ್ನು ಮನಗಂಡು ತಾವು ಜಿಪಂ ಅಧ್ಯಕ್ಷರಾದ ಅವಧಿಯಲ್ಲಿ ತಾಲೂಕಿನಾದ್ಯಂತ 30ಕ್ಕೂ ಹೆಚ್ಚು ಮೇಲುಸ್ಥರದ ಕುಡಿಯುವನೀರಿನ ಯೋಜನೆಗೆ ಅನುಮೋದನೆ ದೊರಕಿಸಿದ್ದು, ಜಿಪಂನ ಹಲವು ಯೋಜನೆಯಡಿಯಲ್ಲಿ ಮೇಲುಸ್ಥರದ ಟ್ಯಾಂಕ್ ಸೇರಿದಂತೆ ನೀರು ಪೂರೈಸಲು ಕೊಳವೆಗಳ ವ್ಯವಸ್ಥೆ ಮಾಡಲಾಗಿದೆ. ತಮ್ಮ ಜಿಪಂ ಕ್ಷೇತ್ರದ ವ್ಯಾಪ್ತಿಯಲ್ಲಿ ಇಂದು ಪ್ರಥಮಹಂತವಾಗಿ 278 ಲಕ್ಷ ರು.ಕಾಮಗಾರಿಗಳಿಗೆ ಮೊದಲ ಹಂತದಲ್ಲಿ ಚಾಲನೆ ನೀಡಲಾಗುತ್ತಿದೆ. ಇದೇ15ರಂದು 415ಲಕ್ಷ ರು.ವೆಚ್ಚದಲ್ಲಿ ಎರಡನೇ ಹಂತದ ಕಾಮಗಾರಿಗಳಿಗೆ ಚಾಲನೆ ನೀಡಲು ಕ್ರಮ ಕೈಗೊಳ್ಳಲಾಗುವುದೆಂದರು.
ತಾಪಂ ಅಧ್ಯಕ್ಷೆ ತೇಜಸ್ವಿನಿ, ಸದಸ್ಯರಾದ ಮಂಜುಳಾ, ಲೋಕೇಶ, ಕೆಂಪಗೂಳಿಗೌಡ, ಕೆ.ಎಚ್.ಹಳ್ಳಿ ಗ್ರಾಪಂ ಅಧ್ಯಕ್ಷೆ ಶಿವಮ್ಮ, ತಹಸೀಲ್ದಾರ್ ಪುಟ್ಟನರಸಯ್ಯ, ಇಒ ಶಂಕರಪ್ಪ, ಜಿಪಂ ಎಇಇ ಸಣ್ಣಮರಿಗೌಡ ಸೇರಿದಂತೆ ತಾಲೂಕು ಮಟ್ಟದ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

