ಪಡಿತರ ಕಾರ್ಡ್ ವಿತರಣೆ ಅವ್ಯವಸ್ಥೆ ಖಂಡಿಸಿ ಪ್ರತಿಭಟನೆ
ಕುಣಿಗಲ್: ಪಡಿತರ ಕಾರ್ಡ್ ವಿತರಣೆ ಅವ್ಯವಸ್ಥೆ ಖಂಡಿಸಿ, ಜಿನ್ನಾಗರೆ ಗ್ರಾಮಸ್ಥರು ಗ್ರಾಪಂ ಅಧ್ಯಕ್ಷರೂ ಸೇರಿದಂತೆ ಕೆಲ ಸದಸ್ಯರನ್ನು ಗ್ರಾಪಂ ಕಾರ್ಯಾಲಯದಲ್ಲೆ ಕೂಡಿ ಹಾಕಿ ಪ್ರತಿಭಟನೆ ನಡೆಸಿದ ಘಟನೆ ಮಂಗಳವಾರ ನಡೆಯಿತು. ತಾಲೂಕಿನ ಅಮೃತೂರು ಹೋಬಳಿಯ ಜಿನ್ನಾಗರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಡಿತರ ಕಾರ್ಡ್ ಪಡೆಯಲು ಸ್ಥಳೀಯ ಗ್ರಾಮಪಂಚಾಯಿತಿಯು, ಸಮೀಪದ ಅಮೃತೂರಿನ ಖಾಸಗಿ ವ್ಯಕ್ತಿಯೊಬ್ಬರಿಗೆ ವಹಿಸಿದ್ದಾರೆನ್ನಲಾಗಿದೆ. ಸದರಿ ವ್ಯಕ್ತಿ ಇಲಾಖೆ ನಿಗದಿಪಡಿಸಿದ್ದ ತಲಾ ಕಾರ್ಡ್‌ಗೆ 50 ರು.ಗಿಂತ ಹೆಚ್ಚಾಗಿ ವಸೂಲು ಮಾಡುತ್ತಿದ್ದರಲ್ಲದೆ, ಹೆಚ್ಚಿನ ಹಣ ನೀಡಲು ನಿರಾಕರಿಸಿದವರ ಪಡಿತರ ಕಾರ್ಡ್ ನೀಡದೆ ವಂಚನೆ ಮಾಡುತ್ತಿದ್ದ ಎನ್ನಲಾಗಿದೆ. ಇದರಿಂದ ಬೇಸತ್ತ ಗ್ರಾಮಸ್ಥರು ಮಂಗಳವಾರ ಪ್ರಮುಖರಾದ ಪ್ರಕಾಶ್, ಮರಿಯಪ್ಪ, ಕೆಂಪಯ್ಯ ಇತರರ ನೇತೃತ್ವದಲ್ಲಿ ಗ್ರಾಮ ಪಂಚಾಯಿತಿ ಕಾರ್ಯಾಲಯಕ್ಕೆ ಆಗಮಿಸಿ, ಪದಾಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರು. ಗ್ರಾಪಂ ಜನಪ್ರತಿನಿಧಿಗಳು ಸಮರ್ಪಕ ಉತ್ತರ ನೀಡದ ಕಾರಣ ಬೇಸತ್ತು, ಅವರನ್ನು ಕಾರ್ಯಾಲಯದಲ್ಲೆ ಕೂಡಿ, ಬೀಗ ಜಡಿದು ಪ್ರತಿಭಟನೆ ಪ್ರಾರಂಭಿಸಿದರು. ವಿಷಯ ತಿಳಿದ ಆಹಾರ ಇಲಾಖೆ ಶಿರಸ್ತೆದಾರ್ ರಂಗಧಾಮಯ್ಯ, ಸ್ಥಳಕ್ಕೆ ಭೇಟಿ ನೀಡಿದಾಗ, ಅವರೊಂದಿಗೆ ವಾಗ್ವಾದ ನಡೆಸಿದ ಗ್ರಾಮಸ್ಥರು, ಗ್ರಾಪಂನಲ್ಲೆ ಕಾರ್ಡ್ ತೆಗೆದುಕೊಡಬೇಕು ಅಂತ ನಿಯಮ ಇದ್ದರೂ, ಬೇರೆಡೆ ಪಡೆಯುವಂತೆ ಸೂಚಿಸುತ್ತಾರೆ. ಅಲ್ಲಿ ನಿಗದಿತ ದರಕ್ಕಿಂತ ಹೆಚ್ಚಿನ ಹಣ ಕೇಳುತ್ತಾರೆ. ಕೊಡಲು ನಿರಾಕರಿಸಿದರೆ ಕಾರ್ಡ್ ಸಿಗದಾಂಗೆ ಮಾಡ್ತಿವಿ ಅಂತ ಬೆದರಿಕೆ ಹಾಕ್ತಾರೆ. ಮಕ್ಕಳು ಮರಿ ಕಚ್ಚಿಕೊಂಡು ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಮತ್ತೊಂದೆಡೆ ಕೆಲಸ ಕಾರ್ಯ ಬಿಟ್ಟು ಒಡಾಡಲು ಆಗುತ್ತಿಲ್ಲ. ಅಂದರೆ, ಪಟ್ಟಣಕ್ಕೆ ಹೋಗಿ ಅಂತಾರೆ.ಅಲ್ಲಿ ಹೋದರೆ ಖಾಸಗಿ ಕೇಂದ್ರವೊಂದರಲ್ಲಿ ರಾಜರೋಷವಾಗಿ 150 ರಿಂದ 200 ರು. ಕೇಳ್ತಾರೆ. ಕೊಡಲು ನಿರಾಕರಿಸಿದರೆ, ಕಾರ್ಡ್ ರದ್ದುಗೊಳಿಸುವ ಬೆದರಿಕೆ ಹಾಕ್ತಾರೆ. ಇಲಾಖಾಧಿಕಾರಿಗಳಾದ ತಮಗೆ ಗೊತ್ತು, ಗೊತ್ತಿಲ್ಲದ ಹಾಗೆ ಸುಮ್ಮನಿರ್ತಿರಾ ಎಂದು ತರಾಟೆಗೆ ತೆಗೆದುಕೊಂಡರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

