ತುಮಕೂರು

ಭ್ರಷ್ಟಾಚಾರ ಮುಕ್ತ ಅಭಿವೃದ್ಧಿಯೇ ಮೋದಿ ಗೆಲವು

Published On :

ತುಮಕೂರು: ಭ್ರಷ್ಟಾಚಾರ ಮುಕ್ತ ಹಾಗೂ ಅಭಿವೃದ್ಧಿಯಲ್ಲಿ ದೇಶದಲ್ಲೇ ನಂ. 1 ರಾಜ್ಯವಾಗಿ ಗುಜರಾತ್ ಅಭಿವೃದ್ಧಿ ಹೊಂದಿದೆ ಎಂದು ಶಾಸಕ ಬಿ. ಸುರೇಶ್ ಗೌಡರು ಅಭಿಪ್ರಾಯ ಪಟ್ಟರು.
ತುಮಕೂರು ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ ಬಂಡಿಹಳ್ಳಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಬಾರ್ಡ್ ಯೋಜನೆಯಡಿಯಲ್ಲಿ ಊರ್ಡಿಗೆರೆ ಹೋಬಳಿ  ಶ್ರೀರಂಗ ಬಡಾವಣೆಯಿಂದ ಪಂಡಿತನಹಳ್ಳಿಯವರೆಗೆ ಹಾಗೂ ಹೆಬ್ಬೂರು ಹೋಬಳಿ ಕೆರೆಬಂಡಿಪಾಳ್ಯದಿಂದ ರಾಜಾಪುರವರೆಗೆ 100 ಲಕ್ಷ ರು. ಗಳ ರಸ್ತೆ ಕಾಮಗಾರಿಗೆ ಶಾಸಕ ಬಿ. ಸುರೇಶ್ ಗೌಡರು ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಕಾಮಗಾರಿಯನ್ನು ತ್ವರಿತ ಗತಿಯಲ್ಲಿ ಮುಗಿಸಿ ಕಾಮಗಾರಿಯು ಗುಣಮಟ್ಟದಿಂದ ಕೂಡಿರಬೇಕು. ಗುಣಮಟ್ಟದಲ್ಲಿ ಯಾವುದೇ ರಾಜಿ ಮುಲಾಜಿಗೆ ಅವಕಾಶವಿಲ್ಲವೆಂದು ಶಾಸಕರು ತಿಳಿಸುತ್ತಾ ನಿಗದಿತ ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಶಾಸಕರು ತಾಕೀತು ಮಾಡಿದರು.
ಕ್ಷೇತ್ರದಾದ್ಯಂತ ರಸ್ತೆಗಳ ಅಭಿವೃದ್ಧಿಗೆ ಪ್ರಥಮ ಆದ್ಯತೆ ನೀಡಿದ್ದು ಸುಗಮ ಸುರಕ್ಷಿತ  ಸಂಚಾರ ಎಂಬಂತೆ ರಸ್ತೆಗಳನ್ನು ಅಭಿವೃದ್ಧಿ ಪಡಿಸಿದ್ದು ವಿನಾಕಾರಣ ರೈತರು ಸಾರ್ವಜನಿಕರು ರಸ್ತೆಯಲ್ಲಿ ಪೈಪ್ ಲೈನ್ ರಸ್ತೆಗೆ
ತೆಗೆದುಕೊಂಡು ಹೋಗುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದ್ದು, ಅತಿಕ್ರಮಣ ಮಾಡಿ ರಸ್ತೆ ಅಗೆಯುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡುವಂತೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅವರಿಗೆ ಸೂಚಿಸಿದರು.
ಮೋದಿ ಪ್ರಧಾನಿ: ಇಡೀ ವಿಶ್ವವೇ ಇಂದು ಭಾರತವನ್ನು ನೋಡುತ್ತಿದೆ. ನರೇಂದ್ರ ಮೋದಿಯವರ ಉತ್ತಮ, ಭ್ರಷ್ಟಾಚಾರ ಮುಕ್ತ ಆಡಳಿತದಿಂದಾಗಿ  ಭಾರತದಲ್ಲೇ ನಂ.1 ರಾಜ್ಯವಾಗಿ ಗುಜರಾತ್ ರೂಪುಗೊಂಡಿದೆ. ಬರುವ ಲೋಕಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷ  ಅಧಿಕಾರಕ್ಕೆ ಬರಲಿದ್ದು ನರೇಂದ್ರ ಮೋದಿ ಪ್ರಧಾನ ಮಂತ್ರಿಯಾಗುವುದು ನಿಶ್ಚಿತವೆಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಸಕ್ತ ಸಾಲಿನಲ್ಲಿ ಕ್ಷೇತ್ರದ ವ್ಯಾಪ್ತಿಯ ಎ.ಕೆ.ಕಾವಲ್, ಕೌತುಮಾರನಹಳ್ಳಿ, ಕಣಕುಪ್ಪೆ, ಕುಂದೂರು, ಹಾಗೂ ಕುಪ್ಪೂರು ಗ್ರಾಮಗಳಲ್ಲಿ ಹರಿಜನ ಗಿರಿಜನ ಉಪಯೋಜನೆಯಡಿಯಲ್ಲಿ 135 ಲಕ್ಷ ರು.ಗಳಲ್ಲಿ ಮೂಲಭೂತ ಸೌಕರ್ಯಗಳಾದ ಸಿಮೆಂಟ್ ರಸ್ತೆ, ಸಿಮೆಂಟ್ ಮೋರಿಗಳನ್ನು ನಿರ್ಮಾಣ ಮಾಡಿ ಸ್ವಚ್ಛ ಕೊಳಚೆ ಮುಕ್ತ ಗ್ರಾಮಗಳನ್ನಾಗಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಇದೇ ಸಂದರ್ಭದಲ್ಲಿ ಶಾಸಕ ಬಿ.ಸುರೇಶ್ ಗೌಡ ಅವರು ತಿಳಿಸಿದರು.
ಶುದ್ಧ ನೀರು: ಈಗಾಗಲೇ ಕ್ಷೇತ್ರದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ 11 ಕಾಮಗಾರಿಗಳು ಪ್ರಗತಿಯಲ್ಲಿದ್ದು ಬೆಳ್ಳಾವಿ, ಕಣಕುಪ್ಪೆ, ಹೆಬ್ಬೂರು ಹಾಗೂ ಊರ್ಡಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ 30 ಹಳ್ಳಿಗಳಿಗೆ ಶುದ್ಧ ನೈಟ್ರೇಟ್ ಮುಕ್ತ ನೀರನ್ನು ಸರಬರಾಜು ಮಾಡಲಾಗುತ್ತಿದ್ದು ಬರುವ ಬೇಸಿಗೆಯನ್ನು ಎದುರಿಸಲು ಬರ ಪರಿಹಾರ ಯೋಜನೆಯಡಿ ಕುಡಿಯುವ ನೀರಿನ ಬವಣೆಯನ್ನು ನೀಗಿಸಲು ಈಗಾಗಲೇ 78 ಲಕ್ಷ ರು.ಗಳಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಸಮರೋಪಾದಿಯಲ್ಲಿ ಕಾಮಗಾರಿಗಳು ಪ್ರಗತಿಯಲ್ಲಿದೆ.
ಉಳಿದಂತೆ ಇನ್ನೂ ಹೆಚ್ಚಿನ ಬೇಡಿಕೆ ಇರುವ ಗ್ರಾಮಗಳನ್ನು ಪಟ್ಟಿ ಮಾಡಿ 172 ಲಕ್ಷ ರು.ಗಳ ಕ್ರಿಯಾ ಯೋಜನೆಯನ್ನು  ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗಿದೆ ಎಂದು ಶಾಸಕರು ತಿಳಿಸಿದರು.
2011-12, 2012-13 ನೇ ಸಾಲಿನಲ್ಲಿ ಬಸವ ವಸತಿ ಯೋಜನೆಯಡಿಯಲ್ಲಿ ಮನೆ ಮುಜೂರಾತಿ ಪಡೆದು ನಿಗದಿತ ಕಲಾ ಮಿತಿಯೊಳಗೆ ನೋಂದಣಿ ಮಾಡಿಸಿಕೊಳ್ಳದೆ ಇರುವ  ಪಲಾನುಭವಿಗಳಿಗೆ ಪೂರಕವಾಗಿ ಮತ್ತೆ ಪ್ರಗತಿ (ಮನೆ ನಿರ್ಮಾಣ ಮಾಡಿಕೊಂಡು) ಮಾಡಿಕೊಳ್ಳಲು ಸರ್ಕಾರ ಮೂರು ತಿಂಗಳ ಅನುಮತಿ ನೀಡಿದ್ದು ಈ ಸಮಯದಲ್ಲಿ ಕಡ್ಡಾಯವಾಗಿ ಮನೆ ನಿರ್ಮಾಣ ಮಾಡಿಕೊಳ್ಳುವಂತೆ ಮನವಿ ಮಾಡಿದರು.
ತ್ವರಿತ ವಿಲೇವಾರಿ: ಗ್ರಾಮ ಪಂಚಾಯಿತಿವಾರು ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ 32 ಸಾವಿರ ಅರ್ಜಿಗಳು ಬಂದಿದ್ದು ಸುಮಾರು 9 ಸಾವಿರ ಶೌಚಾಲಯಗಳು ನಿರ್ಮಾಣ ಮಾಡಿಕೊಂಡಿರುವುದನ್ನು ಶಾಸಕರು ಪ್ರಶಂಶಿಸುತ್ತಾ ಬಾಕಿ ಉಳಿದ ಅರ್ಜಿಗಳನ್ನು ತ್ವರಿತ ಗತಿಯಲ್ಲಿ ವಿಲೇವಾರಿ ಮಾಡಿ ಪಲಾನುಭವಿಗಳಿಗೆ ತಕ್ಷಣ ಕಾರ್ಯಾದೇಶ ನೀಡುವಂತೆ ಕಾರ್ಯನಿರ್ವಹಣಾಧಿಕಾರಿಗಳಿಗೆ ಶಾಸಕರು ಸೂಚಿಸಿದರು.
 ಗ್ರಾ.ಪಂ. ಅಧ್ಯಕ್ಷರು, ತಾ.ಪಂ. ಸದಸ್ಯರು, ಜಿ.ಪಂ. ಸದಸ್ಯರು, ಎಇಇ ಮಹಾಲಿಂಗಪ್ಪ, ಗುತ್ತಿಗೆದಾರರು ಶ್ರೀನಿವಾಸ್, ಅಶೋಕ್, ಮಾರ್ತಣ್ಣ, ಗಂಗಾಧರ್  ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.