ರಾಜ್ಯದ ಜನರನ್ನು ಸೋಮಾರಿಗಳನ್ನಾಗಿಸಬೇಡಿ
ಕ,ಪ್ರ,ವಾರ್ತೆ ಚಿಕ್ಕನಾಯಕನಹಳ್ಳಿ ಫೆ.16
ಒಂದು ರು.ಗೆ 1 ಕೆ.ಜಿ.ಅಕ್ಕಿ, ಶಾಲಾಮಕ್ಕಳಿಗೆ ಮಧ್ಯಾಹ್ನ ಹಾಲು ನೀಡುವ ಮೂಲಕ ರಾಜ್ಯದ ಜನತೆಯನ್ನು ಸೋಮಾರಿಗಳನ್ನಾಗಿ ಮಾಡುವುದನ್ನು ಬಿಟ್ಟು, ಶಾಶ್ವತ ಯೋಜನೆಗಳನ್ನು ಜಾರಿಗೆ ತರುವ ಮೂಲಕ ರಾಜ್ಯದ ಅಭಿವದ್ಧಿ ಬಗ್ಗೆ ಚಿಂತಿಸುವಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸರ್ಕಾರಕ್ಕೆ ಬುದ್ಧಿಮಾತು ಹೇಳಿದರು.
ಅವರು ಭಾನುವಾರ ಪಟ್ಟಣದಲ್ಲಿ ನಡೆದ ಶಾಸಕ ಸಿ.ಬಿ.ಸುರೇಶ್ ಬಾಬುರವರ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಇತ್ತೀಚಿನ ಸರ್ಕಾರಗಳು ಜನರಿಗೆ ಬಿಟ್ಟಿ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಸೋಮಾರಿಗಳನ್ನಾಗಿ ಮಾಡುತ್ತಿವೆ. ಅದನ್ನು ಬಿಟ್ಟು ನೀರಾವರಿ ಯೋಜನೆಯಂತಹ ಕಾರ್ಯಕ್ರಮಗಳನ್ನು ಜಾರಿಗೆ ತನ್ನಿ. ಯಾವುದೇ ಪ್ರಚಾರಕ್ಕಾಗಿ ಜಾರಿಗೆ ತರುವ ಯೋಜನೆಗಳು ಸರ್ಕಾರದ ಸಾಧನೆಯಾಗಲಾರವು. ಇಂದಿನ ಸರ್ಕಾರ ನೀಡುತ್ತಿರುವ 1 ರು.ಗೆ ಕೆ.ಜಿ.ಅಕ್ಕಿ ಜನರಿಗೆ ಅಗತ್ಯಕ್ಕಿಂತ ಜಾಸ್ತಿಯಾಗಿದ್ದು, ಉಳಿಕೆ ಅಕ್ಕಿ ಕಾಳಸಂತೆಕೋರರ ಪಾಲಾಗುತ್ತಿದೆ. ಅದರ ಬದಲು ಪಕ್ಕದ ತಮಿಳುನಾಡಿನಲ್ಲಿರುವಂತೆ 15 ಕೆ.ಜಿ.ಅಕ್ಕಿ ಬಿಟ್ಟಿ ನೀಡಿ. ಆಗ ಕಾಳಸಂತೆ ಕೋರರಿಗೆ ಅವಕಾಶವಿರುವುದಿಲ್ಲ. ಹಾಲಿಗೆ ಸಹಾಯಧನ ನೀಡುವುದಾಗ ಹೇಳುತ್ತಿರುವ ಸರ್ಕಾರ ಮಾಡುತ್ತಿರುವುದೇನು, 4 ರು. ಹಾಗೆ ಸಹಾಯಧನ ನೀಡಿ, ಟನ್ನಿಗೆ 6 ಸಾವಿರವಿದ್ದ ಪಶು ಆಹಾರವನ್ನು 16 ಸಾವಿರಕ್ಕೇರಿಸಿದ್ದು ಇದು ರೈತರಿಗೆ ಯಾವಸೀಮೆ ಸಹಾಯವಾಗುತ್ತದೆ ಎಂದು ಪ್ರಶ್ನಿಸಿದರು.
ಜನರ ಜೀವದ ಜತೆ ಚೆಲ್ಲಾಟ: ಏಕಕಾಲಕ್ಕೆ ಹಲವಾರು ನೀರಾವರಿ ಯೋಜನೆಗಳ ಘೋಷಣೆ ಮಾಡುವ ಸರ್ಕಾರ ಸಂಕಷ್ಟ ಕಾಲದಲ್ಲಿ ಜನರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ. ಕಳೆದ 5 ವರ್ಷಗಳಿಂದಲೂ ಎತ್ತಿನ ಹೊಳೆ ಯೋಜನೆ ಜಾರಿಗೆ ತರುವುದಾಗಿ ಹೇಳುತ್ತಿರುವ ಸರ್ಕಾರಗಳು ಯೋಜನೆ ಜಾರಿಯಿಂದ ಎಷ್ಟು ನೀರು ನೀರಾವರಿಗೆ ಲಭ್ಯವಾಗುತ್ತದೆ ಎಂಬುದನ್ನು ಜನರಿಗೆ ತಿಳಿಸುವ ಕಾರ್ಯ ಮಾಡಲಿ. ಕೃಷಿಗೆ ಆದ್ಯತೆ ನೀಡುವುದಾಗಿ ಹೇಳುವ ಇವರು ಹಗಲು ವಿದ್ಯುತ್ ನೀಡದೆ, ರಾತ್ರಿ ವೇಳೆ ವಿದ್ಯುತ್ ನೀಡಿ, ಬೆಳೆಗಳಿಗೆ ನೀರು ಹಾಯಿಸಲು ಹೋಗುವ ರೈತರನ್ನು ಕಾಡುಪ್ರಾಣಿಗಳಿಗೆ ಬಲಿಗೊಡುತ್ತಿದ್ದಾರೆ. ವಸತಿ ಯೋಜನೆಗಳ ಹಳೆಯ ಸಾಲಗಳನ್ನು ಪುಸ್ತಕದಲ್ಲಿ ಹೊಂದಾಣಿಕೆ ಮಾಡಿದ್ದನ್ನೇ ಸಾಲಮನ್ನಾ ಎಂದು ಬಿಂಬಿಸಿ ಜನರಿಗೆ ಟೋಪಿ ಹಾಕುವ ಕೆಲಸಕ್ಕೆ ಕೈಹಾಕಬೇಡಿ. ಹಿಂದಿನ ಸರ್ಕಾರ ನಿಗಮ ಮಂಡಳಿಗಳ ಉಳಿವಿಗೆ ಹಣಬಿಡುಗಡೆ ಮಾಡಿವೆ. ಅದರ ಯಶಸ್ಸನ್ನು ನಿಮ್ಮ ಕಿರೀಟಕ್ಕಿಟ್ಟುಕೊಳ್ಳುವ ಕೆಳಮಟ್ಟಕ್ಕಿಳಿಯ ಬೇಡಿ ಎಂದರು.
ಶಾಸಕ ಸಿ.ಬಿ. ಸುರೇಶ್‌ಬಾಬು ಅವರು ಕ್ಷೇತ್ರದಲ್ಲಿ ಜನರಿಗೆ ಲಭ್ಯವಾಗದ್ದಕ್ಕೆ ಕಾರಣವಿದೆ. ಸರ್ಕಾರ ವಿರೋಧ ಪಕ್ಷಗಳ ಶಾಸಕರಿರುವ ಕ್ಷೇತ್ರಗಳಿಗೆ ಅನುದಾನ ಬಿಡುಗಡೆ ಮಾಡುವಲ್ಲಿ ಮಲತಾಯಿ ಧೋರಣೆ ತಾಳುತ್ತಿದೆ. ಜೇಬಲ್ಲಿ ಹಣವಿಲ್ಲದಿದ್ದರೆ ಸುರೇಶ್‌ಬಾಬು ಕ್ಷೇತ್ರಕ್ಕೆ ಕಾಲಿಡುವುದು ಅಸಾಧ್ಯ. ಹೀಗಾಗಿ ಅವರು ಕ್ಷೇತ್ರದಿಂದ ಹೊರಗಿರುತ್ತಾರೆ ಎಂದು ಅವರನ್ನು ಸಮರ್ಥಿಸಿಕೊಂಡರು.
ಅಧ್ಯಕ್ಷತೆಯನ್ನು ಶಾಸಕ ಸಿ.ಬಿ. ಸುರೇಶ್‌ಬಾಬು ವಹಿಸಿದ್ದರು. ಮುಖ್ಯಅತಿಥಿಗಳಾಗಿ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್, ಕೊರಟಗೆರೆ ಶಾಸಕ ಸುಧಾಕರಲಾಲ್, ವಿಧಾನಪರಿಷತ್ ಸದಸ್ಯ ಡಾ. ಎಂ.ಆರ್.ಹುಲಿನಾಯ್ಕರ್, ಪುರಸಭೆ ಅಧ್ಯಕ್ಷೆ ಗೀತಾ, ಜಿಪಂ ಉಪಾಧ್ಯಕ್ಷೆ ಜಾನಮ್ಮ ಮುಂತಾದವರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

