ಶತಾಯುಷಿ ಸಿದ್ಧಗಂಗಾ ಶ್ರೀಗಳಿಗೆ ಗುರುವಂದನೆ
ತುಮಕೂರು: ಶತಾಯುಷಿ ಸಿದ್ಧಗಂಗಾ ಶ್ರೀಗಳಿಗೆ ಗುರುವಾರ 106ನೇ ಜನ್ಮದಿನೋತ್ಸವದ ಪ್ರಯುಕ್ತ ಭಕ್ತವೃಂದದಿಂದ ಗುರುವಂದನೆ ನೆರವೇರಿಸಲಾಯಿತು.
ತುಮಕೂರಿನ ಸಿದ್ಧಗಂಗಾ ಮಠದ ಆವರಣದಲ್ಲಿ ನಡೆದ ಈ ಕಾರ್ಯಕ್ರಮಕ್ಕೇ ಸಾವಿರಾರು ಭಕ್ತರು ಸಾಕ್ಷಿಯಾದರು. ರಾಜ್ಯದ ಮೂಲೆ ಮೂಲೆಗಳಿಂದ ಶ್ರೀಗಳ ಜನ್ಮದಿನೋತ್ಸವ ಕಾರ್ಯಕ್ರಮಕ್ಕೆ ಜನಸ್ತೋಮ ಹರಿದು ಬಂದಿತ್ತು. ಬಂದ ಭಕ್ತಾದಿಗಳಿಗೆ ದಾಸೋಹ ಏರ್ಪಡಿಸಲಾಗಿತ್ತು. ಇದಕ್ಕಾಗಿ ಮಠದ ವಿದ್ಯಾರ್ಥಿಗಳು ಹಾಗೂ ಸ್ವಯಂ ಸೇವಕರು ಊಟೋಪಚಾರದ ಉಸ್ತುವಾರಿ ವಹಿಸಿಕೊಂಡಿದ್ದರು. ಬುಧವಾರ ರಾತ್ರಿಯಿಂದಲೇ ರಾಜ್ಯದ ಬೇರೆ ಬೇರೆ ಭಾಗಗಳಿಂದ ಜನರು ಶ್ರೀ ಮಠದತ್ತ ಧಾವಿಸಿದ್ದರು. ರಾಜ್ಯಪಾಲ ಹಂಸರಾಜ್ ಭಾರದ್ವಾಜ್, ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಜಗದೀಶ ಶೆಟ್ಟರ್, ಮಾಜಿ ಸಚಿವ ಸೋಮಣ್ಣ, ಕಾನೂನು ಸಚಿವ ಟಿ.ಬಿ. ಜಯಚಂದ್ರ, ಸಂಸದ ಜಿ.ಎಸ್. ಬಸವರಾಜು ಸೇರಿದಂತೆ ನೂರಾರು ಜನಪ್ರತಿನಿಧಿಗಳು ಸಿದ್ಧಗಂಗೆಗೆ ಆಗಮಿಸಿ ಶ್ರೀಗಳ ಆಶೀರ್ವಾದ ಪಡೆದರು.
ಧರ್ಮಗುರುಗಳ ಮಾರ್ಗದರ್ಶನ ಬೇಕಿದೆ: ಸಿದ್ಧಗಂಗಾ ಮಠದಲ್ಲಿ ಆಯೋಜಿಸಿದ್ದ ಸಿದ್ಧಗಂಗಾ ಶ್ರೀಗಳ ಜನ್ಮಶತಮಾನೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ರಾಜ್ಯಪಾಲ ಹಂಸರಾಜ್, ದೇಶ ಒತ್ತಡ, ಸಂಕಷ್ಟ ಸನ್ನಿವೇಶ ಎದುರಿಸುತ್ತಿದ್ದು, ಧರ್ಮಗುರುಗಳ ಮಾರ್ಗದರ್ಶನ ಬೇಕಿದೆ. ಇಂಥ ಸಂದರ್ಭದಲ್ಲಿ ನಂಬಿಕೆ ಇಡಬಹುದಾದ ವರ್ಗ ಧರ್ಮಗುರುಗಳು, ಮಠಾಧೀಶರದ್ದು. ಧರ್ಮಗುರುಗಳು, ಸಾಧು-ಸಂತರ ಮಾರ್ಗದರ್ಶನ ದೇಶಕ್ಕೆ ಅಗತ್ಯ. ಧರ್ಮಗುರುಗಳು ದೇಶ ಮುನ್ನಡೆಸಲು ಮಾರ್ಗದರ್ಶನ ಮಾಡುವಂತೆ ಮನವಿ ಮಾಡಿದರು.
ಸಮಾಜ ಸುಸ್ಥಿಯಲ್ಲಿರಲು ಮಠಾಧೀಶರು, ಧರ್ಮಗುರುಗಳ ಕೊಡುಗೆ ಅಪಾರ. ಧರ್ಮಗುರುಗಳು ಹೇಳಿದ್ದನ್ನು ಜನತೆ ಪಾಲಿಸಿದಲ್ಲಿ ಸಮಾಜಕ್ಕೆ ಒಳ್ಳೆಯದಾಗುತ್ತದೆ. ಭಾರತದ ಭದ್ರ ಬುನಾದಿ ವೇದ-ಉಪನಿಷತ್ತು, ಋಷಿ ಸಂಸ್ಕೃತಿ ಪರಂಪರೆಯಲ್ಲಿದೆ. ತ್ಯಾಗಜೀವಿಗಳಾದ ಚಂದ್ರಗುಪ್ತ ಮೌರ್ಯ, ಅಶೋಕರಂಥ ಶ್ರೇಷ್ಠ ಆಡಳಿತಗಾರರನ್ನು ನೀಡಿದ ನಾಡು ನಮ್ಮದು. ಬುದ್ಧ, ಮಹಾವೀರ, ಗುರುನಾನಕ್, ಬಸವಣ್ಣನವರ, ಮಹಾತ್ಮ ಗಾಂಧಿ ಸೇರಿದಂತೆ ಇತರೆ ಮಹಾನ್ ಸಂತರ, ದಾರ್ಶನಿಕರ ಮಾರ್ಗದರ್ಶನದಲ್ಲಿ ದೇಶದ ಶ್ರೇಷ್ಠ ನಾಗರಿಕತೆ ಬೆಳೆದಿದೆ. ಈ ಮಹಾನ್ ಸಂತರ ಯುಗ ಸುವರ್ಣಯುಗ. ಸಿದ್ಧಗಂಗಾ ಶ್ರೀಗಳು, ಸುತ್ತೂರು ದೇಶಿಕೇಂದ್ರ ಸ್ವಾಮಿಗಳು ಜಾತಿ, ಮತ ಭೇದವಿಲ್ಲದೆ ಅನ್ನ, ಶಿಕ್ಷಣ ದಾಸೋಹ ನೀಡುತ್ತಿದ್ದಾರೆ. ಹಿಂದಿನ ಮಹಾನ್ ಸಂತರಂತೆ ಕಾಣುತ್ತಿದ್ದಾರೆ. ಕರ್ನಾಟಕ ಕೆಂಗಲ್ ಹನುಮಂತಯ್ಯ, ಎಸ್. ನಿಜಲಿಂಗಪ್ಪ, ವೀರೇಂದ್ರ ಪಾಟೀಲರಂತಹ ಮಹಾನ್ ನಾಯಕರನ್ನು ಕಂಡ ರಾಜ್ಯ ಎಂದು ಪ್ರಶಂಶಿಸಿದರು.
ಎಂದಿನಂತೆ ಶ್ರೀಗಳು ಶಾಂತಚಿತ್ತರಾಗಿ ವೇದಿಕೆ ಮೇಲೆ ಆಸೀನರಾಗಿದ್ದರು. ಗುರುವಂದನೆ ಬಳಿಕ ಮಾತನಾಡಿದ ಸಿದ್ಧಗಂಗಾ ಶ್ರೀಗಳು, ದೇಶದಲ್ಲಿ ಶಾಂತಿ, ನೆಮ್ಮದಿ ಮನೆ ಮಾಡಲಿ ಎಂದು ಕೋರಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

