ರಿಲಯನ್ಸ್, ಪ್ಲಾನೆಟ್ ಮ್ಯಾಕ್ಸ್...
ತುಮಕೂರು: ಗಣ್ಯ ನಾಗರಿಕರ, ದೊಡ್ಡ ವ್ಯಾಪಾರಿ ಸಂಸ್ಥೆಗಳ ತೆರಿಗೆ ವಂಚನೆ ಪ್ರಕರಣ ಪಾಲಿಕೆ ಬಜೆಟ್ ಮೇಲಿನ ಚರ್ಚೆಯಲ್ಲಿ ಬಿಸಿ, ಬಿಸಿ ಚರ್ಚೆಗೆ ಕಾರಣವಾಯಿತು.
ತುಮಕೂರಿನ ಗಣ್ಯ ನಾಗರಿಕರೆನಿಸಿಕೊಂಡವರು, ಉದ್ಯಮಿಗಳು, ಸರಿಯಾಗಿ ತೆರಿಗೆ ಪಾವತಿಸದೆ ವಂಚಿಸುತ್ತಿದ್ದಾರೆ ಎಂದು ಪಾಲಿಕೆ ಕಾಂಗ್ರೆಸ್ ಸದಸ್ಯ ಸುಧೀಶ್ವರ್ ಆರೋಪಿಸಿದರು. ಇವರೊಂದಿಗೆ ಜೆಡಿಎಸ್ ಸದಸ್ಯರಾದ ಪಟೇಲ್ ನಾಗರಾಜ್, ನಾಗರಾಜ್, ಕಾಂಗ್ರೆಸ್ನ ಹಫೀಜ್ ದನಿಗೂಡಿಸಿದರು.
ರಿಲಯನ್ಸ್ ಸಂಸ್ಥೆ ಇತ್ತೀಚೆಗೆ ತುಮಕೂರಿನಲ್ಲಿ 4 ಅಂತಸ್ತಿನ ಮಾಲ್ ತೆರೆದಿದೆ. ಆದರೆ ಪಾಲಿಕೆಯಿಂದ ಅನುಮತಿಯನ್ನೇ ಪಡೆದಿಲ್ಲ. ದೊಡ್ಡ ಸಂಸ್ಥೆಯೆಂದು ದೇಶದಲ್ಲಿ ಹೆಸರು ಮಾಡಿರುವ ರಿಲಯನ್ಸ್ ಹೀಗೆ ಮಾಡಿರುವುದು ಸರಿಯಲ್ಲ. ಪಾಲಿಕೆ ಕೂಡ ಕಣ್ಣು ಮುಚ್ಚಿ ಕುಳಿತಿರುವುದು ಏನನ್ನೂ ಸೂಚಿಸುತ್ತದೆ. ಸಣ್ಣ-ಪುಟ್ಟ ವ್ಯಾಪಾರಿಗಳಿಗೆ ಕಿರುಕುಳ ನೀಡಿ ತೆರಿಗೆ ವಸೂಲಿ ಮಾಡುವ ಪಾಲಿಕೆ ಅಧಿಕಾರಿಗಳು, ದೊಡ್ಡ, ಗಣ್ಯರ ತಂಟೆಗೆ ಹೋಗುವುದಿಲ್ಲ. ಅವರು ಏನು ಮಾಡಿದರೂ ಸುಮ್ಮನಿರುತ್ತಾರೆ ಎಂದು ಕಾಂಗ್ರೆಸ್ ಸುಧೀಶ್ವರ್ ಆಕ್ರೋಶ ವ್ಯಕ್ತಪಡಿಸಿದರು. ಸುಧೀಶ್ವರ್ ಜತೆ ಪಟೇಲ್ ನಾಗರಾಜ್, ನಾಗರಾಜ್, ಹಫೀಜ್ ದನಿಗೂಡಿಸಿದರು. ಪಾಲಿಕೆಯಿಂದ ತಪ್ಪಾಗಿದೆ ಎನ್ನುವಂತೆ ಮೇಯರ್, ಆಯುಕ್ತರು, ಇತರೆ ಅಧಿಕಾರಿಗಳು ಮೌನ ವಹಿಸಿದ್ದರು. ಅದೇ ರೀತಿ ತುಮಕೂರಿನಲ್ಲಿ 2 ಕಡೆ ಇರುವ ಮತ್ತೊಂದು ಬಹುಅಂತಸ್ತಿನ ಮಾಲ್ ಪ್ಲಾನೆಟ್ ಮ್ಯಾಕ್ಸ್ ಕೂಡ ಕಳೆದ 3 ವರ್ಷಗಳಿಂದ ತೆರಿಗೆಯನ್ನೇ ಪಾವತಿಸಿಲ್ಲ ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂತು. ಇದನ್ನು ಸ್ವತಃ ಪಾಲಿಕೆಯ ಅಧಿಕಾರಿಗಳೇ ಒಪ್ಪಿಕೊಂಡರು. ಆಯುಕ್ತರು, ಮೇಯರ್ ಮೌನವ್ರತವನ್ನಾಚರಿಸುವಂತೆ ಕುಳಿತಿದ್ದರು.
ಇದೊಂದು ಮಕ್ಕಿಕಾಮಕ್ಕಿ ಬಜೆಟ್. ತುಮಕೂರು ನಗರಸಭೆ ಹೋಗಿ ಪಾಲಿಕೆಯಾಗಿದೆ ಎಂಬುದರ ಪರಿವೆಯೇ ಈ ಬಜೆಟ್ನಲ್ಲಿಲ್ಲ. ಪಾಲಿಕೆಗೆ ಪ್ರತಿ ವರ್ಷ ಸರ್ಕಾರಿಂದ 100 ಕೋಟಿ ರು. ಅನುದಾನ ಬರುತ್ತದೆ ಎಂಬ ಅರಿವೇ ಈ ಬಜೆಟ್ನಲ್ಲಿಲ್ಲ. ದೂರದೃಷ್ಟಿಯ ಕೊರತೆ ಬಜೆಟ್ನಲ್ಲಿ ಎದ್ದು ಕಾಣುತ್ತಿದೆ.
ಟಿ ಜಿ.ಎಸ್. ಬಸವರಾಜು, ಸಂಸದ
ಜನಪರ ಬಜೆಟ್ ಅಲ್ಲ. ಹೊಸ ಆದಾಯದ ಮೂಲ ಒಂದೂ ಇಲ್ಲ. ಆದಾಯದ ಮೂಲಗಳನ್ನು ಹುಡುಕುವ ಪ್ರಯತ್ನವನ್ನೇ ಮಾಡಿಲ್ಲ. ಜಾಹಿರಾತು ಶುಲ್ಕ ವಸೂಲಿಯಲ್ಲಿ ನಿರ್ಲಕ್ಷ್ಯ ವಹಿಸಲಾಗಿದೆ. ಸಾರ್ವಜನಿಕ ಶೌಚಾಲಯಕ್ಕೆ ಈ ವರೆಗೆ ಒಂದು ರು. ಖರ್ಚು ಮಾಡಿಲ್ಲ. ಬಜೆಟ್ ಪೂರ್ವ ಸಲಹೆಗಳನ್ನು ಒಂದೇ ಒಂದು ಅಂಗೀಕರಿಸಿಲ್ಲ.
ಟಿ ನಾಗರಾಜ್, ಜೆಡಿಎಸ್ ಸದಸ್ಯ
ಪಾಲಿಕೆಯಾಗುವ ಹಿನ್ನೆಲೆಯಲ್ಲಿ ಸೇರ್ಪಡೆಯಾದ ತುಮಕೂರು ಸುತ್ತಮುತ್ತಲಿನ 22 ಹಳ್ಳಿಗಳಿಗೆ ಸವಲತ್ತು ನೀಡುವ ಒಂದೇ ಒಂದು ಪ್ರಸ್ತಾವ ಈ ಬಜೆಟ್ನಲ್ಲಿಲ್ಲ. ಹೇಮಾವತಿ ಎರಡನೇ ಹಂತದ ಕುಡಿಯುವ ನೀರು ಬಡವರಿಗೆ ದೊರಕಿಸುವ ಪ್ರಸ್ತಾವ ಇಲ್ಲಿಲ್ಲ. ಖಾಸಗಿ ಬಸ್ಟ್ಯಾಂಡ್ ಮಳಿಗೆಗಳ ಅದ್ವಾನ ಹೇಳತೀರದು. ಇಲ್ಲಿ ಪಾಲಿಕೆಯೇ ಕರೆಂಟ್ ಬಿಲ್ ಕಟ್ಟುವ ದುಸ್ಥಿತಿ ಬಂದೊದಗಿದೆ. ಇದಕ್ಕಿಂತ ದುರಂತ ಬೇಕೆ. ಕೋಟ್ಯಂತರ ರು. ಕಂದಾಯ ಬಾಕಿಯಿದೆ. ಶವಸಾಗಿಸುವ ವಾಹನಕ್ಕೆ ಪ್ರತಿವರ್ಷ ಹಣ ಮೀಸಲಿಡಲಾಗುತ್ತಿದೆ. ಇದು ಕಳೆದ 17 ವರ್ಷಗಳಿಂದ ನಡೆದಿದೆ. ಆದರೆ ವಾಹನ ಮಾತ್ರ ಖರೀದಿಸಿಲ್ಲ. ಈ ಬಜೆಟ್ 1997-98 ರ ಸಾಲಿನ ಬಜೆಟ್ ನಕಲು.
ಟಿ ಸುಧೀಶ್ವರ್, ಕಾಂಗ್ರೆಸ್ ಸದಸ್ಯ
ಜಾಹೀರಾತು ನೀಡಿ, ವಸೂಲಿ ಮಾಡಬೇಕು
ತೆರಿಗೆ ವಂಚನೆ ಅಕ್ಷಮ್ಯ. ಅವರು ಯಾರೇ ಆಗಿದ್ದರೂ, ಎಷ್ಟೇ ದೊಡ್ಡವರಾಗಿದ್ದರೂ ಸರಿ ಮುಲಾಜಿಲ್ಲದೆ ವಸೂಲಿ ಮಾಡಬೇಕು. ಇದರಲ್ಲಿ ಯಾವುದೇ ರಾಜಿಯಾಗಬಾರದು. ತೆರಿಗೆ ವಸೂಲಿಯಾಗದೆ ನಗರದ ಅಭಿವೃದ್ಧಿ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ತಾವು ಸೇರಿದಂತೆ ನಗರದ ಗಣ್ಯರೆನಿಸಿಕೊಂಡವರು, ಅಥವಾ ದೊಡ್ಡ- ದೊಡ್ಡ ವ್ಯಾಪಾರಿ ಸಂಸ್ಥೆಗಳು ತೆರಿಗೆ ಕಟ್ಟಬೇಕು. ಕಾನೂನುಬದ್ಧವಾಗಿ ವ್ಯಾಪಾರ ಮಾಡಬೇಕು. ದೊಡ್ಡವರಿಗೊಂದು, ಸಣ್ಣವರಿಗೊಂಡು ನೀತಿ ಬೇಡ. ತೆರಿಗೆ ಕಟ್ಟದಿದ್ದರೆ, ವಂಚಿಸಿದ್ದರೆ, ಮಾಧ್ಯಮಗಳಿಗೆ ಜಾಹಿರಾತು ನೀಡಿ, ವಸೂಲು ಮಾಡಬೇಕು ಎಂದು ಸಂಸದ ಜಿ.ಎಸ್. ಬಸವರಾಜು ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

