ಐಸಿಡಿಎಸ್ ಮಿಷನ್ ಪ್ರಕ್ರಿಯೆ ತಕ್ಷಣ ಕೈಬಿಡಿ
ಕ.ಪ್ರ.ವಾರ್ತೆ , ತುಮಕೂರು , ಜ.10
ಸರ್ಕಾರ ಐಸಿಡಿಎಸ್ ಮಿಷನ್ ಪ್ರಕ್ರಿಯೆಯನ್ನು ತಕ್ಷಣ ಕೈ ಬಿಡಬೇಕು. ಐಸಿಡಿಎಸ್ ಅನ್ನು ಎನ್ಜಿಓಗಳು, ಕಾರ್ಪೋರೇಟ್ ಹೌಸ್ಗಳು ಸ್ವಸಹಾಯ ಗುಂಪುಗಳು ಇತ್ಯಾದಿಗಳಿಗೆ ವಹಿಸಬಾರದು ಸೇರಿದಂತೆ ಹತ್ತು ಹಲವಾರು ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಅಂಗನವಾಡಿ ನೌಕರರ ಸಂಘ ತುಮಕೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿತು.
ಐಸಿಡಿಎಸ್ ಅನ್ನು ಕ್ರಮ ಬದ್ಧಗೊಳಿಸಿ ಅದನ್ನು ಇಲಾಖೆಯನ್ನಾಗಿ ಉಳಿಸಬೇಕು ಎಂದು ಇದೇ ಸಂದರ್ಭದಲ್ಲಿ ಪ್ರತಿಭಟನಾಕಾರರು ಆಗ್ರಹಿಸಿದರು. ಈಗಿರುವ ಅಂಗನವಾಡಿ ಕಾರ್ಯಕರ್ತೆಯರ ಕೆಲಸವನ್ನು ಬೇರೆಯವರಿಗೆ ವರ್ಗಾಯಿಸಬಾರದು. ಅಂಗನವಾಡಿ ಕೇಂದ್ರದ ಕೆಲಸದ ಅವಧಿ ಹೆಚ್ಚಿರುವುದರಿಂದ ಮತ್ತು 45ನೇ ಐಎಲ್ಸಿ ಶಿಫಾರಸಿನಂತೆ ಬೆಲೆ ಏರಿಕೆಗೆ ತಕ್ಕ ಹಾಗೆ 15 ಸಾವಿರ ಕಾರ್ಯಕರ್ತರಿಗೆ 10 ಸಾವಿರ ಸಹಾಯಕಿಯರಿಗೆ ಕನಿಷ್ಠ ಕೂಲಿ ಕೊಡಬೇಕು ಎಂದು ಆಗ್ರಹಿಸಿದರು.
ನೋಡಲ್ ಕೇಂದ್ರಗಳನ್ನಾಗಿಸಿ: ಐಸಿಡಿಎಸ್ಗಾಗಿ 12ನೇ ಪಂಚವಾರ್ಷಿಕ ಯೋಜನೆ ಶಿಫಾರಸಿನಂತೆ 3 ಲಕ್ಷ ಅನುದಾನ ನೀಡಬೇಕು. ಐಸಿಡಿಎಸ್ ಅನ್ನು ಆಹಾರ ಭದ್ರತೆ ಕಾಯ್ದೆ ವ್ಯಾಪ್ತಿಗೆ ತರಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಎಲ್ಲಾ ಅಂಗನವಾಡಿಗಳನ್ನು ಮೇಲ್ದರ್ಜೆಗೇರಿಸಿ ಕಾಯಂ ಶಿಶು ವಿಹಾರಗಳನ್ನಾಗಿಸಬೇಕು. ಶಾಲಾ ಪೂರ್ವ ಶಿಕ್ಷಣವನ್ನು ಶಿಕ್ಷಣ ಹಕ್ಕು ಕಾಯ್ದೆ 2009 ರ ಅಡಿಯಲ್ಲಿ ತರಬೇಕು. ಅಂಗನವಾಡಿಗಳನ್ನು ಶಾಲಾ ಪೂರ್ವ ಶಿಕ್ಷಣ ಜಾರಿ ಮಾಡುವ ನೋಡಲ್ ಕೇಂದ್ರಗಳನ್ನಾಗಿಸಬೇಕು ಎಂದು ಆಗ್ರಹಿಸಿದರು.
ಸರ್ಕಾರೇತರ ಸಂಘಟನೆಗಳ ಪಾಲುದಾರಿಕೆಯ ಹೆಸರಿನಲ್ಲಿ ಅಂಗನವಾಡಿ ಕೇಂದ್ರಗಳ ಖಾಸಗೀಕರಣ ಮಾಡಬಾರದು. ಈಗಾಗಲೇ ರಾಜ್ಯದ 4 ಜಿಲ್ಲೆಗಳಲ್ಲಿ ವೇದಾಂತ ಫೌಂಡೇಶನ್ ಜತೆ ಮಾಡಿಕೊಂಡ ತಿಳುವಳಿಕೆ ಒಪ್ಪಂದ ರದ್ದುಪಡಿಸಬೇಕು ಎಂದು ಆಗ್ರಹಿಸಿದರು.
ಏಕಪ್ರಕಾರದ ಸೇವಾ ನಿಯಮಾವಳಿ: ದೇಶಾದ್ಯಂತ ಎಲ್ಲಾ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರಿಗೆ ಏಕಪ್ರಕಾರದ ಸೇವಾ ನಿಯಮಾವಳಿ ಮತ್ತು ಕೆಲಸದ ಸ್ಪಷ್ಟವಾದ ನಿರ್ದೇಶನ ನೀಡಬೇಕು. ಸರ್ಕಾರದ ಆದೇಶದಂತೆ ಸಹಾಯಕಿಯರಿಗೆ ಹೆರಿಗೆ ರಜಾ ಸೌಲಭ್ಯ ವ್ಯವಸ್ಥಿತವಾಗಿ ಜಾರಿ ಮಾಡಬೇಕು ಎಂದರು.
ಐಸಿಡಿಎಸ್ ಕೆಲಸಗಳಲ್ಲದೇ ಇತರೇ ಕೆಲಸಗಳನ್ನು ಮಾಡಿಸಬಾರದು. ಸ್ಥಳೀಯವಾಗಿ ಐಸಿಡಿಎಸ್ ಹೊರತಾದ ಕೆಲವು ಕೆಲಸ ಮಾಡುವಂತೆ ಒತ್ತಾಯ ಮಾಡಬಾರದು. ಜಿಲ್ಲಾಧಿಕಾರಿಗಳು ಚುನಾವಣೆಗೆ ಸಂಬಂಧಿಸಿದ ಕೆಲಸಗಳಲ್ಲಿ ಅಂಗನವಾಡಿ ನೌಕರರನ್ನು ತೊಡಗಿಸಬಾರದು ಎಂದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಗೌರವಧನವನ್ನು ಏಕಕಾಲದಲ್ಲಿ ನೀಡಬೇಕು. ಬಜೆಟ್ ಇಲ್ಲ, ಗೌರವಧನವಿಲ್ಲ ಎಂಬಂತಾಗಬಾರದು. ಮಿನಿ ಅಂಗನವಾಡಿಗಳನ್ನು ಪೂರ್ಣ ಅಂಗಡವಾಡಿಗಳನ್ನಾಗಿ ಪರಿವರ್ತಿಸಬೇಕು. ಅಲ್ಲಿಯವರೆಗೆ ಗೌರವಧನವನ್ನು ಕಾರ್ಯಕರ್ತೆಯರಿಗೆ ನೀಡುವಷ್ಟೆ ಕೊಡುವಂತಾಗಬೇಕು ಎಂದರು.
ಈಗಾಗಲೇ ನೀಡುತ್ತಿರುವ ಮರಣ ಪರಿಹಾರ ಮತ್ತು ಕಾಯಿಲೆಗಳಿಗೆ ನೀಡುತ್ತಿರುವ ಹಣವನ್ನು ಕಾರ್ಯಕರ್ತೆ ಮತ್ತು ಸಹಾಯಕಿಯರಿಗೆ ಸಮನಾಗಿ 50 ಸಾವಿರ ರು.ಗಳಿಗೆ ಹೆಚ್ಚಿಸಬೇಕು. ಈ ಸೌಲಭ್ಯ ಕೂಡಲೇ ಸಿಗುವ ರೀತಿ ಕ್ರಮ ವಹಿಸಬೇಕು ಎಂದು ಅಧ್ಯಕ್ಷೆ ಗುಲ್ಜಾರ್ ಬಾನು, ಖಜಾಂಚಿ ಅನುಸೂಯ ಮತ್ತು ಕಾರ್ಯದರ್ಶಿ ಜಿ. ಕಮಲ ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

