ತುಮಕೂರು

ನಾಳೆ ಜಿಜಿವಿಎಸ್ ಸಮ್ಮೇಳನ

Published On :

ಹಾಸನ: ಜಿಲ್ಲೆಯ ಜಲಸಂಪನ್ಮೂಲ ರಕ್ಷಿಸಲು, ಆನೆ ಮತ್ತಿತರ ಕಾಡಪ್ರಾಣಿಗಳಿಗೆ ಸೂಕ್ತ ಆಹಾರ ಸೌಲಭ್ಯ ಒದಗಿಸಿ, ಜನರ ಹಿತ ಕಾಯಲು, ಹಾಸನ ನಗರ ಮತ್ತು ಎಲ್ಲ ತಾಲೂಕು ಕೇಂದ್ರಗಳಲ್ಲೂ ಸುಸಜ್ಜಿತ ವಿಜ್ಞಾನ ಕಾಲೇಜುಗಳನ್ನು ತೆರೆಯಲು ಒತ್ತಾಯಿಸಿ, ಜ.19ರಂದು 5ನೇ ಹಾಸನ ಜಿಲ್ಲಾ ಬಿಜಿವಿಎಸ್ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಬಿಜಿವಿಎಸ್ ಕಾರ್ಯದರ್ಶಿ ಎಚ್.ಎ. ಅಹಮ್ಮದ್ ತಿಳಿಸಿದ್ದಾರೆ. ನಮ್ಮ ಸಂವಿಧಾನದ ಆಶಯವಾದ ವೈಜ್ಞಾನಿಕ ಮನೋಧರ್ಮವನ್ನು ಬಿತ್ತಲು, ನಮ್ಮ ಪ್ರಜಾತಾಂತ್ರಿಕ ವ್ಯವಸ್ಥೆಯನ್ನು ಬಲಿಷ್ಠಗೊಳಿಸಲು, ನಮ್ಮ ದೇಶದ ಜಾತ್ಯಾತೀತ ಮನೋ ಧರ್ಮವನ್ನು ಎತ್ತಿ ಹಿಡಿದು ಜನಜನಿತಗೊಳಿಸುವ ನಿಟ್ಟಿನಲ್ಲಿ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದಿದ್ದಾರೆ.
ರೈನಾ ಸಭಾಂಗಣದಲ್ಲಿ ಸಮ್ಮೇಳನ: ಜ.19ರಂದು ಬೆಳಗ್ಗೆ 10ಕ್ಕೆ ನಗರದ ಹೊಸಲೈನ್ ರಸ್ತೆ, ಉತ್ತರ ಬಡಾವಣೆಯಲ್ಲಿರುವ ಎಸ್.ಜಿ.ಆರ್. ಶಾಲಾ ಆವರಣದಲ್ಲಿರುವ ಶಿಕ್ಷಣ ಹಕ್ಕು ಹರಿಕಾರ ಡಾ. ವಿನೋದ್ ರೈನಾ ಸಭಾಂಗಣ, ರಾಷ್ಟ್ರಕವಿ ಡಾ.ಜಿ.ಎಸ್.ಎಸ್. ವೇದಿಕೆಯಲ್ಲಿ ಸಮ್ಮೇಳನ ನಡೆಯಲಿದೆ ಎಂದು ತಿಳಿಸಿದ್ದಾರೆ.
ಇದರ ಅಧ್ಯಕ್ಷತೆಯನ್ನು ಅಧ್ಯಕ್ಷ ಮಂಡಳಿಯ ಸದಸ್ಯರಾದ ಡಿ. ಅಂತೋಣಿ ಸ್ವಾಮಿ, ವಿ. ಶ್ರೀನಿವಾಸ್ ಹಾಗೂ ಎಚ್.ಟಿ. ಗುರುರಾಜು ವಹಿಸಿಕೊಳ್ಳಲಿದ್ದಾರೆ. ಮಧ್ಯಾಹ್ನ 2ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ ಬಿಜಿವಿಎಸ್ ರಾಜ್ಯ ಕಾರ್ಯದರ್ಶಿ ವಜ್ರಮುನಿ ಸಮಾರೋಪ ಭಾಷಣ ಮಾಡಲಿದ್ದಾರೆ ನೂತವಾಗಿ ಆಯ್ಕೆಯಾದ ಬಿಜಿವಿಎಸ್ ಜಿಲ್ಲಾಧ್ಯಕ್ಷ ಡಿ. ಅಂತೋಣಿಸ್ವಾಮಿ ಅಧ್ಯಕ್ಷತೆ ವಹಿಸುವರು.
ಮಾಂಗಲ್ಯ ಸರ ಕದ್ದು ಪರಾರಿ
ಪಾವಗಡ: ಮಹಿಳೆಯೊಬ್ಬರ ಕೊರಳಲ್ಲಿದ್ದ ಸುಮಾರು 50 ಸಾವಿರ ಮೌಲ್ಯದ ಚಿನ್ನದ ಮಾಂಗಲ್ಯ ಸರ ಕದ್ದು ಪರಾರಿಯಾದ ಘಟನೆ ತಾ, ವೈ.ಎನ್.ಹೊಸಕೋಟೆ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಗ್ರಾಮದ 12ನೇ ಬ್ಲಾಕ್ ನೇಯ್ಗೆ ಕಾಲೋನಿಯಲ್ಲಿ ವಾಸವಾಗಿದ್ದ ಕಮಲಮ್ಮ ಎಂಬವರು ಶುಕ್ರವಾರ ಬೆಳಗ್ಗೆ 7 ಗಂಟೆ ಸಮಯದಲ್ಲಿ ತಮ್ಮ ಮನೆಯ ವಠಾರದಲ್ಲಿ ವಾಕಿಂಗ್ ಮಾಡುವ ಸಂದರ್ಭದಲ್ಲಿ ಏಕಾಏಕಿ ನುಗ್ಗಿದ ದರೋಡೆಕೋರನೊಬ್ಬ ಆಕೆಯ ಕೊರಳಲಿದ್ದ ಮಾಂಗಲ್ಯ ಸರ ಕದ್ದು ಪರಾರಿಯಾಗಿದ್ದಾನೆ.  ಪ್ರಕರಣ ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ತುಮಕೂರು ಕ್ಷೇತ್ರದಿಂದ ಸ್ಪರ್ಧಿಸಲು ಲಿಂಗಾಯತರಿಗೆ ಆದ್ಯತೆ ನೀಡಲು ಆಗ್ರಹ
ತಿಪಟೂರು: ಲೋಕಸಭಾ ಚುನಾವಣೆಯಲ್ಲಿ ವೀರಶೈವ ಲಿಂಗಾಯತ ಅಭ್ಯರ್ಥಿಗೆ ತುಮಕೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟು ಪಕ್ಷದ ಗೆಲವಿಗೆ ಸಹಕಾರ ಮಾಡಿಕೊಡಬೇಕೆಂದು ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಉಪಾಧ್ಯಕ್ಷ ಎಂ.ದಯಾನಂದಸ್ವಾಮಿ ಆಗ್ರಹಿಸಿದ್ದಾರೆ. ತುಮಕೂರು ಲೋಕಸಭಾ ಕ್ಷೇತ್ರ 8 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಈ ಎಲ್ಲಾ ಕ್ಷೇತ್ರಗಳಲ್ಲಿಯೂ ವೀರಶೈವ-ಲಿಂಗಾಯತ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಸ್ವಾತಂತ್ರ್ಯ ಪೂರ್ವ ಮತ್ತು ನಂತರದ ದಿನಗಳಿಂದ ವೀರಶೈವರು ಕಾಂಗ್ರೆಸ್‌ನ್ನು ಬೆಂಬಲಿಸುತ್ತಾ ಬಂದಿದ್ದಾರೆ. ಪ್ರಸ್ತುತ 2014ರ ಸಾರ್ವರ್ತಿಕ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನದೇ ಆದ ಇತಿಹಾಸವನ್ನು ಹೊಂದಿದೆ. ಪಕ್ಷದ ಸಂಘಟನೆ ಹಾಗೂ ಲೋಕಸಭಾ ಚುನಾವಣೆಯ ಗೆಲವಿನ ದೃಷ್ಟಿಯಿಂದ ವಿವಿಧ ಕಾರಣಗಳಿಗಾಗಿ ಪಕ್ಷ ತೊರೆದು ಹೋಗಿದ್ದವರನ್ನು ಪಕ್ಷಕ್ಕೆ ಮರಳಿ ಬರಮಾಡಿಕೊಳ್ಳಬೇಕು. ಅಂತಹವರು ಪಕ್ಷಕ್ಕೆ ಮರಳಿ ಬರುವುದು ಗೆಲವಿನ ದೃಷ್ಟಿಯಿಂದ ಅತ್ಯಗತ್ಯ. ಈ ಕುರಿತು ಎಐಸಿಸಿ ಅಧಿವೇಶನದಲ್ಲಿ ಚರ್ಚಿಸಿ ನಿರ್ಣಯ ಅಂಗೀಕರಿಸುವ ಮೂಲಕ ರಾಷ್ಟಮಟ್ಟದಲ್ಲಿಯೇ ಅಂಥವರಿಗೆ ಮುಕ್ತ ಆಹಢ್ವಾನ ನೀಡಬೇಕೆಂದು ಕಾಂಗ್ರೆಸ್ ನಾಯಕರಿಗೆ ಮನವಿ ಮಾಡಿದ್ದಾರೆ.  
ನಾಳೆ ಕ್ಯಾಲೆಂಡರ್ ಬಿಡುಗಡೆ
ಗುಬ್ಬಿ: ಪಟ್ಟಣದ ಇಂದಿರಾ ಕಲ್ಯಾಣ ಮಂದಿರದಲ್ಲಿ ಜ.19ರಂದು ಶ್ರೀಮಹರ್ಷಿ ವಾಲ್ಮೀಕಿ ಪತ್ತಿನ ಸಹಕಾರ ಸಂಘ ನಿಯಮಿತದ ಪ್ರಾರಂಭೋತ್ಸವ ಮತ್ತು 2014ರ ಕ್ಯಾಲೆಂಡರ್ ಬಿಡುಗಡೆ ಸಮಾರಂಭ ಹಮ್ಮಿಕೊಂಡಿದ್ದು ರಾಜನಹಳ್ಳಿ ಶ್ರೀಮಹರ್ಷಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ, ಶಿಡ್ಲೇಕೋಣೆ ವಾಲ್ಮೀಕಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀವಾಲ್ಮೀಕಿ ಸಂಜಯಕುಮಾರ ಮಹಾ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದಾರೆಂದು ತಾಲೂಕು ಶ್ರೀಮಹರ್ಷಿ ವಾಲ್ಮೀಕಿ ನಾಯಕ ಸೇವಾ ಸಂಘ ಹಾಗೂ ತಾಲೂಕು ಗಿರಿಜನ ನೌಕರರ ಕ್ಷೇಮಾಭಿವೃದ್ಧಿ ಸಂಘ ಪ್ರಕಟಣೆಯಲ್ಲಿ ತಿಳಿಸಿವೆ. ಅಧ್ಯಕ್ಷತೆಯನ್ನು ಶಾಸಕ ಎಸ್.ಆರ್.ಶ್ರೀನಿವಾಸ್ ವಹಿಸಲಿದ್ದು, ಅಬಕಾರಿ ಸಚಿವ ಸತೀಶ್ ಜಾರಕಿಹೊಳಿ ಉದ್ಘಾಟಿಸಲಿದ್ದಾರೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.
ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ
ಹೆಬ್ಬೂರು: ಇಲ್ಲಿಗೆ ಸಮೀಪದ ನಿಡುವಳಲು ಗ್ರಾಮದಲ್ಲಿ ಜ. 18, 19ರಂದು ಲಕ್ಷ್ಮೀದೇವಿ ಅಮ್ಮನವರ ಮೂಲ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದೆ. 18ರಂದು ಬೆಳಗ್ಗೆ 7.30ಕ್ಕೆ ಗಣಪತಿ ಪೂಜೆ, ಅಂಕುರಾರ್ಪಣ, ಧ್ವಜಾರೋಹಣ, ಸಂಜೆ ಕಳಸ ಸ್ಥಾಪನೆ, ಗಣಪತಿ ಹೋಮ, ಮೃತ್ಯುಂಜಯ ಹೋಮ, ಪೂರ್ಣಾಹುತಿ ನಡೆಯಲಿದೆ. 19ರಂದು ನೂತನ ಮೂಲ ವಿಗ್ರಹ ಪ್ರತಿಷ್ಠಾಪನಾ ಸಮಾರಂಭದ ಉದ್ಘಾಟನೆ ನಡೆಯಲಿದೆ. ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿ, ಜಿಲ್ಲಾಧಿಕಾರಿ ಸತ್ಯಮೂರ್ತಿ ಉಪವಿಭಾಗಾಧಿಕಾರಿ ನಕುಲ್, ತಹಶೀಲ್ದಾರ್ ಏಕೇಶ್ ಬಾಬು ಎಸ್‌ಐ ಸಿದ್ದರಾಜು ಭಾಗವಹಿಸಲಿದ್ದು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಕೋರಲಾಗಿದೆ.
ಸವಿತಾ ಸಮಾಜದಿಂದ ಬಂಡೆಗೆ ಸಂತಾಪ
ತಿಪಟೂರು: ಹುತಾತ್ಮ ಪೊಲೀಸ್ ಅಧಿಕಾರಿ ಮಲ್ಲಿಕಾರ್ಜನ ಬಂಡೆಯವರಿಗೆ ತಾಲೂಕು ಸವಿತಾ ಸಮಾಜದ ವತಿಯಿಂದ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ತಾಲೂಕು ಸವಿತಾ ಸಮಾಜದ ಮುಖಂಡ ಟಿ.ಸಿ.ಗೋವಿಂದರಾಜು ಮಾತನಾಡಿ, ಬಂಡೆಯವರ ಕರ್ತವ್ಯ ನಿಷ್ಠೆಗೆ ಸರ್ಕಾರದ ಯಾವುದೇ ಪರಿಹಾರ ಸರಿಸಾಟಿಯಾಗಲಾರದು. ಇನ್ನು ಮುಂದಾದರೂ ಪೊಲೀಸರಿಗೆ ಅಗತ್ಯ ಆಧುನಿಕ ಉಪಕರಣಗಳನ್ನು ನೀಡುವ ಮೂಲಕ ಅವರ ಹಿತ ಕಾಯಬೇಕೆಂದು ಒತ್ತಾಯಿಸಿದರು. ಬಂಡೆಯವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ. ಮೃತರಿಗೆ ಮರಣೋತ್ತರ ಶೌರ್ಯರತ್ನ ಪ್ರಶಸ್ತಿ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದರು.
ಬಿಎಂಎಸ್‌ನ ಪ್ರೇಮಗೆ ಆರನೇ ರ್ಯಾಂಕ್
ತುಮಕೂರು: 2012-13 ನೇ ಸಾಲೀನ ತುಮಕೂರು ವಿ.ವಿ.ಯದ ಕಲಾ ವಿಭಾಗದಲ್ಲಿ ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ಬಿ.ಸಿ. ಪ್ರೇಮ ಆರನೇ ರ್ಯಾಂಕ್ ಪಡೆದಿದ್ದಾರೆ. ವಿದ್ಯಾರ್ಥಿನಿಯನ್ನು ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.
ಪೊಲಿಯೋ ಹನಿ ಹಾಕಿಸಲು ಡಿಸಿ ಮನವಿ
ತುಮಕೂರು: ತುಮಕೂರು ಜಿಲ್ಲೆಯಲ್ಲಿ ಜ. 19ರಿಂದ 22ರವರೆಗೆ ಮೊದಲನೇ ಸುತ್ತಿನ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ನವಜಾತ ಶಿಶು ಹಾಗೂ 5 ವರ್ಷದೊಳಗಿನ ಮಕ್ಕಳಿಗೆ 2 ಹನಿ ಪಲ್ಸ್ ಪೋಲಿಯೋ ಹಾಕಿಸುವಂತೆ ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ಅವರು ಪೋಷಕರಲ್ಲಿ ಮನವಿ ಮಾಡಿದ್ದಾರೆ.  ಈ ಹಿಂದೆ ಎಷ್ಟು ಬಾರಿ ಪೋಲಿಯೋ ಹನಿ ಹಾಕಿಸಿದ್ದರೂ ಪೋಲಿಯೋ ರೋಗವನ್ನು ನಿರ್ಮೂಲನೆ ಮಾಡುವ ಅಂತಿಮ ಹೋರಾಟವಾಗಿರುವುದರಿಂದ 5 ವರ್ಷದೊಳಗಿನ ಮಕ್ಕಳಿಗೆ ತಮ್ಮ ಹತ್ತಿರದ ಬೂತ್‌ಗಳಲ್ಲಿ ಹನಿ ಹಾಕಿಸುವಂತೆ ಅವರು ಮನವಿ ಮಾಡಿದ್ದಾರೆ. ತಮಕೂರು ಜಿಲ್ಲೆಯಲ್ಲಿ 5 ವರ್ಷದೊಳಗಿನ ಮಕ್ಕಳ ಗುರಿ 270112 ಇದ್ದು, 1197 ಲಸಿಕಾ ಕೇಂದ್ರಗಳನ್ನು ತೆರೆಯಲಾಗಿದೆ. 42 ಲಸಿಕಾ ಕೇಂದ್ರಗಳು ಜನನಿಬಿಡ ಸ್ಥಳಗಳಾದ ಬಸ್ ನಿಲ್ದಾಣ, ರೇಲ್ವೆ ನಿಲ್ದಾಣಗಳಲ್ಲಿ ಕಾರ್ಯ ನಿರ್ವಹಿಸುವವು. ನಿರ್ಗಮ ಪ್ರದೇಶ ಹಾಗೂ ವಲಸೆ ತಾಣಗಳ ಮಕ್ಕಳಿಗೆ ಲಸಿಕೆ ನೀಡಲು 6 ಸಂಚಾರಿ ತಂಡಗಳು ಕಾರ್ಯ ನಿರ್ವಹಿಸಲಿವೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಗುರುಸಪ್ತಾಹ, ಶಿಲಾಮೂರ್ತಿ ಪ್ರತಿಷ್ಠಾಪನೆ  
ತಿಪಟೂರು: ತಾಲೂಕಿನ ಪ್ರಸಿದ್ಧ ಪುಣ್ಯಕ್ಷೇತ್ರವಾದ ಕೆರೆಗೋಡಿ-ರಂಗಾಪುರ ಸುಕ್ಷೇತ್ರದಲ್ಲಿ ಶ್ರೀ ಗುರುಸಪ್ತಾಹ, ಆರನೆಯ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿಯವರ ದೇವಾಲಯ ಪ್ರವೇಶ ಹಾಗೂ ಶಿಲಾಮೂರ್ತಿ ಪ್ರತಿಷ್ಠಾಪನಾ  ವಾರ್ಷಿಕ ಮಹೋತ್ಸವ ಕಾರ್ಯಕ್ರಮವು  ಗುರುಪರದೇಶಿಕೇಂದ್ರ ಸ್ವಾಮೀಜಿಯವರ ನೇತೃತ್ವದಲ್ಲಿ ಜ.31ರಿಂದ ಫೆ. 6ರವರೆಗೆ ವಿಜೃಂಭಣೆಯಿಂದ ನಡೆಯಲಿದೆ.
ಜಿಲ್ಲಾ ಮಟ್ಟದ
ಕನ್ನಡ ಚರ್ಚಾ ಸ್ಪರ್ಧೆ
ತುಮಕೂರಿನ ಕಾಳಿದಾಸ ಪದವಿ ಪೂರ್ವ ಕಾಲೇಜು, ರಂಗಮ್ಮ ಮಲ್ಲಪ್ಪ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಫೆ.1ರಂದು ಬೆಳಗ್ಗೆ 10.30ಕ್ಕೆ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗಾಗಿ ಜಿಲ್ಲಾ ಮಟ್ಟದ ಕನ್ನಡ ಚರ್ಚಾಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ಕಾನೂನಿನಿಂದ ಮಾತ್ರ ಮೂಢನಂಬಿಕೆ ನಿವಾರಣೆ ಸಾಧ್ಯ ಎಂಬ ವಿಷಯ ಕುರಿತಂತೆ ಪರ ಹಾಗೂ ವಿರೋಧವಾಗಿ ತಲಾ ಒಬ್ಬರಂತೆ ಒಂದು ಕಾಲೇಜಿನಿಂದ ಇಬ್ಬರು ವಿದ್ಯಾರ್ಥಿಗಳು ಯಾವುದೇ ಪ್ರವೇಶ ಶುಲ್ಕವಿಲ್ಲದೆ ಭಾಗವಹಿಸಬಹುದಾಗಿದೆ. ಆಸಕ್ತ ವಿದ್ಯಾರ್ಥಿಗಳ ಹೆಸರನ್ನು ಜ.30ರೊಳಗಾಗಿ ಪ್ರಿನ್ಸಿಪಾಲರು, ಕಾಳಿದಾಸ ಪದವಿ ಪೂರ್ವ ಕಾಲೇಜು, ಸಿರಾಗೇಟ್ ಇವರಲ್ಲಿ ನೊಂದಾಯಿಸಿಕೊಳ್ಳುವಂತೆ ಕೋರಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.