ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರ ಕೆಲಸ: ಜನರ ಆಕ್ರೋಶ
ಕುಣಿಗಲ್ : ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ತಜ್ಞ ವೈದ್ಯರೊಬ್ಬರು, ಸರ್ಕಾರಿ ಆಸ್ಪತ್ರೆಯ ಕರ್ತವ್ಯದ ವೇಳೆಯಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವುದಕ್ಕೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿ, ಆಡಳಿತ ವೈದ್ಯಾಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ ಘಟನೆ ನಡೆದಿದೆ. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ತಜ್ಞ ವೈದ್ಯರೊಬ್ಬರು, ಶನಿವಾರ ಕರ್ತವ್ಯಕ್ಕೆ ಹಾಜರಾಗಿ ಕೆಲವೆ ಸಮಯಕ್ಕೆ ಹೊರಬಂದು, ನಂತರ ಖಾಸಗಿ ಆಸ್ಪತ್ರೆಗೆ ಆಟೋರಿಕ್ಷಾದಲ್ಲಿ ತೆರಳಿದರೆನ್ನಲಾಗಿದೆ. ತಮ್ಮ ಮಕ್ಕಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಪೋಷಕರು ಕರೆತಂದಾಗ ವೈದ್ಯರ ಕೊಠಡಿ ಬೀಗ ಹಾಕಿದ್ದು, ನಂತರ ವಿಷಯವನ್ನು ಕರವೇ ಅಧ್ಯಕ್ಷ ಮಂಜುನಾಥರ ಗಮನಕ್ಕೆ ತಂದರು. ಸದರಿ ವೈದ್ಯರು ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುವ ಬದಲು ಬೇರೆ ಕಡೆ ಕರ್ತವ್ಯದಲ್ಲಿ ನಿರತಾಗಿರುವ ಬಗ್ಗೆ ಆಡಳಿತಾಧಿಕಾರಿಗಳ ಗಮನಕ್ಕೆ ತಂದ ಹಿನ್ನೆಲೆಯಲ್ಲಿ, ವೈದ್ಯಾಧಿಕಾರಿ ಗಣೇಶಬಾಬು ಈ ಬಗ್ಗೆ ವಿಚಾರಿಸಿ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಸಹಾಯಹಸ್ತ
ಗುಬ್ಬಿ: ಮಹಿಳೆಯರು ಕೌಟುಂಬಿಕ ದೌರ್ಜನ್ಯದಿಂದ ಹಲವಾರು ಮಾನಸಿಕ ಸಮಸ್ಯೆಗಳನ್ನು ಎದುರಿಸುತಿದ್ದು ಅಂತಹ ಮಹಿಳೆಯರಿಗೆ ಸಂರಕ್ಷಣಾ ಕಾಯ್ದೆಯಡಿ ನ್ಯಾಯ ಒದಗಿಸುವತ್ತ ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವುದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಹೊನ್ನೇಶಪ್ಪ ತಿಳಿಸಿದರು. ತಾಲೂಕಿನ ಚೇಳೂರಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖಾವತಿಯಿಂದ ಮಹಿಳೆಯರಿಗೆ ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆ 2005 ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಹಿಳೆಯರ ಹಿತರಕ್ಷಣೆಗಾಗಿ ಸರ್ಕಾರ ಹಲವಾರು ಮಹತ್ವ ಪೂರ್ಣವಾದ ಕಾನೂನುಗಳನ್ನು ಜಾರಿಗೊಳಿಸಿದ್ದು ಸಮಸ್ಯೆಗಳಿಗೆ ಸಿಲುಕಿರುವ ಮಹಿಳೆಯರು ಕಾನೂನಿನ ಸೌಲಭ್ಯಗಳನ್ನು ಬಳಸಿಕೊಂಡು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವಂತೆ ತಿಳಿಸಿದರು. ತಾಲೂಕಿನಾಧ್ಯಂತ ಮಹಿಳೆಯರಿಗೆ ಅರಿವು ಮೂಡಿಸುವಂತಹ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು ಮಹಿಳೆಯರು ಕಾರ್ಯಕ್ರಮಗಳ ಸದುಪಯೋಗ ಪಡೆದುಕೊಂಡು ನೆಮ್ಮದಿಯ ಬದುಕು ಸಾಗಿಸುವಂತೆ ಕರೆನೀಡಿದರು. ಕಾರ್ಯಕ್ರಮದಲ್ಲಿ ಎ.ಸಿ.ಡಿ.ಪಿ.ಒ ಮೃತ್ಯುಂಜಯ, ಸಾಂತ್ವನ ಕೇಂದ್ರದ ನಿರ್ಮಲ, ಮೇಲ್ವಿಚಾರಕಿಯರಾದ ಸಿ.ವಿ. ಲೀಲಾವತಿ, ಟಿ.ಬಿ.ಸ್ವರ್ಣ, ಎಚ್.ಎಸ್.ಜಮುನ, ಸ್ತ್ರೀಶಕ್ತಿ ಮಹಿಳೆಯರು ಉಪಸ್ಥಿತರಿದ್ದರು.
ಇಂದು ಸಾವಿತ್ರಿ ಬಾಯಿಫುಲೆ ಜನ್ಮದಿನಾಚರಣೆ
ಹಾಸನ: ದಲಿತ ಸಾಹಿತ್ಯ ಪರಿಷ, ಸಮತಾ ಸೈನಿಕ ದಳ, ನಾಗಭೂಮಿ ವಿವಿಧೋದ್ದೇಶ ಅಭಿವೃದ್ಧಿ ಸಂಸ್ಥೆಯ ಆಶ್ರಯದಲ್ಲಿ ಮಾತೆ ಸಾವಿತ್ರಿ ಬಾಯಿ ಫುಲೆಯವರ ಜನ್ಮದಿನಾಚರಣೆ ಮತ್ತು ವಿಚಾರ ಸಂಕಿರಣವನ್ನು ಜ.19ರಂದು ಬೆಳಗ್ಗೆ 10.30ಕ್ಕೆ ನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಆಯೋಜಿಸಲಾಗಿದೆ.
ಕಾರ್ಯಕ್ರಮವನ್ನು ದಸಂಸ ಇಂದಿರಾ ಕೃಷ್ಣಪ್ಪ ಉದ್ಘಾಟಿಸುವರು. ದಸಾಪ ಅಧ್ಯಕ್ಷ ಹೆತ್ತೂರು ನಾಗರಾಜ್ ಅಧ್ಯಕ್ಷತೆ ವಹಿಸುವರು. ಪತ್ರಕರ್ತೆ ಸುವರ್ಣ ಪ್ರಾಸ್ತಾವಿಕವಾಗಿ ಮಾತನಾಡುವರು. ಸಾಹಿತಿ ಸಮತಾ ದೇಶಮಾನೆ ಉಪನ್ಯಾಸ ನೀಡುವರು. ಒಡನಾಡಿ ಸಂಸ್ಥೆಯ ಪರಶುರಾವ್, ಎಎಸ್ಪಿ ಜೆ.ಕೆ. ರಶ್ಮಿ, ಸಾಹಿತಿ ಬಾನುಮುಷ್ತಾಕ್ ಇತರರು ಭಾಗವಹಿಸುವರು.
ವಿಪ್ರ ಸ್ನೇಹ: ಸೌಹಾರ್ದ ಕೂಟ
ಹಾಸನ: ನಗರ ಬ್ರಾಹ್ಮಣಸಭಾದ ವತಿಯಿಂದ ವಿಪ್ರಸ್ನೇಹ- ಸೌಹಾರ್ದ ಕೂಟವನ್ನು ಜ.19ರಂದು ಬೆಳಗ್ಗೆ 10ಕ್ಕೆ ನಗರದ ಶೃಂಗೇರಿ ಶಂಕರಮಠದಲ್ಲಿ ಆಯೋಜಿಸಲಾಗಿದೆ. ಅಂತರರಾಷ್ಟ್ರೀಯ ತರಬೇತಿದಾರ ಚೇತನ್ ರಾವ್ ಉದ್ಘಾಟಿಸುವರು.
ಮಾಯಸಂದ್ರ ಮಾದರಿ ಹಿರಿಯ ಶಾಲೆಯಲ್ಲಿ ಸೈಕಲ್ ವಿತರಣೆ
ತುರುವೇಕೆರೆ: ತಾಲೂಕಿನ ಮಾಯಸಂದ್ರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 66 ವಿದ್ಯಾರ್ಥಿಗಳಿಗೆ ಉಚಿತವಾಗಿ ಸೈಕಲ್ ವಿತರಣೆ ಮಾಡಲಾಯಿತು. ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ ಮಾಡಿ ಮಾತನಾಡಿದ ಜಿಲ್ಲಾ ಪಂಚಾಯ್ತಿ ಸದಸ್ಯ ಶ್ರೀನಿವಾಸ್ ಸರ್ಕಾರ ನೀಡಿರುವ ಸವಲತ್ತುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಸೈಕಲ್ ಅನ್ನು ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಜನೆಗೆ ಮಾತ್ರ ಬಳಸಬೇಕು. ಪೋಷಕರೂ ಸಹ ಜವಾಬ್ದಾರಿಯನ್ನು ಅರಿತು ಮಕ್ಕಳ ಶ್ರೇಯೋಭಿವೃಧ್ಧಿಗೆ ಶ್ರಮಿಸಬೇಕು ಎಂದರು. ಸರ್ಕಾರ ಇತ್ತೀಚೆಗೆ ಒಂದನೇ ತರಗತಿಯ ಹೆಣ್ಣು ಮಕ್ಕಳಿಗೆ ದಿನಂ ಪ್ರತಿ 2 ರು. ನಂತೆ ಹಾಜರಾತಿಗೆ ನೀಡಲಾಗುತ್ತಿದೆ. ಅದನ್ನು ಗಂಡು ಮಕ್ಕಳಿಗೂ ವಿಸ್ತರಿಸಬೇಕು ಎಂದು ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯೆ ಲೀಲಾವತಿ ಗಿಡ್ಡಯ್ಯ ಸರ್ಕಾರವನ್ನು ಒತ್ತಾಯಿಸಿದರು. ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಆನಡಗು ಕುಮಾರ್ ಮಾತನಾಡಿ ಸೈಕಲ್ ವಿತರಣೆ ಮಾಡುತ್ತಿರುವುದರಿಂದ ದೂರದ ಪ್ರದೇಶದಿಂದ ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ಪ್ರಯೋಜನವಾಗಿದೆ. ಇದರಿಂದಾಗಿ ಹಾಜರಾತಿಯಲ್ಲೂ ಸಹ ಪ್ರಗತಿ ಆಗಿದೆ ಎಂದರು. ಶಾಲಾ ಮುಖ್ಯೋಪಧ್ಯಾಯ ರಮೇಶ್ ಮಾತನಾಡಿ ಸರ್ಕಾರ ನೀಡಿರುವ ಸವಲತ್ತುಗಳು ಕೆಲವು ನಿಬಂಧನೆಗಳನ್ನು ಒಳಗೊಂಡಿದೆ. ಉಲ್ಲಂಘನೆಯಾದಲ್ಲಿ ಸರ್ಕಾರ ನೀಡಿರುವ ಸವಲತ್ತನ್ನು ಹಿಂಪಡೆಯಲಾಗುತ್ತದೆ ಎಂದರು.
ನಾಳೆ ಸಮಾರೋಪ ಸಮಾರಂಭ
ಶಿರಾ: ಸರ್ಕಾರಿ ಪ.ಪೂ. ಕಾಲೇಜು ವತಿಯಿಂದ 2013-14ನೇ ಸಾಲಿನ ಸಾಂಸ್ಕೃತಿ, ಕ್ರೀಡೆ ಹಾಗೂ ರೆಡ್ ರಿಬ್ಬನ್ ಕ್ಲಬ್ ಸಮಾರೋಪ ಸಮಾರಂಭವನ್ನು ಜ. 20 ಸೋಮವಾರ ಬೆಳಿಗ್ಗೆ 11 ಗಂಟೆಗೆ ಕಾಲೇಜಿನ ಆವರಣದಲ್ಲಿ ಏರ್ಪಡಿಸಲಾಗಿದೆ. ಸಮಾರಂಭವನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಟಿ.ಬಿ.ಜಯಚಂದ್ರ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಪ.ಪೂ. ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಜಯಪ್ರಕಾಶ್ ವಹಿಸಲಿದ್ದು, ನಿವೃತ್ತ ಪ್ರಾಧ್ಯಾಪಕ ವಿ. ವೀರಭದ್ರಯ್ಯ ಸಮಾರೋಪ ಭಾಷಣ ಮಾಡಲಿದ್ದಾರೆ.
ಪೋಲಿಯೊಗೆ ಸಿದ್ಧತೆ
ಕುಣಿಗಲ್: ತಾಲಾಕಿನಾದ್ಯಂತ ಜ. 19ರಂದು ನಡೆಯಲಿರುವ ಪಲ್ಸ್ ಪೋಲಿಯೊ ಕಾರ್ಯಕ್ರಮಕ್ಕೆ ಎಲ್ಲಾ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ತಾಲೂಕು ಆರೋಗ್ಯ ವೈದ್ಯಾಧಿಕಾರಿ ಶಾಂತಲ ತಿಳಿಸಿದ್ದಾರೆ. 19ರ ಭಾನುವಾರ ಬೆಳಗ್ಗೆ ಶಾಸಕ ಡಿ.ನಾಗರಾಜಯ್ಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ತಾಪಂ ಅಧ್ಯಕ್ಷರು ಸೇರಿದಂತೆ ಮತ್ತಿತರರು ಉಪಸ್ಥಿತರಿರುವರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

