ಡಬ್ಬಿಂಗ್ಗೆ ಅವಕಾಶ ನೀಡಿದರೆ ಮತ್ತಷ್ಟು ಸಮಸ್ಯೆ
ಕನ್ನಡಪ್ರಭ ವಾರ್ತೆ ತುಮಕೂರು ಜ.27
ಕನ್ನಡ ಚಿತ್ರರಂಗದಲ್ಲಿ ಡಬ್ಬಿಂಗ್ ವಿರೋಧಿಸಿ ಕನ್ನಡಸೇನೆ ನೇತೃತ್ವದಲ್ಲಿ ಸಾಹಿತಿಗಳು, ಕಲಾವಿದರು ಹಾಗೂ ಪ್ರಗತಿಪರರು ಸಭೆ ನಡೆಸಿ ಡಬ್ಬಿಂಗ್ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಕನ್ನಡ ಸೇನೆಯ ನೇತೃತ್ವದಲ್ಲಿ ನಗರದ ಗಾಯಿತ್ರಿ ಚಿತ್ರಮಂದಿರದ ಮುಂಭಾಗದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ಸೋ.ಮು.ಭಾಸ್ಕರಾಚಾರ್, ಕಲಾವಿದ ಹನುಮಂತಗೌಡ, ಎಚ್.ಆರ್. ವೆಂಕಟಾಚಲಪತಿ, ಕನ್ನಡ ಸೇನೆ ನಗರಾಧ್ಯಕ್ಷ ವಿಠ್ಠಲ್, ಜಿಲ್ಲಾ ಬಸವಸೇನೆಯ ಅಧ್ಯಕ್ಷ ಡಿ.ಗಂಗರಾಜು, ಟಿ.ಆರ್. ಸದಾಶಿವಯ್ಯ, ಆರ್. ಸ್ವಾಧೀನ್, ಶ್ರೀಧರ್, ಮಧು, ರಾಮಮೂರ್ತಿರಾವ್ ಮತ್ತು ಪಿ.ಎನ್. ರಾಮಯ್ಯ ಸೇರಿದಂತೆ ವಿವಿಧ ಗಣ್ಯರು ಭಾಗವಹಿಸಿದ್ದು, ಕನ್ನಡ ನಾಡು, ನುಡಿ, ಸಂಸ್ಕೃತಿಗೆ ಪೆಟ್ಟು ನೀಡುವ ಡಬ್ಬಿಂಗ್ ವಿರುದ್ಧ ಹೋರಾಟ ನಡೆಸಲು ನಿರ್ಧರಿಸಲಾಯಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕನ್ನಡಸೇನೆಯ ಜಿಲ್ಲಾಧ್ಯಕ್ಷ ಹಾಗೂ ಎಪಿಎಂಸಿ ನಿರ್ದೇಶಕ ದನಿಯಾಕುಮಾರ್, ಕನ್ನಡ ಚಿತ್ರರಂಗ ಈಗಾಗಲೇ ಸೋತು ಹೋಗಿದೆ. ಅನೇಕ ಕಲಾವಿದರು, ತಂತ್ರಜ್ಞರು ಕೆಲಸವಿಲ್ಲದ ಪರದಾಡುತ್ತಿದ್ದಾರೆ.ಇಂತಹ ಸಂದರ್ಭದಲ್ಲಿ ಡಬ್ಬಿಂಗ್ಗೆ ಅವಕಾಶ ನೀಡಿದರೆ ಮತ್ತಷ್ಟು ಸಮಸ್ಯೆ ಎದುರಾಗಲಿದೆ. ಕಾರ್ಮಿಕರು, ತಂತ್ರಜ್ಞರು, ಕ್ಯಾಮರಾ ಹಿಂದೆ ಕೆಲಸ ಮಾಡುವವರು ಬೀದಿಗೆ ಬೀಳಬೇಕಾಗುತ್ತದೆ. ಇದರ ಜೊತೆಗೆ ಕನ್ನಡ ಸಂಸ್ಕೃತಿ, ಭಾಷೆಗೆ ದೊಡ್ಡ ಪೆಟ್ಟು ಬೀಳಲಿದೆ. ಆದ್ದರಿಂದ ಯಾರೂ ಡಬ್ಬಿಂಗ್ಗೆ ಬೆಂಬಲ ಸೂಚಿಸಬಾರದು ಎಂದು ಮನವಿ ಮಾಡಿದರು.
ಅರ್ಥವಾಡಿಕೊಳ್ಳಲಿ: ಕನ್ನಡ ಚಿತ್ರರಂಗ ಇಂದು ಅನುಭವಿಸುತ್ತಿರುವ ಸಂಕಷ್ಟದ ಬಗ್ಗೆ ಸ್ಪಷ್ಟ ಅರಿವಿಲ್ಲದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಚಂದ್ರಶೇಖರ ಕಂಬಾರರು ಡಬ್ಬಿಂಗ ಪರವಾಗಿ ಮಾತನಾಡಿದ್ದಾರೆ. ಅವರಿಗೆ ದೇವರು ಒಳ್ಳೆಯ ಬುದ್ಧಿ ನೀಡಲಿ, ನಮ್ಮ ಕಲಾವಿದರು, ತಂತ್ರಜ್ಞರು ಅನುಭವಿಸುತ್ತಿರುವ ನೋವುಗಳನ್ನು ಅವರು ಅರ್ಥ ಮಾಡಿಕೊಳ್ಳಲಿ. ಈ ಹಿಂದೆ ರಾಜ್ಕುಮಾರ್ ಸೇರಿದಂತೆ ಹಿರಿಯ ನಟರು ಗ್ರಾಮೀಣ ಜನಜೀವನ, ಕೃಷಿ ಅಲ್ಲಿನ ಬದುಕು ಕುರಿತು ಸಿನಿಮಾ ಮಾಡಿದಾಗ ಜನತೆ ಕುಟುಂಬ ಸಮೇತರಾಗಿ ಬಂದು ನೋಡಿ ಆನಂದ ಪಡುತ್ತಿದ್ದರು. ಅದೇ ರೀತಿ ಇಂದೂ ಕಥೆಗಾರರು, ಸಾಹಿತಿಗಳು ಗ್ರಾಮೀಣ ಭಾಗಕ್ಕೆ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿ ಆಧ್ಯಯನ ಮಾಡಿ ನೈಜ ಚಿತ್ರಕಥೆ ತಯಾರಿಸಿದರೆ ಖಂಡಿತವಾಗಿಯೂ ಜನತೆ ಒಪ್ಪಿಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಕನ್ನಡ ಚಿತ್ರೋದ್ಯಮ ಬದಲಾವಣೆ ಕಾಣಬೇಕಾಗಿದೆ ಎಂದರು.
ನಾಶ ಮಾಡಲು ಬಿಡೆವು: ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಸೋ.ಮು. ಭಾಸ್ಕರಾಚಾರ್ ಮಾತನಾಡಿ, ಕನ್ನಡ ನಾಡಿಗೆ ತನ್ನದೇ ಆದ ಸಾಂಸ್ಕೃತಿಕ ಮಹತ್ವವಿದ್ದು, ಇದನ್ನು ನಾಶ ಮಾಡಲು ಎಂದಿಗೂ ನಾವು ಬಿಡಬಾರದು. ಸಿನಿಮಾ ಒಂದು ಉದ್ಯಮವಷ್ಟೇ ಅಲ್ಲ ಅದರ ಹಿಂದೆ ಈ ನಾಡಿನ ಕಲೆ, ಸಂಸ್ಕೃತಿ, ಭಾಷೆ ಎಲ್ಲದರ ಬೆಳವಣಿಗೆ ಅಡಗಿದೆ. ಡಬ್ಬಿಂಗ್ ಸಂಸ್ಕೃತಿಯಿಂದಾಗಿ ಕೇವಲ ಕಲಾವಿದರಿಗೆ ತಂತ್ರಜ್ಞರು ಸಂಕಷ್ಟಕ್ಕೆ ಸಿಲುಕುವುದಿಲ್ಲ. ಇದರ ಜೊತೆಗೆ ಕನ್ನಡ ಭಾಷೆ, ಸಂಸ್ಕೃತಿ ಎಲ್ಲರೂ ಸಂಕಷ್ಟ ಅನುಭವಿಸಬೇಕಾಗುತ್ತದೆ ಎಂದರು.
ಹಿರಿತೆರೆ ಮತ್ತು ಕಿರಿತೆರೆ ಕಲಾವಿದ ಹನುಮಂತಗೌಡ ಮಾತನಾಡಿ, ಡಬ್ಬಿಂಗ್ನಿಂದ ಕೇವಲ ಕಲಾವಿದರು ತಂತ್ರಜ್ಞರಿಗಷ್ಟೇ ತೊಂದರೆಯಾಗುವುದಿಲ್ಲ.
ನಮ್ಮ ಸಂಸ್ಕೃತಿಗೆ ಕುತ್ತು ಬೀಳುತ್ತದೆ. ಕಲಾವಿದರು ಹೆಂಡತಿ ಮಕ್ಕಳನ್ನು ಸಾಕಲು ಕೂಲಿ ಮಾಡಲು ತಯಾರಿದ್ದಾರೆ. ನಮ್ಮ ಭಾಷೆ, ಸಂಸ್ಕೃತಿ, ಇತಿಹಾಸ ಎಂಬ ಸೃಜನಶೀಲತೆಯೇ ಡಬ್ಬಿಂಗ್ನಿಂದ ಮಾಯವಾಗಿ ಇನ್ನೊಬ್ಬರ ಮೇಲೆ ಅವಲಂಬಿತವಾಗಬೇಕಾಗುತ್ತದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

