ಭಿಕ್ಷೆ ಬೇಡಿ ಕಿರಣ್ ಕುಟುಂಬಕ್ಕೆ ಪರಿಹಾರ
ತಿಪಟೂರು: ಕರಡಾಳು ಗ್ರಾಮದಲ್ಲಿ ಪೊಲೀಸ್ ದೌರ್ಜನ್ಯದಲ್ಲಿ ಮೃತಪಟ್ಟ ರೈತ ಕಿರಣ್ಕುಮಾರ್ ಕುಟುಂಬಕ್ಕೆ ಶಾಸಕರು ಸರ್ಕಾರದಿಂದ ಪರಿಹಾರ ದೊರಕಿಸಿಕೊಡಲು ಮುಂದಾಗದಿದ್ದರೆ, ಹೋರಾಟ ಸಮಿತಿ ಸಾರ್ವಜನಿಕರಲ್ಲಿ ಭಿಕ್ಷೆ ಬೇಡಿಯಾದರೂ ಅವರ ಕುಟುಂಬಕ್ಕೆ ಪರಿಹಾರದ ನೆರವು ನೀಡಲಿದೆ ಎಂದು ಲೋಕೇಶ್ವರ್ ಹೇಳಿದರು.
ತಾಲೂಕು ಬಿಜೆಪಿ ಮುಖಂಡ ಹಾಗೂ ಜಿಲ್ಲಾ ಬಿಜೆಪಿ ಘಟಕದ ವಿಶೇಷ ಆಹ್ವಾನಿತ ಸದಸ್ಯರಾಗಿರುವ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಾಸಕರು ಮನಸ್ಸು ಮಾಡಿದ್ದರೆ ಪರಿಹಾರ ಕೊಡಿಸಬಹುದಾಗಿತ್ತು. ಆದರೆ, ಈ ವಿಷಯವನ್ನು ರಾಜಕೀಯವಾಗಿ ತೆಗೆದುಕೊಂಡಿರುವ ಶಾಸಕರು, ಗೃಹಸಚಿವರಿಗೆ, ಸರ್ಕಾರಕ್ಕೆ ಸರಿಯಾದ ಮಾಹಿತಿ ನೀಡದೆ ಮರೆಮಾಚಿ ಪರಿಹಾರ ಸಿಗದಂತೆ ನೋಡಿಕೊಂಡಿದ್ದಾರೆ ಎಂದು ಆರೋಪಿಸಿದರು.
ಇತ್ತೀಚೆಗೆ ಶಾಸಕರು ನನ್ನ ಮೇಲೆ ಈ ವಿಷಯವಾಗಿ ವೃಥಾ ಆರೋಪ ಮಾಡಿ, ಪೊಲೀಸರು ತನಗೆ ಸೆಲ್ಯೂಟ್ ಹೊಡೆಯದೇ ಇರುವುದರಿಂದ ನಾನು ಪೊಲೀಸರ ವಿರುದ್ದ ಮಾತನಾಡುತ್ತಿದ್ದೇನೆ ಬಾಲಿಶವಾಗಿ ಆರೋಪಿಸಿದ್ದಾರೆ. ನನಗೆ ಅಂಥ ಆಸೆಯಿದ್ದರೆ ಎಸ್ಎಸ್ಪಿ ಹುದ್ದೆ ತೊರೆಯುತ್ತಿರಲಿಲ್ಲ ಎಂದು ಹೇಳಿದರು.
ಕಿರಣ್ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ದೊರೆಯದಿದ್ದರೆ ಕಾನೂನು ಹೋರಾಟ ಕೂಡಾ ಮಾಡಲಾಗುವುದು ಎಂದು ಅವರು ತಿಳಿಸಿದರು.
ಊಟ ಮಾಡಲು ಕುಳಿತಿದ್ದ ಯುವಕನಿಗೆ ಚಾಕು ಇರಿತ
ತುರುವೇಕೆರೆ: ಪಟ್ಟಣದ ಬಾರ್ವೊಂದರಲ್ಲಿ ಊಟ ಮಾಡಲು ಕುಳಿತಿದ್ದಾಗ ನಡೆದ ಜಗಳದಲ್ಲಿ ಯುವಕನೊಬ್ಬನಿಗೆ ಚಾಕುವಿನಿಂದಿರಿದ ಘಟನೆ ನಡೆದಿದೆ. ಪ್ರವಾಸಿ ಮಂದಿರದ ಬಳಿ ಇರುವ ಬಾರ್ನಲ್ಲಿ ಈ ಘಟನೆ ನಡೆದಿದೆ. ಗುಡ್ಡೇನಹಳ್ಳಿಯ ಮಧುಸೂದನ್(23)ಗೆ ಚೂರಿ ಇರಿಯಲಾಗಿದೆ. ಮಧುಸೂದನ್ ಹಾಗೂ ಧನಂಜಯ್ ಬಾರ್ನಲ್ಲಿ ಊಟ ಮಾಡುತ್ತಿದ್ದರು. ಈ ವೇಳೆ ಅಕ್ಕಪಕ್ಕ ಕುಳಿತ್ತಿದ್ದ ಕೆಲವರ ಜಗಳ ತೆಗೆದಿದ್ದಾರೆ. ಬಳಿಕ ಮುಧುಸೂದನ್ನನ್ನು ಬೈಕ್ನಲ್ಲಿ ಕೂಡ್ರಿಸಿಕೊಂಡು ತಿಪಟೂರು ರಸ್ತೆಯಲ್ಲಿರುವ ಮೊರಾರ್ಜಿ ವಸತಿ ಬಳಿ ಬಂದು ಆತನಿಗೆ ಥಳಿಸಿದ್ದಾರೆ. ಚಾಕುವಿನಿಂದ ಬೆನ್ನು ಹಾಗೂ ಬಲಗೈಗೆ ಇರಿದಿದ್ದಾರೆ. ನೆಲದ ಮೇಲೆ ಬೀಳಿಸಿ ದೊಡ್ಡ ಕಲ್ಲನ್ನು ದೇಹದ ಮೇಲೆ ಹಾಕಬೇಕು ಎನ್ನವಷ್ಟರಲ್ಲಿ ಆ ದಾರಿಯಲ್ಲಿ ಬಂದ ಕೆಲವು ದಾರಿ ಹೋಕರು ತಮ್ಮನ್ನು ಅಪಾಯದಿಂದ ಪಾರು ಮಾಡಿದರು ಎಂದು ಮಧುಸೂಧನ್ ಪೋಲಿಸರಿಗೆ ದೂರು ನೀಡಿದ್ದಾರೆ. ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಕ್ರಮ ಮರಳು ಸಾಗಣೆ: 12 ಲಾರಿಗಳ ವಶ
ಕೊರಟಗೆರೆ: ಕೊರಟಗೆರೆ ಪೊಲೀಸರು ಕಾರ್ಯಾಚರಣೆ ನಡೆಸಿ ಅಕ್ರಮ ಮರಳು ಸಾಗಾಣಿಕೆಯಲ್ಲಿ ತೊಡಗಿದ್ದ 12 ಲಾರಿಗಳನ್ನು ವಶಪಡಿಸಿಕೊಂಡಿದ್ದಾರೆ. ಸಿಪಿಐ ಕೆ.ಆರ್. ಚಂದ್ರಶೇಖರ್ ತಮ್ಮ ಸಿಬ್ಬಂದಿಯೊಂದಿಗೆ ಕಾರ್ಯಾಚರಣೆಯಲ್ಲಿ ತೊಡಗಿ ತೀತ, ಮಾವತ್ತೂರು, ಗಟ್ಲಹಳ್ಳಿ, ಕೆರೆ ಮತ್ತು ರಸ್ತೆಯಲ್ಲಿ ಸಂಚರಿಸುತ್ತಿದ್ದ ಲಾರಿಗಳನ್ನು ವಶಪಡಿಸಿಕೊಂಡಿದ್ದು ತಲಾ ಒಂದು ಲಾರಿಗೆ 27,500 ರು. ದಂಡ ಹಾಗೂ ಮರಳನ್ನು ವಶಪಡಿಸಿಕೊಂಡು ಲಾರಿಗಳನ್ನು ಬಿಡುಗಡೆ ಮಾಡಲಾಗಿದೆ.
ಬೈಕ್ ಉರುಳಿ ರತ್ನಸಂದ್ರ
ಗ್ರಾಪಂ ಕಾರ್ಯದರ್ಶಿ ಸಾವು
ಮಧುಗಿರಿ: ಇಲ್ಲಿಗೆ ಸಮೀಪದ ಗೊಂದಿಹಳ್ಳಿ ಬಳಿ ಬೈಕ್ ಉರುಳಿ ಬಿದ್ದು ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ವೆಂಕಟೇಶಮೂರ್ತಿ(45) ಮೃತಪಟ್ಟ ದುರ್ದೈವಿ. ಈತ ಶಿರಾ ತಾಲೂಕು ರತ್ನಸಂದ್ರ ಗ್ರಾಪಂ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸುತ್ತಿದ್ದ. ತಾನು ವಾಸವಿದ್ದ ದೊಡ್ಡ ಮಾಲೂರು ಗ್ರಾಮಕ್ಕೆ ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ.
ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲ
ತಿಪಟೂರು: ವಿದ್ಯಾರ್ಥಿನಿಯರು, ಮಹಿಳೆಯರ ಮೇಲೆ ಅತ್ಯಾಚಾರ, ಕೊಲೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಹೆಣ್ಣು ಮಕ್ಕಳಿಗೆ ರಕ್ಷಣೆವೇ ಇಲ್ಲ. ಆದ್ದರಿಂದ ಸರ್ಕಾರ ಈ ಬಗ್ಗೆ ನಿರ್ಲಕ್ಷ್ಯ ತಾಳದೆ ಹೆಣ್ಣು ಮಕ್ಕಳ ರಕ್ಷಣೆಗೆ ಮುಂದಾಗಬೇಕೆಂದು ಭಾರತ ವಿದ್ಯಾರ್ಥಿ ಫೆಡರೇಷನ್ ತಾಲೂಕು ಸಮಿತಿ ಒತ್ತಾಯಿಸಿದೆ. ಉಡುಪಿ ಜಿಲ್ಲೆಯ ಕುಂದಾಪುರ ಬೈಂದೂರಿನ ಪಿಯುಸಿ ಹೆಣ್ಣು ಮಗಳ ಮೇಲೆ ಅತ್ಯಾಚಾರ ನಡೆಸಿ, ಕೊಲೆ ಮಾಡಿ ಹತ್ಯೆಗೈದಿದ್ದಾರೆ. ಇಂಥ ಕೊಲೆಘಾತುಕರನ್ನು ಬಂಧಿಸಿ, ತಕ್ಕ ಶಿಕ್ಷೆ ವಿಧಿಸಬೇಕು. ಜೊತಗೆ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸಬೇಕೆಂದು ಜಿಲ್ಲಾಧ್ಯಕ್ಷೆ ಎ.ಎಲ್.ದಿವ್ಯ,ತಾಲ್ಲೂಕು ಸಹಕಾರ್ಯದರ್ಶಿ ಲಾವಣ್ಯ, ತಾಲೂಕು ಅಧ್ಯಕ್ಷ ಅಂಕುಶ, ಜಿಲ್ಲಾ ಉಪಾಧ್ಯಕ್ಷೆ ಮೇಘಶ್ರೀ, ಮೋಹನ್,ಶರತ್,ಚಂದ್ರಶೇಖರ್ ಆಗ್ರಹಿಸಿದ್ದಾರೆ.
ಕಾರ್ಪ್ ಬ್ಯಾಂಕ್ ಶಾಖೆ ಆರಂಭ
ತುರುವೇಕೆರೆ: ಪಟ್ಟಣದ ತಿಪಟೂರು ರಸ್ತೆ ಶಿವ ಕಾಂಪ್ಲೆಕ್ಸ್ನಲ್ಲಿ ಕಾರ್ಪೊರೇಷನ್ ಬ್ಯಾಂಕ್ ಶಾಖೆ ನೂತನವಾಗಿ ಪ್ರಾರಂಭಿಸಲಾಯಿತು. ಡೆಪ್ಯುಟಿ ಜನರಲ್ ಮ್ಯಾನೇಜರ್ ಎ.ಕೆ.ವಿನೋದ್ ನೂತನ ಬ್ಯಾಂಕ್ ಶಾಖೆಯನ್ನು ಉದ್ಘಾಟಿಸಿ, “109 ವರ್ಷಗಳ ಇತಿಹಾಸವಿರುವ ಬ್ಯಾಂಕ್ ಜನಸಾಮಾನ್ಯರ ಜೀವನಾಡಿ. ಸಮಾಜದ ಕೊನೆಯ ಸ್ತರ ದಲ್ಲಿರುವ ವ್ಯಕ್ತಿಗೂ ಈ ಬ್ಯಾಂಕ್ನ ಅಗತ್ಯವಿದೆ ಎಂಬುದನ್ನು ತಮ್ಮ ಬ್ಯಾಂಕ್ ÑÛ¸Þ}Úß®ÚtÒ¥æ’ ಎಂದು ಅವರು ಹೇಳಿದರು. ತಿಪಟೂರಲ್ಲಿ ಆರಂಭವಾದ ಈ ಶಾಖೆ ದೇಶದ 3061ನೇ ಶಾಖೆ ಇದಾಗಿದ್ದು, ರಾಜ್ಯದಲ್ಲಿ 667 ನೇಯದ್ದು ಎಂದು ತಿಳಿಸಿದರು. ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ವಿ.ಶಾಂತಮೂರ್ತಿ ಮಾತನಾಡಿದರು. ಸಮಾರಂಭದಲ್ಲಿ ಚೀಫ್ ಮ್ಯಾನೇಜರ್ ಪಾರ್ಶ್ವನಾಥ್, ಸಾಮಿಲ್ನ ಉದ್ಯಮಿ ಹಾಗೂ ಶಿವ ಕಾಂಪ್ಲೆಕ್ಸ್ನ ಮಾಲೀಕ ಬಾಲಣ್ಣ, ಬ್ಯಾಂಕ್ನ ವ್ಯವಸ್ಥಾಪಕ ರಂಗ ನಾಯಕಲು ಭಾಗವಹಿಸಿದ್ದರು. ಆರ್.ಸತ್ಯನಾರಾಯಣ್ ಸ್ವಾಗತಿಸಿದರು. ಸ್ಮಿತಾ ವಂದಿಸಿದರು.
ಗಿರಿಜಾಕಲ್ಯಾಣ ವಿಶೇಷ ಪೂಜೆ
ಕೊರಟಗೆರೆ: ಪಟ್ಟಣದ ಕನ್ನಿಕಾ ಮಹಲ್ನಲ್ಲಿ ಲೋಕಲ್ಯಾಣಾರ್ಥವಾಗಿ ಹಾಗೂ ಉತ್ತಮ ಮಳೆಗಾಗಿ ವಾಸವಿ ಮಹಿಳಾ ಮಂಡಳಿ ಪದಾಧಿಕಾರಿಗಳಿಂದ ಗಿರಿಜಾಕಲ್ಯಾಣ ವಿಶೇಷ ಪೂಜಾ ಕಾರ್ಯಕ್ರಮ ವಿಜೃಂಭಣೆಯಿಂದ ಆಚರಿಸಲಾಯಿತು. ಇತ್ತೀಚಿನ ದಿನಗಳಲ್ಲಿ ತಂತ್ರಜ್ಷಾನ ಅಭಿವೃದ್ಧಿಯಿಂದ ಧರ್ಮದ ಮೇಲೆ ಜನತೆಗೆ ನಂಬಿಕೆ ಕಳೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಧರ್ಮದ ಪರಂಪರೆ, ಸಂಸ್ಕೃತಿ ಉಳಿಯುವ ದೃಷ್ಟಿಯಿಂದ ಹಾಗೂ ತಾಲೂಕಿನಲ್ಲಿ ಸಮರ್ಪಕ ಮಳೆಯಾಗದೆ ಬರದ ಛಾಯೆ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಕೊರಟಗೆರೆ ಪಟ್ಟಣದಲ್ಲಿ ನೂತನವಾಗಿ ಆಯ್ಕೆಯಾದ ವಾಸವಿ ಮಹಿಳಾ ಮಂಡಳಿ ಸದಸ್ಯರು ಲೋಕಲ್ಯಾಣಾರ್ಥವಾಗಿ ಹಾಗೂ ಉತ್ತಮ ಮಳೆಗಾಗಿ ಗಿರಿಜಾ ಕಲ್ಯಾಣ ವಿಶೇಷ ಪೂಜಾ ಕಾರ್ಯಕ್ರಮ ಆಚರಿಸಿದರು. ಕಾರ್ಯಕ್ರಮದ ಬಗ್ಗೆ ಮಾತನಾಡಿದ ವಾಸವಿ ಮಹಿಳಾ ಮಂಡಳಿ ಪದಾದಿಕಾರಿ ಚಂದ್ರಿಕಾ ನಂಜುಂಡಶ್ರೇಷ್ಠಿ ಲೋಕಕಲ್ಯಾಣಾರ್ಥವಾಗಿ ನಡೆಯುತ್ತಿರುವ ಗಿರಿಜಾಕಲ್ಯಾಣ ಪೂಜಾ ಕಾರ್ಯಕ್ರಮದಿಂದ ಸಮಾಜಕ್ಕೆ ಒಳಿತಾಗಿ ಜನರಲ್ಲಿ ಸುಖ, ಶಾಂತಿ ದೊರೆಯುವುದರೊಂದಿಗೆ ನಿರ್ಮಲ ಮನಸ್ಸು ಉಂಟಾಗುತ್ತದೆ ಎಂದರು. ಈ ಸಂದರ್ಭದಲ್ಲಿ ನೂತನ ವಾಸವಿ ಮಹಿಳಾ ಮಂಡಳಿ ಪದಾದಿಕಾರಿಗಳಾದ ಸುಷ್ಮಅನಿಲ್, ದೀಪಾಶ್ರೀನಿವಾಸ್, ಚಂದ್ರಿಕಾ ನಂಜುಂಡಶ್ರೇಷ್ಠಿ, ಅನಿತಾಬದರಿನಾಥ್, ಪದ್ಮರಮೇಶ್, ಮಂಜುಳಾಪ್ರಸನ್ನ ಕುಮಾರ್, ವಿದ್ಯಾ ನಾಗರಾಜ್, ವಿದ್ಯಾಬದ್ರಿಪ್ರಸಾದ್, ಲಕ್ಷ್ಮೀಅಶೋಕ್, ಸುನಿತಾಮಂಜುನಾಥ್, ಸುಷ್ಮಸುಧೀರ್ ಸೇರಿದಂತೆ ವಾಸವಿ ಮಂಡಳಿ, ವಾಸವಿಯುವಜನ ಮಂಡಳಿ ಪದಾಧಿಕಾರಿಗಳು ಹಾಗೂ ಭಕ್ತಾದಿಗಳು ಭಾಗವಹಿಸಿದ್ದರು.
ವೈದ್ಯಕೀಯ ತಪಾಸಣೆ 22ಕ್ಕೆ
ತಿಪಟೂರು: ಜಿಲ್ಲಾ ಪಂಚಾಯತ್ ಮತ್ತು ಐ.ಇಡಿ.ಎಸ್.ಎಸ್.ಎ ಯೋಜನೆ ವತಿಯಿಂದ ಜು.22ರ ಮಂಗಳವಾರ ಬೆಳಗ್ಗೆ 10ರಿಂದ ಸಂಜೆ 4ಗಂಟೆವರೆಗೆ ಪಟ್ಟಣದ ಬಿಇಓ ಕಚೇರಿ ಹಿಂಭಾಗದಲ್ಲಿರುವ ಜಿ.ಹೆಚ್.ಪಿ.ಎಸ್. ಪ್ರಧಾನ ಶಾಲೆಯಲ್ಲಿ ವೈದ್ಯಕೀಯ ತಪಾಸಣೆ ನಡೆಯಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಭುಸ್ವಾಮಿ ತಿಳಿಸಿದ್ದಾರೆ. ಶಿಬಿರದಲ್ಲಿ ಶ್ರವಣದೋಷ, ದೃಷ್ಟಿ ದೋಶ, ದೈಹಿಕ ದೋಶ, ಬುದ್ದಿ ದೋಶ ಇತರೆ ದೋಷಗಳಿರುವ 6ರಿಂದ 16ರ ವಯೋವಾನದ ತಿಪಟೂರು ತಾಲೂಕಿನ ವಿವಿಧ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿಶೇಷ ಅಗತ್ಯತೆಯುಳ್ಳ ಮಕ್ಕಳಿಗೆ ಉಚಿತವಾಗಿ ವೈದ್ಯಕೀಯ ತಪಾಸಣೆ ಕಾರ್ಯಾಗಾರ ನಡೆಸಲಾಗಿದ್ದು, ತಪ್ಪದೆ ಎಲ್ಲರೂ ಈ ಶಿಬಿರದ ಸದುಪಯೋಗಪಡೆದುಕೊಳ್ಳಬೇಕೆಂದು ತಿಳಿಸಿದ್ದಾರೆ.
ಉಳ್ಳವರು ಬಡವರಿಗೆ ಸಹಾಯ ಮಾಡಲಿ
ಕುಣಿಗಲ್: ಸಮಾಜದಲ್ಲಿ ಆರ್ಥಿಕವಾಗಿ ಸಬಲರಾದವರು, ಸ್ಥಿತಿವಂತರು ಅಶಕ್ತರ, ಬಡವರ ಸಮಸ್ಯೆಗಳ ಪರಿಹಾರಕ್ಕೆ ಶ್ರದ್ಧೆ ಇಟ್ಟು ಶ್ರಮಿಸಿದಾಗ ಇಡೀ ಮನುಕುಲವೇ ನೆಮ್ಮದಿಯಿಂದ ಬಾಳಬಹುದು ಎಂದು ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಕುಣಿಗಲ್ ತಾಲೂಕು ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಮುಖಂಡ ಇಕ್ಬಾಲ್ ಹುಸೇನ್ ಹೇಳಿದರು.
ರಂಜಾನ್ ಹಬ್ಬದ ಪ್ರಯುಕ್ತ ಬುಧವಾರ ತಾಲೂಕಿನಾದ್ಯಂತ ವಿವಿಧೆಡೆ ಇರುವ ಮುಸ್ಲಿಂ ವರ್ಗದಲ್ಲಿನ ಆರ್ಥಿಕ ಅಶಕ್ತ ಕುಟುಂಬಗಳ ಸದಸ್ಯರಿಗೆ ಪಕ್ಷಾತೀತವಾಗಿ ಉಚಿತ ಬಟ್ಟೆ ವಿತರಣೆ ಕಾರ್ಯಕ್ರಮಕ್ಕೆ ಪಟ್ಟಣದ ಕೋಟೆ ಪ್ರದೇಶದಲ್ಲಿ ಚಾಲನೆ ನೀಡಿ ಮಾತನಾಡಿ, ಸಮಾಜದಲ್ಲಿನ ಎಲ್ಲ ವರ್ಗಗಳಲ್ಲೂ ಬಡವರು, ಶ್ರೀಮಂತರು ಇದ್ದಾರೆ. ಉಳ್ಳವರು ತಮ್ಮ ಸಂಪಾದನೆಯಲ್ಲಿ ಸ್ವಲ್ಪವನ್ನಾದರೂ ಇಲ್ಲದವರಿಗೆ ನೀಡಿ ಅವರನ್ನು ಮೇಲಕ್ಕೆತ್ತುವಂತೆ ಮಾಡುವುದು ಭಗವಂತನ ಆಜ್ಞೆಯಾಗಿದೆ. ಆದರಂತೆ, ತಾಲೂಕು ಸೇರಿದಂತೆ ಬೆಂ.ಗ್ರಾ. ಲೋಕಸಭೆ ಕ್ಷೇತ್ರದ ಸಮಾನಮನಸ್ಕರು ಸೇರಿ ಈ ಧರ್ಮ ಕಾರ್ಯ ಹಮ್ಮಿಕೊಂಡಿದ್ದೇವೆ ಎಂದರು.
ಪುರಸಭೆ ಮಾಜಿ ಅಧ್ಯಕ್ಷ ರೆಹಮಾನ್ ಷರೀಫ್ ಮಾತನಾಡಿ, ರಂಜಾನ್ ಹಬ್ಬದ ಅಂಗವಾಗಿ ತಾಲೂಕಿನಾದ್ಯಂತ ಪಕ್ಷಾತೀತವಾಗಿ ಮುಸ್ಲಿಂ ಬಡ ಕುಟುಂಬಗಳಿಗೆ ಹತ್ತು ಸಾವಿರ ಸೀರೆ, ಐದು ಸಾವಿರ ಡ್ರೆಸ್, ಐದು ಸಾವಿರ ಪ್ಯಾಂಟ್, ಶರ್ಟ್ ವಿತರಿಸಲಾಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಕೋಟೆ ಪ್ರದೇಶದ ಪ್ರಾರ್ಥನೆ ಮಂದಿರ ಮತ್ತು ಉರ್ದು ಶಾಲೆ ಸಮೀಪ ಇಕ್ಬಾಲ್ ಹುಸೇನ್ ಕೊಳವೆ ಬಾವಿ ಕಾಮಗಾರಿಗೆ ಚಾಲನೆ ನೀಡಿದರು. ಶೂರಾ ಸಮಿತಿ ಸದಸ್ಯ ನಾಸೀರ್ ಪಾಶ, ಸದಾಖತ್, ಪುರಸಭೆ ಸದಸ್ಯರಾದ ದಸ್ತಗೀರ್, ರಂಗಸ್ವಾಮಿ, ಚಂದ್ರಶೇಖರ್, ಪ್ರಮುಖರಾದ ಆಸೀಫ್ ಷರೀಫ್,ಚಾಂದ್ ಪಾಶ ಇತರರು ಉಪಸ್ತಿತರಿದ್ದರು.
ಮಳವಳ್ಳಿ ಬೀದಿ ಬದಿ
ವ್ಯಾಪಾರಿಗಳ ಪ್ರತಿಭಟನೆ
ಮಳವಳ್ಳಿ: ಬೀದಿ ಬದಿ ವ್ಯಾಪಾರಿಗಳಿಗೆ ಕೇಂದ್ರ ಕಾಯ್ದೆಗೆ ನಿಯಮಾವಳಿಯನ್ನು ರಚಿಸುವುದರ ಜೊತೆಗೆ ಅವರ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪಟ್ಟಣದಲ್ಲಿ ಬುಧವಾರ ಬೀದಿ ಬದಿಯ ಮಾರಾಟಗಾರರು ಪ್ರತಿಭಟನೆ ನಡೆಸಿದರು. ಸಿಐಟಿಯು ನೇತೃತ್ವದಲ್ಲಿ ಬೀದಿ ಬದಿ ವ್ಯಾಪಾರಿಗಳು ಪ್ರತಿಭಟನೆ ಮೆರವಣಿಗೆ ನಡೆಸಿದ ವ್ಯಾಪಾರಿಗಳು ದಾರಿಯುದ್ದಕ್ಕೂ ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಆಡಳಿತದ ವಿರುದ್ಧ ಘೋಷಣೆಗಳನ್ನು ಕೂಗಿದರು. ನಂತರ ತಾಲೂಕು ಕಚೇರಿಗೆ ತೆರಳಿದ ವ್ಯಾಪಾರಿಗಳು ಅಲ್ಲಿ ಕೆಲ ಕಾಲ ಧರಣಿ ನಡೆಸುವ ಮೂಲಕ ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಸಿಐಟಿಯುನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ರಾಮಕೃಷ್ಣ ಹಾಗೂ ಜಿಲ್ಲಾ ಉಪಾಧ್ಯಕ್ಷ ಮಹಾದೇವಮ್ಮ ಅವರು ಶರವೇಗದಲ್ಲಿ ಬೆಳೆಯುತ್ತಿರುವ ನಗರ ಪಟ್ಟಣಗಳ ಜನಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಅಗತ್ಯ ವಸ್ತುಗಳಾದ ಹೂ ಹಣ್ಣು, ತರಕಾರಿ, ಸೊಪ್ಪು, ಮೀನು, ಮಾಂಸ, ಬಟ್ಟೆ ಇನ್ನಿತರ ಆಹಾರ ಪದಾರ್ಥಗಳನ್ನು ಮಾರಾಟ ಮಾಡುವ ವ್ಯಾಪಾರಿಗಳ ಬದುಕಿಗೆ ಯಾವುದೇ ಭದ್ರತೆ ಇಲ್ಲದೆ ನಿತ್ಯ ಯಾತನೆಯ ಬದುಕು ಸಾಗಿಸುತ್ತಿದ್ದಾರೆ ಎಂದು ದೂರಿದರು. ಕೇಂದ್ರ ಸರ್ಕಾರ ಬೀದಿ ಬದಿಯ ವ್ಯಾಪಾರಿಗಳ ಸಂರಕ್ಷಣೆಗಾಗಿ ಜೀವನಾಧಾರ ಸಂರಕ್ಷಣಾ ಕಾಯ್ದೆ-2014ನ್ನು ಜಾರಿಗೆ ತಂದಿದ್ದು ಈ ಕಾಯ್ದೆ ಜಾರಿಗೊಳಿಸುವ ಮೂಲಕ ಈ ವ್ಯಾಪಾರಿಗಳ ಬದುಕು ಹಸನಾಗಿಸಲು ರಾಜ್ಯ ಸರ್ಕಾರ ಮುಂದಾಗಬೇಕೆಂದು ಆಗ್ರಹಿಸಿದರು. ಸಿಐಟಿಯು ಮುಖಂಡರಾದ ಮಹದೇವಮ್ಮ, ಸುನೀತಾ, ಕೃಷ್ಣ, ದೇವರಾಜು, ನಾಗರಾಜು, ಶಿವಣ್ಣ ಸೇರಿದಂತೆ ಹಲವಾರು ಬೀದಿ ಬದಿ ವ್ಯಾಪಾರಿಗಳು ಪಾಲ್ಗೊಂಡಿದ್ದರು.
ಮದ್ದೂರು ತಾಪಂ ಅಧ್ಯಕ್ಷರಾಗಿ
ನಾಗೇಗೌಡ ಅವಿರೋಧ ಆಯ್ಕೆ
ಮದ್ದೂರು: ತಾಲೂಕು ಪಂಚಾಯಿತಿ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ನ ಸಿ.ನಾಗೇಗೌಡ ಹಾಗೂ ಉಪಾಧ್ಯಕ್ಷರಾಗಿ ಗಂಗಾ ಬಲರಾಮ್ ಬುಧವಾರ ಅವಿರೋಧವಾಗಿ ಆಯ್ಕೆಯಾದರು.ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಧಾನಕ್ಕೆ ಸಿ.ನಾಗೇಗೌಡ, ಉಪಾಧ್ಯಕ್ಷ ಸ್ಧಾನಕ್ಕೆ ಗಂಗಾಬಲರಾಮ್ ಹೊರತುಪಡಿಸಿ ಬೇರೆಯವರು ನಾಮಪತ್ರ ಸಲ್ಲಿಸದ ಕಾರಣ ನಾಗೇಗೌಡ ಮತ್ತು ಗಂಗಾ ಬಲರಾಮ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಗಳಾದ, ಉಪವಿಭಾಗಾಧಿಕಾರಿ ಶಾಂತಹುಲ್ಮನಿ ಪ್ರಕಟಿಸಿದರು.ಸಾಮಾನ್ಯ ವರ್ಗಕ್ಕೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ಸಿ.ನಾಗೇಗೌಡ, ರಾಜೀವ್, ಕೆ.ಆರ್.ಮಹೇಶ್. ಪಿ.ಸಂದರ್ಶ ಹಾಗೂ ಧನಂಜಯ ಆಕಾಂಕ್ಷಿತರಾಗಿದ್ದರು. ಉಳಿದ 18 ತಿಂಗಳ ಅವಧಿಯಲ್ಲಿ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಗಳಾದ ಸಿ.ನಾಗೇಗೌಡ ಅವರಿಗೆ ಮೊದಲ 7 ತಿಂಗಳು, ಉಳಿದ ಅವಧಿಗೆ ರಾಜೀವ್ ಅವರಿಗೆ ಅವಕಾಶ ನೀಡಲು ತೀರ್ಮಾನಿಸಲಾಯಿತು.ಉಪಾಧ್ಯಕ್ಷ ಸ್ಧಾನದ ಆಕಾಂಕ್ಷಿಗಳಾದ ಗಂಗಾ ಬಲರಾಮ್, ಮಂಗಳ ಕೃಷ್ಣೇಗೌಡ ಹಾಗೂ ಸುನಂದ ಸುಧಾಕರ್ ತಲಾ 5 ತಿಂಗಳು ಅವಕಾಶ ನೀಡಲು ಮುಖಂಡರು ಒಮ್ಮತದ ತೀರ್ಮಾನ ಕೈಗೊಂಡ ನಂತರ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಆಯ್ಕೆ ಸುಗಮವಾಗಿ ನಡೆಯಿತು.ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಮಾಜಿ ಶಾಸಕರಾದ ಎಸ್.ಎಂ.ಶಂಕರ್, ಕಲ್ಪನಾ ಸಿದ್ದರಾಜು, ಜಿಪಂ ಸದಸ್ಯ ಶಿವಲಿಂಗೇಗೌಡ, ಮುಖಂಡರಾದ ಗುರುಚರಣ್, ಬಿ.ವಿವೇಕಾನಂದ, ಕದಲೂರು ರಾಮಕೃಷ್ಣ, ಜೋಗೀಗೌಡ, ತಾಪಂ ಸದಸ್ಯರಾದ ಲಕ್ಷ್ಮಿಚನ್ನರಾಜು, ರಾಮಚಂದ್ರ, ಕೆ.ಆರ್.ಮಹೇಶ್, ಪಿ.ಸಂದರ್ಶ, ಸುನಂದ, ತಾಪಂ ಇಓ ಸೋಣ್ಣೇಗೌಡ ಅಭಿನಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

