ಕಾಮಗಾರಿ ಗುಣಮಟ್ಟದಿಂದ ಇರಲಿ
ಚೇಳೂರು: ಸಾರ್ವಜನಿಕರ ತೆರಿಗೆಯಿಂದ ಮಾಡುವ ಕಾಮಗಾರಿಗಳು ಒಳ್ಳೆಯ ಗುಣಮಟ್ಟದಿಂದಿರಬೇಕು ಎಂದು ಗುಬ್ಬಿ ಶಾಸಕ ಶ್ರೀನಿವಾಸ್ ಅಭಿಪ್ರಾಯಪಟ್ಟರು.
ಗುಬ್ಬಿ ತಾಲೂಕು ಹೊಸಕೆರೆ ಗ್ರಾಮದಲ್ಲಿ ಚೇಳೂರಿನಿಂದ ಹೊಸಕೆರೆ ಮಾರ್ಗವಾಗಿ ಉನಗನಾಲದವರಗೆ ರಸ್ತೆ ಡಾಂಬರ್ ಹಾಕುವ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಈ ಕಾಮಗಾರಿ 2.75 ಕೋಟಿಯಾಗಿದ್ದು ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು. ಸರ್ಕಾರಿ ಬಸ್ಗಳು ಚೇಳೂರಿನಿಂದ ತುಮಕೂರಿಗೆ ಸಂಚರಿಸುತ್ತಿದ್ದು ಅವುಗಳನ್ನು ಹೊಸಕೆರೆ, ಹಾಗಲವಾಡಿಯವರೆಗೆ ಬಂದು ಹೋಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಂಸದ ಎಸ್.ಪಿ. ಮುದ್ದನುಮೇಗೌಡ ಮಾತನಾಡಿ, ತುಮಕೂರು ಜಿಲ್ಲೆಯಲ್ಲಿ ರಸ್ತೆಯ ಕಾಮಗಾರಿಗಳು ಉತ್ತಮ ಗುಣಮಟ್ಟದಿಂದ ಗುತ್ತಿಗೆದಾರರು ಮಾಡಬೇಕು. ಸರಿಯಾಗಿ ಡಾಂಬರ್ ಮತ್ತು ಜಲ್ಲಿಯನ್ನು ಮಿಶ್ರಣ ಮಾಡದೆ ರಸ್ತೆಯ ಕಾಮಗಾರಿಯನ್ನು ಮಾಡಿದರೆ ರಸ್ತೆಗಳು ಹಾಳಾಗುತ್ತವೆ. ಮಳೆಗಾಲದಲ್ಲಿ ರಸ್ತೆಯ ಮಧ್ಯೆ ನೀರು ನಿಂತು ಗುಂಡಿಗಳು ಬೀಳುತ್ತವೆ. ಆದ್ದರಿಂದ ಗುತ್ತಿಗೆದಾರರು ಉತ್ತಮ ರಸ್ತೆ ನಿರ್ಮಾಣ ಮಾಡಲು ಮುಂದೆ ಬರಬೇಕು ಎಂದರು. ಎಇಇ ತಿಮ್ಮೇಗೌಡ ಹಾಗೂ ಮುಖಂಡರಾದ ಹೊನ್ನಗಿರಿಗೌಡ, ಗುರುರೇಣುಕಾರಾಧ್ಯ, ಶಿವಲಿಂಗಯ್ಯ, ತಮ್ಮಯ್ಯ, ಬಾಬು, ಅರೇಹಳ್ಳಿ ಚನ್ನಬಸವಯ್ಯ ಇತರರು ಇದ್ದರು.
ಗೆದ್ದವರು ಬೀಗದೆ, ಸೋತವರು ಚಿಂತಿಸದೆ ಮುನ್ನಡೆಯಿರಿ: ಪರಶಿವಮೂರ್ತಿ
ಹುಳಿಯಾರು: ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಪಾಠ ಹೇಗೆ ಮುಖ್ಯವೋ ಅದರಂತೆ ಅವರ ಶಾರೀರಿಕ ಹಾಗೂ ಶೈಕ್ಷಣಿಕ ಬೆಳವಣಿಗೆಗೆ ಆಟೋಟಗಳು ಅಷ್ಟೇ ಮುಖ್ಯ ಎಂದು ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಆರ್.ಪರಶಿವಮೂರ್ತಿ ತಿಳಿಸಿದರು. ಹುಳಿಯಾರಿನ ಎಂಪಿಎಸ್ ಶಾಲಾ ಮೈದಾನದಲ್ಲಿ ಮರೆನಡುಪಾಳ್ಯದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವತಿಯಿಂದ ಆಯೋಜಿಸಿದ್ದ ಹೋಬಳಿ ಮಟ್ಟದ ಬಿ ವಿಭಾಗದ ಎರಡು ದಿನಗಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ಪ್ರತಿಯೊಂದು ಆಟದಲ್ಲಿ ಸೋಲು-ಗೆಲವು ಎನ್ನುವುದು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಗೆದ್ದವರು ಬೀಗದೆ, ಸೋತವರು ಚಿಂತಿಸದೆ ಮುನ್ನಡೆಯಬೇಕು ಎಂದರು. ಸಿಆರ್ಪಿ ಪ್ರೇಮಲೀಲಾ ಮಾತನಾಡಿ, ವಿದ್ಯಾರ್ಥಿಗಳ ದೈಹಿಕ ಬೆಳವಣಿಗೆಗೆ ಕ್ರೀಡಾಕೂಟ ಸೂಕ್ತ ವೇದಿಕೆಯಾಗಿದೆ. ಅಲ್ಲದೆ ಪ್ರತಿಭೆಯೆಂಬುದು ಪ್ರತಿಯೊಂದು ಮಗುವಿನಲ್ಲಿ ಸುಪ್ತವಾಗಿರುತ್ತದೆ. ಕ್ರೀಡಾಕೂಟ ಹಾಗೂ ಇನ್ನಿತರ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಅದನ್ನು ಪ್ರದರ್ಶಿಸಬೇಕು ಎಂದರು. ನರಸಿಂಹಮೂರ್ತಿ ಕ್ರೀಡಾಕೂಟದ ಧ್ವಜಾರೋಹಣ ನೆರವೇರಿಸಿದರು. ಎಸ್ಡಿಎಂಸಿಯ ಅಧ್ಯಕ್ಷ ಲಿಂಗರಾಜು, ಎಂಪಿಎಸ್ ಶಾಲೆಯ ನಂದವಾಡಗಿ, ಮರೆನಾಡುಪಾಳ್ಯದ ಮುಖ್ಯಶಿಕ್ಷಕ ಹೊನ್ನಪ್ಪ, ಕ್ಲಸ್ಟರ್ ಮಟ್ಟದ ಸಿ.ಆರ್.ಪಿಗಳು, ಶಾಲಾ ಶಿಕ್ಷಕರು ಉಪಸ್ಥಿತರಿದ್ದರು. ಶಿಕ್ಷಕ ಹನುಮಂತರಾಜ್ ಸ್ವಾಗತಿಸಿ, ನಿರೂಪಿಸಿದರು. ಮೃತ್ಯುಂಜಯ ವಂದಿಸಿದರು.
ಅತ್ಯಾಚಾರ ಖಂಡಿಸಿ ವಿದ್ಯಾರ್ಥಿಗಳ ಪ್ರತಿಭಟನೆ
ಹುಳಿಯಾರು: ದೇಶದೆಲ್ಲೆಡೆ ಮಹಿಳೆಯರು ಮತ್ತು ಬಾಲಕಿಯರ ಮೇಲೆ ದಿನೇ ದಿನೇ ಹೆಚ್ಚುತ್ತಿರುವ ಅತ್ಯಾಚಾರ ಹಾಗೂ ದೌರ್ಜನ್ಯ ಪ್ರಕರಣಗಳನ್ನು ಖಂಡಿಸಿ ಹುಳಿಯಾರಿನ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಸೇರಿದಂತೆ ಪ್ರಗತಿಪರ ಸಂಘಟನೆಯವರು ಒಟ್ಟಾಗಿ ಮಂಗಳವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಬಾಲಕಿಯರು ಮತ್ತು ಮಹಿಳೆಯರ ಮೇಲೆ ಅಮಾನುಷವಾಗಿ ನಡೆಯುತ್ತಿರುವ ಲೈಂಗಿಕ ದೌರ್ಜನ್ಯವನ್ನು ತಡೆಗಟ್ಟಬೇಕು. ಇಂತಹ ಕೃತ್ಯಗಳನ್ನು ಮಾಡುವವರನ್ನು ಹಿಡಿದು ಉಗ್ರ ಶಿಕ್ಷೆ ವಿಧಿಸಬೇಕು. ಅಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರಿಗೆ ಸೂಕ್ತ ರಕ್ಷಣೆ ನೀಡುವ ಮೂಲಕ ಇಂಥ ಘಟನೆಗಳು ಮರುಕಳಿಸದಂತೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ದೇಶವ್ಯಾಪಿ ಈ ಬಗ್ಗೆ ಜಾಗೃತಿ ಆಂದೋಲನಗಳು ನಡೆಯಬೇಕಿದೆ. ಮಹಿಳೆಯರ ಮೇಲೆ ಈ ರೀತಿ ದೌರ್ಜನ್ಯ ನಡೆಯುತ್ತಿದ್ದರೂ ಉಗ್ರ ಕಾನೂನು ಜಾರಿ ಮಾಡುವಲ್ಲಿ ಸರ್ಕಾರ ವಿಫಲಾಗುತ್ತಿದೆ ಎಂದು ದೂರಿದರು.
ಪಟ್ಟಣದ ಬಸ್ ನಿಲ್ದಾಣ, ರಾಜಕುಮಾರ್ ರಸ್ತೆ, ಬಿಎಚ್.ರಸ್ತೆ ಮೂಲಕ ಸಾಗಿದ ಮೆರವಣಿಗೆಯಲ್ಲಿ ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ತಡೆಗಟ್ಟುವಂತೆ ವಿದ್ಯಾರ್ಥಿ ಸಮೂಹ ಘೋಷಣೆ ಕೂಗಿತು. ನಂತರ ರಾಮಗೋಪಾಲ್ ಸರ್ಕಲ್ನಲ್ಲಿ ಮಾನವ ಸರಪಳಿ ರಚಿಸಿ ಉಪತಹಶೀಲ್ದಾರ್ ಸತ್ಯನಾರಾಯಣ ಹಾಗೂ ಗ್ರಾಮಲೆಕ್ಕಿಗ ಶ್ರೀನಿವಾಸ್ ಅವರಿಗೆ ಮನವಿ ಸಲ್ಲಿಸಿದರು.
ಲೈಂಗಿಕ ದೌರ್ಜನ್ಯ ತಡೆಗಟ್ಟುವಲ್ಲಿ ಸರ್ಕಾರ ವಿಫಲ
ಗುಬ್ಬಿ: ಅತ್ಯಾಚಾರ ಪ್ರಕರಣಗಳನ್ನು ತಡೆಗಟ್ಟುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಎಬಿವಿಪಿ ವಿದ್ಯಾರ್ಥಿಗಳು ನಿಟ್ಟೂರಿನಲ್ಲಿ ರಸ್ತೆ ತಡೆ ಚಳುವಳಿ ನಡೆಸಿ ಪ್ರತಿಭಟಿಸಿದರು.
ರಾಜ್ಯದಲ್ಲಿ ನಿರಂತರವಾಗಿ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳನ್ನು ತಡೆಗಟ್ಟುವಲ್ಲಿ ರಾಜ್ಯಸರ್ಕಾರ ವಿಫಲವಾಗಿದೆ ಎಂದು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಆರೋಪಿಸಿ, ಸರ್ಕಾರದ ವಿರುದ್ಧ ತಮ್ಮ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಕರ್ನಾಟಕದಲ್ಲಿ 52 ಪ್ರಕರಣಗಳು ದಾಖಲಾಗಿದ್ದು, ಬೆಂಗಳೂರಿನಲ್ಲಿ ನಡೆದ ಗ್ಯಾಂಗ್ ರೇಪ್ ಪ್ರಕರಣದ ಆರೋಪಿಗಳನ್ನು ನೇಣಿಗೇರಿಸಬೇಕು ಎಂದು ಆಗ್ರಹಿಸಲಾಯಿತು.
ಪ್ರತಿಭಟನೆಯಲ್ಲಿ ಎಬಿವಿಪಿ ಜಿಲ್ಲಾ ಸಹ ಸಂಚಾಲಕ ತೇಜುಮೂರ್ತಿ, ನಗರ ಕಾರ್ಯದರ್ಶಿ ರಂಗನಾಥ, ತಾಲೂಕು ಸಂಚಾಲಕ ಅರುಣ್, ದಯಾನಂದ, ಚಂದನ್, ಚೇತನ್, ರಮ್ಯ, ತನ್ಮಯ, ರೇಖ, ಚಂದ್ರಶೇಕರ್ ಮುಂತಾದರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

