ತುಮಕೂರು

ಹಾಸ್ಯ ಚಕ್ರವರ್ತಿಗೆ ಸರ್ಕಾರಿ ಪ್ರಶಸ್ತಿ ಇಲ್ಲ

Published On :

ತಿಪಟೂರು: ಹಾಸ್ಯ ಚಕ್ರವರ್ತಿ, ಕನ್ನಡದ ಚಾರ್ಲಿಚಾಂಪಿಯನ್ ನರಸಿಂಹರಾಜು ಅವರಿಗೆ ಸಂಘ ಸಂಸ್ಥೆಗಳಿಂದ ನೂರಾರು ಅತ್ಯುತ್ತಮ ಪ್ರಶಸ್ತಿಗಳು ಲಭ್ಯವಾಗಿದ್ದರೂ ಕೇಂದ್ರ ಅಥವಾ ರಾಜ್ಯ ಸರ್ಕಾರದ ಪ್ರಶಸ್ತಿ ದೊರೆಯದಿರುವುದು ಬೇಸರ ತಂದಿದೆ ಎಂದು ದಿ. ನರಸಿಂಹರಾಜು ಅವರ ಪುತ್ರಿ, ಕಲಾವಿದೆ ಸುಧಾನರಸಿಂಹರಾಜು ಅಸಮಾಧಾನ ವ್ಯಕ್ತಪಡಿಸಿದರು.
ಪಟ್ಟಣದ ಬಯಲು ರಂಗಮಂದಿರದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಂಯುಕ್ತಾಶ್ರಯದಲ್ಲಿ ನರಸಿಂಹರಾಜು ಅವರ 91ನೇ ಜನ್ಮದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ನಮ್ಮ ತಂದೆಗೆ ಸರ್ಕಾರ ಈಗಲಾದರೂ ಮರಣೋತ್ತರ ಪ್ರಶಸ್ತಿಯನ್ನು ನೀಡಬಹುದು ಎಂದು ನಿರೀಕ್ಷೆ ನಮ್ಮೆಲ್ಲರಲ್ಲಿದೆ. ತಂದೆಯ ಹುಟ್ಟೂರಾದ ತಿಪಟೂರಿನಲ್ಲಿ ಅವರ ಹೆಸರಿನಲ್ಲಿ ರಂಗಮಂದಿರ ನಿರ್ಮಾಣದ ಮೂಲಕ ಅವರ ನೆನಪನ್ನು ಶಾಶ್ವತವಾಗಿ ಉಳಿಸುವ ಪ್ರಯತ್ನ ನಡೆದಿರುವುದು ಸಮಾಧಾನದ ಸಂಗತಿ. ಈ ಪಟ್ಟಣದ ಒಂದು ಪ್ರಮುಖ ರಸ್ತೆಗೆ ಹಾಸ್ಯ ಚಕ್ರವರ್ತಿಯ ಹೆಸರಿಟ್ಟರೆ ಹಾಸ್ಯ ಚಕ್ರವರ್ತಿಯ ತವರೂರು ತಿಪಟೂರೆಂಬ ಹೆಸರು ಜನಮಾನಸದಲ್ಲಿ ಸದಾಕಾಲವಿರುತ್ತದೆ ಎಂದರು. ಬಳಿಕ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ನಿವೃತ್ತ ಪೊಲೀಸ್ ಅಧಿಕಾರಿ ಲೋಕೇಶ್ವರ ಮಾತನಾಡಿ, ನಮ್ಮ ಸ್ಥಳೀಯರ ಸಾಧನೆ ನಮ್ಮೂರಿನಲ್ಲಿ ನಮಗೆ ಕಾಣುವುದಿಲ್ಲ. ಬೇರೆ ಪ್ರದೇಶಗಳಲ್ಲಿ ನಡೆಯುವ ಕಾರ್ಯಕ್ರಮ, ಸ್ಮಾರಕಗಳ ಮೂಲಕ ಅವರ ಹೆಸರು ಚರ್ಚೆಗೊಳಪಟ್ಟಾಗ ಅವರ ಮಹತ್ವ ನಮಗೆ ತಿಳಿಯುತ್ತದೆ ಎಂದು ತಿಳಿಸಿದರು.
ನರಸಿಂಹರಾಜು ಅವರೊಟ್ಟಿಗೆ ಹಲವು ನಾಟಕಗಳಲ್ಲಿ ಅಭಿನಯಿಸಿದ್ದ ಕಥಾ ಕೀರ್ತನಕಾರ ಡಾ.ಲಕ್ಷ್ಮಣ್ ದಾಸ್ ಮಾತನಾಡಿ, ಕಲಾವಿದರಿಗೆ ಸಾವಿಲ್ಲ. ಅವರು ಮಾಡಿದ ಪಾತ್ರಗಳ ಮೂಲಕ ನಮ್ಮ ಮುಂದೆ ಅಮರರಾಗಿರುತ್ತಾದೆ. ರಂಗಭೂಮಿ ಹಾಗೂ ಚಿತ್ರ ರಂಗಗಳಲ್ಲಿ ಪಾತ್ರಗಳಿಗೆ ಜೀವ ತುಂಬಿ ಪ್ರೇಕ್ಷಕರನ್ನು ನಗಿಸುವ ಹಾಸ್ಯ ಕಲಾವಿದರ ನೈಜ ಜೀವನ ಅತ್ಯಂತ ಕಷ್ಟಕರವಾಗಿರುತ್ತದೆ ಎಂದರು. ಕಸಾಪ ತಾಲೂಕು ಅಧ್ಯಕ್ಷ ಉಜ್ಜಜ್ಜಿ ರಾಜಣ್ಣ ಮಾತನಾಡಿ, ನರಸಿಂಹರಾಜು ಅವರ ಬಗ್ಗೆ ಸಂಶೋಧನೆ ಮಾಡಿ ಡಾಕ್ಟರೇಟ್ ಪಡೆಯುವ ತಾಲೂಕಿನ ಪ್ರಥಮ ವಿದ್ಯಾರ್ಥಿಗೆ ಕಸಾಪ ವತಿಯಿಂದ 10 ಸಾವಿರ ನಗದು ಪ್ರೋತ್ಸಾಹ ಧನ ನೀಡಲಾಗುವುದು ಎಂದರು. ಪ್ರಾಂಶುಪಾಲ ಡಾ.ಜಯದೇವಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮಾರಂಭದಲ್ಲಿ ಕಸಾಪ ಪದಾಧಿಕಾರಿಗಳಾದ ಎಸ್.ಆರ್.ಮಂಜುನಾಥ್, ದಿವಾಕರ್, ಸೋಮಶೇಖರ್, ಮಾಕಳ್ಳಿ ಶಿವಕುಮಾರ್, ಶಾರದಮ್ಮ, ಸೇರಿದಂತೆ ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.