ತುಮಕೂರು

ಕ್ರಾಂತಿಕಾರಿ ಬಸವಣ್ಣ ವೀರಶೈವ ಧರ್ಮ ಸ್ಥಾಪಕನಲ್ಲ

Published On :

ಕೆಳ ಜಾತಿಯ ದಾಸಿಮಯ್ಯ ತುಳಿತಕ್ಕೊಳಗಾದನಲ್ಲ!
ತುಮಕೂರು: ಕ್ರಾಂತಿಯೋಗಿ ಬಸವಣ್ಣನವರ ಪೂರ್ವದಲ್ಲೇ ಇದ್ದ ಆದ್ಯ ವಚನಕಾರನೆಂಬ ಹೆಗ್ಗಳಿಕೆಯ ದೇವರದಾಸಿಮಯ್ಯ, ಅವನ ನಂತರ ಬಂದ ಬಸವ ಯುಗದ ಮಾದಾರ ಚೆನ್ನಯ್ಯ, ಆಯ್ದಕ್ಕಿ ಮಾರಯ್ಯ, ಮಡಿವಾಳ ಮಾಚಯ್ಯ, ಡೋಹರ ಕಕ್ಕಯ್ಯ, ಆಯ್ದಕ್ಕಿ ಲಕ್ಕಮ್ಮ ಮುಂತಾದ 160ಕ್ಕೂ ಹೆಚ್ಚು ಕೆಳವರ್ಗದಿಂದ ಬಂದ ವಚನಕಾರರೂ, ವಚನಕಾರ್ತಿಯರಿಗೆ ಪ್ರಚಾರವೇ ಸಿಗಲಿಲ್ಲ ಎಂದು ನಿವೃತ್ತ ಅರಿವಳಿಕೆ ತಜ್ಞ ಡಾ. ಪುಟ್ಟಶಂಕರಪ್ಪ ವಿಷಾದಿಸಿದರು.
ತುಮಕೂರಿನ ಜ್ಞಾನಬುತ್ತಿ ಸತ್ಸಂಗ ಕೇಂದ್ರ ಆಯೋಜಿಸಿದ್ದ 262ನೇ ಸಾಪ್ತಾಹಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ವಚನ ಸಾಹಿತ್ಯ ಎಂಬ ವಿಷಯದ ಬಗ್ಗೆ ಮಾತನಾಡಿ, ಹನ್ನೆರಡನೇ ಶತಮಾನದಲ್ಲಿ ಮುಂಚೂಣಿಯಲ್ಲಿದ್ದ ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ, ಚೆನ್ನಬಸವಣ್ಣನವರ ವಚನಗಳಿಗೆ ಮಾತ್ರ ವ್ಯಾಪಕವಾದ ಪ್ರಚಾರ ಸಿಕ್ಕಿದೆ ಎಂದರು.
ಬಸವರ್ಪೂದಲ್ಲಿದ್ದ ಸಾಹಿತ್ಯವನ್ನು ಹಾಗೂ ಕೆಳವರ್ಗದವರ ಸಾಹಿತ್ಯವನ್ನು ನಾಶಪಡಿಸಿದರೆ ಬಸವ ಸಾಹಿತ್ಯವೊಂದೇ ಉಳಿಯುವುದು ಹಾಗೂ ಕೆಳವರ್ಗದ ವಚನಕಾರರು ಮೇಲೆ ಬರಬಾರದೆನ್ನುವ ದುರಾಲೋಚನೆಯಿಂದ ಕೆಳವರ್ಗದವರನ್ನು ತುಳಿಯುವ ವ್ಯವಸ್ಥಿತ ಹುನ್ನಾರವಾಗಿದೆ. ನೇಕಾರ ಜಾತಿಯಿಂದ ಬಂದ ದೇವರದಾಸಿಮಯ್ಯ ವೀರಶೈವ ಧರ್ಮಕ್ಕೆ ಭದ್ರಬುನಾದಿ ಹಾಕಿದವನು. ದಾಸಿಮಯ್ಯನನ್ನು ಕೆಳಜಾತಿಯವನೆಂಬ ಕಾರಣಕ್ಕೆ ಅದ್ಯ ವಚನಕಾರನೆಂದು ಕರೆಯಲು ಮೇಲ್ವವರ್ಗದ ವಿಮರ್ಶಕರೇ ಹಿಂಜರಿಯುತ್ತಿದ್ದಾರೆ. ಇವನನ್ನು ಜೇಡರ ದಾಸಿಮಯ್ಯನೆಂದೂ ಕರೆಯುತ್ತಾರೆ. ಆದರೆ ದೇವರ ದಾಸಿಮಯ್ಯ ಹಾಗೂ ಜೇಡರ ದಾಸಿಮಯ್ಯ ಎಂಬ ಬೇರೆ ಬೇರೆ ಹೆಸರಿನ ಒಬ್ಬನೇ ವ್ಯಕ್ತಿಯಾಗಿದ್ದಾನೆ. ಈ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆಯಾಗಲಿ ಎಂದರು.
ಹತ್ತನೇ ಶತಮಾನವು ಕನ್ನಡ ಸಾಹಿತ್ಯದ ಸುವರ್ಣಯುಗವಾಗಿತ್ತು. ಈ ಕಾಲಮಾನದಲ್ಲಿ ಪಂಪ, ರನ್ನ, ಜನ್ನ. ಪೊನ್ನ ಮುಂತಾದ ಕವಿ ದಿಗ್ಗಜರಿಂದ ಶ್ರೇಷ್ಠ ಕೃತಿಗಳು ರಚನೆಯಾದವು. ಈ ಕೃತಿಗಳು ಆಸ್ಥಾನ ಪಂಡಿತರನ್ನು ಮೆಚ್ಚಿಸುವ ಸಾಹಿತ್ಯವಾಗಿತ್ತೇ ವಿನಃ ಜನಸಾಮಾನ್ಯರಿಗೆ ಮುಟ್ಟಲಿಲ್ಲ. ನಂತರ ಹನ್ನೊಂದು-ಹನ್ನೆರಡನೇ ಶತಮಾನದ ಕಾಲಮಾನದಲ್ಲಿ ವಚನ ಸಾಹಿತ್ಯದ ಕ್ರಾಂತಿಯಾಯಿತು. ಈ ನೆಲದ ಭಾಷೆಯ ಸಾಹಿತ್ಯವಾದ ವಚನವು ಜನ ಸಾಮಾನ್ಯರಿಗೆ ಅರ್ಥವಾಗುವ ಸರಳ ಗದ್ಯ ಸಾಹಿತ್ಯವಾಗಿತ್ತು. ವಚನಕಾರರು ಸಾಹಿತಿಗಳಲ್ಲ. ತಮ್ಮ ಆತ್ಮಸಾಕ್ಷಿಗೆ ಅನ್ನಿಸಿದ್ದನ್ನು ಹಾಗೆ ಹೇಳುತ್ತಿದ್ದರು. ವೀರಶೈವ ಧರ್ಮ ಪ್ರಚಾರ ಮಾಡುವ ಉದ್ದೇಶದಿಂದ ವಚನ ಸಾಹಿತ್ಯ ಹುಟ್ಟಿಕೊಂಡಿತು. ಇವು ನೇರವಾಗಿ ಹೃದಯ ಮುಟ್ಟುವಂತಹ ವಚನಗಳಾಗಿವೆ ಎಂದರು.
ಬಸವಣ್ಣ ವೀರಶೈವ ಧರ್ಮದ ಸ್ಥಾಪಕನಲ್ಲ. ಆದರೆ ಈ ಧರ್ಮವನ್ನು ತನ್ನ ವಚನ ಸಾಹಿತ್ಯದ ಮೂಲಕ  ವ್ಯಾಪಕ ಪ್ರಚಾರ ಮಾಡಿದನು. ದಾಸೋಹ ಪದ್ಧತಿ ಬೇರೆ ಯಾವ ದೇಶದಲ್ಲೂ ಕಾಣಲು ಸಾಧ್ಯವಿಲ್ಲ. ಈ ದಾಸೋಹ ಪದ್ಧತಿಯು ದೇವರ ದಾಸಿಮಯ್ಯನ ಕಾಲದಿಂದ ಪ್ರಾರಂಭವಾಯಿತು. ದಾಸೋಹದ ಮೂಲ ಪುರುಷ ದಾಸಿಮಯ್ಯನಾಗಿದ್ದಾನೆ. ಆತ್ಮವೆಂಬುದು ಎಲ್ಲಾ ಪ್ರಾಣಿ, ಪಕ್ಷಿ, ಮಾನವರಿಗೂ ಒಂದೇ ಆಗಿದೆ. ಈ ಆತ್ಮ ಸಾಕ್ಷಾತ್ಕಾರವು ವೀರಶೈವ ಧರ್ಮದ ಗುರಿಯಾಗಿತ್ತು ಎಂದು ವಿಶ್ಲೇಷಿಸಿದರು.
ಜ್ಞಾನಬುತ್ತಿ ಸತ್ಯಂಗ ಕೇಂದ್ರದ ಅಧ್ಯಕ್ಷ ಡಾ. ಎಸ್.ಪಿ. ಪದ್ಮಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಶೈಲಜಾ ಪ್ರಾರ್ಥಿಸಿದರು. ಮಿಮಿಕ್ರಿ ಈಶ್ವರಯ್ಯ ಸ್ವಾಗತಿಸಿದರು. ಡಾ.ಕೆ.ರಾಜಶೇಖರ್ ನಿರೂಪಿಸಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.