ತುಮಕೂರು

ಕುಡಿವ ನೀರು ಪೂರೈಕೆಗೆ ಮೊದಲ ಆದ್ಯತೆ

Published On :

ಜಿ.ಪಂ. ನೂತನ ಪ್ರಭಾರ ಅಧ್ಯಕ್ಷ ವೈ.ಎಚ್. ಹುಚ್ಚಯ್ಯ ಭರವಸೆ ್ಣ ಪಡಿತರ ಸಮರ್ಪಕ ವಿತರಣೆಗೆ ಹೆಚ್ಚಿನ ಗಮನ
ಕ.ಪ್ರ.ವಾರ್ತೆ ತುಮಕೂರು ಜೂ.4
ಕಲ್ಪತರು ಜಿಲ್ಲಾ ವ್ಯಾಪ್ತಿಗೆ ಬರುವ ಎಲ್ಲಾ ಹಳ್ಳಿಗಳಿಗೆ ಕುಡಿಯುವ ನೀರಿಗೆ ಪ್ರಥಮ ಆದ್ಯತೆ ನೀಡುವ ಭರವಸೆಯನ್ನು ಜಿ.ಪಂ. ನೂತನ ಪ್ರಭಾರ ಅಧ್ಯಕ್ಷ ವೈ.ಹೆಚ್. ಹುಚ್ಚಯ್ಯ ನೀಡಿದರು.
ಅವರು ತುಮಕೂರು ಜಿ.ಪಂ. ಸಭಾಂಗಣದಲ್ಲಿ ನೂತನವಾಗಿ ಪ್ರಭಾರ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಬರುವ ತಾ.ಪಂ., ಜಿ.ಪಂ., ಜಿ.ಪಂ. ಗಳಲ್ಲಿ ಗ್ರಾಮ ಪಂಚಾಯತ್ ಒಂದು ರೀತಿಯಲ್ಲಿ ತಾಯಿಬೇರು ಇದ್ದಂತೆ. ಈ ಹಿನ್ನೆಲೆಯಲ್ಲಿ ಎಲ್ಲಾ ಹಳ್ಳಿಗಳಿಗೂ ಕುಡಿಯುವ ನೀರು ನೀಡುವುದರ ಜತೆಗೆ ಆಡಳಿತ ಸುಧಾರಣೆಗೆ ಒತ್ತು ನೀಡುವುದಾಗಿ ತಿಳಿಸಿದರು.
ಜಿಲ್ಲೆಯ ಕೆಲವು ತಾಲೂಕುಗಳಲ್ಲಿ 3150 ಕ್ಕೂ ಹೆಚ್ಚು ಜನ ಫ್ಲೋರೈಡ್ ತಾಪದಿಂದ ಅನಾರೋಗ್ಯಕ್ಕೊಳಗಾಗಿದ್ದು, ಈ ಬಗ್ಗೆ ಜಿ.ಪಂ. ಸದಸ್ಯರು, ಜಿಲ್ಲೆಯ ಸಚಿವರೊಂದಿಗೆ ಸೂಕ್ತ ಸಮಾಲೋಚನೆ ನಡೆಸಿ, ರಾಜ್ಯ ಸರ್ಕಾರ ಹಾಗೂ ಕೇಂದ್ರದ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಜನತೆಗೆ ಉತ್ತಮ ಕುಡಿಯುವ ನೀರು ಒದಗಿಸುವ ಸವಾಲು ತಮ್ಮ ಮುಂದಿದೆ ಎಂದ ಅವರು, ಈ ನಡುವೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆಹಾರ ಸುಧಾರಣೆ, ಪಡಿತರ ಸಾಮಗ್ರಿಗಳ ಸಮರ್ಪಕ ವಿತರಣೆಗೆ ಹೆಚ್ಚಿನ ಗಮನ ಹರಿಸಲಾಗುವುದು ಎಂದರು.
ಅಳಿಲು ಸೇವೆ: ತಾವು ಕಳೆದ 15 ವರ್ಷಗಳಿಂದ ತುಮಕೂರು ಜಿಲ್ಲೆಯ ಗ್ರಾಮೀಣ ಅಭಿವೃದ್ಧಿ, ಪಂಚಾಯತ್‌ರಾಜ್ ಇಲಾಖೆ ವ್ಯವಸ್ಥೆಯಲ್ಲಿ ಸದಸ್ಯನಾಗಿ, ಸಾಮಾಜಿಕ ನ್ಯಾಯ, ಸ್ಥಾಯಿ ಸಮಿತಿ ಅಧ್ಯಕ್ಷನಾಗಿ ಅಳಿಲು ಸೇವೆ ಮಾಡುತ್ತಾ ಬಂದಿರುವ ತಾವು ಇದೀಗ ಜನರ ಪ್ರೀತಿ, ಆಶೀರ್ವಾದದಿಂದ ಜಿ.ಪಂ. ಪ್ರಭಾರ ಅಧ್ಯಕ್ಷನಾಗಿದ್ದು, ಜಿ.ಪಂ.ನ ಎಲ್ಲ 56 ಸದಸ್ಯರುಗಳ ಗೌರವ ಕಾಪಾಡುವ ನಿಟ್ಟಿನಲ್ಲಿ ಯಾವುದೇ ದ್ವೇಷ-ಅಸೂಯೆಯಿಲ್ಲದೆ ಪಕ್ಷಾತೀತವಾಗಿ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವುದಾಗಿ ತಿಳಿಸಿದರು.
ಮೊದಲೇ ದೊರೆಯಬೇಕಿತ್ತು: ಜನರ ಪ್ರೀತಿ, ಆಸೆಯಿಂದಾಗಿ ತಮಗೆ ಇಂದು ದೊರೆತಿರುವ ಸ್ಥಾನಮಾನ ಈ ಮೊದಲೇ ದೊರೆಯಬೇಕಿತ್ತು. ದಿ. ವೈ.ಕೆ.ರಾಮಯ್ಯ ಅವರ ಕಾಲದಲ್ಲಿಯೇ ಅವರೊಂದಿಗೆ ಸತತವಾಗಿ ಕೆಲಸ ಮಾಡುತ್ತಿದ್ದ ತಮಗೆ ಈ ಮೊದಲೇ ಉನ್ನತ ಸ್ಥಾನಮಾನ ದೊರೆಯಬೇಕಿತ್ತು. ಅತ್ಯಾಚಾರದ ಆರೋಪಿಗಳು, ದರೋಡೆಕೋರರೆಲ್ಲಾ ಮಂತ್ರಿಗಳಾಗಿರುವ ಸಂದರ್ಭದಲ್ಲಿ ತಮಗೆ ಇಂದು ದೊರೆತ ಈ ಸ್ಥಾನ ಮೊದಲೇ ದೊರೆಯಬೇಕಿತ್ತು. ಕೆಲವೊಂದು ಕುತಂತ್ರದಿಂದಾಗಿ ಮೊದಲೇ ತಮಗೆ ದೊರೆಯಬೇಕಿದ್ದ ಈ ಸ್ಥಾನ ಇದೀಗ ದೊರೆತಿದೆ ಎಂದು ಯಾರ ಹೆಸರನ್ನೂ ಹೇಳದೆ ಅಸಮಾಧಾನ ಹೊರಹಾಕಿದರು.
ಒಬ್ಬ ಸಾಮಾನ್ಯ ಕುಟುಂಬದಿಂದ ಬಂದ ತಾವು ಈಗಲೂ ಸಹ ಅಧಿಕಾರಕ್ಕಾಗಿ ಯಾವುದೇ ಸ್ಪರ್ಧೆ ನಡೆಸಿಲ್ಲ. ಅಧ್ಯಕ್ಷನಾಗುವ ಯಾವುದೇ ಭ್ರಮೆಯಲ್ಲೂ ತಾವು ಇರಲಿಲ್ಲ. ಜನರ ಆಶೀರ್ವಾದದಿಂದ ಬಂದ ಈ ಅಧಿಕಾರವನ್ನು ಬಳಸಿಕೊಂಡು ತುಮಕೂರು ಜಿ.ಪಂ. ಅನ್ನು ರಾಜ್ಯದಲ್ಲೇ ಮೊದಲ ಜಿ.ಪಂ. ಆಗಿ ಮಾಡಬೇಕೆಂಬ ಹಂಬಲ ಇರುವುದಾಗಿ ತಿಳಿಸಿದರು.
ಜಿ.ಪಂ. ಅಧಿಕಾರಿಗಳಾಗಲಿ, ಗುತ್ತಿಗೆದಾರರಾಗಲಿ ಜನವಿರೋಧಿ ಕೆಲಸ ಮಾಡಿದರೆ ತಾವು ಸಹಿಸುವುದಿಲ್ಲ ಎಂದು ಗುಡುಗಿದರು. ಇದೇ ವೇಳೆ ಜಿಲ್ಲಾ ಪಂಚಾಯತ್ ಸಿಇಓ ಗೋವಿಂದರಾಜು, ಜಿ.ಪಂ. ಸದಸ್ಯರಾದ ರವಿನಾಗರಾಜಯ್ಯ, ಟಿ.ಎಚ್. ಕೃಷ್ಣಪ್ಪ, ನಾರಾಯಣಮೂರ್ತಿ, ಜೆಡಿಎಸ್ ಮುಖಂಡರಾದ ಬೆಳ್ಳಿ ಲೋಕೇಶ್, ಪಾಲಿಕೆ ವಿರೋಧ ಪಕ್ಷದ ನಾಯಕ ಹನುಮಂತರಾಯಪ್ಪ ಸೇರಿದಂತೆ ಅಪಾರ ಬೆಂಬಲಿಗರು, ಮುಖಂಡರು ವೈ.ಎಚ್.ಹುಚ್ಚಯ್ಯ ಅವರಿಗೆ ಅಭಿನಂದನೆ ಸಲ್ಲಿಸಿದರು.

ಏನಂತಾರೆ ಪ್ರಭಾರ ಅಧ್ಯಕ್ಷರು....
1    3150 ಮಂದಿ ಪ್ಲೋರೈಡ್ ಸಮಸ್ಯೆಯಿಂದ ನರಳುತ್ತಿದ್ದಾರೆ
2    ಇಡೀ ರಾಜ್ಯದಲ್ಲೇ ಮಾದರಿ ಜಿ.ಪಂ. ಆಗಿ ರೂಪಿಸುವಾಸೆ
3    ಜನವಿರೋಧಿ ಕೆಲಸವನ್ನು ತಾವೆಂದೂ ಸಹಿಸುವುದಿಲ್ಲ
4    ಪಕ್ಷಾತೀತವಾಗಿ ಅಭಿವೃದ್ಧಿಗೆ ಒತ್ತು ನೀಡುವ ಭರವಸೆ
5    ಅಭಿವೃದ್ಧಿ ಬಗ್ಗೆ ಶೀಘ್ರ ಸಚಿವರೊಂದಿಗೆ ಸಮಾಲೋಚನೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.