ತುಮಕೂರು

ಪರಿಸರ ದಿನಾಚರಣೆ ಒಂದು ದಿನಕ್ಕೆ ಸೀಮಿತ ಬೇಡ

Published On :

-ಆನಂದ ಸಿಂಗ್
ಕುಣಿಗಲ್:  ಪರಿಸರ ದಿನಾಚರಣೆ ಕೇವಲ ಒಂದು ದಿನಕ್ಕೆ ಸೀಮಿತವಾಗದೇ  ನಿತ್ಯವೂ ನಡೆಯಬೇಕಾದ ನಿತ್ಯೋತ್ಸವವಾಗಬೇಕಿದೆ.
ಪರಿಸರ ದಿನಾಚರಣೆ ನೆಪದಲ್ಲಿ  ಪರಿಸರ ಸಂರಕ್ಷಣೆ ಮತ್ತು ಮಾಲಿನ್ಯ ನಿಯಂತ್ರಣಾ ಮಂಡಳಿ, ಅರಣ್ಯ ಇಲಾಖೆ ಸೇರಿದಂತೆ ಇತರೆ ಇಲಾಖೆಗಳು ಗಿಡಗಳನ್ನು ನೆಟ್ಟು, ಪರಿಸರ ಸಂರಕ್ಷಣೆ ಬಗ್ಗೆ ವಿಶೇಷವಾಗಿ ಒಂದು ದಿನ ಅಥವಾ ಕೆಲ ದಿನಗಳ ಮಟ್ಟಿಗೆ ಜಾಗೃತಿ ಮೂಡಿಸಿ ನಂತರ ಇತಿಶ್ರೀ ಹಾಡುತ್ತಾರೆ. ಆದರೆ, ಉತ್ತಮ ಪರಿಸರ ಸಂರಕ್ಷಣೆಯ ಕಾಳಜಿಯಿಂದ ಪರಿಸರ ದಿನಾಚರಣೆಯಲ್ಲಿ ನೆಟ್ಟಂತಹ ಸಸಿಗಳನ್ನು ಸಮರ್ಪಕವಾಗಿ ಉಳಿಸಿ, ಬೆಳೆಸಲು ನಂತರದ ದಿನಗಳಲ್ಲಿ ಕ್ರಮ ಕೈಗೊಳ್ಳದ ಕಾರಣ ಮಾಡಿದ ಕೆಲಸ ನೀರಿನಲ್ಲಿ ಹೋಮವಾದಂತಾಗುತ್ತದೆ.
ಪ್ಲಾಸ್ಟಿಕ್ ಬಳಕೆ: 40 ಮೈಕ್ರಾನ್‌ಗಿಂತಲೂ ಕಡಿಮೆ ಗಾತ್ರದ ಪ್ಲಾಸ್ಟಿಕ್ ಬಳಕೆ ನಿಷೇಧವಾಗಿದ್ದರೂ, ಪಟ್ಟಣ ಸೇರಿದಂತೆ ತಾಲೂಕಿನ ಎಲ್ಲೆಡೆ ರಾಜರೋಷವಾಗಿ ಬಳಕೆಯಾಗುತ್ತಾ, ಪ್ಲಾಸ್ಚಿಕ್ ಮುಕ್ತ ಪರಿಸರ ನಿರ್ಮಾಣದ ಕನಸು ಕಂಡು ಜಾರಿಗೆ ತಂದಂತಹ ಕಾಯಿದೆ ಕೇವಲ ಕಾಗದದಲ್ಲೆ ಉಳಿಯುವಂತಾಗಿದೆ. ಪರಿಸರಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಿರುವ ಮರಗಳನ್ನು, ಪಟ್ಟಣದ ವ್ಯಾಪ್ತಿಯಲ್ಲೆ ಎರಡು ಇಲಾಖೆಗಳ ನಡುವಿನ ಸಮನ್ವಯದ ಕೊರತೆಯಿಂದ ಮನಬಂದಂತೆ, ಅದೂ ಕ್ಷುಲಕ ಕಾರಣಗಳಿಗೆ ಕೊಡಲಿ ಹಾಕುತ್ತಿರುವುದರಿಂದ, ಮನುಷ್ಯರಂತೆ ಈ ಪರಿಸರದಲ್ಲ್ಲಿ ಬಾಳಿ ಬದುಕುವ ಹಕ್ಕನ್ನು ಹೊಂದಿರುವ ಹಲವು ಪಕ್ಷಿ ಸಂಕುಲಗಳು ನೆಲೆ ಕಳೆದುಕೊಂಡು ಪರದಾಡುವಂತಾಗಿದೆ.
ವಾಯುಮಾಲಿನ್ಯಕ್ಕೂ ಕಾರಣ: ಅಭಿವೃದ್ಧಿಗೆ ಪೂರಕವಾಗಿರುವ ಪರಿಸರ ಸ್ನೇಹಿ ಕೈಗಾರೀಕರಣವಾಗಬೇಕಿದ್ದು, ಇದಕ್ಕೆ ವಿರುದ್ಧವೆಂಬಂತೆ ತಾಲೂಕಿನ ಕೈಗಾರಿಕೆ ವಸಾಹತು ಪ್ರದೇಶದಲ್ಲಿನ ಬಹುತೇಕ ಕೈಗಾರಿಕೆಗಳು, ಬೃಹತ್ ಪ್ರಮಾಣದಲ್ಲಿ ಮರ ಹಾಗೂ ಮರದ ಉತ್ಪನ್ನಗಳನ್ನು ಇಂಧನವಾಗಿ ಬಳಸುತ್ತಿರುವ ಕಾರಣ, ಒಂದೆಡೆ ಉರುವಲಿಗಾಗಿ ಮರಗಳ ಬಲಿಯಾಗುತ್ತಿದ್ದರೆ,ಇನ್ನೊಂದೆಡೆ ವಾಯುಮಾಲಿನ್ಯಕ್ಕೂ ಕಾರಣವಾಗುವಂತಾಗಿದೆ. ಇದನ್ನು ನಿಯಂತ್ರಿಸಿ, ಪರಿಸರ ಸಂರಕ್ಷಣೆಗೆ ಶ್ರಮಿಸಬೇಕಾದ ಅರಣ್ಯ ಇಲಾಖಾ ಸಿಬ್ಬಂದಿಗಳ ಜಾಣಕುರುಡುತನದಿಂದ ಅತ್ತ ಉತ್ತಮ ಪರಿಸರ ಸಂರಕ್ಷಣೆಯಾಗದೆ,ಇತ್ತ ಪರಿಸರ ಮಾಲಿನ್ಯಕ್ಕೂ ಕಾರಣವಾಗುತ್ತಿದೆ.
ವೈಜ್ಞಾನಿಕ ವಿಲೇವಾರಿ ಇಲ್ಲ: ಪರಿಸರಕ್ಕೆ ಹಾನಿ ಉಂಟು ಮಾಡುವ ಅಪಾಯಕಾರಿ ತ್ಯಾಜ್ಯಗಳನ್ನು ವೈಜ್ಞಾನಿಕವಾಗಿ ವಿಲೆಮಾಡದ ಕಾರಣ, ಇಂದು ಅಂತರ್ಜಲ ಮಲೀನವಾಗಿ ತಾಲೂಕಿನ ಅಂಚೇಪಾಳ್ಯ ಸುತ್ತಮುತ್ತಲ ಕೆಲ ಪ್ರದೇಶದಲ್ಲಿನ ಕೊಳವೆ ಬಾವಿಯ ನೀರು ಯಾವುದೇ ಬಳಕೆಗೆ ಬಾರದಂತಾಗಿ ಜಲಮಾಲಿನ್ಯ ನಿದರ್ಶನವಾಗಿದೆ. ನಮ್ಮ ಹಿರಿಯರು ನಮಗೆ ಉತ್ತಮ ಪರಿಸರವನ್ನು ಬಿಟ್ಟು ಹೋಗಿದ್ದಾರೆ.
ಈಗಿನ ತಲೆಮಾರಿನ ನಾವು, ಪರಿಸರ ಮತ್ತು ಪ್ರಕೃತಿಯ ಮೇಲೆ ದಾಳಿ ನಡೆಸಿರುವುದರಿಂದ ಪರಿಸರ ಮಾಲಿನ್ಯವಾಗುತ್ತಿದೆ. ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನೀಡುವ ನಿಟ್ಟಿನಲ್ಲಿ ಇನ್ನಾದರೂ ಎಚ್ಚೆತ್ತು,ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ಎಲ್ಲರೂ ಇಚ್ಛಾಶಕ್ತಿಯಿಂದ ಶ್ರಮಿಸುವ ಜೊತೆಯಲ್ಲಿ, ಹೊಣೆಹೊತ್ತಂತ ಇಲಾಖೆಗಳು ಬದ್ಧತೆಯಿಂದ, ಪರಿಣಾಮ ಕಾರಿಯಾಗಿ ಕೆಲಸ ಮಾಡುವ ಮೂಲಕ ಉತ್ತಮ ಪರಿಸರ ನಿರ್ಮಾಣಕ್ಕೆ ಮುಂದಾಗುತ್ತವೆಯೆ ಎಂದು ಕಾದು ನೋಡಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.