ಚುನಾವಣೆ: ಕರುನಾಡು ಪಾರ್ಟಿ ಅಭ್ಯರ್ಥಿಯಿಂದ ಮತಯಾಚನೆ
ಕೊರಟಗೆರೆ: ರಾಜ್ಯದಲ್ಲಿರುವ ಪದವೀಧರರೆಲ್ಲರಿಗೂ ಉದ್ಯೋಗ ಸಿಗಬೇಕು. ಇದಕ್ಕಾಗಿಯೇ ನನ್ನ ಹೋರಾಟ ನಿರಂತರವಾಗಿರುತ್ತದೆ ಎಂದು ಕರುನಾಡು ಪಾರ್ಟಿಯ ಅಭ್ಯರ್ಥಿ ಬಿ.ವೆಂಕಟೇಶ್ ತಿಳಿಸಿದರು. ಕೊರಟಗೆರೆ ಪಟ್ಟಣ ಸೇರಿದಂತೆ ಮಧುಗಿರಿ, ತುಮಕೂರು ಜಿಲ್ಲೆಯ ಇತರೆ ತಾಲೂಕುಗಳಿಗೆ ಭೇಟಿ ನೀಡಿ ಸುದ್ದಿಗಾರದೊಂದಿಗೆ ಮಾತನಾಡಿದರು.
ಸಾಮಾನ್ಯ ಚುನಾವಣೆಗಿಂತ ಬುದ್ಧವಂತರು ಮತ ಹಾಕುವ ಈ ಚುನಾವಣೆ ಬಹಳ ಮಹತ್ವದ್ದು. ಹಾಗಾಗಿ ಮತದಾರರು ಯಾವುದೇ ಆಮೀಷಗಳಿಗೆ ಒಳಗಾಗದೇ ಉತ್ತಮ ಚಾರಿತ್ರ್ಯವಿರುವ ಅಭ್ಯರ್ಥಿಗೆ ಮತ ಹಾಕಬೇಕು. ರಾಷ್ಟ್ರೀಯ ಪಕ್ಷಗಳ ಭರವಸೆಗಳಿಗೆ ಮರುಳಾಗದೇ ಸ್ಥಳೀಯ ಸಮಸ್ಯೆನ್ನು ಅರಿತು ಕೆಲಸ ಮಾಡುವ ಅಭ್ಯರ್ಥಿಗೆ ಮತ ನೀಡಿ ಎಂದು ಅವರು ಮನವಿ ಮಾಡಿದರು.
ಜೂಜು ಅಡ್ಡೆ ಮೇಲೆ ಪೊಲೀಸ್ ದಾಳಿ
ಕುಣಿಗಲ್: ಪಟ್ಟಣದ ಉಪ್ಪಾರರ ಬಡಾವಣೆಯ ಸಾರ್ವಜನಿಕ ಸ್ಥಳದಲ್ಲಿ ಜೂಜಾಟದಲ್ಲಿ ನಿರತರಾಗಿದ್ದ ತಂಡದ ಮೇಲೆ ದಾಳಿ ನಡೆಸಿದ ಪೊಲೀಸರು ಜೂಜುಕೋರರ ಬಳಿ ಇದ್ದ 48 ಸಾವಿರ ನಗದು ವಶಪಡಿಸಿಕೊಂಡಿದ್ದಾರೆ. ಭಾನುವಾರ ಸಂಜೆ ದಾಳಿ ನಡೆಸಿದ ಪಿಎಸೈ ಗುರುಪ್ರಸಾದ್ ಮತ್ತು ಸಿಬ್ಬಂದಿ, ಜೂಜಾಟದಲ್ಲಿ ನಿರತರಾಗಿದ್ದ ಮೋಹನ್, ಸತೀಶ , ರಘು, ಲಿಖಿತ್ಗೌಡ ಅವರನ್ನು ವಶಕ್ಕೆ ಪಡೆದರು. ಈ ವೇಳೆ ಪರಾರಿಯಾದ ಪುರುಷೋತದ್ತಮ್, ನವೀನ್ ಅವರ ಮೇಲೂ ಪ್ರಕರಣ ದಾಖಲಿಸಿ, ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.
ಹಾವು ಕಚ್ಚಿ ಯುವಕ ಸಾವು
ಗುಬ್ಬಿ: ತೆಂಗಿನಕಾಯಿ ಕೀಳಲು ಹೋದ ಯುವಕನಿಗೆ ವಿಷಪೂರಿತ ಹಾವು ಕಚ್ಚಿ ಮೃತಪಟ್ಟ ಘಟನೆ ಗುಬ್ಬಿ ತಾಲೂಕಿನ ಚೇಳೂರು ಹೋಬಳಿ ಅರಿವೇಸಂದ್ರ ಗ್ರಾಮ ದಲ್ಲಿ ನಡೆದಿದೆ. ಚೇಳೂರು ಹೋಬಳಿ ಅರಿವೇಸಂದ್ರ ಗ್ರಾಮದ ವಾಸಿ ಲಿಂಗರಾಜು(20) ಮೃತಪಟ್ಟ ಯುವಕ. ತೋಟದಲ್ಲಿ ತೆಂಗಿನ ಕಾಯಿ ಕೀಳಲು ಹೋದಾಗ ಆಕಸ್ಮಿಕವಾಗಿ ಹಾವು ಕಚ್ಚಿದೆ. ತಕ್ಷಣ ಇವರಿಗೆ ನಾಟಿ ಔಷಧಿ ಕೊಡಿಸಿದರೂ ಫಲಕಾರಿಯಾಗದೆ ಕೊನೆ ಯುಸಿರೆಳದಿದ್ದಾರೆ. ಈ ಸಂಬಂಧ ಚೇಳೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸುತ್ತಿದ್ದಾರೆ.
ಆಟೋಗೆ ಟ್ರ್ಯಾಕ್ಟರ್ ಡಿಕ್ಕಿ: ಚಾಲಕ ಸಾವು
ಪಾವಗಡ: ಟ್ರ್ಯಾಕ್ಟರ್ ಮತ್ತು ಆಟೋ ನಡುವೆ ಅಪಘಾತ ಸಂಭವಿಸಿ ಆಟೋ ಚಾಲಕ ಸ್ಥಳದಲ್ಲಿಯೆ ಮೃತಪಟ್ಟ ಘಟನೆ ಪಟ್ಟಣದ ಪೆನ್ನಗೊಂಡ ರಸ್ತೆ ಮಾರ್ಗದಲ್ಲಿ ಭಾನುವಾರ ರಾತ್ರಿ ನಡೆದಿದೆ. ಮೃತಪಟ್ಟ ವ್ಯಕ್ತಿ ಪಟ್ಟಣದ ವಾಸಿ ನಾಗರಾಜು(30)ಎಂಬುವರು. ತಮ್ಮ ಜೀವನೋಪಾಯಕ್ಕಾಗಿ ಆಟೋ ಹೊಂದಿದ್ದ ಪಟ್ಟಣದ ಆದರ್ಶ ಕಾಲೋನಿ ವಾಸಿ ನಾಗರಾಜ್ ಎಂಬುವರು ರಾತ್ರಿ ಸುಮಾರು 9ಗಂಟೆ ಸಮಯದಲ್ಲಿ ಆಟೋದಲ್ಲಿ ಪ್ರಯಾಣಿಕರನ್ನು ತುಂಬಿಸಿಕೊಂಡು ಪಟ್ಟಣದ ಸಮೀಪವಿರುವ ರೊಪ್ಪಕ್ಕೆ ಬಿಟ್ಟಿದ್ದಾರೆ. ನಂತರ ಅಲ್ಲಿಂದ ಪಟ್ಟಣಕ್ಕೆ ವಾಪಸು ಬರುತ್ತಿರುವಾಗ ಪಟ್ಟಣದಿಂದ ಎದುರಿಗೆ ಹೋಗುತ್ತಿದ್ದ ಗುತ್ತಿಗೆದಾರ ವೆಂಕಟಸುಬ್ಬಯ್ಯ ಎಂಬುವರಿಗೆ ಸೇರಿದ ಟ್ರ್ಯಾಕ್ಟರ್ ಆಟೋಗೆ ಗುದ್ದಿದ ಪರಿಣಾಮ ಆಟೋ ಪಲ್ಟಿ ಹೊಡೆದು ಚಾಲಕ ಸ್ಥಳದಲ್ಲಿಯೆ ಮೃತಪಟ್ಟಿರುವುದಾಗಿ ತಿಳಿದಿದ್ದು, ಪಾವಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜುಗುಪ್ಸೆ: ವ್ಯಕ್ತಿ ಆತ್ಮಹತ್ಯೆ
ಮಧುಗಿರಿ: ಜೀವನದಲ್ಲಿ ಜುಗುಪ್ಸೆ ಹೊಂದಿದ ವ್ಯಕ್ತಿಯೊಬ್ಬ ತಾನು ವಾಸಿಸುತ್ತಿದ್ದ ಬಾಡಿಗೆ ಮನೆಯಲ್ಲಿ ತನ್ನ ಹೆಂಡತಿ ಸೀರೆಯಿಂದ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಧುಗಿರಿ ಪಟ್ಟಣದ ಲಿಂಗೇನಹಳ್ಳಿಯಲ್ಲಿ ರಾತ್ರಿ ನಡೆದಿದೆ. ರಂಗಸ್ವಾಮಿ(34) ಮೃತಪಟ್ಟ ದುರ್ದೈವಿ ಎಂದು ಗುರುತಿಸಲಾಗಿದ್ದು, ಈತ ಅದೇ ಲಿಂಗೇನಹಳ್ಳಿಯ ಡಾಬ ಹೊಟೇಲೊಂದರಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಜೀವನೋಪಾಯಕ್ಕಾಗಿ ಡಾಬದಲ್ಲೇ ಮದ್ಯ ಮಾರಾಟ ಮಾಡುತ್ತಿದ್ದ ಇದಕ್ಕೆ ಸಂಬಂಧಪಟ್ಟಂತೆ ಈ ಹಿಂದೆ ಈತನ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು ಎನ್ನಲಾಗಿದ್ದು, ಕೈ ಸಾಲ ಕೂಡ ಮಾಡಿಕೊಂಡಿದ್ದನಂತೆ ಹಾಗಾಗಿ ಜೀವನದಲ್ಲಿ ಜಿಗುಪ್ಸೆ ಹೊಂದಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ.ಮಧುಗಿರಿ ಪೊಲೀಸ್ ಠಾಣೆಯಲ್ಲಿ ದೂರ ದಾಖಲಾಗಿದೆ.
ಕಾಂಗ್ರೆಸ್ಗೆ ಅಭಿನಂದನೆ
ತುಮಕೂರು: ಯಾದವ ಮಹಿಳೆಯನ್ನು ವಿಧಾನ ಪರಿಷತ್ಗೆ ಅವಿರೋಧ ಆಯ್ಕೆ ಮಾಡಿದ ಕಾಂಗ್ರೆಸ್ ಪಕ್ಷಕ್ಕೆ ರಾಜ್ಯ ಯಾದವ ರಾಜಕೀಯ ಜಾಗೃತಿ ಸೇನೆ ಅಭಿನಂದನೆ ಸಲ್ಲಿಸಿದೆ. ಇತಿಹಾಸದಲ್ಲೇ ಪ್ರಥಮವಾಗಿ ರಾಜ್ಯದ ಯಾದವ ಸಮಾಜದ ಅತಿ ಹಿಂದುಳಿದ ಒಳಪಂಗಡವಾದ ಕಾಡುಗೊಲ್ಲ ಜನಾಂಗದ ಒಬ್ಬ ಗ್ರಾಮೀಣ ರೈತ ಮಹಿಳೆ ಜಯಮ್ಮ ಬಾಲರಾಜ್ ಅವರನ್ನು ವಿಧಾನ ಪರಿಷತ್ನಲ್ಲಿ ಏದಿ ಪ್ರಥಮವಾಗಿ ಅವಿರೋಧವಾಗ ಆಯ್ಕೆಮಾಡಿದ ಕೆಪಿಸಿಸಿ ಅಧ್ಯಕ್ಷರಿಗೆ, ಮುಖ್ಯಮಂತ್ರಿಗೆ ಜಾಗೃತಿ ಸೇನೆಯ ಅಧ್ಯಕ್ಷ ಎಸ್. ಚಿಕ್ಕರಾಜು ಹಾಗೂ ಪ್ರಧಾನ ಕಾರ್ಯದರ್ಶಿ ಗೋವಿಂದರಾಜು ಅಭಿನಂದನೆ ಸಲ್ಲಿಸಿದ್ದಾರೆ.
ಹಾಸ್ಟೆಲ್ಗಳಿಗೆ ಅರ್ಜಿ ಆಹ್ವಾನ
ತುಮಕೂರು: ಅವೋಪ ಮತ್ತು ಅವೋಪ ಚಾರಿಟಬಲ್ ಟ್ರಸ್ಟ್ ವತಿಯಿಂದ ತುಮಕೂರಿನಲ್ಲಿ ನಡೆಯುತ್ತಿರುವ ಅವೋಪ ಉಚಿತ ವಿದ್ಯಾರ್ಥಿ ನಿಲಯಗಳಿಗೆ 2014-15ನೇ ಸಾಲಿನ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಆರ್ಯವೈಶ್ಯ ಜನಾಂಗದ ಬಡ ಹಾಗೂ ಅರ್ಹ ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರಿಗೆ ಪ್ರವೇಶಾವಕಾಶ ಇದೆ. ಡಿಪ್ಲಮೋ, ಪಿಯುಸಿ ಹಾಗೂ ಮೇಲ್ಪಟ್ಟ ಎಲ್ಲಾ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿಗಳನ್ನು ಎಂ. ನಾಗಸುಂದರ್, ಚಾರ್ಟರ್ಡ್ ಅಕೌಂಟೆಂಟ್, 1ನೇ ಮೇನ್, 1ನೇ ಕ್ರಾಸ್, ಮೊದಲನೇ ಮಹಡಿ, ಚಂದ್ರಪ್ಪ ಕಾಂಪೌಂಡ್, ಸಿದ್ಧಗಂಗಾ ಬಡಾವಣೆ, ತುಮಕೂರು. ಇಲ್ಲಿ ಪಡೆದು ಜೂನ್ 30 ರೊಳಗೆ ಸಲ್ಲಿಸಬೇಕು.
ತುಮಕೂರಿಂದ ಓಡಿ ಬಂದ ಮಕ್ಕಳು
ಧಾರವಾಡ: ಒತ್ತಾಯದ ಓದು ಮಕ್ಕಳ ಮನಸ್ಸಿನ ಮೇಲೆ ಎಷ್ಟು ಪರಿಣಾಮ ಬೀರುತ್ತದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಹುಬ್ಬಳ್ಳಿಯ ರೇಲ್ವೆ ನಿಲ್ದಾಣದಲ್ಲಿ ಕಳೆದ ಶನಿವಾರ ನಾಲ್ಕು ಮಕ್ಕಳು ಪೊಲೀಸರಿಗೆ ದೊರೆತಿದ್ದು, ಪಾಲಕರ ಆಶಯದಂತೆ ಅವರನ್ನು ತುಮಕೂರಿನ ವಸತಿ ಶಾಲೆಯೊಂದರಲ್ಲಿ ವಿದ್ಯಾಭ್ಯಾಸಕ್ಕೆ ಇಡಲಾಗಿತ್ತು. ಆದರೆ, ಮಕ್ಕಳಿಗೆ ಅದು ಮನಸ್ಸಿರಲಿಲ್ಲ. ಅಲ್ಲದೇ, ಅಲ್ಲಿನ ಊಟವೂ ಸೇರುತ್ತಿರಲಿಲ್ಲ.
ಹೀಗಾಗಿ ಬೆಳಗಾವಿ ಜಿಲ್ಲೆ ರಾಯಬಾಗ ಮೂಲದ 8 ವರ್ಷದ ರಾಹುಲ್ ಕೋಳಿ, 12 ವರ್ಷದ ರಾಮಕೃಷ್ಣ ಕೋಳಿ, 13 ವರ್ಷದ ವಿನಾಯಕ ದಾಮೋಜಿ ಹಾಗೂ 11 ವರ್ಷದ ಪ್ರದೀಪ ವಸತಿ ಶಾಲೆಯಿಂದ ಓಡಿ ಬಂದಿದ್ದು, ಆಕಸ್ಮಿಕವಾಗಿ ಹುಬ್ಬಳ್ಳಿಯ ರೈಲು ನಿಲ್ದಾಣದಲ್ಲಿ ಪೊಲೀಸರಿಗೆ ಸಿಕ್ಕಿದ್ದಾರೆ. ಮಕ್ಕಳ ಸಹಾಯವಾಣಿ 1098 ಮೂಲಕ ಪ್ರಸ್ತುತ ಮಕ್ಕಳು ಸುರಕ್ಷಿತವಾಗಿದ್ದು, ಬಿಡಿಎಸ್ಸೆಸ್ಸ್ ಸಂಸ್ಥೆಯ ತಂಡದ ಸದಸ್ಯರಾದ ಮುನಿರಾ ಕಡಪಾ ಹಾಗೂ ಸುನೀತಾ ಮುರಗೋಡ ಅವರು ಮಕ್ಕಳನ್ನು ಭಾನುವಾರ ಬಾಲ ಮಂದಿರಕ್ಕೆ ಸೇರಿದ್ದಾರೆ. ಪಾಲಕರನ್ನು ಕರೆಸಿ ಮಕ್ಕಳನ್ನು ಅವರ ಜತೆಗೆ ಕಳುಹಿಸಿ ಕೊಡಲಾಗುವುದು ಎಂದು ಬಿಡಿಎಸ್ಸೆಸ್ ಸಂಸ್ಥೆಯ ಸಂಯೋಜಕ ರವಿ ಭಂಡಾರಿ ತಿಳಿಸಿದ್ದಾರೆ.
ಸ್ವಾತಂತ್ರ್ಯ ಹೋರಾಟಗಾರ ನಿಧನ
ತಿಪಟೂರು: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹಾಗೂ ವಿದ್ಯುತ್ ಗುತ್ತಿಗೆದಾರರಾದ ಎಂ.ವಿ. ಗೋವಿಂದರಾಜು (85) ಅನಾರೋಗ್ಯದಿಂದ ಮರಣಹೊಂದಿದ್ದು, ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ತಾಲೂಕು ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಬಸವರಾಜು ಹಾಗೂ ಪದಾಧಿಕಾರಿಗಳು ಸಂತಾಪ ಸೂಚಿಸಿದ್ದಾರೆ. ಮೃತರ ಕುಟುಂಬಕ್ಕೆ ಸಂಘದ ವತಿಯಿಂದ 10ಸಾವಿರ ಮರಣನಿಧಿಯನ್ನು ನೀಡಲಾಯಿತು. ಮೃತರು ಹಲವಾರು ವರ್ಷಗಳು ಗುತ್ತಿಗೆದಾರರಾಗಿ ತಾಲೂಕಿನಲ್ಲಿ ಸಾರ್ವಜನಿಕ ಸೇವೆ ಸಲ್ಲಿಸಿರುವುದನ್ನು ಸಂಘ ಸ್ಮರಿಸಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

