ತುಮಕೂರು

ವಿದ್ಯುತ್ ಲೈನ್ ಹೋಗುವ ರೈತರ ಜಮೀನಿಗೆ ಪರಿಹಾರ

Published On :

ತುಮಕೂರು: ಪವರ್ ಗ್ರಿಡ್ ಕಾರ್ಪೋರೇಷನ್ ಸಂಸ್ಥೆಯ ಪವರ್ ಲೈನ್ ಹಾದುಹೋಗುವ ಜಿಲ್ಲೆಯ ರೈತರ ಜಮೀನಿಗೆ ಬೆಳೆ ಪರಿಹಾರದ ಜೊತೆಗೆ ಹೆಚ್ಚುವರಿ ಪರಿಹಾರ ಒಂದು ಎಕರೆಗೆ 2 ಲಕ್ಷ ರು.ಗಳನ್ನು ನೀಡಲಾಗುವುದೆಂದು ಜಿಲ್ಲಾಧಿಕಾರಿ  ಕೆ.ಎಸ್. ಸತ್ಯಮೂರ್ತಿ ಘೋಷಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಈ ಕುರಿತು ಚರ್ಚಿಸಲು ಕರೆದಿದ್ದ ಅಧಿಕಾರಿಗಳ ಮತ್ತು ರೈತರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೈಗಾರಿಕಾ ಪ್ರದೇಶದ ಸಮೀಪದಲ್ಲಿರುವ ರೈತರ ಜಮೀನಿನ ಸ್ಥಳ ಪರಿಶೀಲನೆ ನಡೆಸಿದ ನಂತರ ಪ್ರತ್ಯೇಕ ದರ ನಿಗಧಿಪಡಿಸಲಾಗುವುದು ಎಂದು ತಿಳಿಸಿದರು. ರೈತರ ಜಮೀನಿನಲ್ಲಿ ಅಳವಡಿಸುವ ವಿದ್ಯುತ್ ಕಂಬಗಳನ್ನು ನಾಲ್ಕು ವಿಭಾಗಗಳನ್ನಾಗಿ ವಿಂಗಡಿಸಿ ದರ ನಿಗಧಿಪಡಿಸಲಾಗಿದ್ದು, ಎ ಕೆಟಗರಿಯ 10 ಬೈ 10 ಮೀಟರ್ ಸುತ್ತಳತೆಯ ಕಂಬ ಅಳವಡಿಸುವ ಭೂಮಿಗೆ 2.25ಲಕ್ಷ , ಬಿ  ಕೆಟಗರಿಯ 15 ಬೈ 15 ಮೀಟರ್ ಸುತ್ತಳತೆಯ ಕಂಬ ಅಳವಡಿಸುವ ಭೂಮಿಗೆ 2.50ಲಕ್ಷ, ಸಿ ಕೆಟಗರಿಯ 17 ಬೈ 17 ಮೀಟರ್ ಸುತ್ತಳತೆಯ ಕಂಬ ಅಳವಡಿಸುವ ಭೂಮಿಗೆ 3 ಲಕ್ಷ ಮತ್ತು ಡಿ ಕೆಟಗರಿಯ 19 ಬೈ 19 ಮೀಟರ್ ಸುತ್ತಳತೆಯ ಕಂಬ ಅಳವಡಿಸುವ ಭೂಮಿಗೆ 4 ಲಕ್ಷರು. ಪರಿಹಾರ ನಿಗಧಿಪಡಿಸಲಾಗಿದೆ ಎಂದು ತಿಳಿಸಿದರು. ಅಲ್ಲದೆ ಕ್ಲಾಸ್ 1 ಎಂದು ನಿಗದಿಪಡಿಸಿದ ತೆಂಗಿನ ಮರವೊಂದಕ್ಕೆ 16, 314 ರು., ಕ್ಲಾಸ್ 1 ಅಡಕೆ ಮರಕ್ಕೆ 3,728, ಮಾವಿಗೆ 27,862, ಹಲಸಿಗೆ 14,800 ರು.ಗಳನ್ನು ನಿಗಧಿಪಡಿಸಲಾಗಿದೆ ಎಂದು ತಿಳಿಸಿದರು. ಕಾರಿಡಾರ್ ಪ್ರಾರಂಭಕ್ಕೂ ಮೊದಲು ಜೆಎಂಸಿ ಅಂದರೆ ಜಾಯಿಂಟ್ ಮೆಷರ್ ಸರ್ಟಿಫಿಕೇಟ್ ನೀಡಲಾಗುವುದು ಮತ್ತು ಸರ್ವೆ ನಂಬರ್, ಮರಗಳ ವಿಂಗಡಣೆ, ವಿಡಿಯೋಗ್ರಫಿ, ಪಂಚನಾಮೆ ಮುಂತಾದ ಕಾರ್ಯ ಕೈಗೊಳ್ಳಲು ಸಮಿತಿ ರಚಿಸಲಾಗುವುದು ಎಂದು ಸಭೆಗೆ ಜಿಲ್ಲಾಧಿಕಾರಿಗಳು ತಿಳಿಸಿದರು. ಕಾರಿಡಾರ್ ಹಾದುಹೋಗುವ ಜಾಗದಲ್ಲಿ ಬೋರ್‌ವೆಲ್‌ಗಳಿದ್ದಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರ್ ವರದಿ ಆಧರಿಸಿ, ಬೋರ್‌ವೆಲ್ ಪರಿಹಾರ ನೀಡಲಾಗುವುದು ಹಾಗೂ ಕಾರಿಡಾರ್ ಹಾದುಹೋಗುವ ಜಾಗದಲ್ಲಿ ಅಂದರೆ 23 ಬೈ 23 ಮೀಟರ್ ಸುತ್ತಳತೆ ಜಾಗದಲ್ಲಿ ಬೌಂಡರಿ ಕಲ್ಲು ನೆಡಲಾಗುವುದು ಎಂದು ತಿಳಿಸಿದರು. ರೈತರಿಗೆ ಪರಿಹಾರವನ್ನು ಮೂರು ಹಂತದಲ್ಲಿ ನೀಡಲಾಗುವುದು. ಸ್ಟ್ರಕ್ಚ್ರರ್ ಹಾಕುವ ಪೌಂಡೇಷನ್ ಜಾಗಕ್ಕೆ ಮೊದಲ ಬೆಳೆ ಪರಿಹಾರ, ಮರಗಳಿಗೆ ಎರಡನೇ, ನಂತರ ಹೆಚ್ಚುವರಿ ಪರಿಹಾರವನ್ನು ರೈತರಿಗೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.ಢ ಪವರ್‌ಲೈನ್ ಹಾದುಹೋಗುವ ಜಮೀನಿನ ರೈತರು ತಮ್ಮ ಜಮೀನಿಗೆ ಸಂಬಂಧಪಟ್ಟಂತೆ ಒಂದು ವಹಿಯನ್ನು ತೆರೆಯುವಂತೆ ಮತ್ತು ಅದರಲ್ಲಿ ಪವರ್‌ಗ್ರಿಡ್ ಕಾರ್ಪೋರೇಷನ್‌ಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಕ್ರೋಢೀಕರಿಸುವಂತೆ ಸಲಹೆ ನೀಡಿದರು. ರೈತಮುಖಂಡರು, ಪವರ್ ಗ್ರಿಡ್ ಕಾರ್ಪೋರೇಷನ್ ಅಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.