ಜನರ ನಿರೀಕ್ಷೆ ಹುಸಿಗೊಳಿಸಿದ ಸರ್ಕಾರಗಳು
ತುರುವೇಕೆರೆ: ಬಡವರ ಪರವಾದ ಸರ್ಕಾರ ಮಾಡುವುದಾಗಿ ಜನರಿಗೆ ಹುಸಿ ಭರವಸೆ ನೀಡಿದ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಜನ ವಿರೋಧಿ ನಿಲುವು ತಳೆಯುತ್ತಿರುವುದು ದಿನೇ ದಿನೇ ಬೆಳಕಿಗೆ ಬರುತ್ತಿದೆ. ಗ್ಯಾಸ್, ಸೀಮೆ ಎಣ್ಣೆ, ಸಕ್ಕರೆ, ಪೆಟ್ರೋಲ್, ಡೀಸೆಲ್, ರೈಲು ಪ್ರಯಾಣ ದರ ಮೊದಲಾದ ಜನಸಾಮಾನ್ಯರ ಬಳಕೆಯ ವಸ್ತುಗಳನ್ನು ಮನಸೋ ಇಚ್ಛೆ ಏರಿಸಲು ಮುಂದಾಗಿರುವ ಮೋದಿ ನೇತೃತ್ವದ ಸರ್ಕಾರ ಕೇವಲ ಒಂದು ತಿಂಗಳ ಅವಧಿಯಲ್ಲೇ ಜನರಲ್ಲಿ ಭ್ರಮನಿರಸನವನ್ನು ಉಂಟು ಮಾಡಿದೆ ಎಂದು ಶಾಸಕ ಎಂ.ಟಿ. ಕೃಷ್ಣಪ್ಪ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಕೇಂದ್ರದಲ್ಲಿ ಮೋದಿ ನೇತೃತ್ವದಲ್ಲಿ ಬಡವರ ಪರ ನಿಲುವು ತೆಗೆದುಕೊಳ್ಳುವುದಾಗಿ ಹೇಳಿದ ಬಿಜೆಪಿಯವರು ಈಗ ಜನರಿಂದ ದೂರವಾಗಿದ್ದಾರೆ. ಅವರು ಶ್ರೀಮಂತರ ಪರ ಎಂಬುದನ್ನು ಸಾಬೀತು ಮಾಡಿದ್ದಾರೆ. ಇನ್ನು ಸಿದ್ದರಾಮಯ್ಯನವರ ರಾಜ್ಯ ಸರ್ಕಾರ ಇದೆಯೋ ಇಲ್ಲವೋ ಎಂಬಂತಾಗಿದೆ. ಸರ್ಕಾರ ಅಧಿಕಾರಕ್ಕೆ ಬಂದು 13 ತಿಂಗಳಾದರೂ ಯಾವುದೇ ಅಭಿವೃದ್ಧಿ ಕಾರ್ಯಗಳು ಇಲ್ಲ. ಅಹಿಂದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಹಿಂದುಳಿದ ವರ್ಗದ ಜನರಿಗೇ ಮುಳುವಾಗಿದ್ದಾರೆ. ಗಂಗಾ ಕಲ್ಯಾಣ ಯೋಜನೆ ಜಾರಿಗೊಳಿಸಿಲ್ಲ. ಕುಡಿಯುವ ನೀರಿನ ಸಮಸ್ಯೆ ಅಧಿಕವಾಗಿದೆ. ರಾಜ್ಯದಲ್ಲಿ ಯಾವ ಬಡವರಿಗೂ ಮನೆ ನೀಡಿಲ್ಲ. ಸರ್ಕಾರದ ಅಸ್ತಿತ್ವದ ಬಗ್ಗೆ ಗುಮಾನಿಯಾಗಿದೆ. ವರ್ಷ ಕಳೆದರೂ ಸಾಧನೆ ಮಾತ್ರ ಶೂನ್ಯ. ಜನಹಿತ ಮರೆತಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಕೆಲವು ದಿನಗಳಲ್ಲೇ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು.
ಸಿಎಸ್ ಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತಾವು ಎಸ್ಪಿ ಕಚೇರಿ ಮುಂದೆ ಧರಣಿ ಮಾಡಿದ ಬಗ್ಗೆ ತಮ್ಮ ವಿರುದ್ಧ ಕಾಂಗ್ರೆಸ್ ಮುಖಂಡರಾದ ಮಸಾಲಾ ಜಯರಾಂ, ದಾನಿಗೌಡ ಹಾಗೂ ಮಾಚೇನಹಳ್ಳಿ ರಾಮಣ್ಣ ಮೊದಲಾದವರು ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಹೇಳಿರುವುದು ಹಾಸ್ಯಾಸ್ಪದ. ತಾವು ಪೊಲೀಸರ ಹಾಗೂ ಕಾಂಗ್ರೆಸ್ ನಾಯಕರ ದೌರ್ಜನ್ಯಕ್ಕೆ ಬಲಿಯಾಗಿರುವ ಕುಟುಂಬದ ಪರವಾಗಿ ಧನಿ ಎತ್ತಿರುವುದು ತಪ್ಪೇ? ಅಮಾಯಕವಾಗಿರುವ ಮುಸ್ಲಿಂ ಕುಟುಂಬವನ್ನು ಹೆದರಿಸಿ, ಬೆದರಿಸಿ ಅವರ ಆಸ್ತಿ ಪಾಸ್ತಿಗಳನ್ನು ಅಪಹರಿಸುವುದೇ ಅಲ್ಲಿಯ ಕಾಂಗ್ರೆಸ್ ಮುಖಂಡರ ಉದ್ದೇಶವಾಗಿದೆ. ಆದ್ದರಿಂದ ತಾವು ಬಡ ಮುಸ್ಲಿಂ ಜನತೆಯ ಪರವಾಗಿ ಧರಣಿ ಮಾಡಿದುದಾಗಿ ಸ್ಪಷ್ಟಪಡಿಸಿದರು.
ತಮಗೆ ಪ್ರಚಾರದ ಗೀಳೆಂದು ಹೇಳಿರುವ ಕಾಂಗ್ರೆಸ್ ಮುಖಂಡರಿಗೆ ತಾವು ಕೇವಲ 32 ವರ್ಷದಲ್ಲೇ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷನಾಗಿದ್ದೆ ಎಂಬ ಅರಿವೂ ಇಲ್ಲದಿರುವುದು ವಿಷಾದನೀಯ. ಎಂ.ಟಿ.ಕೃಷ್ಣಪ್ಪ ಯಾರೆಂದು ಇಡೀ ರಾಜ್ಯಕ್ಕೇ ಗೊತ್ತಿದೆ. ಆದರೆ ನಿಜವಾಗಿ ಪ್ರಚಾರ ಬೇಕಿರುವುದು ಎಂದೋ ಜನರೊಂದಿಗೆ ಬೆರೆಯುವ ಈ ಕಾಂಗ್ರೆಸ್ ನಾಯಕರಿಗೆ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ವ್ಯಂಗ್ಯವಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

