ತುಮಕೂರು

ಆರ್‌ಟಿಐ ಕಾರ್ಯಕರ್ತನ ಮೇಲೆ ಆ್ಯಸಿಡ್ ದಾಳಿ

Published On :

ಮಾಲೂರು: ಆರ್‌ಟಿಎ ಕಾರ್ಯಕರ್ತರೊಬ್ಬರ ಮೇಲೆ ಅಪರಿಚಿತ ಯುವಕರ ತಂಡ ಆ್ಯಸಿಡ್ ದಾಳಿ ನಡೆಸಿ ಪರಾರಿಯಾದ ಘಟನೆ ತಾಲೂಕಿನ ಶಿವಾರಪಟ್ಟಣದಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಶಿವಾರಪಟ್ಟಣ ವಾಸಿ ನಿವೃತ್ತ ಪೊಲೀಸ್ ದಪೇದಾರ್ ಎಸ್.ಎಂ. ಕೃಷ್ಣಪ್ಪ(74) ಆ್ಯಸಿಡ್ ದಾಳಿಗೆ ಒಳಗಾದವರು. ಗ್ರಾಮದ ವಿನಾಯಕ ದೇವಾಲಯದ ಬಳಿ ಅರ್ಚಕ ಜ್ಞಾನಲಿಂಗಚಾರಿ ಜತೆ ಮಾತನಾಡುತ್ತಿರುವಾಗ ಮೂವರು ಯುವಕರು ಪಲ್ಸರ್ ಬೈಕ್‌ನಲ್ಲಿ ಬಂದು ಆ್ಯಸಿಡ್ ಎರಚಿ ಪರಾರಿಯಾಗಿದ್ದಾರೆ. ಆ್ಯಸಿಡ್ ಬಿದ್ದು ಎಡಗಣ್ಣು ತೀವ್ರ ಹಾನಿಯಾಗಿರುವ ಕೃಷ್ಣಪ್ಪರನ್ನು ಸ್ಥಳೀಯ ಆಸ್ವತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರಕ್ಕೆ ಕಳುಹಿಸಲಾಗಿದೆ. ನಿವೃತ್ತಿ ನಂತರ ಗ್ರಾಮದಲ್ಲಿದ್ದ ಕೃಷ್ಣಪ್ಪ ಪಂಚಾಯ್ತಿ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಅಕ್ರಮ ಮರುಳು ಗಣಿಗಾರಿಕೆ, ಪಂಚಾಯ್ತಿ ಅವ್ಯವಹಾರಗಳ ಬಗ್ಗೆ ಆರ್‌ಟಿಐ ಮೂಲಕ ವಿವರಣೆ ಕೇಳುತ್ತಿದ್ದರು. ಇವರ ಪ್ರಯತ್ನದಿಂದ ಇತ್ತೀಚೆಗೆ ಪಂಚಾಯ್ತಿಯ ರಾಮೇನಹಳ್ಳಿ, ಶಿವಾರ ಪಟ್ಟಣದ ಕೆರೆಗಳಲ್ಲಿ ನಡೆಯುತ್ತಿದ್ದ ಫಿಲ್ಟರ್ ಮರಳು ಮಾಫಿಯಾ ಮೇಲೆ ದಾಳಿ ನಡೆದಿತ್ತು. ಇದಲ್ಲದೇ ಪಂಚಾಯ್ತಿಯಲ್ಲಿ ಖಾತ್ರಿ ಯೋಜನೆಯ ಅವ್ಯವಹಾರಗಳ ಬಗ್ಗೆ ವಿವರಣೆ ಕೇಳುತ್ತಿದ್ದರು ಈ ಸಂಬಂಧ ತನ್ನ ತಂದೆಯ ಮೇಲೆ ದಾಳಿ ಆಗಿರಬಹುದು ಎಂದು ಆ್ಯಸಿಡ್ ದಾಳಿಗೆ ಒಳಗಾಗಿರುವ ಕೃಷ್ಣಪ್ಪರವರ ಪುತ್ರ ಮುನೇಗೌಡ ತಿಳಿಸಿದ್ದಾರೆ. ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಸಚಿವ ಸಲ್ಮಾನ್ ಖುರ್ಷಿದ್ ವಿರುದ್ಧ ಪ್ರತಿಭಟನೆ
ಬಂಗಾರಪೇಟೆ:
ಬಿಜೆಪಿ ಪ್ರಧಾನಿ ಅಭ್ಯರ್ಥಿ ಹಾಗೂ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರ ಬಗ್ಗೆ ಕೇಂದ್ರ ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್ ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಇಲ್ಲಿನ ಬಿಜೆಪಿ ಕಾರ್ಯಕರ್ತರು ತೀವ್ರವಾಗಿ ಖಂಡಿಸಿ ಅವರ ಭೂತ ದಹನ ಮಾಡಿದರು. ಸಚಿವರಾದ ಸಲ್ಮಾನ್ ಖುರ್ಷಿದ್ ಅವರು ಮುಂದಿನ ಪ್ರಧಾನಿ ಅಭ್ಯರ್ಥಿಯೊಬ್ಬರ ಬಗ್ಗೆ ಹಗುರವಾಗಿ ಮಾತನಾಡುವ ಮೂಲಕ ತಮ್ಮ ಘನತೆಗೆ ಅವರೇ ದಕ್ಕೆ ತಂದಿದ್ದಾರೆ. ಇಂತಹ ವ್ಯಕ್ತಿ ಸಚಿವ ಸ್ಥಾನದಲ್ಲಿ ಮುಂದುವರೆಯಲು ನಾಲಾಯಕ್ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇಲ್ಲಿನ ಪುರಸಭೆ ಬಸ್ ನಿಲ್ದಾಣದಲ್ಲಿ ಅರ್ಧ ಗಂಟೆ ಪ್ರತಿಭಟನೆ ಮಾಡಿ ನಂತರ ಸಚಿವರ ಭೂತ ದಹನ ಮಾಡಿದರು. ಪಕ್ಷದ ತಾಲೂಕು ಅಧ್ಯಕ್ಷ ಮಾರ್ಕಂಡೇಗೌಡ, ನಗರ ಅಧ್ಯಕ್ಷ ರಮೇಶ್, ಪ್ರಧಾನ ಕಾರ್ಯದರ್ಶಿ ನಾರಾಯಣಸ್ವಾಮಿ, ಪ್ರಭಾಕರ್, ವಿಜಯಲಕ್ಷ್ಮೀ, ಶಶಿಕುಮಾರ್, ಲಕ್ಷ್ಮಣ್‌ಗೌಡ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.